ಬೆಂಗಳೂರಿನಲ್ಲಿ ‘ರೋಹಿಂಗ್ಯಾ’ ನಿರಾಶ್ರಿತ ಬಾಲಕಿಯ ಅತ್ಯಾಚಾರ

Update: 2022-01-27 06:35 GMT

ಬೆಂಗಳೂರು, ಜ.26: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರೋಹಿಂಗ್ಯಾ ನಿರಾಶ್ರಿತರ ಗುಂಪಿನಲ್ಲಿದ್ದ ಬಾಲಕಿಯನ್ನು ದುಷ್ಕರ್ಮಿಗಳ ತಂಡವೊಂದು ಎಳೆದೊಯ್ದು ಅತ್ಯಾಚಾರವೆಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ನಗರದ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸರಹಳ್ಳಿ ಬಳಿ ಈ ಘಟನೆ ನಡೆದಿದ್ದು, ರೋಹಿಂಗ್ಯಾ ನಿರಾಶ್ರಿತರ ತಾಣದಲ್ಲಿದ್ದ 14 ವರ್ಷದ ಬಾಲಕಿಯನ್ನು ಎಳೆದೊಯ್ದು ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಸಂಬಂಧ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

ಬಾಂಗ್ಲಾದವರ ಸೆರೆ: ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಈಗಾಗಲೇ ಬಾಂಗ್ಲಾ ಮೂಲದವರು ಎನ್ನಲಾದ ಕುಕಾನ್, ಮಾಮೂನ್, ಶೋಬಾಶಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಹಲವು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

ಏನಿದು ಘಟನೆ?: ಬೆಂಗಳೂರಿನ ದಾಸರಹಳ್ಳಿ ಸಮೀಪ ನೆಲೆಸಿರುವ ರೋಹಿಂಗ್ಯಾ ನಿರಾಶ್ರಿತರ ತಾಣದಲ್ಲಿರುವ 14 ವರ್ಷದ ಬಾಲಕಿಯನ್ನು ಗುರಿಯಾಗಿಸಿಕೊಂಡ ಆರೋಪಿಗಳು, ಜ.19ರಂದು ಆಕೆ ಶೌಚಾಲಯಕ್ಕೆ ತೆರಳಿದ್ದ ವೇಳೆ ಟಾಟಾ ಏಸ್ ವಾಹನದಲ್ಲಿ ಆಗಮಿಸಿ ಆಕೆಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಸಂದರ್ಭದಲ್ಲಿ ಆಕೆ ಜೋರಾಗಿ ಶಬ್ದ ಮಾಡಿದ್ದರಿಂದ ಸ್ಥಳೀಯರು ಜಮಾಯಿಸಿ ರಕ್ಷಣೆ ಮಾಡಿದ್ದಾರೆ. ಆಗ ಆರೋಪಿಗಳು ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ಸಂತ್ರಸ್ತೆಯ ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣದ ಕುರಿತು ‘ವಾರ್ತಾಭಾರತಿ’ ಯೊಂದಿಗೆ ಮಾತನಾಡಿದ ಸಂತ್ರಸ್ತೆಯ ತಾಯಿ, ವಿಶ್ವಸಂಸ್ಥೆ ಪರವಾನಿಗೆ ನೀಡಿರುವ ಚೀಟಿ, ಪತ್ರಗಳ ದಾಖಲೆಗಳ ಮೂಲಕವೇ ನಾವು ಇಲ್ಲಿ ನೆಲೆಸಿದ್ದೇವೆ. ಆದರೆ, ನಾವು ಇಲ್ಲಿಯೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದು ನೋವು ತಂದಿದೆ ಎಂದು ಅಳಲು ತೋಡಿಕೊಂಡರು. ಬಾಲಕಿಯರನ್ನು ಗುರಿಯಾಗಿಸಿಕೊಂಡು ಲೈಂಗಿಕ ಕಿರುಕುಳ ನೀಡುವ ಕೃತ್ಯ ನಿಲ್ಲಬೇಕು. ಬಾಂಗ್ಲಾದೇಶ ಮೂಲದ ವ್ಯಕ್ತಿಗಳಿಂದ ಬೆದರಿಕೆ ಇದೆ, ಅವರ ವಿರುದ್ಧ ನಗರ ಪೊಲೀಸ್ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು.

ಬಂಧಿತ ಆರೋಪಿಗಳ ವಿರುದ್ಧ ಐಪಿಸಿ 186 ಅಡಿ 354ಎ, 34 ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ, 2012 (ಪೊಕ್ಸೋ-ಪಿಒಸಿಎಸ್‌ಒ) ಅಡಿ ಮೊಕದ್ದಮೆ ದಾಖಲಾಗಿದೆ.

ರಕ್ಷಣೆ ನೀಡುವಂತೆ ಆಗ್ರಹ

ಸಂವಿಧಾನವು ನಿರಾಶ್ರಿತರನ್ನು ಜೀವನದ ಸ್ವಾತಂತ್ರದ ಹಕ್ಕಿನಡಿ ಉಳಿಯಲು ಅನುಮತಿ ನೀಡಿದೆ. ಜತೆಗೆ, ಯುನೈಟೆಡ್ ನೇಷನ್ ಹೈ ಕಮಿಷನರ್ ಫಾರ್ ರೆಫ್ಯೂಜಿಸ್ ಕಾರ್ಡ್ ಅನ್ನು ಬೆಂಗಳೂರಿನಲ್ಲಿರುವ ರೋಹಿಂಗ್ಯಾ ನಿರಾಶ್ರಿತರು ಹೊಂದಿದ್ದಾರೆ. ಅವರು ಜೀವ ಉಳಿಸಲು ಮನೆ ಬಿಟ್ಟು ಬೆಂಗಳೂರಿಗೆ ಬಂದಿದ್ದು, ಬೆಂಗಳೂರು ನಗರ ಪೊಲೀಸರು ರಕ್ಷಣೆ ನೀಡಲಿ. ಜತೆಗೆ, ಸ್ಥಳೀಯ ಗೂಂಡಾಗಳ ದಾಳಿಯನ್ನೂ ತಡೆಯಬೇಕು.

ಆರ್.ಕಲೀಮುಲ್ಲಾ, ಸ್ವರಾಜ್ ಇಂಡಿಯಾ ಬೆಂಗಳೂರು

Writer - ಸಮೀರ್ ದಳಸನೂರು

contributor

Editor - ಸಮೀರ್ ದಳಸನೂರು

contributor

Similar News