"ಬಲ್ಲಿರಾ...ಬಿಜೆಪಿಯ ಗುಜರಾತಿನಲ್ಲಿ ಅಂಬೇಡ್ಕರ್ ರಾಷ್ಟ್ರೀಯ ನಾಯಕರೇ ಅಲ್ಲವಂತೆ!"

Update: 2022-01-28 13:47 GMT

ಅಂಬೇಡ್ಕರ್ ಬಗೆಗಿನ ಅಧಿಕಾರಶಾಹಿ ಅಸಹನೆಯ ಜೀವಂತ ನಿದರ್ಶನವಾದ ರಾಯಚೂರು ನ್ಯಾಯಾಧೀಶರು ಕೊಡುತ್ತಿರುವ ಸಮರ್ಥನೆಗಳು ಅಂಬೇಡ್ಕರ್ ಬಗೆಗಿನ ಅಸಹನೆ ಮತ್ತು ಜಾತಿ ಪೂರ್ವಗ್ರಹಗಳು ಕೇವಲ ಅವರಲ್ಲಿ ಮಾತ್ರವಲ್ಲದೆ ಹೈಕೋರ್ಟಿನಲ್ಲೂ ಸಾಂಸ್ಥಿಕವಾಗಿ ಬೇರುಬಿಟ್ಟಿದೆ ಎಂಬುದನ್ನು ಮಾತ್ರ ಸ್ಪಷ್ಟಪಡಿಸುತ್ತದೆ.

ಈ ಜಾತಿ ಪೂರ್ವಗ್ರಹ ಹಾಗೂ ದಲಿತ ಅಸಹನೆಗಳು ದೇಶದಲ್ಲಿ ಬ್ರಾಹ್ಮಣವಾದಿ ಬಿಜೆಪಿ-ಆರೆಸ್ಸೆಸ್ ಆಳ್ವಿಕೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹೆಚ್ಚುತ್ತಿದ್ದಂತೆ ಮತ್ತಷ್ಟು ಬೇರುಬಿಡುತ್ತಿದೆ. ಹಲವಾರು ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ರಾಯಚೂರು ಪ್ರಕರಣ ಅದರ ಒಂದು ಆಯಾಮ ಮಾತ್ರ. ಬ್ರಾಹ್ಮಣ್ಯ ವಾದಿ ಆಳ್ವಿಕೆಯ ಅಂಬೇಡ್ಕರ್ ದ್ವೇಷಕ್ಕೆ ಹಾಗೂ ಜಾತಿ ದುರಭಿಮಾನಗಳಿಗೆ ಹಲವಾರು ಹೆಡೆಗಳಿವೆ.

ಈಗ ದೇಶಾದ್ಯಂತ ದಲಿತ ಬಂಧು ಎಂದು ಪೋಸು ಹೊಡೆಯುತ್ತಿರುವ ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಯಾಗಿ 14 ವರ್ಷ ಆಳ್ವಿಕೆ ಮಾಡಿದಾಗಲೂ ಅಂಬೇಡ್ಕರ್ ಅವರನ್ನು ಕೋರ್ಟು-ಕಚೇರಿಗಳಿಗಿರಲಿ ಶಾಸನಸಭೆ ಮತ್ತು ಶಾಲೆಗಳಲ್ಲೂ ಬಿಟ್ಟುಕೊಂಡಿರಲಿಲ್ಲ. ಈಗಲೂ ಅಂಬೇಡ್ಕರ್ ಅವರ ಫೋಟೋ ಅಲ್ಲಿನ ಕೋರ್ಟುಗಳಲ್ಲಿರಲಿ ಯಾವುದೇ ಸರ್ಕಾರೀ ಕಚೇರಿಗಳಲ್ಲೂ ಇಲ್ಲ.

ಕಾರಣವೇನು ಗೊತ್ತೇ?

ಬಿಜೆಪಿಯ ಗುಜರಾತಿನಲ್ಲಿ ಅಂಬೇಡ್ಕರ್ ರಾಷ್ಟ್ರೀಯ ನಾಯಕರೇ ಅಲ್ಲವಂತೆ. 2012ರಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿ 11 ವರ್ಷಗಳ ಕಾಲ ಆಡಳಿತ ಮಾಡಿ ದೇಶದ ಪ್ರಧಾನಿಯಾಗಲು ತಯಾರಾಗುತ್ತಿದ್ದ ವೇಳೆ ಗುಜರಾತಿನ ಭಾವ್ ನಗರದ ದಲಿತ ಕಾರ್ಯಕರ್ತ ದಹ್ಯ ಭಾಯ್ ಚೌಹಾಣ್ ಎಂಬವರು ಗುಜರಾತಿನ ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಫೋಟೋ ಏಕಿಲ್ಲವೆಂದು ಒಂದು RTI ಅರ್ಜಿ ಹಾಕುತ್ತಾರೆ. ಅದಕ್ಕೆ 2012ರ ಜನವರಿಯಲ್ಲಿ ಮೋದಿ ಸರ್ಕಾರ ಕೊಟ್ಟ ಉತ್ತರ ನೋಡಿದರೆ ಬಿಜೆಪಿಯ ಅಸಲೀ ಮುಖ ಸ್ಪಷ್ಟವಾಗುತ್ತದೆ.

ಮೋದಿ ಸರ್ಕಾರದ ಪ್ರಕಾರ ಗುಜರಾತಿನ ಸರ್ಕಾರೀ ಕಚೇರಿಗಳಲ್ಲಿ ಎಂಟು ಜನ ರಾಷ್ಟ್ರೀಯ ನಾಯಕರ ಫೋಟೋಗಳನ್ನು ಮಾತ್ರ ಹಾಕಬಹುದಂತೆ. ಆ ಎಂಟು ಜನ ಯಾರೆಂದರೆ, ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ಹಾಲಿ ರಾಷ್ಟ್ರಪತಿ, ಹಾಲೀ ಪ್ರಧಾನಿ, ಭಾರತ್ ಮಾತಾ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮತ್ತು ಶಾಮ ಪ್ರಸಾದ ಮುಖರ್ಜಿ !ಅಗ್ರಮಾನ್ಯ ರಾಷ್ಟ್ರ ನಾಯಕ ಅಂಬೇಡ್ಕರ್ ಹೆಸರು ಬಿಜೆಪಿ ಪಟ್ಟಿಯಲ್ಲಿ ಇಲ್ಲವೇ ಇಲ್ಲ.

1990ರಲ್ಲಿ ಅಂಬೇಡ್ಕರ್ ಅವರಿಗೆ ವಿಪಿ ಸಿಂಗ್ ಭಾರತ ರತ್ನ ಪ್ರಶಸ್ತಿ ಕೊಡಲೂ ಹಾಗೂ ಸಂಸತ್ ಭವನದಲ್ಲಿ 1990ರಲ್ಲಿ ಅಂಬೇಡ್ಕರ್ ಫೋಟೋ ಅನಾವರಣ ಮಾಡಲು ತಾನು ಕಾರಣ ಎಂದು ಹೇಳಿಕೊಳ್ಳುವ ಬಿಜೆಪಿ 2012ರಲ್ಲಿ ಕೊಟ್ಟ ಉತ್ತರವಿದು.

ಹೆಚ್ಚಿನ ವಿವರಗಳಿಗೆ The Indian Express ನಲ್ಲಿ 2012ರ ಜನವರಿ 7 ರಂದು ಪ್ರಕಟವಾಗಿರುವ ಈ ವರದಿಯನ್ನು ಗಮನಿಸಿ :

https://indianexpress.com/article/cities/ahmedabad/photos-in-govt-offices-8-figure-in-official-list-ambedkar-not-yet-in/

ಇನ್ನು ಬಿಜೆಪಿಯ ರಾಷ್ಟ್ರ ನಾಯಕರ ಪಟ್ಟಿಯಲ್ಲಿರುವ  ಶಾಮ ಪ್ರಸಾದ ಮುಖರ್ಜಿ ದೇಶದ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿ ಬ್ರಿಟಿಷರ ಜೊತೆ ಕೈಗೂಡಿಸಿದ ಸಾವರ್ಕರ್ ಅವರ ಹಿಂದೂ ಮಹಾ ಸಭಾದ ಅಧ್ಯಕ್ಷರಾಗಿದ್ದವರು. ದೇಶದ ಜನ ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಹೋರಾಟ ನಡೆಸುತ್ತಿದ್ದಾಗ  ಬಂಗಾಳದಲ್ಲಿ ಬ್ರಿಟಿಷರ ಮೇಲುಸ್ತುವಾರಿಯಲ್ಲಿ ಮುಸ್ಲಿಂ ಲೀಗ್ ಜೊತೆ ಸೇರಿ ಸರ್ಕಾರ ರಚಿಸಿದವರು. ಬಂಗಾಳದಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಬ್ರಿಟಿಷರ ಪರವಾಗಿ ಹತ್ತಿಕ್ಕಲು ಯತ್ನಿಸಿದವರು.

ಸ್ವಾತಂತ್ರ್ಯಾನಂತರದಲ್ಲಿ ಹಿಂದೂ ಮಹಾ ಸಭಾ  ಮತ್ತು ಆರೆಸ್ಸೆಸ್ ಸಂಘಟನೆಗಳು ಗಾಂಧಿ  ಹತ್ಯೆ ಪ್ರಕರಣದಲ್ಲಿ ಮೂಲೆ ಸೇರಿದಾಗ ಆರೆಸ್ಸೆಸ್ ತನ್ನ ರಾಜಕೀಯ ಅಸ್ಪೃಶ್ಯತೆಯನ್ನು ಕಳೆದುಕೊಳ್ಳಲು ಹುಟ್ಟುಹಾಕಿದ ರಾಜಕೀಯ ಪಕ್ಷವಾದ ಭಾರತೀಯ ಜನಸಂಘದ ಪ್ರಥಮ ಅಧ್ಯಕ್ಷರಾರಾದವರು. ಭಾರತೀಯ ಜನಸಂಘವೇ ಆ ನಂತರ 1980ರಲ್ಲಿ ಭಾರತೀಯ ಜನತಾ ಪಕ್ಷವಾಯಿತು.

ದೀನ್ ದಯಾಳ್ ಉಪಾಧ್ಯಾಯ ಅವರು ಭಾರತೀಯ ಜನಸಂಘಕ್ಕೆ ಆರೆಸ್ಸೆಸ್ ಎರವಲು ಕೊಟ್ಟಿದ್ದ ಹಿಂದುತ್ವ ಕಾರ್ಯಕರ್ತರು. ಆ ನಂತರ ಅದರ ಅಧ್ಯಕ್ಷರಾದವರು. ಅಂದರೆ ಸಾರಾಂಶದಲ್ಲಿ ದಲಿತ ವಿರೋಧಿ ಹಿಂದುತ್ವಕ್ಕೆ ಹಾಗೂ ಬಿಜೆಪಿ ಪಕ್ಷಕ್ಕೆ ಸೇವೆ ಸಲ್ಲಿಸಿದ್ದನ್ನು ಬಿಟ್ಟರೆ ಈ ಇಬ್ಬರೂ  ರಾಷ್ಟ್ರನಾಯಕರು ಹೇಗಾದಾರು?

ನಂತರ 2017ರಲ್ಲಿ ಅಂಬೇಡ್ಕರ್ ಅವರ 126ನೇ ಹುಟ್ಟುವರ್ಷವನ್ನು ದೇಶ ಆಚರಿಸುತ್ತಿದ್ದಾಗ ಆಗಿನ ಗುಜರಾತ್  ಶಾಸನ ಸಭೆಯ ಇಬ್ಬರು ಕಾಂಗ್ರೆಸ್ ಶಾಸಕರು ಈ ಕಾರಣಕ್ಕಾದರೂ ಅಂಬೇಡ್ಕರ್ ಫೋಟೋವನ್ನು ಗುಜರಾತಿನ ಶಾಲಾ-ಕಚೇರಿಗಳಲ್ಲಿ ಹಾಕಲು ಆದೇಶ ಮಾಡಬೇಕೆಂದು ಪತ್ರ ಬರೆದು ಬಿಜೆಪಿ ಮುಖ್ಯಮಂತ್ರಿ ವಿಜಯ್ ರುಪಾಣಿಯವರನ್ನು ಕೋರುತ್ತಾರೆ. ಆದರೆ ಆ ಬೇಡಿಕೆಯು ನೇರ ಕಸದ ಬುಟ್ಟಿಯನ್ನು ಸೇರುತ್ತವೆ.

ಹೆಚ್ಚಿನ ವಿವರಗಳಿಗೆ ಆಸಕ್ತರು ಈ ವರದಿಯನ್ನು ಗಮನಿಸಬಹುದು:

https://www.dnaindia.com/india/report-display-b-r-ambedkar-s-photos-at-all-public-places-in-gujcong-2402089

ಇದಕ್ಕಿಂತಲೂ ಆಘಾತಕಾರಿಯಾದ ಘಟನೆಯು 2020ರಲ್ಲಿ ನಡೆದಿದೆ.

ಗುಜರಾತಿನ ಸರ್ಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಫೋಟೋ ಏಕೆ ಹಾಕಲಾಗುತ್ತಿಲ್ಲವೆಂದು ಕೇಳಿ ಗುಜರಾತಿನ ದಲಿತ್ ಅಧಿಕಾರ್ ಮಂಚ್ ನ ಕೀರ್ತಿ ರಾಥೋಡ್ ಅವರು ಸರ್ಕಾರಕ್ಕೆ ಅರ್ಜಿ ಹಾಕಿದ್ದಾರೆ. ಅದಕ್ಕೆ 2020ರ ಡಿಸಂಬರ್ ನಲ್ಲಿ ಉತ್ತರಿಸಿದ್ದ ಆಗಿನ ಬಿಜೆಪಿ ಮುಖ್ಯಮಂತ್ರಿ ವಿಜಯ್ ರುಪಾಣಿ ಅವರು "ಸರ್ಕಾರಿ ಕಚೇರಿಗಳಲ್ಲಿ ಯಾವ ರಾಷ್ಟ್ರ ನಾಯಕರ ಫೋಟೋಗಳನ್ನು ತೂಗುಹಾಕಬೇಕೆಂಬ ಬಗ್ಗೆ 1996ರ  ಸುತ್ತೋಲೆಯೊಂದಿದೆ. (ಪ್ರಥಮ ಬಿಜೆಪಿ ಸರ್ಕಾರ ಹೊರಡಿಸಿದ್ದು..). ಅದರಲ್ಲಿ ರಾಷ್ಟ್ರ ನಾಯಕರ ಪಟ್ಟಿಯಲ್ಲಿ ಅಂಬೇಡ್ಕರ್ ಹೆಸರನ್ನು ಸೇರಿಸಲಾಗಿಲ್ಲ. ನಮ್ಮ ಸರ್ಕಾರ ಅದೇ ಪಟ್ಟಿಯನ್ನು ಮುಂದುವರೆಸುವ ತೀರ್ಮಾನ ಮಾಡಿದೆ"  ಎಂದು ಉಲ್ಲೇಖಿಸಿದ್ದರು.

ಅಂದರೆ ಬಿಜೆಪಿ ಸರ್ಕಾರ ಅಂಬೇಡ್ಕರ್ ಅವರನ್ನು ರಾಷ್ಟ್ರೀಯ ನಾಯಕರೂ ಎಂದು ಕೂಡ ಅಧಿಕೃತವಾಗಿ ಗುಜರಾತಿನಲ್ಲಿ ಪರಿಗಣಿಸುತ್ತಿಲ್ಲ. ಇದರ ಬಗ್ಗೆ ರಾಷ್ಟ್ರೀಯ  ಪರಿಶಿಷ್ಟ ಜಾತಿಗಳ ಆಯೋಗ 2020ರ ಡಿಸಂಬರ್ ನಲ್ಲಿ ಗುಜರಾತ್ ಸರ್ಕಾರದ ಸ್ಪಷ್ಟೀಕರಣ  ಕೇಳಿದೆ. ಆದರೆ ಅದು ಉತ್ತರ ಕೊಡುವ ಗೋಜಿಗೂ ಹೋಗಿಲ್ಲ.

ಹೆಚ್ಚಿನ ವಿವರಗಳಿಗೆ ಆಸಕ್ತರು ಈ ವರದಿಯನ್ನು ಗಮನಿಸಬಹುದು :

https://clarionindia.net/dalits-on-warpath-as-ambedkars-name-missing-in-gujarat-govt-list-of-national-leaders/

ಇದು ಸಂಘಪರಿವಾರ ಮತ್ತು ಮೋದಿ ಸರ್ಕಾರಕ್ಕೆ ಅಂಬೇಡ್ಕರ್ ಬಗ್ಗೆ ಇರುವ ಅಸಹನೆಯ ಅಸಲೀ ಚಿತ್ರಣ . ಅಂಬೇಡ್ಕರ್  ಅವರನ್ನು ಪ್ರಾತಃಸ್ಮರಣೀಯ ಎನ್ನುತ್ತಲೇ ಸಂಧ್ಯಾ ಕಾಲದಲ್ಲಿ ಗುಪ್ತವಾಗಿ ಒಳಗಿಂದಲೇ ಹತ್ಯೆ ಮಾಡುವ ಸಂಘಪರಿವಾರದ ಅಸಲೀ ಹುನ್ನಾರಗಳನ್ನು ಈ ದೇಶದ ದಲಿತ ದಮನಿತರು ಅರಿಯುವರೇ ?

ಜಸ್ಟ್ ಆಸ್ಕಿಂಗ್ ‌

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News