ಸಂವಿಧಾನವನ್ನು ಓದಿ ಅರ್ಥಮಾಡಿಕೊಳ್ಳುವುದು ಅಗತ್ಯ: ರವಿಕಿರಣ್ ಮುರ್ಡೇಶ್ವರ

Update: 2022-01-28 13:38 GMT

ಕುಂದಾಪುರ, ಜ.28: ನಾವೆಲ್ಲರೂ ಸಂವಿಧಾನವನ್ನು ಓದಿ ಅರ್ಥಮಾಡಿಕೊಳ್ಳ ಬೇಕು. ನಮ್ಮೆಲ್ಲರ ಪವಿತ್ರ ಗ್ರಂಥ ಸಂವಿಧಾನ. ಈ ಸಂವಿಧಾನ ಪುಸ್ತಕವನ್ನು ಪ್ರಥಮ ಬಾರಿಗೆ ಮತದಾನ ಮಾಡುವ ವ್ಯಕ್ತಿಗೆ ಉಚಿತವಾಗಿ ಕೊಡುವಂತಹ ವ್ಯವಸ್ಥೆ ಆಗಬೇಕು ಎಂದು ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಹೇಳಿದ್ದಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ರಾಜ್ಯ ಸಮಿತಿ ವತಿಯಿಂದ ತಲ್ಲೂರು ಸಮೀಪದ ಶೇಷ ಕೃಷ್ಣ ಸಭಾಭವನದಲ್ಲಿ ಬುಧವಾರ ಆಯೋಜಿಸಲಾದ ಸಂವಿಧಾನ ಅರ್ಪಣಾ ದಿನದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನಾವೆಲ್ಲರೂ ಯೋಗ್ಯ ಶಾಸಕರನ್ನು ಆಯ್ಕೆ ಮಾಡಬೇಕಾಗುತ್ತದೆ. ಒಮ್ಮೆ ನಾವು ಆಯ್ಕೆ ಮಾಡಿದ ನಂತರ ಅವರು ನಮ್ಮ ಹತೋಟಿಯಲ್ಲಿರುವುದಿಲ್ಲ. ಅವರು ಮಾಡಿದ್ದೇ ಕಾನೂನಾಗುತ್ತದೆ. ಹಾಗಾಗಬಾರದು ಎಂದರೆ ನಾವೆಲ್ಲರೂ ಸಂವಿಧಾನ ಪುಸ್ತಕವನ್ನು ಓದಿ ಅರ್ಥೈಸಿಕೊಳ್ಳುಬೇಕು ಎಂದರು.

ಈ ಸಂದರ್ಭದಲ್ಲಿ ಯುವಜನ ಸೇವಾ ಇಲಾಖೆಯ ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಬ್ರಹ್ಮಾವರ ಉಪ ತಹಸೀಲ್ದಾರ ರಾಘವೇಂದ್ರ ನಾಯಕ್, ದಸಂಸ ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರ್, ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಾಯಕಿ ಪ್ರಜ್ವಲ, ರಾಜ್ಯ ನೀಲಿ ಸೇನೆಯ ಉಪಾಧ್ಯಕ್ಷ ಸದ್ದಾಂ ಹುಸೇನ್ ಅವರಿಗೆ ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಭೀಮರತ್ನ ಪ್ರಶಸ್ತಿ ಪ್ರದಾನ ಮಾಡಿದರು.

ಅಧ್ಯಕ್ಷತೆಯನ್ನು ದಸಂಸ ಭೀಮಘರ್ಜನೆಯ ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು ವಹಿಸಿದ್ದರು. ಕುಂದಾಪುರ ಕ್ಷೇತ್ರ ಶಿಕ್ಷಣಾದಿಕಾರಿ ಅರುಣ್ ಕುಮಾರ್ ಶಟ್ಟಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಮಾಡಿದರು. ರಾಜ್ಯ ಸಂಘಟನಾ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ ಬುದ್ಧವಂದನೆಯನ್ನು ನೆರವೇರಿಸಿದರು. ತಲ್ಲೂರು ಗ್ರಾಪಂ ಅಧ್ಯಕ್ಷೆ ಭೀಮವ್ವ ಗೌರವ ವಂದನೆಯನ್ನು ಸಲ್ಲಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸ ಲಾಯಿತು. ಭೀಮಘರ್ಜನೆ ಯುಟ್ಯೂಬ್ ಚಾನೆಲ್ ಲೋಕಾರ್ಪಣೆಗೊಳಿಸ ಲಾಯಿತು.

ಮುಖ್ಯ ಅತಿಥಿಗಳಾಗಿ ಕುಂದಾಪುರ ಸಮಾಜ ಕಲ್ಯಾಣ ಇಲಾಖೆಯ ರಾಘವೇಂದ್ರ ವರ್ಣೇಕರ್, ಗುಲ್ವಾಡಿ ಗ್ರಾಪಂ ಅಧ್ಯಕ್ಷ ಸುದೇಶ್ ಶೆಟ್ಟಿ, ತಲ್ಲೂರು ಗ್ರಾಪಂ ಉಪಾಧ್ಯಕ್ಷ ಗಿರೀಶ್ ನಾಯಕ್, ವಕೀಲರಾದ ಉದಯ್ ಮಣೂರು, ಗ್ರಾಪಂ ಸದಸ್ಯ ಸಂಜು ದೇವಾಡಿಗ, ಅಕ್ಷಯ, ರಾಧಕೃಷ್ಣ, ಕೃಷ್ಣ ಪೂಜಾರಿ, ಲಕ್ಷ್ಮಿ, ನಾಗರತ್ನ, ತೌಫಿಕ್ ಪಾರ್ಕರ್, ರಾಷ್ಟ್ರೀಯ ಮುಸ್ಲಿಂ ಮೊರ್ಚಾದ ರಾಜ್ಯಾಧ್ಯಕ್ಷ ನಜೀರ್ ಬೇಳುವಾಯಿ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ರಾಜು ತರಿಕರ್, ಜಿಲ್ಲಾ ಸಂಚಾಲಕ ಬಾಗಲಕೋಟ ಶಿವಶಂಕರ ಯಾದಗಿರಿ ಉಪಸ್ಥಿತರಿದ್ದರು.

ದಸಂಸ ವಸಂತ ವಂಡ್ಸೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಂಜುನಾಥ ಗುಡ್ಡೆಯಂಗಡಿ ಸ್ವಾಗತಿಸಿ, ವಿಜಯ್ ಕೆಎಸ್ ವಂದಿಸಿದರು. ಸುಮಾಲತಾ ಬಜಗೋಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News