ಅಮೃತ ಪಡೆದದ್ದು ಯಾರು? ವಿಷ ಕುಡಿದದ್ದು ಯಾರು?

Update: 2022-02-02 08:51 GMT

ಕೇಂದ್ರ ಸರಕಾರವು ಭಾರತದ ಅಭಿವೃದ್ಧಿಗೆ 39 ಲಕ್ಷ ಕೋಟಿ ರೂ. ವೆಚ್ಚ ಮಾಡುವುದಾಗಿ ಹೇಳಿದೆ. ಅದರಲ್ಲಿ 24ಲಕ್ಷ ಕೋಟಿ ರೂ.ಯಷ್ಟು ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಯಿಂದ ಬರುತ್ತದೆ. ಒಂದೆರಡು ಲಕ್ಷ ಕೋಟಿ ರೂ. ಭಾರತದ ಆಸ್ತಿಪಾಸ್ತಿಗಳನ್ನು ಮಾರುವುದರಿಂದ ಹಾಗೂ ಸರಕಾರದ ಹೂಡಿಕೆಗಳ ಮೇಲಿನ ಲಾಭದಿಂದ ಬರುತ್ತದೆ. ಉಳಿದ 14 ಲಕ್ಷ ಕೋಟಿ ರೂ.ಗಳಷ್ಟು ಮೋದಿ ಸರಕಾರ ಹೊಸದಾಗಿ ಸಾಲ ಮಾಡಬೇಕಿದೆ.

ಆದರೆ ಸರಕಾರ ಹೇಳಿದಷ್ಟು ತೆರಿಗೆ ಸಂಗ್ರಹ ಆಗಬೇಕೆಂದರೂ ಈ ವರ್ ಭಾರತದ ಜಿಡಿಪಿ ಅಭಿವೃದ್ಧಿಯ ದರ ಬಜೆಟ್‌ನ ಅಂದಾಜಿನಂತೆ ಶೇ. 9.2ರಷ್ಟಾಗಬೇಕು. ಆದರೆ ಅದಕ್ಕೆ ಸರಕಾರದ ಪ್ರಕಾರವೇ ಹಲವಾರು ಷರತ್ತುಗಳಿವೆ:

► ಒಳ್ಳೆಯ ಮಾನ್ಸೂನ್ ಮಳೆ ಬಂದು ಕೃಷಿ ಸರಾಗವಾಗಿ ಮುಂದುವರಿಯಬೇಕು.

► ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ದರ ಬ್ಯಾರೆಲ್‌ಗೆ 70-75 ಡಾಲರ್ ಅಷ್ಟೇ ಇರಬೇಕು.

► ಮತ್ತೊಂದು ಸಾಂಕ್ರಾಮಿಕದ ದಾಳಿಗೆ ದೇಶ ತುತ್ತಾಗಬಾರದು. ಅಂತರ್‌ರಾಷ್ಟೀಯ ಮಾರುಕಟ್ಟೆಯೂ ಆರೋಗ್ಯಕರವಾಗಿರಬೇಕು.

ಇವುಗಳಲ್ಲೆವೂ ಹೀಗೆ ನಡೆದರೆ ಮಾತ್ರ ಭಾರತದ ಜಿಡಿಪಿ ಅಭಿವೃದ್ಧಿ ಅಂದರೆ ಕೃಷಿ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರದ ಒಟ್ಟಾರೆ ಅಭಿವೃದ್ಧಿ ಶೇ. 9.2ರಷ್ಟಾಗಿ ಭಾರತ ಸರಕಾರಕ್ಕೆ ತೆರಿಗೆ ಮತ್ತು ತೆರಿಗೆಯೇತರ ಆದಾಯ ಎಲ್ಲವೂ ಸೇರಿ 39 ಲಕ್ಷ ಕೋಟಿ ರೂ. ಸಿಗುತ್ತದೆ. ಇವುಗಳಲ್ಲಿ ಒಂದು ಕೈಕೊಟ್ಟರೂ ರವಸೆಗಳೆಲ್ಲಾ ಸುಳ್ಳೇ.

ಎರಡನೆಯದಾಗಿ - ಭಾರತ ಈಗಲೂ ಕೋವಿಡ್ ಅಲೆಯಲ್ಲಿ ತತ್ತರಿಸುತ್ತಿದೆ. ಆದರೆ  ಕೋವಿಡ್ ಸಂಕಷ್ಟದಲ್ಲೂ ದೇಶದ ಶೇ. 10 ರಷ್ಟು ಜನ ಈ ದೇಶದ ಶೇ. 37ರಷ್ಟು ಸಂಪತ್ತನ್ನು ಕಸಿದಿದ್ದರು. ಆದರೆ ಶೇ.50 ರಷ್ಟು ಬಡಜನರಿಗೆ ದೇಶದ ಆದಾಯದಲ್ಲಿ ಶೇ.6ರಷ್ಟು ಪಾಲೂ ಸಿಕ್ಕಿಲ್ಲ. ಅಷ್ಟು ಮಾತ್ರವಲ್ಲ, ಕೋವಿಡ್ ಮತ್ತು ಅದಕ್ಕಿಂತಲೂ ಹೆಚ್ಚಾಗಿ ಲಾಕ್‌ಡೌನ್‌ನಿಂದಾಗಿ ಈ ದೇಶದಲ್ಲಿ 6 ಕೋಟಿಗೂ ಹೆಚ್ಚು ಜನ ಹೊಸದಾಗಿ ಬಡತನ ರೇಖೆಗಿಂತ ಕೆಳಗೆ ಕುಸಿದರು. ಬೀದಿ ವ್ಯಾಪಾರಿಗಳು, ಆಟೊ ಡ್ರೈವರ್‌ಗಳು, ರೈತರು, ದಿನಗೂಲಿಗಳು, ಕಾರ್ಮಿಕರು, ಸಣ್ಣ ಪುಟ್ಟ ಉದ್ಯಮಿಗಳು ಒಟ್ಟಾರೆ ಈ ದೇಶದ ಶೇ. 80 ರಷ್ಟು ಜನ ಇದ್ದದ್ದನ್ನು ಕಳೆದುಕೊಳ್ಳುವಂತಾಯಿತು.

ಇಂತಹ ದೇಶದಲ್ಲಿ ಮೋದಿ ಸರಕಾರ ಯಾರಿಂದ ತೆರಿಗೆ ಹೆಚ್ಚು ವಸೂಲಿ ಮಾಡಬೇಕು? ಯಾರಿಗೆ ತೆರಿಗೆ ರಿಯಾಯಿತಿ ಕೊಡಬೇಕು?

ಎಲ್ಲಾ ದೇಶಗಳಲ್ಲೂ ಇರುವಂತೆ ನಮ್ಮ ದೇಶದಲ್ಲೂ ಪ್ರತ್ಯಕ್ಷ ತೆರಿಗೆ-ಅಂದರೆ ಶ್ರೀಮಂತರ ಆದಾಯಗಳ ಮೇಲೆ ಹಾಕುವ ಕಾರ್ಪೊರೇಟ್ ತೆರಿಗೆ ಹಾಗೂ ಮಧ್ಯಮ ವರ್ಗದವರ ಮೇಲೆ ಹಾಕುವ ಆದಾಯ ತೆರಿಗೆಗಳಿವೆ. ಪರೋಕ್ಷ ತೆರಿಗೆ- ಅಂದರೆ ಬೆಂಕಿ ಪೊಟ್ಟಣ, ಉಪ್ಪು ಕೊಂಡರೂ ಬಡವರು- ಶ್ರೀಮಂತರೆನ್ನದೆ ಎಲ್ಲರೂ ಸಮಾನವಾಗಿ ಕಟ್ಟುವ ಪರೋಕ್ಷ ತೆರಿಗೆ ಇದೆ.

ನಮ್ಮ ದೇಶದಲ್ಲಿ ಒಟ್ಟಾರೆ ರಾಜ್ಯ ಹಾಗೂ ಕೇಂದ್ರ ಸರಕಾರಗಳನ್ನೆಲ್ಲಾ ಸಂಗ್ರಹಿಸುವ ತೆರಿಗೆಯಲ್ಲಿ ಪರೋಕ್ಷ ಅಂದರೆ ಬಡಮಧ್ಯಮ ವರ್ಗದವರು ಕಟ್ಟುವ ತೆರಿಗೆಯ ಪಾಲು ಶೇ.63. ಶ್ರೀಮಂತರು ಕಟ್ಟುವ ತೆರಿಗೆಯ ಪಾಲು ಕೇವಲ ಶೇ.37. ಇನ್ನು ಕೇವಲ ಕೇಂದ್ರ ಸರಕಾರವನ್ನು ತೆಗೆದುಕೊಳ್ಳುವುದಾದರೆ ಈ ದೇಶದಲ್ಲಿ ಪ್ರತ್ಯಕ್ಷ ತೆರಿಗೆ ಹಾಕುವ ಅಧಿಕಾರ ಇರುವುದು ಕೇಂದ್ರ ಸರಕಾರಕ್ಕೆ ಮಾತ್ರ. ಕೇಂದ್ರ ಸರಕಾರದ ಆದಾಯದಲ್ಲಿ ಪ್ರತ್ಯಕ್ಷ ತೆರಿಗೆ ಹಾಗೂ ಪರೋಕ್ಷ ತೆರಿಗೆ ಎರಡು ಸರಿಸಮ. ಹಾಗಿದ್ದಲ್ಲಿ ಈ ಕೋವಿಡ್ ಕಾಲದಲ್ಲಿ ಅಮೃತ ಕುಡಿದದ್ದು ಶೇ.10 ರಷ್ಟಿರುವ ಅತಿ ಶ್ರೀಮಂತರು. ವಿಷವನ್ನು ಕುಡಿಯುತ್ತಿರುವವರು ಉಳಿದ ಶೇ. 90 ರಷ್ಟು ಜನರು.

ಆದ್ದರಿಂದ ಸರಕಾರ ಪ್ರತ್ಯಕ್ಷ ತೆರಿಗೆಗಳಾದ ಕಾರ್ಪೊರೇಟ್ ತೆರಿಗೆಯನ್ನು ಜಾಸ್ತಿ ಮಾಡಿ ಪರೋಕ್ಷ ತೆರಿಗೆಯಾದ ಉಖಿ ಹೊರೆಯನ್ನು ಸಾಮಾನ್ಯ ಜನರ ಮೇಲೆ ಕಡಿಮೆ ಮಾಡಬೇಕಿತ್ತಲ್ಲವೇ? ಆದರೆ ಈ ಬಜೆಟ್‌ನ ಅಂದಾಜಿನ 39 ಲಕ್ಷ ಕೋಟಿ ರೂ.ನಲ್ಲಿ ಶೇ.15ರಷ್ಟು ಅಂದರೆ ಕೇವಲ 5.8ಲಕ್ಷ ಕೋಟಿ ರೂ.ಯನ್ನು ಮಾತ್ರ ಈ ಅಮೃತಮತಿಗಳಿಂದ ಸಂಗ್ರಹಿಸುತ್ತಿದ್ದಾರೆ. ಉಳಿದ 20 ಲಕ್ಷ ಕೋಟಿ ರೂ.ಗಳಲ್ಲಿ 6 ಲಕ್ಷ ಕೋಟಿ ರೂ.ಯನ್ನು ಮಧ್ಯಮ ವರ್ಗದವರ ಆದಾಯ ತೆರಿಗೆಗಳಿಂದ ಹಾಗೂ 14 ಲಕ್ಷ ಕೋಟಿ ರೂ.ಯಷ್ಟು ಶ್ರೀ ಸಾಮಾನ್ಯರೇ ಪ್ರಧಾನವಾಗಿ ತೆರುವ ಎಖಯಿಂದ ತೆರಿಗೆ ಮೂಲಕ ಸಂಗ್ರಹಿಸುವ ಯೋಜನೆ ಮಾಡಿದ್ದಾರೆ.

ಉಳಿದ 14 ಲಕ್ಷ ಕೋಟಿ ರೂ. ಸಾಲವಾಗಿದ್ದು ಅದೂ ಬರಲಿರುವ ವರ್ಷಗಳ ತೆರಿಗೆಯೇ ಆಗಿದೆ. ವಾಸ್ತವವಾಗಿ ಜಗತ್ತಿನಾದ್ಯಂತ ಈ ಕೋವಿಡ್ ಕಾಲದಲ್ಲಿ ಹೆಚ್ಚುತ್ತಿರುವ ಸಮಾನತೆ ಹಾಗೂ ಮಾನವ ದುರಂತಗಳನ್ನು ತಡೆಯಬೇಕೆಂದರೆ ಅತಿ ಶ್ರೀಮಂತರ ಸಂಪತ್ತಿನ ಮೇಲೆ ಒಂದೆರಡು ವರ್ಷಗಳ ಕಾಲವಾದರೂ ಕನಿಷ್ಠ ಶೇ.2ರಷ್ಟು ತೆರಿಗೆಯನ್ನು ಹಾಕಬಹುದೆಂದು ಹಾಗೂ ಬಹುರಾಷ್ಟ್ರೀಯ ಕಂಪೆನಿಗಳು ಆಯಾ ದೇಶಗಳಲ್ಲಿ ಗಳಿಸುವ ಸಂಪತ್ತು ಮತ್ತು ಆದಾಯಗಳ ಮೇಲೆ ಕನಿಷ್ಠ ಶೇ. 15-20 ರಷ್ಟು ತೆರಿಗೆ ಹಾಕಬೇಕೆಂದೂ ಹಾಗೂ ಷೇರು ಮಾರುಕಟ್ಟೆಯಲ್ಲಿ ಹಾಗೂ ಕಾರ್ಪೊರೇಟ್ ಒಡೆತನದ ವರ್ಗಾವಣೆ ಮಾಡುವುದರ ಮೇಲೆ ಎಸ್ಟೇಟ್ ಶುಲ್ಕ ವಿಧಿಸಬೇಕೆಂದು ಜಗತ್ತಿನಾದ್ಯಂತ ಒತ್ತಾಯ ಹೆಚ್ಚಾಗುತ್ತಿದೆ. ಕೆಲವು ಸರಕಾರಗಳು ಆ ದಾರಿಯನ್ನು ಪಾಲಿಸುತ್ತಲೂ ಇವೆ.ಆದರೂ ಮೋದಿ ಸರಕಾರ ಮಾತ್ರ ತಮ್ಮ ಕಾರ್ಪೊರೇಟ್ ಧಣಿಗಳಿಗೆ ಈ ಬಜೆಟ್‌ನಲ್ಲಿ ಇನ್ನಷ್ಟು ಸರ್ ಚಾರ್ಜ್ ವಿನಾಯಿತಿಗಳನ್ನು ಘೋಷಿಸಿದೆಯೇ ವಿನಾ ತೆರಿಗೆ ಹಾಕಿಲ್ಲ. ಬದಲಿಗೆ ಬಡವರು ಮತ್ತು ಮಧ್ಯಮವರ್ಗದವರ ಮೇಲೆ ಎಖ ಮತ್ತು ಭವಿಷ್ಯದ ಸಾಲದ ಹೊರೆಯನ್ನು ಹೆಚ್ಚಿಸಿದೆ.

ವಾಸ್ತವದಲ್ಲಿ ಕಾಂಗ್ರೆಸ್ ಸರಕಾರ ಬಾಂಡ್ ಮತ್ತು ಸೆಕ್ಯೂರಿಟಿ ಗಳ ಮೂಲಕ ಸಾಲ ಮಾಡಿದ್ದರಿಂದ ಈ ಸರಕಾರ ಅವುಗಳನ್ನು ತೀರಿಸಬೇಕಾಗಿ ಬಂದಿದೆ ಎಂದು ಹುಯಿಲೆಬ್ಬಿಸಿದ್ದ ಬಿಜೆಪಿ ಸರಕಾರ ಈ ಬಜೆಟ್‌ನಲ್ಲಿ 15 ಲಕ್ಷ ಕೋಟಿ ರೂ.ಯಷ್ಟು ಸಾಲವನ್ನು ಹೊಸದಾಗಿ ಬಾಂಡ್ ಮತ್ತು ಸೆಕ್ಯುರಿಟಿಗಳ ಮೂಲಕ ಎತ್ತುವುದಾಗಿ ಘೋಷಿಸಿದೆ. ಅವನ್ನು 10-15 ವರ್ಷಗಳ ನಂತರ ಆಗಿನ ಸರಕಾರಗಳು ತೀರಿಸಬೇಕಿದೆ. ಇದು ಸಂಪನ್ಮೂಲ ಸಂಗ್ರಹದ ಅಮೃತ ಮಥನದಲ್ಲಿ ಮೋದಿ ಮೋಹಿನಿ ಮಾಡಿರುವ ಅನ್ಯಾಯ. ಶೇ. 10 ಶ್ರೀಮಂತರಿಗೆ ಅಮೃತ! ಉಳಿದ ನಾವು ರಾಕ್ಷಸರು. ಆದ್ದರಿಂದ ವಿಷ! ಅದೇ ರೀತಿ, ಸರಕಾರ ಈ ಕೋವಿಡ್ ಕಷ್ಟ ಕಾಲದಲ್ಲಿ ಯಾವುದರ ಮೇಲೆ ವೆಚ್ಚ ಮಾಡಬೇಕಿತ್ತು. ಮುಖ್ಯವಾಗಿ ಈಗಲೂ ಬಡತನದ ದವಡೆಯಲ್ಲಿ ಸಿಲುಕಿಕೊಂಡಿರುವ ಗ್ರಾಮೀಣ ಬಡವರಿಗೆ ಕೆಲಸ ಒದಗಿಸುವ (MNREGA) ಹೆಚ್ಚಿಸಬೇಕಿತ್ತು. ಆದರೆ ಸರಕಾರ ಮಾಡಿರುವುದೇನು? 2020 ಬಜೆಟ್‌ನಲ್ಲಿ ಈ ಬಾಬತ್ತಿಗೆ 1 ಲಕ್ಷ ಕೋಟಿ ರೂ. ಕೊಡಲಾಗಿತ್ತು. 2021-22 ರಲ್ಲಿ 99 ಸಾವಿರ ಕೋಟಿ ರೂ.

ಆದರೆ ಈ ವರ್ಷ ಅದನ್ನು ಶೇ. 25 ರಷ್ಟು ಕಡಿತ ಮಾಡಿ 72 ಸಾವಿರ ಕೋಟಿಗೆ ಇಳಿಸಲಾಗಿದೆ. ಬೆಳೆ ವಿಮಾಗೆ ಹೋದ ವರ್ಷ 16 ಸಾವಿರ ಕೋಟಿ ರೂ. ಎತ್ತಿಟ್ಟಿದ್ದರೆ ಈ ವರ್ಷ ಅದನ್ನು ಹೆಚ್ಚು ಮಾಡುವುದರ ಬದಲು 500 ಕೋಟಿ ರೂ.ಕಡಿತ ಮಾಡಲಾಗಿದೆ! ಕೋವಿಡ್ ನಲ್ಲಿ ಬಡಜನರನ್ನು ಅಲ್ಪಸ್ವಲ್ಪ ಸಾವಿನ ದವಡೆಯಿಂದ ಬಚಾವು ಮಾಡಿದೇ ಉಚಿತ ಪಡಿತರ ಯೋಜನೆ. ಆದರೆ ಕಳೆದ ವರ್ಷ ಈ ಬಾಬತ್ತಿಗೆ 2.1 ಲಕ್ಷ ಕೋಟಿ ರೂ. ಬಜೆಟ್ ನೀಡಿದ್ದರೆ ಈ ವರ್ಷ ಅದನ್ನು 1.4 ಲಕ್ಷ ಕೋಟಿ ರೂ.ಗೆ ಇಳಿಸಲಾಗಿದೆ. ಅಂದರೆ ಶೇ. 30ರಷ್ಟು ಕಡಿತ. ಹಾಗೆಯೇ ಉಜ್ವಲ್ ಯೋಜನೆಯಲ್ಲಿ ಎಲ್ಲರಿಗೂ ಗ್ಯಾಸ್ ಕನೆಕ್ಷನ್ ಎಂದು ಅಧಿಕಾರಕ್ಕೆ ಬಂದ ಮೋದಿ ಸರಕಾರ, ಮೊದಲು ಗ್ಯಾಸ್ ಸಬ್ಸಿಡಿ ದುಡ್ಡನ್ನು ನೇರವಾಗಿ ಬಳಕೆದಾರರ ಅಕೌಂಟ್‌ಗೆ ಹಾಕುವುದಾಗಿ ಹೇಳಿತ್ತು. ಆದರೆ 2013ರಲ್ಲಿ ಆ ಬಾಬತ್ತಿಗೆ ಅಂದಿನ ಕಾಂಗ್ರೆಸ್ ಸರಕಾರ 53,000 ಕೋಟಿ ರೂ. ಎತ್ತಿಟ್ಟಿದ್ದರೆ ಮೋದಿ ಸರಕಾರ ವರ್ಷ ವರ್ಷ ಆ ಹಣವನ್ನು ಕಡಿಮೆ ಮಾಡುತ್ತಾ ಬಂತು. ಹೀಗಾಗಿ ಕಳೆದ ಎರಡು ವರ್ಷಗಳಿಂದ ಈ ದೇಶದ ಬಹುಪಾಲು ಜನರಿಗೆ ಗ್ಯಾಸ್ ಸಬ್ಸಿಡಿ ದುಡ್ಡು ಪಾವತಿಯೇ ಆಗಿರಲಿಲ್ಲ. ಕೋವಿಡ್ ಕಾಲದಲ್ಲಿ ಹೆಚ್ಚು ದುಡ್ಡು ಕೊಟ್ಟು ಗ್ಯಾಸ್ ಕೊಂಡುಕೊಳ್ಳುವುದು ಶಿಕ್ಷೆಯೇ ಆಗಿತ್ತು. ಆದರೆ ಹೋದ ವರ್ಷ ಇದಕ್ಕಾಗಿ 13,000 ಕೋಟಿ ರೂ. ಎತ್ತಿಟ್ಟಿದ್ದ ಮೋದಿ ಸರಕಾರ ಈ ವರ್ಷ   ಎತ್ತಿಟ್ಟಿರುವುದು ಕೇವಲ 4000 ಕೋಟಿ ರೂ. ಅಂದರೆ, ಹೋದ ವರ್ಷಕ್ಕಿಂದ ಶೇ. 65ರಷ್ಟು ಕಡಿಮೆ. ಅಂದರೆ ಇನ್ನು ಮುಂದೆ ಈ ದೇಶದ ಎಲ್ಲಾ ಬಡಪಾಯಿಗಳು ಸೌದೆ ಒಲೆಗೆ ಮರಳಬೇಕು. ಹೀಗೆ ಮೋದಿ ಸರಕಾರ ಬಡಭಾರತೀಯರ ಅನ್ನವನ್ನು ಮಾತ್ರವಲ್ಲ, ಒಲೆಯನ್ನೂ ಕಸಿಯುತ್ತಿದೆ. ಇಂತಹ ಇನ್ನು 10 ಹಲವು ವಿಷದ ಬಟ್ಟಲುಗಳು ಈ ಬಜೆಟ್‌ನಲ್ಲಿವೆ.

ಪ್ರತಿಭಾವಂತ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಉತ್ತೇಜನಕ್ಕಾಗಿ ಕೊಡುತ್ತಿದ್ದ

‘ಶ್ರೇಯಸ್’ ಬಜೆಟನ್ನು 500 ಕೋಟಿ ರೂ.ಯಿಂದ 350 ಕೋಟಿ ರೂ.ಗೆ ಇಳಿಸಲಾಗಿದೆ. ಇದೇ ಬಾಬತ್ತಿಗೆ ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಬಜೆಟನ್ನು 130 ಕೋಟಿ ಯಿಂದ 80 ಕೋಟಿ ರೂ.ಗೆ ಇಳಿಸಲಾಗಿದೆ. ಹಾಗಿದ್ದಲ್ಲಿ 39 ಲಕ್ಷ ಕೋಟಿ ರೂ.ಯಲ್ಲಿ ಅಮೃತ ಪಡೆದವರು ಯಾರು?

ಇದರಲ್ಲಿ ಸರಕಾರದ ಸಂಬಳ, ಸಾರಿಗೆ, ಬಡ್ಡಿ ಹಾಗೂ ಪೆನ್ಶನ್ ಪಾವತಿಗಳಂತಹ ವೆಚ್ಚಗಳಿಗೆ ಹೋಗಿ ಉಳಿಯುವ ಪ್ರಧಾನ ಮೊತ್ತ ವೆಚ್ಚವಾಗುತ್ತಿರುವುದು ಪ್ರಧಾನ ಮಂತ್ರಿ ಗತಿಶಕ್ತಿ ಯೋಜನೆಗೆ.

ಅರ್ಥಾತ್ ಈ ದೇಶದ ಎಲ್ಲಾ ರಸ್ತೆ, ರೈಲು, ಬಂದರುಗಳನ್ನು ಖಾಸಗೀಕರಿಸುವ ಯೋಜನೆಗೆ. ಈ ಕ್ಷೇತ್ರದಲ್ಲಿರುವ ಬೃಹತ್ ದೇಶ-ವಿದೇಶಿ ಕಾರ್ಪೊರೇಟುಗಳ ಲಾಭಕ್ಕೆ... ಮೊನ್ನೆ (Air India) ಅನ್ನು ಟಾಟಾಗಳಿಗೆ ಮಾರಿದಾಗಲೂ ಸರಕಾರ ಅವರಿಗೆ ಯಾವುದೇ ನಷ್ಟವಾಗಬಾರದೆಂದು 60 ಸಾವಿರ ಕೋಟಿ ರೂ. ಪೂರೈಸುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ.

ಮತ್ತೊಂದು ಕಡೆ ಕಳೆದ ಸಾಲಿಗಿಂತ ಮೂರು ಪಟ್ಟು ಹೆಚ್ಚಿನ ಬಜೆಟ್ ಘೋಷಣೆಯಾಗಿರುವುದು ಸರಕಾರಿ ಸಂಸ್ಥೆಗಳನ್ನು ಖಾಸಗೀಕರಿಸುವ (DIPAM) ಇಲಾಖೆಗೆ. ಇವುಗಳಿಂದ ಇರುವ ಉದ್ಯೋಗಗಳೂ ನಾಶವಾಗುತ್ತದೆ. ಬದಲಿಗೆ ಈ ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ (MSME)  ಸಣ್ಣ ಅತಿಸಣ್ಣ ಉದ್ಯಮಗಳ ಕಣ್ಣಿಗೆ ಈ ಬಜೆಟ್ ಸುಣ್ಣ ವನ್ನೇ ಬಳಿದಿದೆ. ಇದು ಈ ಸಾಲಿನ ಮೋದಿ-ನಿರ್ಮಲಕ್ಕ-ಅಂಬಾನಿ ಬಜೆಟ್‌ನ ನಿಜರೂಪ.

ಅಮೃತ ಕಾಲದ ಈ ಬಜೆಟ್‌ನಲ್ಲಿ ಮೋದಿ ಸರಕಾರವೆಂಬ ಮೋಹಿನಿಯು ಅಮೃತವನ್ನು ಅಂಬಾನಿಯಂತಹ ಉದ್ಯಮಿಗಳಿಗೆ ಹಂಚಿದರೆ ಇನ್ನುಳಿದ ಶೇ. 90ರಷ್ಟು ಜನರಿಗೆ ಕಾರ್ಕೋಟಕ ವಿಷವನ್ನು ಹಂಚಿದೆ. ಪುರಾಣದಂತೆ ಈಗಲೂ ಈ ದೇಶದ ಮೂಲನಿವಾಸಿಗಳು ಮೋಸ ಹೋಗುತ್ತಲೇ ಇರಬೇಕೆ?.

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News