ಓ ಮೆಣಸೇ...
ದೇವೇಗೌಡರ ಬುದ್ಧಿವಂತಿಕೆ ಏನೆಂದರೆ ಅವರು ನೀರಿಗಾಗಿ ಅಣೆಕಟ್ಟು ನಿರ್ಮಿಸಲು ಹೋಗುವುದಿಲ್ಲ, ಬದಲಿಗೆ ಸೋರುವ ನೀರಿಗೆ ಕೊಡ ಹಿಡಿದು ತುಂಬಿಸಿಕೊಳ್ಳುತ್ತಾರೆ -ಸಿ.ಎಂ.ಇಬ್ರಾಹೀಂ, ವಿ.ಪ. ಸದಸ್ಯ
ಅವರು ತುಂಬಿಸಿದ ಕೊಡದ ನೀರಿಗಾಗಿ ನೀವು ಬಕೆಟ್ ಹಿಡಿಯುತ್ತೀರಿ, ಅಷ್ಟೇ.
ಕೊಡಗಿನ ಜನರ ಕೋವಿಯ ಹಕ್ಕು ಕಸಿಯುವುದಿಲ್ಲ -ಪ್ರತಾಪ ಸಿಂಹ, ಸಂಸದ
ಶಿಕ್ಷಣದ ಹಕ್ಕಿಗಿಂತ ಕೋವಿಯ ಹಕ್ಕೇ ದೊಡ್ಡದು ಎನ್ನುವುದು ಬಿಜೆಪಿಯ ಸಿದ್ಧಾಂತವೂ ಆಗಿದೆ.
ಡಿಕೆಶಿ, ಸಿದ್ದರಾಮಯ್ಯ ಇಬ್ಬರಿಗೂ ಮುಖ್ಯಮಂತ್ರಿಯಾಗುವ ಹುಚ್ಚು ಹಿಡಿದಿದೆ -ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ನಿಮ್ಮ ಹುಚ್ಚು ಬಿಟ್ಟಿದೆಯಾ?
ಮುಂಬೈಯಲ್ಲಿ ನಡೆಯುವ ಬಹುತೇಕ ವಿಚ್ಛೇದನಗಳಿಗೆ ಟ್ರಾಫಿಕ್ ಕಾರಣ -ಅಮೃತಾ ಫಡ್ನಾವೀಸ್, ಮಹಾರಾಷ್ಟ್ರದ ಮಾಜಿ ಸಿಎಂ ಫಡ್ನಾವೀಸ್ ಪತ್ನಿ
ತಮ್ಮ ಪತಿ ಶಿವಸೇನೆಯೊಂದಿಗೆ ಮಾಡಿಕೊಂಡ ವಿಚ್ಛೇದನೆಯ ಸಂದರ್ಭದಲ್ಲಿ ಆದ ಟ್ರಾಫಿಕ್ ಜಾಮ್ ಬಗ್ಗೆ ಹೇಳುತ್ತಿರಬೇಕು.
ಭಾರತವು ಪ್ರಧಾನಿಯನ್ನು ಹೊಂದಿಲ್ಲ, ರಾಜನನ್ನು ಹೊಂದಿದೆ -ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಜಾನಪದ ಕತೆಯಲ್ಲಿ ಬರುವ ಬೆತ್ತಲೆ ರಾಜನೇ ಇರಬೇಕು.
ರಾಹುಲ್ ಗಾಂಧಿ ಸೀರಿಯಸ್ ರಾಜಕಾರಣಿ ಅಲ್ಲ, ಟೂರಿಸ್ಟ್ ರಾಜಕಾರಣಿ -ಸಿ.ಟಿ.ರವಿ, ಶಾಸಕ
ಟೆರರಿಸ್ಟ್ ರಾಜಕಾರಣಿಗಳಿಗಿಂತ ವಾಸಿ.
7ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಯಾವುದೇ ಹುದ್ದೆಗಾಗಿ ಬದುಕಿಲ್ಲ -ನವಜೋತ್ ಸಿಂಗ್ ಸಿಧು, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ
ಕಾಮೆಡಿ ಸರ್ಕಸ್‌ನಲ್ಲಿ ಇದನ್ನು ಹೇಳಿದ್ದರೆ ಜನ ಒಂದಿಷ್ಟು ನಕ್ಕು ಹಗುರಾಗುತ್ತಿದ್ದರು.
ಸೂಪರ್ ಮಾರ್ಕೆಟ್‌ಗಳಲ್ಲಿ ವೈನ್ ಮಾರಾಟಕ್ಕೆ ಅವಕಾಶ ನೀಡುವ ಮಹಾರಾಷ್ಟ್ರ ಸರಕಾರದ ನಿರ್ಧಾರದ ವಿರುದ್ಧ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇನೆ -ಅಣ್ಣಾ ಹಝಾರೆ, ಸಾಮಾಜಿಕ ಕಾರ್ಯಕರ್ತ
ದೇಶ ಮಾರಾಟವಾಗುತ್ತಿರುವುದರ ವಿರುದ್ಧ ಸತ್ಯಾಗ್ರಹವಿಲ್ಲವೆ?
ಮನೆ ಸಂಸಾರದ ಬಂಧನದಲ್ಲಿ ಸಿಲುಕಿಸಿದರೆ, ಮಂದಿರ ಸಂಸಾರದ ಬಂಧನದಿಂದ ಬಿಡುಗಡೆ ಮಾಡುತ್ತದೆ -ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
ಪ್ರಾಮಾಣಿಕ ನ್ಯಾಯಾಧೀಶರು ಇದ್ದಿದ್ದರೆ ಇಷ್ಟು ಹೊತ್ತಿಗೆ ಜೈಲು ಬಂಧನದಲ್ಲಿರುತ್ತಿದ್ದಿರಿ.
ವಿಶ್ವಕಪ್ ಗೆದ್ದ ಭಾರತ ಕಿರಿಯ ಕ್ರಿಕೆಟಿಗರ ಅತ್ಯುನ್ನತ ಮಟ್ಟದ ಅದ್ಭುತ ಪ್ರದರ್ಶನ ಭಾರತದ ಕ್ರಿಕೆಟ್‌ನ ಭವಿಷ್ಯ ಸುರಕ್ಷಿತ ಮತ್ತು ಸಮರ್ಥರ ಕೈಯಲ್ಲಿದೆ ಎಂಬುದನ್ನು ತೋರಿಸುತ್ತದೆ -ನರೇಂದ್ರ ಮೋದಿ, ಪ್ರಧಾನಿ
ಭಾರತದ ಭವಿಷ್ಯ ಮಾತ್ರ ಅಸಮರ್ಥರ ಕೈಯಲ್ಲಿದೆ.
ಕಾಂಗ್ರೆಸನ್ನು ತೊರೆಯುವುದಿಲ್ಲ -ಸಿ.ಎಂ.ಇಬ್ರಾಹೀಂ, ಮಾಜಿ ಸಚಿವ
ನಿಮ್ಮ 40 ಕೋಟಿ ರೂ. ಸಾಲವನ್ನು ತೀರಿಸುವ ಭರವಸೆ ಕಾಂಗ್ರೆಸ್ ಮುಖಂಡರಿಂದ ಸಿಕ್ಕಿದೆಯೆ?
ಸಂವಿಧಾನದ ಆಶಯದಂತೆ ಅಸ್ಪಶ್ಯತೆ ತೊಡೆದುಹಾಕಲು ರಾಜ್ಯಾದ್ಯಂತ ಜನಾಂದೋಲನ ಹಮ್ಮಿಕೊಳ್ಳಲಾಗುವುದು -ಕೋಟ ಶ್ರೀನಿವಾಸ ಪುಜಾರಿ,ಸಚಿವ
ನಿಮ್ಮ ಕೈಯಲ್ಲಿ ಮುಖಂಡರು ಕೊಟ್ಟಿರುವುದು ಅಂಬೇಡ್ಕರ್ ಸಂವಿಧಾನವಲ್ಲ, ಮನು ಸಂವಿಧಾನ.
ಬೇಕಾದರೆ ಬಿಡಿಸಿ ನೋಡಿ. ಬ್ರಿಟಿಷರಿಂದ ಶುರುವಾದ ಒಡೆದು ಆಳುವ ನೀತಿಯನ್ನು ನಂತರದಲ್ಲಿ ಮುಂದುವರಿಸಿದ್ದು ಕಾಂಗ್ರೆಸ್ -ನರೇಂದ್ರ ಮೋದಿ , ಪ್ರಧಾನಿ
ಒಡೆದು ಆಳುವ ನೀತಿಯನ್ನು ಬ್ರಿಟಿಷರು ಕಲಿತದ್ದೇ ಆರೆಸ್ಸೆಸ್‌ನ ಪೂರ್ವಜರಿಂದ.
ನಮ್ಮ ಸಂವಿಧಾನದಲ್ಲಿ ಹಿಂದುತ್ವದ ಪ್ರತಿಬಿಂಬವಿದೆ -ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಹೌದು ನಿಮ್ಮ ಮನು ಸಂವಿಧಾನದಲ್ಲಿ ಮತ್ತೇನು ಇರಲು ಸಾಧ್ಯ?
ಹಿಜಾಬ್-ಕೇಸರಿ ಶಾಲು ವಿವಾದ ನೋಡಿದರೆ ರೈತ ಮಕ್ಕಳು ಹಳ್ಳಿ ಶಾಲೆಗಳಿಗೆ ಹಸಿರು ಶಾಲು ಹಾಕಿಕೊಂಡು ಹೋಗಿ ಎಂದು ಕರೆ ಕೊಡಬೇಕಾಗುತ್ತದೆ -ಕುಮಾರಸ್ವಾಮಿ, ಮಾಜಿ ಸಿಎಂ
ಮೊದಲು ರೈತರ ಮಕ್ಕಳು ಶಾಲೆಗೆ ಯಾಕೆ ಹೋಗುತ್ತಿಲ್ಲ ಎನ್ನುವುದಕ್ಕೆ ಪರಿಹಾರ ಕಂಡುಕೊಳ್ಳಿ.
ಗರ್ಭದಲ್ಲಿರುವಾಗಲೇ ಮಗುವಿಗೆ ಸಂಸ್ಕಾರ ನೀಡುವ ಗರ್ಭ ಸಂಸ್ಕಾರ ಎಂಬ ಯೋಜನೆಯನ್ನು ಜಾರಿಗೆ ತರಲಾಗುವುದು -ಶಶಿಕಲಾ ಜೊಲ್ಲೆ, ಸಚಿವೆ
ಗರ್ಭದಲ್ಲೇ ಮಗುವಿಗೆ ಜಾತೀಯತೆಯ ಜನಿವಾರ ತೊಡಿಸುವುದೇ?
ನರೇಂದ್ರ ಮೋದಿ ನೇತೃತ್ವದ ಸರಕಾರ ಬಂದ ಮೇಲೆ ದೇಶದಲ್ಲಿ ಅಮೃತ ಕಾಲ ಅಲ್ಲ, ಬದಲಾಗಿ ರಾಹುಕಾಲದ ಅನುಭವವಾಗುತ್ತಿದೆ -ಕಪಿಲ್ ಸಿಬಲ್, ಸಂಸದ
ರಾಹುಲ್ ಕಾಲದ ಅನುಭವ ಆಗುವುದು ಎಂದು?
ಡಿಜಿಟಲ್ ರೂಪಾಯಿ ವ್ಯವಸ್ಥೆ ಜಾರಿಗೆ ಬಂದರೆ ಹಣಕಾಸು ವ್ಯವಸ್ಥೆ ನಿರ್ವಹಣೆಯ ಕಾರ್ಯದಕ್ಷತೆ ಹೆಚ್ಚುತ್ತದೆ -ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ಡಿಜಿಟಲ್ ಫೋನ್ ಇರುವವರಿಗಷ್ಟೇ ಹಣ ಹೊಂದುವ ಹಕ್ಕು ಕಾನೂನು ತಂದು ಬಿಡಿ.
ಅಫ್ಘಾನಿಸ್ತಾನದಲ್ಲಿ ಕಾಣೆಯಾಗಿರುವ ಮಹಿಳಾ ಹೋರಾಟಗಾರರ ಯೋಗಕ್ಷೇಮದ ಬಗ್ಗೆ ನನಗೆ ಹೆಚ್ಚು ಆತಂಕವಾಗುತ್ತದೆ -ಆಂಟೋನಿಯೊ ಗುಟೆರಸ್, ವಿಶ್ವಸಂಸ್ಥೆ ಮ.ಪ್ರ. ಕಾರ್ಯದರ್ಶಿ
ಅಫ್ಘಾನಿಸ್ತಾನದ ಹೊರಗಿರುವ ಹೋರಾಟಗಾರರ ಸ್ಥಿತಿಗತಿಯ ಬಗ್ಗೆ ಆತಂಕವಿಲ್ಲವೆ?
ಹಿಜಾಬ್ ವಿವಾದದ ಹಿಂದೆ ಅಂತರ್‌ರಾಷ್ಟ್ರೀಯ ಭಯೋತ್ಪಾದಕ ಸಂಸ್ಥೆಗಳ ಕೈವಾಡವಿದೆ -ಎಂ.ಪಿ.ರೇಣುಕಾಚಾರ್ಯ, ಶಾಸಕ
ಸರಿ, ಕೇಸರಿ ಶಾಲಿಗೂ ಅಂತರ್‌ರಾಷ್ಟ್ರೀಯ ಭಯೋತ್ಪಾದಕ ಸಂಸ್ಥೆಗಳಿಗೂ ಇರುವ ನಂಟು ತನಿಖೆಯಾಗಲಿ.
ಗೋಡ್ಸೆಯ ಭಾರತದಲ್ಲಿ ಅಪರಾಧಿಗಳು ಯಾವುದೇ ಭಯವಿಲ್ಲದೆ ಹೊರಗೆ ಓಡಾಡುತ್ತಿದ್ದಾರೆ, ಸತ್ಯ ಹೇಳುವವರು ಜೈಲಿನಲ್ಲಿದ್ದಾರೆ -ಮೆಹಬೂಬ ಮುಫ್ತಿ, ಪಿಡಿಪಿ ಮುಖ್ಯಸ್ಥೆ
ಬಿಜೆಪಿಯ ಜೊತೆಗೆ ಹೊಂದಾಣಿಕೆ ಮಾಡಿಕೊಂಡಾಗ ಗೋಡ್ಸೆ ಯಾಕೆ ನೆನಪಾಗಲಿಲ್ಲ?
ಚುನಾವಣೆಯಲ್ಲಿ ನನ್ನ ಅಪ್ಪ ಜಯ ಸಾಧಿಸುವವರೆಗೂ ನಾನು ವಿವಾಹವಾಗುವುದಿಲ್ಲ -ರಬಿಯಾ ಸಿಧು, ಪಂಜಾಬ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ನವಜೋತ್ ಸಿಂಗ್ ಸಿಧು ಪುತ್ರಿ
ನಿಮ್ಮ ವಿವಾಹ ಈ ಜನ್ಮದಲ್ಲಿ ಕಷ್ಟಕರವಾಗುವ ಸಾಧ್ಯತೆಯಿದೆ.
ಹಿಜಾಬ್ ವಿವಾದದ ಹಿಂದೆ ಅಂತರ್‌ರಾಷ್ಟ್ರೀಯ ಸಂಚಿದೆ. ಈ ಕುರಿತು ಎನ್‌ಐಎ ತನಿಖೆ ನಡೆಸಬೇಕು -ರಘುಪತಿ ಭಟ್, ಶಾಸಕ
ಪದ್ಮಪ್ರಿಯ ಅವರ ಆತ್ಮ ಕಿಸಕಿಸನೆ ನಕ್ಕಿತು.