ಹೈಕೋರ್ಟ್ ಮಧ್ಯಂತರ ಆದೇಶ ಅನುಷ್ಠಾನದಲ್ಲಿನ ಗೊಂದಲ ನಿವಾರಿಸಿ: ಯು.ಟಿ.ಖಾದರ್

Update: 2022-02-15 12:42 GMT

ಬೆಂಗಳೂರು, ಫೆ. 15: ಕಾಲೇಜು ವಿದ್ಯಾರ್ಥಿಗಳ ಸಮವಸ್ತ್ರ ಹಾಗೂ ಹಿಜಾಬ್(ಸ್ಕಾರ್ಫ್) ವಿವಾದ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಈಗಾಗಲೇ ಮಧ್ಯಂತರ ಆದೇಶ ನೀಡಿದ್ದು, ಅದನ್ನು ಪಾಲಿಸಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಭರವಸೆ ನೀಡಿದ್ದಾರೆ.

ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ವಿಧಾನಸಭೆ ವಿಪಕ್ಷದ ಉಪನಾಯಕ ಯು.ಟಿ.ಖಾದರ್ ವಿಷಯ ಪ್ರಸ್ತಾಪಿಸಿ, ‘ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಈಗಿರುವ ವಾತಾವರಣವನ್ನು ನೋಡಿದರೆ ಬಹಳ ನೋವಾಗುತ್ತದೆ. ಈ ವಿವಾದ ಹೈಕೋರ್ಟ್‍ನಲ್ಲಿರುವುದರಿಂದ ಹೆಚ್ಚಿನ ವಿಶ್ಲೇಷಣೆ ಮಾಡುವುದಿಲ್ಲ. ಕೋರ್ಟ್ ನೀಡಿರುವ ಮಧ್ಯಂತರ ಆದೇಶದ ಅನುಷ್ಠಾನದಲ್ಲಿ ಗೊಂದಲಗಳಿದ್ದು, ಇದನ್ನು ಸರಿಪಡಿಸಬೇಕು' ಎಂದು ಆಗ್ರಹಿಸಿದರು.

‘ಹೈಕೋರ್ಟ್ ಆದೇಶದಂತೆ ಕಾಲೇಜುಗಳ ಆಡಳಿತ ಮಂಡಳಿ ನಿಗದಿ ಮಾಡಿರುವ ‘ಸಮವಸ್ತ್ರ ಸಂಹಿತೆ' ಮಾತ್ರ ಅನ್ವಯಿಸುತ್ತದೆ. ಸಮವಸ್ತ್ರ ಸಂಹಿತೆ ಇಲ್ಲದ ಕಡೆಯೂ ಈ ಆದೇಶವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲೂ ಈ ಆದೇಶ ಅನುಷ್ಠಾನದ ಬಗ್ಗೆ ಗೊಂದಲ ಮೂಡಿಸಿದೆ. ಹಾಗೆಯೇ ಕೋರ್ಟ್ ತನ್ನ ಆದೇಶ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಹೇಳಿದ್ದರೂ ಶಿಕ್ಷಕಿಯರಿಗೂ ಈ ಆದೇಶವನ್ನು ಅನ್ವಯಿಸಲಾಗುತ್ತಿದೆ' ಎಂದು ಹೈಕೋರ್ಟ್ ಆದೇಶವನ್ನು ಪ್ರಸ್ತಾಪಿಸಿದರು.

‘ರಾಜ್ಯ ಸರಕಾರ ಒಂದು ಸ್ಪಷ್ಟ ಉತ್ತರ ನೀಡಬೇಕು. ಹಿಜಾಬ್(ಸ್ಕಾರ್ಫ್) ವಿವಾದದ ಬಗ್ಗೆ ಪರಿಸ್ಥಿತಿ ತಿಳಿಗೊಳಿಸಿ ಶೈಕ್ಷಣಿಕ ಕಲಿಕೆಗೆ ಪೂರಕ ವಾತಾವರಣವನ್ನು ನಿರ್ಮಿಸಬೇಕಿದೆ. ಸಂವಿಧಾನದ ಹಕ್ಕು, ಶಿಸ್ತು ಮತ್ತು ಶಿಕ್ಷಣ ಈ ಮೂರು ಸಮಸ್ಯೆಗಳು ಬಂದಾಗ ಅದನ್ನು ಹೈಕೋರ್ಟ್ ಸರಿಪಡಿಸುತ್ತದೆ. ಆದರೆ, ನ್ಯಾಯಾಲಯದ ಮಧ್ಯಂತರ ಆದೇಶ ಜಾರಿಯಲ್ಲಿ ಆಗುತ್ತಿರುವ ಗೊಂದಲವನ್ನು ಪರಿಹರಿಸಬೇಕು' ಎಂದು ಯು.ಟಿ.ಖಾದರ್ ಮನವಿ ಮಾಡಿದರು.

ಬಳಿಕ ಸರಕಾರದ ಪರವಾಗಿ ಉತ್ತರ ನೀಡಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ‘ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಂದ ಇದಕ್ಕೆ ಉತ್ತರ ಕೊಡಿಸುತ್ತೇವೆ. ಹಿಜಾಬ್(ಸ್ಕಾರ್ಫ್) ವಿಚಾರದ ಬಗ್ಗೆ ಈಗಾಗಲೇ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಪಾಲನೆಗೆ ಸರಕಾರ ಬದ್ಧ' ಎಂದು ಸ್ಪಷ್ಟಪಡಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News