ಹಿಜಾಬ್ ಧಾರಿ ವಿದ್ಯಾರ್ಥಿನಿಯರಿಗೆ ಬೆಂಬಲ; ಪರೀಕ್ಷೆ ಬಹಿಷ್ಕರಿಸಿ ತರಗತಿಯಿಂದ ಹೊರಬಂದ ವಿದ್ಯಾರ್ಥಿಗಳು

Update: 2022-02-18 12:55 IST

ಉಡುಪಿ, ಫೆ.18: ಹಿಜಾಬ್‌ ಧಾರಿ ವಿದ್ಯಾರ್ಥಿನಿಯರಿಗೆ ಬೆಂಬಲ ಸೂಚಿಸಿ ನೂರಾರು ವಿದ್ಯಾರ್ಥಿಗಳು ನಡೆಯುತಿದ್ದ ಪರೀಕ್ಷೆಯನ್ನು ಬಹಿಷ್ಕರಿಸಿ ತರಗತಿಗಳಿಂದ ಹೊರಬಂದ ಘಟನೆ ಇಂದು ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ನಡೆದಿದೆ.

ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂಬುದು ಈ ವಿದ್ಯಾರ್ಥಿಗಳ ಬೇಡಿಕೆಯಾಗಿತ್ತು. ನಾವೆಲ್ಲರೂ ಒಟ್ಟಿಗೆ ಕಲಿಯುತಿದ್ದು, ಈವರೆಗೆ ಇಲ್ಲದ ತಾರತಮ್ಯವನ್ನು ಈಗ ತೋರುವುದು ಸರಿಯಲ್ಲ ಎಂದು ಅವರು ಹೇಳಿದರು.

ಕಳೆದೆರಡು ದಿನಗಳಿಂದ ಹಿಜಾಬ್ ಧರಿಸಿ ಬಂದ ಕಾಲೇಜಿನ ವಿದ್ಯಾರ್ಥಿನಿ ಯರಿಗೆ ರಾಜ್ಯ ಉಚ್ಛ ನ್ಯಾಯಾಲಯ ನೀಡಿದ ಮಧ್ಯಂತರ ಆದೇಶದಂತೆ ಕ್ಲಾಸ್‌ಗಳಿಗೆ ಪ್ರವೇಶ ನೀಡಿರಲಿಲ್ಲ. ರಜೆಯಲ್ಲಿದ್ದ ಪ್ರಾಂಶುಪಾಲರಾದ ಡಾ.ವಿನ್ಸೆಂಟ್ ಆಳ್ವ ಇಂದು ಕಾಲೇಜಿಗೆ ಬಂದಿದ್ದು, ಬೆಳಗ್ಗೆ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿದ್ದರು.

ಸಭೆಯಲ್ಲಿ ಹೈಕೋರ್ಟ್ ನೀಡಿದ ಮದ್ಯಂತರ ಆದೇಶದ ವಿವರಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದ ಅವರು, ವಿದ್ಯಾರ್ಥಿನಿಯರು ಕಾಲೇಜಿನೊಳಗೆ, ಮಹಿಳಾ ರೆಸ್ಟ್ ರೂಮ್‌ನಲ್ಲಿ ಹಿಜಾಬ್ ಧರಿಸಬಹುದಾಗಿದ್ದು, ಕ್ಲಾಸ್‌ಗೆ ಬರುವಾಗ ಮಾತ್ರ ತೆಗೆದಿಟ್ಟು ಬರಬೇಕು ಎಂದು ವಿವರಿಸಿದ್ದರು. ಉಳಿದಂತೆ ಲೈಬ್ರೇರಿಗೆ, ಪ್ರಾದ್ಯಾಪಕರ ಬಳಿ ಚರ್ಚಿಸಲು ಸ್ಟಾಫ್‌ ರೂಮಿಗೆ ಹೋಗುವಾಗಲೂ ಹಿಜಾಬ್ ಧರಿಸಬಹುದು ಎಂದೂ ಹೇಳಿದ್ದರು.

ಡಾ.ಆಳ್ವ ಅವರ ವಿವರಣೆಯಿಂದ ಅತೃಪ್ತರಾದ ವಿದ್ಯಾರ್ಥಿನಿಯರು, ತಾವು ನ್ಯಾಯಾಲಯದ ಆದೇಶ ಬರುವವರೆಗೆ ಕಾಯುತ್ತೇವೆ. ಅಲ್ಲಿಯವರೆಗೆ ಕ್ಲಾಸ್‌ಗಳಿಗೆ ಬರುವುದಿಲ್ಲ ಎಂದು ತಿಳಿಸಿದ್ದರು ಎಂದು ಕಾಲೇಜಿನ ಮೂಲ ವೊಂದು ತಿಳಿಸಿದೆ.

ಅಷ್ಟರಲ್ಲಿ ವಿದ್ಯಾರ್ಥಿಗಳ ಒಂದು ವರ್ಗ ಹಿಜಾಬ್‌ಗೆ ಬೆಂಬಲವಾಗಿ ತಾವು ಸಹ ಪರೀಕ್ಷೆಗೆ ಹಾಜರಾಗುವುದಿಲ್ಲ ಎಂದು ಇಂದು ನಡೆಯುತಿದ್ದ ಕಾಲೇಜಿನ ಆಂತರಿಕ ಪರೀಕ್ಷೆಯನ್ನು ಬಹಿಷ್ಕರಿಸಲು ನಿರ್ಧರಿಸಿತ್ತು. ವಿದ್ಯಾರ್ಥಿನಿ ಯರೇ ಅವರಿಗೆ ಸಮಜಾಯಿಷಿ ನೀಡಿ ಕ್ಲಾಸ್‌ಗೆ ತೆರಳುವಂತೆ ಮನವಿ ಮಾಡಿದ್ದರು ಎಂದು ಮೂಲ ಹೇಳಿವೆ.

ಆದರೂ ನೂರಾರು ಮಂದಿ ತರಗತಿಯಿಂದ ಹೊರ ನಡೆದಿದ್ದರು. ವಿದ್ಯಾರ್ಥಿನಿಯರಿಗೆ ತರಗತಿಗೆ ಪ್ರವೇಶ ನೀಡುತ್ತಿಲ್ಲ. ಹೀಗಾಗಿ ಅವರ ಬೆಂಬಲಕ್ಕೆ ನಾವು ಕೂಡ ತರಗತಿ ಬಹಿಷ್ಕರಿಸಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿದರು. ಈ ವೇಳೆ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಕಾಲೇಜಿನ ಹೊರ ಭಾಗದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನಲ್ಲಿ 24 ಮಂದಿ ಹಾಗೂ ಪದವಿ ಕಾಲೇಜಿನಲ್ಲಿ 35ಕ್ಕೂ ಅಧಿಕ ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಕಲಿಯುತಿದ್ದಾರೆ. ಇವರಲ್ಲಿ ಅಧಿಕ ಮಂದಿ ಈಗ ತರಗತಿಗಳಿಗೆ ಹಾಜರಾಗುತ್ತಿಲ್ಲ.

ಎಂಜಿಎಂನಲ್ಲಿ ಪರೀಕ್ಷೆಗೆ ಅವಕಾಶ: ಉಡುಪಿಯ ಎಂಜಿಎಂ ಕಾಲೇಜಿನಲ್ಲಿ 10 ದಿನಗಳ ನಂತರ ತರಗತಿಗಳು ಪ್ರಾರಂಭವಾಗಿವೆ. ಇಂದು ಪದವಿ ತರಗತಿಗಳಿಗೆ ಆಂತರಿಕ ಪರೀಕ್ಷೆಗಳು ನಡೆದಿದ್ದು, ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಗಳು ನಡೆದವು ಎಂದು ತಿಳಿದುಬಂದಿದೆ.

ಎಂಜಿಎಂ ಕ್ಯಾಂಪಸ್ಸಿಗೆ ಇಂದು ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಉಡುಪಿ ಎಸ್ಪಿ ವಿಷ್ಣುವಧರ್ನ ಅವರು ಹೆಚ್ಚಿನ ಭದ್ರತೆಗಾಗಿ ಕೆಎಸ್ಆರ್‌ಪಿ ತುಕಡಿಯನ್ನು ನಿಯೋಜಿಸಿದ್ದರು.

ಕಾಲೇಜಿನಲ್ಲಿ ಇಂದು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು. ಈ ಸಂಬಂಧ ಕಾಲೇಜು ಆಡಳಿತ ಮಂಡಳಿ ಪ್ರವೇಶ ಗೇಟಿನಲ್ಲಿ ನೋಟೀಸನ್ನು ಹಾಕಿತ್ತು. 

ವಿವಾದ ಪ್ರಾರಂಭಗೊಂಡ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಅಜ್ಜರಕಾಡಿನ ಡಾ.ಜಿ.ಶಂಕರ್ ಮಹಿಳಾ ಪದವಿ ಕಾಲೇಜುಗಳಲ್ಲಿ ಇಂದು ವಿದ್ಯಾರ್ಥಿಗಳು ಎಂದಿನಂತೆ ತರಗತಿಗಳಿಗೆ ಹಾಜರಾದರು. ಹಿಜಾಬ್ ಧರಿಸುವ ಮುಸ್ಲಿಂ ವಿದ್ಯಾರ್ಥಿನಿಯರು ಶಾಲಾ-ಕಾಲೇಜುಗಳಿಂದ ದೂರು ಉಳಿದರು ಎಂದು ತಿಳಿದುಬಂದಿದೆ.

ಉಡುಪಿ ಜಿಲ್ಲೆಯಲ್ಲಿ ಪರಿಸ್ಥಿತಿ ಶಾಂತ: ಇಂದು ಪದವಿ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಪರೀಕ್ಷೆಗಾಗಿ ಕಾಲೇಜು ತೆರೆಯಲಾಗಿದೆ. ಜಿಲ್ಲೆಯಲ್ಲಿ ಪರಿಸ್ಥಿತಿ ಶಾಂತವಾಗಿದೆ. ಎಲ್ಲೂ ಅಹಿತಕರ ಘಟನೆಗಳು ನಡೆದಿಲ್ಲ. ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಿದ್ದೇವೆ ಎಂದು ಎಎಸ್ಪಿ ಟಿ.ಎಸ್ ಸಿದ್ದಲಿಂಗಪ್ಪ, ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News