‘ಮೂವ್ ಟು ಹೆವೆನ್’ ಒಂದು ಸ್ವರ್ಗೀಯ ಅನುಭವ

Update: 2022-02-19 19:30 GMT

‘ಮೂವ್ ಟು ಹೆವೆನ್’ ಕಳೆದ ವರ್ಷ ಬಿಡುಗಡೆಗೊಂಡಿರುವ ಕೊರಿಯನ್ ಸರಣಿ. ನೆಟ್‌ಫ್ಲಿಕ್ಸ್‌ನಲ್ಲಿ ಇದು ಸುದ್ದಿ ಮಾಡುತ್ತಿದೆ. ಹಲವು ಭಾವನೆಗಳ ಸಂಗಮವಿದು. ಮೃತನ ಕೊಠಡಿಗಳನ್ನು ಕ್ಲೀನ್ ಮಾಡಿಕೊಡುವ ಸಂಸ್ಥೆಯ ಹೆಸರು ‘ಮೂವ್ ಟು ಹೆವೆನ್’. ತಂದೆ ಮತ್ತು ವಿಶೇಷ ಚೇತನವುಳ್ಳ ಆತನ ಮಗ ಈ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದಾರೆ. ಕೊಠಡಿಯನ್ನು ಶುಚಿ ಮಾಡಿಕೊಂಡುವುದಷ್ಟೇ ಅವರ ಕೆಲಸವಲ್ಲ. ಇದರ ಜೊತೆಜೊತೆಗೆ ಸಾವು, ಬದುಕು ಮತ್ತು ಸಾವಿನಾಚೆಯ ಮಾತುಗಳನ್ನು ಆಲಿಸಿ ಅದನ್ನು ತಲುಪಿಸಬೇಕಾದವರಿಗೆ ತಲುಪಿಸುವ ಹೊಣೆಗಾರಿಕೆಯನ್ನು ಇವರು ಹೊತ್ತಿದ್ದಾರೆ. ಒಂದು ದಿನ ತಂದೆ ಆಕಸ್ಮಿಕವಾಗಿ ಸಾಯುತ್ತಾರೆ. ಸಾಯುವ ಮೊದಲು ತನ್ನ ಮಗನ ಗಾರ್ಡಿಯನ್ ಆಗಿ, ಈಗಾಗಲೇ ಕೊಲೆಗಾರನ ಆರೋಪದಲ್ಲಿ ಜೈಲು ಕಂಬಿ ಎಣಿಸಿರುವ ತಮ್ಮನನ್ನೇ ನೇಮಿಸಿರುತ್ತಾನೆ. ಆತನ ಪ್ರವೇಶದ ಬಳಿಕ ನಡೆಯುವ ಒಂದೊಂದು ಬೆಳವಣಿಗೆಗಳು ನಿಮ್ಮನ್ನು ಭಾವ ವಿಸ್ಮಯಕ್ಕೆ ತಳ್ಳಿ ಬಿಡುತ್ತವೆ. ತಂದೆ-ಮಗ, ಅಣ್ಣ-ತಮ್ಮ, ಪತಿ-ಪತ್ನಿ, ತಾಯಿ-ಮಗ, ಗೆಳೆಯ-ಗೆಳತಿ ಹೀಗೆ ಹಲವು ಸಂಬಂಧಗಳನ್ನು ಹೃದಯಸ್ಪರ್ಶಿಯಾಗಿ ಈ ಸರಣಿ ಕಟ್ಟಿಕೊಡುತ್ತದೆ. ಇದರ ನಿರೂಪಣೆಯೂ ಅತ್ಯಂತ ಉಲ್ಲಾಸದಾಯಕವಾಗಿದೆ. ಕುತೂಹಲ, ಹಾಸ್ಯ, ವಿಸ್ಮಯ, ವಿಷಾದ ಒಂದಕ್ಕೊಂದು ಬೆಸೆದುಕೊಂಡಿವೆ. ಒಂದು ರೀತಿಯಲ್ಲಿ ಇದು ಪುಟ್ಟ ಪುಟ್ಟ ಕತೆಗಳ ಗೊಂಚಲಂತೆ ಕಾಣುತ್ತದೆ. ಆದರೆ ಒಟ್ಟಾರೆಯಾಗಿ ಇಡೀ ಸಿನೆಮಾವಾಗಿ ಬೆಳೆಯುತ್ತದೆ. ನೀವು ಪತ್ತೇದಾರಿಕೆಯನ್ನು ಇಷ್ಟಪಡುವವರಾದರೆ ಇದೊಂದು ಪತ್ತೇದಾರಿ ಸರಣಿ. ನೀವು ಭಾವನಾತ್ಮಕ ಕತೆಗಳನ್ನು ಇಷ್ಟಪಡುವವರಾದರೆ ಇದೊಂದು ಭಾವನಾತ್ಮಕ ಸರಣಿ. ಥ್ರಿಲ್ಲರ್ ಕತೆಯನ್ನು ಇಷ್ಟ ಪಡುವವರಾದರೆ ಇದೊಂದು ಥ್ರಿಲ್ಲರ್ ಸರಣಿ. ದುರಂತ ಕತೆಗಳನ್ನು ಇಷ್ಟಪಡುವವರಾದರೆ ಮನುಷ್ಯರ ದುರಂತಗಳ ಸಾಲುಸಾಲುಗಳನ್ನು ನೀವಿಲ್ಲಿ ನೋಡಬಹುದು. ಈ ಸರಣಿ ದುಃಖಾಂತವೂ ಹೌದು. ಸುಖಾಂತ್ಯವೂ ಹೌದು. ನಿರೂಪಣಾ ತಂತ್ರವೇ ಸರಣಿಯ ಹೆಗ್ಗಳಿಕೆ.

ಕಿಂ ಸಂಗ್ ಹೋ ಈ ಸರಣಿಯನ್ನು ನಿರ್ದೇಶಿಸಿದ್ದಾರೆ. ಹಿಂದಿಯಲ್ಲೂ ಸರಣಿಯ ಡಬ್ಬಿಂಗ್ ಇದೆ. ನಿಮಗೊಂದು ಸ್ವರ್ಗೀಯ ಅನುಭವವನ್ನು ತಂದುಕೊಡುವ ಈ ಸರಣಿಯನ್ನು ಅವಶ್ಯ ನೋಡಬಹುದು.

Writer - ಮುಸಾಫಿರ್

contributor

Editor - ಮುಸಾಫಿರ್

contributor

Similar News