ಓ ಮೆಣಸೇ...

Update: 2022-02-27 18:37 GMT

ವಿಶ್ವ ಪ್ರಕ್ಷುಬ್ಧ ಸ್ಥಿತಿಯಲ್ಲಿದ್ದು ಈ ಸಂದರ್ಭದಲ್ಲಿ ಭಾರತಕ್ಕೆ ಕಠಿಣ ನಾಯಕನ ಅಗತ್ಯವಿದೆ

-ನರೇಂದ್ರ ಮೋದಿ, ಪ್ರಧಾನಿ

ಹೌದು. ದಯವಿಟ್ಟು ರಾಜೀನಾಮೆ ಕೊಟ್ಟು ಸಮರ್ಥನಾಯಕನಿಗೆ ಅವಕಾಶ ಮಾಡಿಕೊಡಿ.

ಕುಂಕುಮ,ಬಳೆ ,ವಿಭೂತಿ ವೈಜ್ಞಾನಿಕವಾಗಿದೆ.ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ

-ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆ ಅಧ್ಯಕ್ಷ

ವಿಧವೆಯರು ಕುಂಕುಮ ಅಳಿಸುವುದು, ಬಳೆ ಒಡೆಯುವುದು ಎಲ್ಲವೂ ವಿಜ್ಞಾನದ ಭಾಗವೇ ಆಗಿರಬೇಕು ಹಾಗಾದರೆ.

ರಾಜ್ಯ ಸರಕಾರಕ್ಕೆ (ಕೇರಳ)ರಾಜಭವನವನ್ನು ನಿಯಂತ್ರಿಸುವ ಹಕ್ಕಿಲ್ಲ

-ಆರಿಫ್ ಮುಹಮ್ಮದ್ ಖಾನ್, ಕೇರಳ ರಾಜ್ಯಪಾಲ

ನಿಮ್ಮನ್ನು ನಿಯಂತ್ರಿಸುವ ಹಕ್ಕೇನಿದ್ದರೂ ಇರುವುದು ಕೇಂದ್ರದವರಿಗೆ ಎನ್ನುವುದು ನಿಮ್ಮ ಮಾತಿನಲ್ಲೇ ಗೊತ್ತಾಗಿ ಬಿಡುತ್ತದೆ.

ಬಾಯಿ, ನಾಲಗೆ ಇದೆ ಎಂದು ಯುವಕರಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನು ಯಾರೂ ಮಾಡಬಾರದು

-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ

ಬಾಯಿ, ನಾಲಗೆ ಇರುವ ಜಾತ್ಯತೀತರು ಮಾತನಾಡದಿರುವುದೇ ಎಲ್ಲದಕ್ಕೂ ಕಾರಣ.

ಹನುಮನ ಜನ್ಮ ಸ್ಥಳ ಕುರಿತು ವಿವಾದ ಏನೇ ಇರಲಿ,ಅದರಲ್ಲಿ ಕೇಂದ್ರ ಸರಕಾರ ಮಧ್ಯೆ ಪ್ರವೇಶಿಸುವುದಿಲ್ಲ

-ಕಿಶನ್ ರೆಡ್ಡಿ, ಕೇಂದ್ರ ಸಚಿವ

ಯಾಕೆಂದರೆ ವಿವಾದಗಳು ಸದಾ ಜೀವಂತ ಇದ್ದರೆ ಮಾತ್ರ ಕೇಂದ್ರ ಸರಕಾರಕ್ಕೆ ನೆಮ್ಮದಿ.

ಆರೆಸ್ಸೆಸ್‌ನಲ್ಲಿ ದೇಶ ಭಕ್ತರಿದ್ದಾರೆ

-ಗೋವಿಂದ ಕಾರಜೋಳ, ಸಚಿವ

ಅವರು ದ್ವೇಷವನ್ನು ದೇಶವೆಂದು ಭಾವಿಸಿದವರು.

ಈ ದೇಶದ ಅನ್ನ ನೀರು ಕುಡಿಯುವವರಿಗೆ ಧರ್ಮಕ್ಕಿಂತ ದೇಶವೇ ದೊಡ್ಡದು

-ಆರ್.ಅಶೋಕ್, ಸಚಿವ

ನೀವು ದೇಶದ ಅನ್ನ, ನೀರು ಕುಡಿಯುತ್ತಿಲ್ಲವೇ?

ಕೊರೋನ ಬಳಿಕ ಇಡೀ ವಿಶ್ವವೇ ಸದ್ಯ ಯುದ್ಧದ ಕಾರ್ಮೊಡದಿಂದ ಆವೃತವಾಗಿದೆ

-ಬೋರಿಸ್ ಜಾನ್ಸನ್, ಬ್ರಿಟನ್ ಪ್ರಧಾನಿ

ಯುದ್ಧ ದಾಹ ಕೊರೋನ ವೈರಸನ್ನೇ ಜಗತ್ತಿನಿಂದ ಓಡಿಸಿದೆ.

ನಮಗೆ ಛತ್ರಪತಿ ಶಿವಾಜಿ ಮತ್ತು ಬಾಳಾ ಸಾಹೇಬ್ ಠಾಕ್ರೆ ಅವರ ದಿಟ್ಟ ತನವೇ ಆದರ್ಶ

 -ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಸಿಎಂ

ಶಿವಾಜಿ ಅಂಗರಕ್ಷಕ ಮತ್ತು ಠಾಕ್ರೆಯವರ ಕಾರಿನ ಚಾಲಕ ಮುಸ್ಲಿಮ್ ಸಮುದಾಯಕ್ಕೆ ಸೇರಿದವರೆನ್ನುವ ಸತ್ಯ ಮರೆಯದಿರಿ.

ಚುನಾವಣೆಗಳೆಂದರೆ ಬಿಜೆಪಿಗೆ ಜನರ ಸಾಮಾಜಿಕ -ಆರ್ಥಿಕ ನಿರೀಕ್ಷೆಗಳನ್ನು ಈಡೇರಿಸಲು ಸಿಗುವ ಅವಕಾಶ

-ಅಮಿತ್ ಶಾ, ಕೆಂದ್ರ ಸಚಿವ

 ಚುನಾವಣೆ ನಡೆದ ಬಳಿಕ ಈಡೇರಿಸಬೇಕಾಗಿಲ್ಲ ಎಂದು ಅರ್ಥವೇ?

ನಮ್ಮ ಸರಕಾರ ಬಂದ ಮೇಲೂ ಹಿಂದೂ ಕಾರ್ಯಕರ್ತನ ಕೊಲೆ ಆಗಿರುವುದು ನಾಚಿಕೆ ಗೇಡು

-ಪ್ರತಾಪಸಿಂಹ, ಸಂಸದ

 ಮತ್ತೇಕೆ ನಿಮಗೆ ನಾಚಿಕೆಯಾಗುತ್ತಿಲ್ಲ?

ಮಾಜಿ ಸಿಎಂ ಸಿದ್ದರಾಮಯ್ಯರಲ್ಲಿದ್ದ ಸಮಾಜವಾದಿ ಚಿಂತನೆಗಳು ಹೊರಹೋಗಿ, ಅಧಿಕಾರವಾದಿ ಚಿಂತನೆಗಳು ಒಳಗೆ ಬಂದಿದೆ

-ನಳೀನ್ ಕುಮಾರ್ ಕಟೀಲು, ಸಂಸದ

ನೀವು ಸಮಾಜವಾದಿಯಾಗಿದ್ದು ಯಾವಾಗ?

ಶೈಕ್ಷಣಿಕ ವ್ಯವಸ್ಥೆ ಸುಧಾರಿಸಬೇಕು ಎಂಬುದು ನಮ್ಮ ಕನಸು

-ಬಿ.ಸಿ.ನಾಗೇಶ್, ಸಚಿವ ಶಾಲೆ

ಕಲಿಯಲು ಬಂದ ಹೆಣ್ಣು ಮಕ್ಕಳನ್ನು ಧಿರಿಸಿನ ಹೆಸರಿನಲ್ಲಿ ಹೊರ ಹಾಕುವುದು ಸುಧಾರಣೆಯ ಭಾಗವೇ?

ವಿಭಜನ ಮನಸ್ಥಿತಿಯೇ ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನದ ಹುಟ್ಟಿಗೆ ಕಾರಣ

-ಸಿ.ಟಿ ರವಿ,ಶಾಸಕ

ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೂ ಅದೇ ಅಲ್ಲವೆ ಕಾರಣ.

ಹೇಡಿಗಳಿಗೆ ಹೋರಾಟಗಾರನ ಹೋರಾಟ ಅರ್ಥವಾಗುವುದಿಲ್ಲ

-ಲಾಲುಪ್ರಸಾದ್ ಯಾದವ್, ಆರ್ ಜೆಡಿ ಅಧ್ಯಕ್ಷ

ಸದ್ಯಕ್ಕೆ ಜೈಲಿನಿಂದ ಬಿಡುಗಡೆಯಾಗಲು ನೀವು ನಡೆಸುತ್ತಿರುವ ಹೋರಾಟ ಅರ್ಥವಾಗುತ್ತಿದೆ.

ವಯಸ್ಸಾದ ನಮ್ಮ ತಾಯಿಯನ್ನು ಸಾಕುವಂತೆ ಗೋವುಗಳನ್ನು ಪ್ರೀತಿಯಿಂದ ಸಾಕಬೇಕು

-ಈಶ್ವರಪ್ಪ, ಸಚಿವ

ಅಂದರೆ ಪರೋಕ್ಷವಾಗಿ ತಾಯಿಯಂದಿರನ್ನು ಗೋಶಾಲೆಗಳಿಗೆ ರವಾನಿಸುವ ಸಂದೇಶ ನೀಡುತ್ತಿದ್ದೀರಿ.

ರಶ್ಯ -ಉಕ್ರೇನ್ ಬಿಕ್ಕಟ್ಟನ್ನು ಮಾತುಕತೆಯ ಮೂಲಕ ಬಗೆಹರಿಸಬೇಕು

-ರಾಜನಾಥ್ ಸಿಂಗ್, ಕೇಂದ್ರ ಸಚಿವ

ಚೀನಾ-ಭಾರತ ಬಿಕ್ಕಟ್ಟಿನ ಕತೆ ಏನಾಯಿತು, ಅದನ್ನು ಸ್ವಲ್ಪ ವಿವರಿಸಿ.

ಸಮಾಜದಲ್ಲಿ ಆತಂಕ ಸೃಷ್ಟಿಸಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಸಮಾಜ ಘಾತುಕ ಶಕ್ತಿಗಳನ್ನು ಎನ್‌ಕೌಂಟರ್ ಮಾಡಬೇಕು-ಎಂ.ಪಿ.ರೇಣುಕಾಚಾರ್ಯ,ಶಾಸಕ

ಹಾಗಾದರೆ ಬಹುತೇಕ ರಾಜಕಾರಣಿಗಳು ಎನ್‌ಕೌಂಟರ್‌ಗಳಿಗೆ ಬಲಿಯಾಗಬೇಕಾಗುತ್ತದೆ.

ಸಚಿವ ಈಶ್ವರಪ್ಪರ ಬೇಜವಾಬ್ದಾರಿ ಹೇಳಿಕೆಯನ್ನು ಬಿಜೆಪಿ ಸಹಿಸುವುದಿಲ್ಲ

-ಜೆ.ಪಿ.ನಡ್ಡಾ,ಬಿಜೆಪಿ ಅಧ್ಯಕ್ಷ

ಸದ್ಯಕ್ಕೆ ಅವರ ಬೇಜವಾಬ್ದಾರಿ ಹೇಳಿಕೆಯೇ ರಾಜ್ಯ ಬಿಜೆಪಿಯ ಬಂಡವಾಳವಂತೆ.

ಯಾವ ಸರಕಾರದಿಂದಲೂ ದಿನದ 2ಗಂಟೆ ಸಮಾಜದ ಕಾವಲು ಕಾಯಲು ಸಾಧ್ಯವಿಲ್ಲ

-ಆರಗ ಜ್ಞಾನೇಂದ್ರ,ಸಚಿವ

ಸದ್ಯಕ್ಕೆ ರಾಜಕಾರಣಿಗಳಿಂದ ಅಪಾಯವಾಗದ ಹಾಗೆ ಸಮಾಜಕ್ಕೆ ಕಾವಲು ಸಿಕ್ಕಿದರೆ ಸಾಕು.

ಭಿನ್ನಾಭಿಪ್ರಾಯ ಇಲ್ಲ ಅಂದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿರುವುದಿಲ್ಲ

-ಸಿದ್ದರಾಮಯ್ಯ, ಮಾಜಿ ಸಿಎಂ

  ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವುದಕ್ಕಾಗಿ ಕಾಂಗ್ರೆಸ್‌ನೊಳಗೆ ಭಿನ್ನಾಭಿಪ್ರಾಯಗಳನ್ನು ಜೀವಂತ ಇಡಲಾಗಿದೆಯೇ?

ಅಧಿಕಾರ,ಸ್ಥಾನಮಾನ ನೀಡಿದ ಬಿಜೆಪಿಯನ್ನು ತೊರೆಯುವ ಪ್ರಶ್ನೆಯೇ ಇಲ್ಲ

-ಕೆ.ಗೋಪಾಲಯ್ಯ, ಸಚಿವ

ಅಧಿಕಾರ ಸ್ಥಾನಮಾನ ಕೊಟ್ಟಿರುವುದು ಬಿಜೆಪಿಯಲ್ಲ, ಮತ ಹಾಕಿದ ಜನರು.

ರಾಷ್ಟ್ರ ಧ್ವಜ ತೆಗೆದು ಕೇಸರಿ ಧ್ವಜ ಹಾರಿಸುವುದಾಗಿ ಕೆ.ಎಸ್.ಈಶ್ವರಪ್ಪ ಹೇಳಿಯೇ ಇಲ್ಲ

-ಎಚ್.ವಿಶ್ವನಾಥ್,ವಿ.ಪ.ಸದಸ್ಯ

   ಇಲ್ಲ ನಾನು ಹಾಗೆಯೇ ಹೇಳಿದ್ದು ಎಂದು ಈಶ್ವರಪ್ಪ ಅವರು ಆರೆಸ್ಸೆಸ್ ಮುಖಂಡರ ಮುಂದೆ ಆಣೆ ಮಾಡುತ್ತಿದ್ದಾರಂತೆ.

ವಕ್ಫ್ ಆಸ್ತಿಗಳನ್ನು ಒತ್ತುವರಿ ಮಾಡಿಕೊಂಡಿರುವವರ ಹಿನ್ನೆಲೆಯನ್ನು ಲೆಕ್ಕಿಸದೆ ಕಾನೂನು ಕ್ರಮ ಕೈಗೊಳ್ಳಲಾಗುವುದು

-ಮುಹಮ್ಮದ್ ಶಾಫಿ ಸಅದಿ, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ

ಬಿಜೆಪಿ ನಿಮ್ಮನ್ನು ಒತ್ತುವರಿ ಮಾಡದಂತೆ ಜಾಗರೂಕರಾಗಿರಿ.

ರಾಜ್ಯದಲ್ಲಿ ಶಾಂತಿ,ಭದ್ರತೆಗೆ ದೊಡ್ಡ ಅಪಾಯ ಎದುರಾಗಿದ್ದು ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

 ನಿಮ್ಮ ಕುಟುಂಬದ ಶಾಂತಿ ಮತ್ತು ಭದ್ರತೆಗೆ ಧಕ್ಕೆಯಾಗಿರಬೇಕು.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!