ನೀಟ್ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ
ಬೆಂಗಳೂರು, ಮಾ.: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶಾವಕಾಶ ಕಲ್ಪಿಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್) ವಿರುದ್ಧ ತಮಿಳುನಾಡು ಸರಕಾರ ಈಗಾಗಲೇ ಧ್ವನಿ ಎತ್ತಿದ್ದು, ಉಕ್ರೇನ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿ ನವೀನ್ ಬಲಿಯಾದ ನಂತರ ರಾಜ್ಯದಲ್ಲಿಯೂ ನೀಟ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ವೈದ್ಯಕೀಯ ಶಿಕ್ಷಣವನ್ನು ಅತ್ಯಂತ ದುಬಾರಿಗೊಳಿಸಿರುವುದರಿಂದ ಗ್ರಾಮೀಣ ಭಾಗದ, ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಅವಕಾಶದಿಂದ ವಂಚಿತರಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅತ್ಯಂತ ಕಠಿಣವಾಗಿರುವ ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮೆರಿಟ್ ಆಧಾರದಲ್ಲಿ ಸರಕಾರಿ ಕಾಲೇಜುಗಳಲ್ಲಿ ಸಿಗುವ ಸೀಟುಗಳ ಸಂಖ್ಯೆಯೂ ಸೀಮಿತವಾಗಿರುವುದರಿಂದ ಖಾಸಗಿ ಕಾಲೇಜುಗಳಲ್ಲಿ 25 ಲಕ್ಷ ರೂ.ಯಿಂದ 1 ಕೋಟಿ ರೂ.ವರೆಗೆಡೊನೇಷನ್ ನೀಡಿ ಮ್ಯಾನೇಜ್‌ಮೆಂಟ್ ಕೋಟಾದಡಿಯಲ್ಲಿ ಸೀಟುಗಳನ್ನು ಪಡೆಯುವಂತಾಗಿದೆ.
ವೈದ್ಯಕೀಯ ಶಿಕ್ಷಣ ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತ ಎಂಬ ಪರಿಸ್ಥಿತಿ ಭಾರತದಲ್ಲಿ ನಿರ್ಮಾಣ ವಾಗಿದೆ. ಸರಕಾರಿ ಕಾಲೇಜುಗಳಲ್ಲಿ ಎಂಬಿಬಿಎಸ್ ಅಧ್ಯಯನ ಮಾಡುವ ವಿದ್ಯಾರ್ಥಿಯೂ ವಾರ್ಷಿಕವಾಗಿ ಕನಿಷ್ಠ 3-4 ಲಕ್ಷ ರೂ. ತನ್ನ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡಬೇಕಾಗುತ್ತದೆ. ಅದೇ ಖಾಸಗಿ ಕಾಲೇಜುಗಳಲ್ಲಿ ಈ ವೆಚ್ಚದ ಪ್ರಮಾಣವು 10 ಪಟ್ಟು ಹೆಚ್ಚಾಗುತ್ತದೆ. ಮ್ಯಾನೇಜ್‌ಮೆಂಟ್ ಕೋಟಾದಲ್ಲಿ ವೈದ್ಯಕೀಯ ಸೀಟುಗಳು 40-80 ಲಕ್ಷ ರೂ., ಅನಿವಾಸಿ ಭಾರತೀಯರಿಗೆ ಮೀಸಲಾದ ಸೀಟುಗಳು 90 ಲಕ್ಷ ರೂ.ಯಿಂದ 1.50 ಕೋಟಿ ರೂ.ಗೆ ಲಭ್ಯವಾಗುತ್ತವೆ ಎಂಬ ಮಾಹಿತಿ ಇದೆ.
ದೇಶದಾದ್ಯಂತ 2021-22ನೇ ಸಾಲಿನಲ್ಲಿ ನೀಟ್ ಪರೀಕ್ಷೆಗೆ ಸುಮಾರು 16.14 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 15.44 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕರ್ನಾಟಕದಲ್ಲಿ ನೀಟ್ ಪರೀಕ್ಷೆಗೆ 1.19 ಲಕ್ಷ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದು, ಸುಮಾರು 89 ಸಾವಿರ ಮಂದಿ ಪರೀಕ್ಷೆ ಬರೆದಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಗರಿಷ್ಠ ಸಂಭಾವ್ಯ ಅಂಕಗಳು 720. ಈ ವರ್ಷಕ್ಕೆ 138 ಅಂಕಕ್ಕಿಂತ ಹೆಚ್ಚು ಅಂಕ ಪಡೆದವರನ್ನು ವೈದ್ಯಕೀಯ ಶಿಕ್ಷಣ ಪಡೆಯಲು ಅರ್ಹರು ಎಂದು ಪ್ರಕಟಿಸಲಾಗಿತ್ತು. ರಾಜ್ಯದಲ್ಲಿ 138ಕ್ಕಿಂತ ಹೆಚ್ಚು ಅಂಕ ಗಳಿಸಿದವರು ಸುಮಾರು 55 ಸಾವಿರ ಮಂದಿ. ಆದರೆ, ರಾಜ್ಯದಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆ ಇರುವುದು 9,345. ಅಂತಿಮವಾಗಿ ರಾಜ್ಯದೊಳಗೆ ಮೆರಿಟ್ ಸೀಟುಗಳು ಲಭ್ಯವಾಗುವುದು 4,172 ಮಾತ್ರ.
ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು 2 ಲಕ್ಷ ರೂ. ಠೇವಣಿ: ಬಡ ಹಾಗೂ ಮಧ್ಯಮ ವರ್ಗದವರನ್ನು ವೈದ್ಯಕೀಯ ಶಿಕ್ಷಣದಿಂದ ದೂರ ಇರಿಸಲು ವ್ಯವಸ್ಥಿತವಾಗಿ ಪ್ರಯತ್ನಗಳು ನಡೆಯುತ್ತಿವೆ ಎಂಬ ಆಪಾದನೆಗೆ ಪುಷ್ಟಿ ನೀಡುವಂತೆ ಕೇಂದ್ರ ಸರಕಾರದ ಎಂಸಿಸಿ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಎರಡು ಲಕ್ಷ ರೂ. ಠೇವಣಿ ಇರಿಸಬೇಕೆಂಬ ಷರತ್ತು ವಿಧಿಸಿರುವುದೇ ಸಾಕ್ಷಿಯಾಗಿದೆ. ಆ ಮೂಲಕ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ಆರಂಭದಲ್ಲೆ ವೈದ್ಯಕೀಯ ಶಿಕ್ಷಣದಿಂದ ವಂಚಿತರನ್ನಾಗಿಸಿ, ಉಳ್ಳವರ ಪಾಲಿಗೆ ವೈದ್ಯಕೀಯ ಶಿಕ್ಷಣ ಸೀಮಿತಗೊಳಿಸಲಾಗುತ್ತಿದೆಯೇ? ಎಂಬ ಅನುಮಾನ ಮೂಡುತ್ತದೆ. ಸರಕಾರಿ ಮೆರಿಟ್ ಸೀಟುಗಳ ಸಂಖ್ಯೆ ಹೆಚ್ಚಾದಲ್ಲಿ ಮಾತ್ರ ಇದಕ್ಕೆ ಕಡಿವಾಣ ಹಾಕಲು ಸಾಧ್ಯ ಎಂಬ ಕೂಗು ವಿದ್ಯಾರ್ಥಿ ಸಮೂಹದಲ್ಲಿದೆ.
ಉಕ್ರೇನ್ ಆಯ್ಕೆಗೆ ಕಾರಣ?:
ದೇಶದಿಂದ ಸುಮಾರು 25 ಸಾವಿರ ವಿದ್ಯಾರ್ಥಿಗಳು ಪ್ರತಿ ವರ್ಷ ವೈದ್ಯಕೀಯ ಶಿಕ್ಷಣ ಪಡೆಯಲು ವಿದೇಶಗಳಿಗೆ ತೆರಳುತ್ತಾರೆ. ಉಕ್ರೇನ್, ರಶ್ಯ, ಚೀನಾ ಸೇರಿದಂತೆ ಇನ್ನಿತರ ದೇಶಗಳಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ದೊಡ್ಡ ಪ್ರಮಾಣದ ಸಹಾಯಧನ ಒದಗಿಸಲಾಗುತ್ತದೆ. ಆದುದರಿಂದ ಭಾರತ, ಬ್ರಿಟನ್, ಅಮೆರಿಕ ಸೇರಿದಂತೆ ಇನ್ನಿತರ ದೇಶಗಳಿಗೆ ಹೋಲಿಸಿದರೆ ಇಲ್ಲಿ ಶಿಕ್ಷಣ ವೆಚ್ಚ ತುಂಬಾ ಕಡಿಮೆಯಿದೆ.
‘ಎಲಿಮಿನೇಟ್’ ಆಟ: ನೀಟ್ ಪರೀಕ್ಷೆ ಬರೆಯಬೇಕಿದ್ದರೆ, ಖಾಸಗಿ ಕೋಚಿಂಗ್ ಸೆಂಟರ್ ಲಾಬಿಗೆ ಕಾಸು ಚೆಲ್ಲಬೇಕು. ನೀಟ್ ಎಂಬುದು ವಿದ್ಯಾರ್ಥಿ ವೈದ್ಯಕೀಯ ಶಿಕ್ಷಣಕ್ಕೆ ಅರ್ಹನೋ ಎಂಬ ಪರೀಕ್ಷೆ ಅಲ್ಲ, ಬದಲಾಗಿ ಸಾಧ್ಯವಾದಷ್ಟು ಮಂದಿ ಮಧ್ಯಮ ವರ್ಗದವರನ್ನು ವೈದ್ಯಕೀಯ ಶಿಕ್ಷಣದಿಂದ ‘ಎಲಿಮಿನೇಟ್’ ಮಾಡುವ ಆಟ. ಮೇಲ್ತುದಿಯ ಪ್ರತಿಭಾವಂತರು, ಕೆಳತುದಿಯ ಕಾಸಿದ್ದವರು ಹೇಗೋ ನೀಟ್ ಏಣಿಯೇರಿ ಮೆಡಿಕಲ್ ಸ್ಕೂಲ್ ತಲುಪುತ್ತಿದ್ದಾರೆ. ಆದರೆ ನಡುವಿನ ವಿಶಾಲವಾದ ಮಧ್ಯಮವರ್ಗದವರು ತಮ್ಮ ಪ್ರತಿಭೆ, ಮೀಸಲಾತಿಗಳ ಹೊರತಾಗಿಯೂ ವೈದ್ಯಕೀಯ ಶಿಕ್ಷಣ ಪಡೆಯಲು ಏದುಸಿರು ಬಿಡಬೇಕಾಗಿದೆ. ಇದು ದೇಶಕ್ಕೆ ನೀಟ್ ಕೊಟ್ಟ ಕೊಡುಗೆ ಎಂದು ಹಿರಿಯ ಪತ್ರಕರ್ತ ರಾಜಾರಾಮ್ ತಲ್ಲೂರು ದೂರಿದ್ದಾರೆ.
ಈ ಎಲ್ಲ ಕಾರಣಗಳಿಗಾಗಿ ನೀಟ್ ಪರೀಕ್ಷೆ ರದ್ದಾಗಬೇಕು. ಅರ್ಹತೆ, ಆಸಕ್ತಿಗಳನ್ನು ಗುರುತಿಸಿ, ಅರ್ಹರನ್ನು ವೈದ್ಯಕೀಯ ಶಿಕ್ಷಣ ಕೇಂದ್ರಗಳಿಗೆ ತಲುಪಿಸಲು ಹೊಸ ಮಾದರಿಯೊಂದು ರೂಪುಗೊಳ್ಳಬೇಕು. ಕರ್ನಾಟಕದಲ್ಲಿರುವ ಮೆಡಿಕಲ್ ಕಾಲೇಜುಗಳ ಸಂಖ್ಯೆ 69. ಉತ್ತರ ಪ್ರದೇಶದಲ್ಲಿರುವ ಮೆಡಿಕಲ್ ಕಾಲೇಜುಗಳ ಸಂಖ್ಯೆ 60. ಕರ್ನಾಟಕದ ಜನಸಂಖ್ಯೆ 6.4 ಕೋಟಿಯಾದರೆ, ಉತ್ತರಪ್ರದೇಶದ ಜನಸಂಖ್ಯೆ 20.4 ಕೋಟಿ. ಕರ್ನಾಟಕದ ಮೂರು ಪಟ್ಟು ಜನಸಂಖ್ಯೆಗೂ ಹೆಚ್ಚು. ಕರ್ನಾಟಕದಲ್ಲಿರುವ ಮೆಡಿಕಲ್ ಕಾಲೇಜುಗಳು ಕನ್ನಡಿಗರಿಗೆ ಸಾಕಾಗುತ್ತಿದ್ದವು. ನೀಟ್ ಬಂದ ಮೇಲೆ ಸೀಟುಗಳು ಹಿಂದಿ ರಾಜ್ಯಗಳ ಪಾಲಾಗುತ್ತಿವೆ. 75 ವರ್ಷಗಳ ಕಾಲ ನಾವು ಕಷ್ಟಪಟ್ಟು ಕಟ್ಟಿಕೊಂಡ ಸೌಕರ್ಯಗಳನ್ನು ನೀಟ್‌ನಿಂದಾಗಿ ಬೇರೆಯವರಿಗೆ ಬಿಟ್ಟುಕೊಡುವಂತಾಯಿತು. ಕನ್ನಡಿಗರ ಜಾಗ, ಕನ್ನಡಿಗರ ದುಡ್ಡು, ಕರ್ನಾಟಕದ ಮೂಲಭೂತ ಸೌಕರ್ಯಗಳು, ಫಲಾನುಭವಿಗಳು ಮಾತ್ರ ಕನ್ನಡಿಗರಲ್ಲ. ಇದೆಂಥ ನ್ಯಾಯ? ಎಂದು ಅವರು ಪ್ರಶ್ನಿಸಿದ್ದಾರೆ.
ನವೀನ್ ಪ್ರತಿಭಾವಂತ ವಿದ್ಯಾರ್ಥಿ. ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.97ರಷ್ಟು ಅಂಕಗಳನ್ನು ಗಳಿಸಿದ್ದನು. ಆದರೂ, ಆತನಿಗೆ ನಮ್ಮ ರಾಜ್ಯದ ಸರಕಾರಿ ಕಾಲೇಜಿನಲ್ಲಿ ಸೀಟು ಸಿಕ್ಕಿಲ್ಲ. ಖಾಸಗಿ ಕಾಲೇಜಿನಲ್ಲಿ 25 ಲಕ್ಷ ರೂ.ಯಿಂದ 1 ಕೋಟಿ ರೂ.ವರೆಗೂ ಡೊನೇಷನ್ ಕೊಡಬೇಕು. ನನ್ನ ಮಗನಿಗಿಂತ ಕಡಿಮೆ ಅಂಕ ಪಡೆದವರು ಎಷ್ಟೋ ವಿದ್ಯಾರ್ಥಿಗಳು ಆರ್ಥಿಕ ಶಕ್ತಿಯಿಂದ ಇಲ್ಲೇ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ, ಪ್ರತಿಭಾವಂತನಾಗಿದ್ದರೂ ನನ್ನ ಮಗನಿಗೆ ಇಲ್ಲಿ ಸೀಟು ಸಿಕ್ಕಿಲ್ಲ.
ಶೇಖರಪ್ಪ ಗ್ಯಾನಗೌಡರ್, ಮೃತ ನವೀನ್ ತಂದೆ
ಪ್ರತಿಭಾವಂತ ವಿದ್ಯಾರ್ಥಿ ನವೀನ್ ಎಂಬ ಯುವಕ ಉಕ್ರೇನ್‌ನಲ್ಲಿ ಸಾವನ್ನಪ್ಪಿದ್ದಕ್ಕೆ ಕಾರಣ ಕೇಂದ್ರ ಸರಕಾರದ ದೂರದೃಷ್ಟಿ ಇಲ್ಲದ ವಿದೇಶಾಂಗ ಇಲಾಖೆಯ ವೈಫಲ್ಯ ಮತ್ತು ಇಲ್ಲಿನ ಅವ್ಯವಸ್ಥಿತ ನೀಟ್ ಪರೀಕ್ಷಾ ಕ್ರಮವೇ ಹೊರತು ಮೀಸಲಾತಿ ವ್ಯವಸ್ಥೆ ಅಲ್ಲ.
ಡಾ.ಎಚ್.ಸಿ. ಮಹದೇವಪ್ಪ, ಮಾಜಿ ಸಚಿವ
ನೀಟ್ ಎಂದರೆ ಮತ್ತೇನೂ ಅಲ್ಲ, ಸ್ಪಷ್ಟವಾಗಿ ಕನ್ನಡದ ಮಕ್ಕಳಿಗೆ ಸೀಟ್ ಸಿಗದಂತೆ ನೋಡಿಕೊಳ್ಳುವ ದುರುದ್ದೇಶದವ್ಯವಸ್ಥೆ.
- ಡಾ.ಸಿ.ಎಸ್.ದ್ವಾರಕಾನಾಥ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು
ದೇಶದಲ್ಲಿ ಒಟ್ಟು 558 ವೈದ್ಯಕೀಯ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ 289 ಸರಕಾರಿ ವೈದ್ಯಕೀಯ ಕಾಲೇಜುಗಳು ಹಾಗೂ 269 ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ಒಟ್ಟಾರೆ ಈ ಕಾಲೇಜುಗಳಿಂದ 83,275 ಎಂಬಿಬಿಎಸ್ ಸೀಟುಗಳು ಹಾಗೂ 42,702 ಸ್ನಾತಕೋತ್ತರ ಸೀಟುಗಳು ಲಭ್ಯವಿವೆ. ನೀಟ್ ವ್ಯವಸ್ಥೆಯಿಂದ ಬಡ ಮತ್ತು ಮಧ್ಯಮ ವರ್ಗದ, ಗ್ರಾಮೀಣ ವಿದ್ಯಾರ್ಥಿಗಳ ವೈದ್ಯಶಿಕ್ಷಣದ ಕನಸು ನುಚ್ಚುನೂರು ಆಗುತ್ತಿದೆ. ನೀಟ್ ಬಂದ ಮೇಲೆ ಟ್ಯೂಷನ್ ದಂಧೆ ಮೇರೆ ಮೀರಿದ್ದು, ಅದಕ್ಕೆ ಕೇಂದ್ರ ಸರಕಾರವೇ ಪ್ರೋತ್ಸಾಹ ನೀಡುತ್ತಿರುವಂತಿದೆ. ನೀಟ್ ವಿದ್ಯಾರ್ಥಿಗಳು ಮತ್ತು ಪೋಷಕರ ಪಾಲಿಗೆ ಮರಣಶಾಸನವಾಗಿದೆ. 2023ರಲ್ಲಿ ಜೆಡಿಎಸ್ ಸರಕಾರ ಬಂದರೆ ನೀಟ್ ವಿರುದ್ಧ ಅಸೆಂಬ್ಲಿಯಲ್ಲಿ ನಿರ್ಣಯ ಕೈಗೊಳ್ಳುತ್ತೇವೆ. ನಾವು ನೀಟ್ ವಿರೋಧಿಸುತ್ತೇವೆ. ಮಕ್ಕಳ ಜೀವಕ್ಕೆ ಕುಣಿಕೆ ಬಿಗಿದು ಕಂಡವರ ಜೇಬು ಭರ್ತಿ ಮಾಡುವ ಈ ದಂಧೆ ಬೇಕಿಲ್ಲ. ಅದಕ್ಕೆ ಚರಮಗೀತೆ ಹಾಡುತ್ತೇವೆ.
ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಮಾನ್ಯ ನ್ಯಾಯಾಧೀಶರಾದ ಎ.ಕೆ.ರಾಜನ್ ಅವರು ನೀಡಿರುವ ವರದಿಯಲ್ಲಿ ನೀಟ್ ನಿಂದ ತಮಿಳುನಾಡಿನ ಮಕ್ಕಳಿಗೆ ಆಗುವ ಅನ್ಯಾಯದ ಬಗ್ಗೆ ವಿವರಿಸಿ ಕೊಟ್ಟಿದ್ದಾರೆ. ಇವೆಲ್ಲಾ ಕಾರಣಗಳು ಕರ್ನಾಟಕದ ಮಕ್ಕಳಿಗೂ ಅನ್ವಯವಾಗುತ್ತದೆ. ಆದುದರಿಂದ, ನೀಟ್ ಅನ್ನು ನಿಷೇಧಿಸಬೇಕು. ನವೀನ್ ನಂತಹ ಬುದ್ಧಿವಂತ ಹುಡುಗ ದ್ವಿತೀಯ ಪಿಯುಸಿಯಲ್ಲಿ ಶೇ.97ರಷ್ಟು ಅಂಕ ತೆಗೆದರೂ ಕರ್ನಾಟಕದಲ್ಲಿ ಅವನಿಗೆ ಮೆಡಿಕಲ್ ಸೀಟ್ ಸಿಗಲಿಲ್ಲ ಅದಕ್ಕೆ ಕಾರಣ ನೀಟ್ ಪರೀಕ್ಷೆ. ಈ ನೀಟ್ ಪರೀಕ್ಷೆಯಿಂದ ಕರ್ನಾಟಕದ ಮಕ್ಕಳಿಗೆ ಅನ್ಯಾಯವಾಗಿದೆ. ಈ ಪರೀಕ್ಷೆಯನ್ನು ಮೊದಲು ರದ್ದು ಮಾಡಿ ಕರ್ನಾಟಕದ ಸಿಇಟಿಯನ್ನು ಮರುಸ್ಥಾಪಿಸಬೇಕಾಗಿದೆ.
- ಜಿ.ಸಿ.ಚಂದ್ರಶೇಖರ್, ರಾಜ್ಯಸಭಾ ಸದಸ್ಯ
ಸ್ವಾತಂತ್ರ್ಯಾ ನಂತರ ವೈದ್ಯಕೀಯ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ದೇಶದ ಇತರೆಲ್ಲ ರಾಜ್ಯಗಳಿಗಿಂತ ಕರ್ನಾಟಕ ರಾಜ್ಯ ಸಾಧನೆ ಮಾಡಿದೆ. ರಾಜ್ಯದಲ್ಲಿ ಒಟ್ಟು 69 ಮೆಡಿಕಲ್ ಕಾಲೇಜುಗಳಿವೆ. ಆದರೆ ಕನ್ನಡಿಗರಿಗೆ ಮೆಡಿಕಲ್ ಸೀಟು ಸಿಗುತ್ತಿಲ್ಲ. ನೀಟ್ ಹೆಸರಲ್ಲಿ ರಾಜ್ಯಕ್ಕೆ ವಂಚನೆಯಾಗುತ್ತಿದೆ. 20 ಕೋಟಿಗೂ ಅಧಿಕ ಜನಸಂಖ್ಯೆಯ ಉತ್ತರಪ್ರದೇಶ ರಾಜ್ಯದಲ್ಲಿ ಸರಿಸುಮಾರು 6.5 ಕೋಟಿ ಜನಸಂಖ್ಯೆಯ ಕರ್ನಾಟಕದಲ್ಲಿ ಇರುವಷ್ಟು ಮೆಡಿಕಲ್ ಕಾಲೇಜುಗಳು ಇಲ್ಲ. ಹಾಗಾಗಿ ನೀಟ್ ಪದ್ಧತಿಯನ್ನು ಜಾರಿಗೊಳಿಸಿ, ರಾಜ್ಯದ ಕಾಲೇಜುಗಳಲ್ಲಿ ಉತ್ತರ ಭಾರತೀಯರನ್ನು ತುಂಬುವ ಹುನ್ನಾರ ಅಡಗಿದೆಯೇ ಹೊರತು ಮತ್ತೇನೂ ಅಲ್ಲ.
- ಟಿ.ಎ.ನಾರಾಯಣಗೌಡ, ಕರವೇ ರಾಜ್ಯಾಧ್ಯಕ್ಷ
ಯಾವುದೇ ಅನುಕೂಲ, ಮೂಲಭೂತ ಸೌಲಭ್ಯಗಳಿಲ್ಲದ, ಶಿಕ್ಷಕರಿಲ್ಲದ, ಗುಣಮಟ್ಟದ ಬೋಧನೆ, ಕಲಿಕೆಯಿಲ್ಲದ ರಾಜ್ಯ ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ಕೇವಲ ಜಾತಿ ಮತ್ತು ದುಡ್ಡಿನ ಕಾರಣಕ್ಕೆ ಖಾಸಗಿ ಶಾಲಾ ಕಾಲೇಜುಗಳಲ್ಲಿ ಓದುವ ಮಕ್ಕಳೊಂದಿಗೆ ಸ್ಪರ್ಧೆ ನಡೆಸಲು ಸಾಧ್ಯವೇ ಇಲ್ಲ. ರಾಜ್ಯ ಪಠ್ಯಕ್ರಮವನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಸಿಬಿಎಸ್‌ಇ, ಐಸಿಎಸ್‌ಇ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಶಿಕ್ಷಣ ಕ್ರಮದ ನಡುವೆ ಅಗಾಧ ವ್ಯತ್ಯಾಸವಿದೆ ಮತ್ತು ನೀಟ್ ಪರೀಕ್ಷೆಯು ಈ ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮ ಆಧರಿಸಿರುವುದರಿಂದ ಸಹಜವಾಗಿಯೇ ರಾಜ್ಯ ಪಠ್ಯಕ್ರಮ ಓದಿದವರು ಅರ್ಹತಾ ಪರೀಕ್ಷೆಯಲ್ಲಿ ಅಂಕ ಗಳಿಸದೆ ವಂಚಿತರಾಗುತ್ತಾರೆ. ನೀಟ್ ಪರೀಕ್ಷೆಗೂ ಖಾಸಗಿ ಟ್ಯುಟೋರಿಯಲ್‌ಗಳಿಗೂ ಸಂಬಂಧಗಳಿವೆ. ಒಟ್ಟಾರೆ ನೀಟ್ ಎಂಬುದು ಬಡ ಕುಟುಂಬದ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ನೇಣುಗಂಬ.
ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರ
ಕರ್ನಾಟಕ ಸಿಇಟಿ ವ್ಯವಸ್ಥೆ ದೇಶದ ಅತ್ಯುತ್ತಮ ಪರೀಕ್ಷಾ ವ್ಯವಸ್ಥೆ ಆಗಿತ್ತು. ಇದನ್ನು ಕಾಪಿ ಮಾಡಿಯೇ ಕೇಂದ್ರ ಹಲವಾರು ಪರೀಕ್ಷೆ ನಡೆಸುತ್ತಾ ಬಂದಿತ್ತು. ನಂತರ ನೀಟ್ ಪರೀಕ್ಷೆ ತಂದು ಸುಂದರ ಸಿಇಟಿಯನ್ನು ಹಾಳುಗೆಡವಿತು, ಕನ್ನಡಿಗರ ಬದುಕನ್ನೂ ಕೂಡ. ನೀಟ್ ಎಂಬ ಪೆಡಂಭೂತಕ್ಕೆ ಬಲಿಯಾದವರೆಲ್ಲ ಬಡವರ ಮಕ್ಕಳೇ.
ಖಾದರ್ ಬೇಲೂರು, ಕರವೇ ಕಾರ್ಯಕರ್ತ
ಸಾಮಾಜಿಕ ಜಾಲತಾಣಗಳಲ್ಲಿ ನೀಟ್ ಪರೀಕ್ಷೆ ಬ್ಯಾನ್ ಮಾಡುವ ಬಗ್ಗೆ ಕ್ಯಾಂಪೇನ್ ನಡೆಯುತ್ತಿದೆ. ಆದರೆ, ನೀಟ್ ಪರೀಕ್ಷೆಯನ್ನ ನ್ಯಾಯಾಲಯದ ಆದೇಶದ ಅನುಗುಣ ವಾಗಿಯೇ ತರಲಾಗಿದ್ದು, 138 ಕೋಟಿ ಜನಸಂಖ್ಯೆ ಹೊಂದಿರುವ ಭಾರತ ದೇಶದಲ್ಲಿ ಒಂದೂವರೆ ಲಕ್ಷ ಮೆಡಿಕಲ್ ಸೀಟ್ ಇದೆ. ಇದರಿಂದ ಪೈಪೋಟಿ ಹೆಚ್ಚಾಗಿದೆ. ಈಗ ನೀಟ್ ಬ್ಯಾನ್ ಕಷ್ಟ.
- ಪ್ರತಾಪ ಸಿಂಹ, ಬಿಜೆಪಿ ಸಂಸದ