ಓ ಮೆಣಸೇ...

Update: 2022-03-06 19:30 GMT

ಭಾಷೆ, ಸಂಸ್ಕೃತಿ, ನಡವಳಿಕೆ ಮತ್ತು ನಾಗರಿಕತೆ ಕೊಂಡಿಯಾಗಿ ಕೆಲಸ ಮಾಡಿದರೆ ಮಾತ್ರ ಸಮಾಜ ಚೆನ್ನಾಗಿ ನಡೆಯಲು ಸಾಧ್ಯ -ಸುನೀಲ್ ಕುಮಾರ್, ಸಚಿವ

ಆದ್ದರಿಂದ ಸಮಾಜವನ್ನು ಛಿದ್ರಗೊಳಿಸುವುದರಲ್ಲೇ ಸಾರ್ಥಕ್ಯ ಕಾಣುವವರು ಕೊಂಡಿಗಳನ್ನು ಕಡಿಯುವ ಸಾಧನೆ ಮಾಡಿ ಸಚಿವರಾಗುತ್ತಾರೆ.

ನಮ್ಮದು ಒಂದೇ ಭಾಷೆ, ಒಂದೇ ದೇಶ, ನಾವೆಲ್ಲರೂ ಒಂದೇ ಎಂಬ ಭಾವನೆಯಲ್ಲಿ ಬದುಕುತ್ತಿರುವ ದೇಶ -ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ

ಮನುವಾದಿಗಳ ವಿಚ್ಛಿದ್ರವಾದವನ್ನು ನಿಭಾಯಿಸುವ ಕಲೆಯನ್ನು ಕರಗತ ಮಾಡಿಕೊಂಡರೆ ಭವಿಷ್ಯದಲ್ಲೂ ನಾವು ಆ ರೀತಿ ಬದುಕುತ್ತಿರಬಹುದು.

ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನ್ ಸರಕಾರದ ಪರಿಸ್ಥಿತಿ ನಿರ್ಮಾಣವಾದೀತು -ಪ್ರತಾಪಸಿಂಹ, ಸಂಸದ

ಕೇಂದ್ರ ಸರಕಾರದಿಂದ ಆ ಕಾರಣಕ್ಕಾದರೂ ರಾಜ್ಯಕ್ಕೆ 200 ಕೋಟಿ ರೂ. ಅನುದಾನ ಸಿಗುತ್ತಿತ್ತು.

ಜಗತ್ತಿನ ಯಾವುದೇ ದೇಶದ ಒಂದಿಚು ನೆಲವನ್ನೂ ಆಕ್ರಮಿಸದ ವಿಶ್ವದ ಏಕೈಕ ದೇಶ ಭಾರತವಾಗಿದೆ -ರಾಜನಾಥ್ ಸಿಂಗ್, ಕೇಂದ್ರ ಸಚಿವ

ನಮ್ಮ ನೆಲವನ್ನು ಇನ್ನೊಬ್ಬರು ಆಕ್ರಮಿಸದಂತೆ ತಡೆಯುವಲ್ಲಿ ಆದ ಸರಕಾರದ ವೈಫಲ್ಯಕ್ಕೆ ಇದು ಸಮರ್ಥನೆಯೇ?

ಹಾಲು ಕುಡಿದು ಸಾಯುವವರಿಗೆ ಯಾರಾದರೂ ವಿಷ ಹಾಕಿ ಕೊಲ್ಲುತ್ತಾರಾ? -ಗೋವಿಂದ ಕಾರಜೋಳ, ಸಚಿವ

ವಿಷ ಕುಡಿದರೂ ಸಾಯದವರು ಹಾಲು ಕುಡಿದು ಸಾಯುತ್ತಾರೆಯೇ?

2023ರಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಶಕ್ತಿ ಮೀರಿ ಕೆಲಸ ಮಾಡುತ್ತೇನೆ -ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಬಿಜೆಪಿಯೊಳಗಿರುವವರಿಗೆ ನೀವು ಮಾಡಲಿರುವ ಕೆಲಸದ ಬಗ್ಗೆ ತೀವ್ರವಾದ ಭಯವಿದ್ದಂತಿದೆ.

ನಾನು ಬರೆದಿರುವ ‘ಬಾಂಬೆ ಡೇಸ್’ ಪುಸ್ತಕ ಹೊರಬಂದರೆ ಕೆಲವು ಮಾಜಿ ಮುಖ್ಯಮಂತ್ರಿಗಳು ಬೆತ್ತಲಾಗುತ್ತಾರೆ -ಎಚ್.ವಿಶ್ವನಾಥ್, ವಿ.ಪ.ಸದಸ್ಯ

ಇದನ್ನೆಲ್ಲಾ ಘೋಷಿಸಿ ನೀವು ಯಾವುದಕ್ಕಾಗಿಯೋ ಚೌಕಾಶಿ ಮಾಡುತ್ತಿದ್ದೀರಿ ಎಂಬ ನಿಮ್ಮ ಇರಾದೆ ಮಾತ್ರ ಈಗಾಗಲೇ ಬೆತ್ತಲಾಗಿದೆ.

ಹಿಂದೂಗಳು ಮತ್ತು ಮುಸ್ಲಿಮರು ಬೇರೆಯಾಗಬೇಕು ಎನ್ನುವುದೇ ಕಾಂಗ್ರೆಸ್‌ನ ಉದ್ದೇಶ -ಕೆ.ಎಸ್.ಈಶ್ವರಪ್ಪ, ಸಚಿವ

ಅವರು ಅಷ್ಟು ಕಾಲ ಸಂಘಪರಿವಾರವನ್ನು ಸಹಿಸಿದ್ದು ಮತ್ತು ಪೋಷಿಸಿದ್ದು ಇದೇ ಕಾರಣಕ್ಕೆ ಎಂಬ ಒಳಗುಟ್ಟನ್ನೂ ಉಗುಳಿ ಬಿಡಿ.

 ಸರಕಾರಿ ಶಾಲೆಗಳು ಭಾರತೀಯ ಶಿಕ್ಷಣದ ಸೊಗಡು ಹೊಂದಿದ್ದು, ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಚಿಂತನೆ ಬೆಳೆಸುತ್ತದೆ -ನಳಿನ್ ಕುಮಾರ್ ಕಟೀಲು, ಸಂಸದ

ಸ್ವತಃ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಮಾತ್ರ ಕಲಿಸುತ್ತೇವೆಂದು ಸಂಘಿಗಳೆಲ್ಲ ಪ್ರಮಾಣ ಮಾಡಿದರೂ ಈ ಬಗೆಯ ಬೊಗಳೆಯನ್ನು ಜನರೆಲ್ಲಿ ನಂಬುತ್ತಾರೆ?

ನಾನು ಜಲ ಸಂಪನ್ಮೂಲ ಸಚಿವನಾಗಿದ್ದ ಸಂದರ್ಭದಲ್ಲಿ ಕರ್ನಾಟಕ-ಮಹಾರಾಷ್ಟ್ರ ನಡುವಿನ ಜಲ ವಿವಾದ ಪರಿಹರಿಸಲು ನನಗೆ ಸಾಧ್ಯವಾಗಲಿಲ್ಲ -ನಿತಿನ್ ಗಡ್ಕರಿ, ಕೇಂದ್ರ ಸಚಿವ

ವಿವಾದ ಹುಟ್ಟಿಸಿ ಹಾಕುವಲ್ಲಿ ನೀವು ಬ್ಯುಸಿ ಆಗಿದ್ದಿರಬೇಕು.

ಯುವ ಜನರಲ್ಲಿ ಪ್ರಾರಂಭದಿಂದಲೇ ವೈಜ್ಞಾನಿಕ ಕುತೂಹಲ ಬೆಳೆಸಬೇಕು -ಡಿ.ವಿ.ಸದಾನಂದಗೌಡ, ಕೇಂದ್ರದ ಮಾಜಿ ಸಚಿವ

ಮುಚ್ಚಿದ ಕೋಣೆಯೊಳಗಿನ ದೃಶ್ಯಗಳ ರೆಕಾರ್ಡಿಂಗ್ ಅಸಾಧ್ಯಗೊಳಿಸುವಂತಹ ತಂತ್ರಜ್ಞಾನವನ್ನು ಅವರ ಕೈಯಿಂದ ಬೆಳೆಸಬೇಕು.

ಉಕ್ರೇನ್‌ನಲ್ಲಿ ನಮ್ಮ ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದರೆ ಕಾಂಗ್ರೆಸ್‌ನವರು ಬಿರಿಯಾನಿ ತಿನ್ನುತ್ತಾ, ಡ್ಯಾನ್ಸ್ ಮಾಡುತ್ತಾ ಪಾದಯಾತ್ರೆ ಮಾಡುತ್ತಿದ್ದಾರೆ -ಆರ್ .ಅಶೋಕ್, ಸಚಿವ

ನಿಮ್ಮ ಪಾಳಯದವರ ಮಕ್ಕಳು ಅಮೆರಿಕ ಮತ್ತು ಬ್ರಿಟನ್‌ಗಳನ್ನು ಬಿಟ್ಟು ಉಕ್ರೇನ್‌ಗೆ ಹೋಗಿದ್ದು ಯಾವಾಗ?

ಹೇಗಾದರೂ ಮಾಡಿ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕೆಂಬ ಹುಚ್ಚು ಡಿಕೆಶಿ ಅವರನ್ನು ಆವರಿಸಿಕೊಂಡಿದೆ -ಡಾ.ಅಶ್ವತ್ಥನಾರಾಯಣ, ಸಚಿವ

ನಿಮ್ಮ ಹುಚ್ಚು ಬಿಟ್ಟಿದೆಯೇ?

ಕೇಂದ್ರ ಸಚಿವ ನಿತಿನ್ ಗಡ್ಕರಿ ಜನಪರ ಕಾಳಜಿಯುಳ್ಳ ಅಪರೂಪದ ರಾಜಕಾರಣಿ -ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ

ಯಾವುದಾದರೂ ರಸ್ತೆ ಕಾಂಟ್ರಾಕ್ಟ್ ಬಗ್ಗೆ ಮಾತುಕತೆಗೆ ಇದು ಪೀಠಿಕೆ ಅಲ್ಲ ತಾನೇ?

ಶಿಕ್ಷಕರ ವರ್ಗಾವಣೆ ತಿದ್ದುಪಡಿ ಕಾಯ್ದೆಯಿಂದ ಶಿಕ್ಷಕರು ಖುಷಿಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ಪ್ರಯೋಗಗಳನ್ನು ಮಾಡಲಾಗುವುದು -ಬಿ.ಸಿ.ನಾಗೇಶ್, ಸಚಿವ

ಒಂದೊಂದು ವರ್ಗಾವಣೆಗಾಗಿ ಎಷ್ಟೆಷ್ಟು ಕೊಟ್ಟು ಅವರು ನಿಮ್ಮನ್ನು ಖುಷಿ ಪಡಿಸಬೇಕು?

ಉ.ಪ್ರ. ಸಿಎಂ ಭಾರತದ ಮುಂದಿನ ಪ್ರಧಾನಿ ಎಂದು ಜನರು ಚರ್ಚೆ ನಡೆಸುತ್ತಿರುವುದು ತೀರಾ ಸಹಜವಾಗಿದೆ -ಅಮಿತ್ ಶಾ, ಕೇಂದ್ರ ಸಚಿವ

ಮೋದಿ ಮತ್ತು ಯೋಗಿಯನ್ನು ಜಗಳಾಡಿಸಿ ನೀವು ಸಾಧಿಸಲು ಹೊರಟಿರುವುದು ಏನನ್ನು?

ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ವಿಷಯದಲ್ಲಿ ನಮ್ಮ ದೇಶದ ರಾಜಕೀಯ ಪಕ್ಷಗಳ ನಡುವೆ ಒಗ್ಗಟ್ಟಿಲ್ಲ ಎನ್ನುವಂತೆ ಹೊರಗಿನವರಿಗೆ ತೋರಿಸಿಕೊಳ್ಳುವುದು ಬೇಡ -ದೇವೇಗೌಡ, ಮಾಜಿ ಪ್ರಧಾನಿ

ರಾಜಕೀಯ ಪಕ್ಷಗಳಲ್ಲಿ ಒಮ್ಮತವಿದೆ, ಆಳುವ ಪಕ್ಷ ಮತ್ತು ಸರಕಾರ ಮಾತ್ರ ಸೋಮಾರಿಯಾಗಿವೆ ಎಂಬುದನ್ನು ಜಗತ್ತೆಲ್ಲ ನೋಡುತ್ತಿರುವಾಗ ಬಚ್ಚಿಡುವುದಕ್ಕೆ ಏನು ತಾನೇ ಉಳಿದಿದೆ?

ನೀಟ್ ವ್ಯವಸ್ಥೆಯನ್ನು ವಿರೋಧಿಸುವವರು ಧನದಾಹಿಗಳು, ದ್ರೋಹಿಗಳು -ಡಾ.ಅಶ್ವತ್ಥನಾರಾಯಣ, ಸಚಿವ

ಒಂದು ಕಾಲದದಲ್ಲಿ ಸಂಘವಲಯದಲ್ಲಿ, ಬ್ರಿಟಿಷರನ್ನು ವಿರೋಧಿಸುವವರ ಬಗ್ಗೆಯೂ ಇಂತಹ ಅಭಿಮತವಿತ್ತು.

ರೈತರು ಅಸಮಾಧಾನಗೊಂಡಿರುವುದರಿಂದ ಉ.ಪ್ರ.ದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಕಡಿಮೆ -ಪ್ರವೀಣ್ ತೊಗಾಡಿಯಾ, ವಿಎಚ್‌ಪಿ ಮಾಜಿ ಅಧ್ಯಕ್ಷ

ಈಗಲೂ ನಿಮಗೆ ರೈತರ ಸಮಾಧಾನಕ್ಕಿಂತ ಬಿಜೆಪಿ ಗೆಲುವೇ ಹೆಚ್ಚು ಚಿಂತೆಯ ವಿಷಯವೇ?

ಉಕ್ರೇನ್ ಯುದ್ಧದಿಂದ ಭವಿಷ್ಯದಲ್ಲಿ ಏನಾಗಬಹುದು ಎಂಬ ಯಾವ ಕಲ್ಪನೆಯೂ ರಶ್ಯ ಅಧ್ಯಕ್ಷ ಪುಟಿನ್‌ಗೆ ಇಲ್ಲ -ಜೋ ಬೈಡನ್, ಅಮೆರಿಕ ಅಧ್ಯಕ್ಷ

ನಿಮ್ಮ ಭವಿಷ್ಯವಂತೂ ಚಿಂತಾಜನಕವಾಗಿದೆ.

ವಿದೇಶಗಳಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ತೆರಳಿರುವ ವಿದ್ಯಾರ್ಥಿ ಗಳಲ್ಲಿ ಶೇ.90ರಷ್ಟು ನೀಟ್ ಪರೀಕ್ಷೆಯಲ್ಲಿ ಅನುತೀರ್ಣರಾದವರು -ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ

ಪರೀಕ್ಷೆಯನ್ನೇ ಎದುರಿಸಿರಲಿಲ್ಲ ಎಂದಾದರೆ ಅವರಲ್ಲೊಬ್ಬನನ್ನು ಪ್ರಧಾನಿ ಪಟ್ಟಕ್ಕೆ ಪರಿಗಣಿಸಬಹುದಿತ್ತು.

ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಬಿಹಾರಿ ಡಿಎನ್‌ಎ ಹೊಂದಿದ್ದಾರೆ -ರೇವಂತ ರೆಡ್ಡಿ, ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ

ಬಿಹಾರವೆಂದರೆ ಎಲ್ಲಿ, ಅಂಟಾರ್ಟಿಕಾದಲ್ಲಿದೆಯೇ?

ಬಿಜೆಪಿಯದ್ದು ಡಬಲ್ ಇಂಜಿನ್ ಸರಕಾರ ಅಲ್ಲ, ಡಬ್ಬಾ ಇಂಜಿನ್ ಸರಕಾರ -ರಾಮಲಿಂಗಾರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ

 ಹಾಗೆಲ್ಲ ಹಂಗಿಸುವ ಬದಲು ಎರಡು ತದ್ವಿರುದ್ಧ ದಿಕ್ಕುಗಳೆಡೆಗೆ ಎಳೆಯುವ ಡಬಲ್ ಇಂಜಿನ್ ಸರಕಾರ ಎನ್ನಬಹುದಲ್ಲಾ?

ಕಾಂಗ್ರೆಸ್‌ನವರು ಈಗಾಗಾಲೇ ಅಧಿಕಾರಕ್ಕೆ ಬಂದಂತೆ ಎಲ್ಲ ಕಡೆ ಪೋಸ್ ಕೊಡುತ್ತಿದ್ದಾರೆ -ಬಸವರಾಜ ಬೊಮ್ಮಾಯಿ, ಸಿಎಂ

ನೀವೇಕೆ ಅಧಿಕಾರ ಕಳೆದು ಕೊಂಡವರಂತೆ ಫೋಸ್ ಕೊಡುತ್ತಿರುವುದು?

ರಾಮನಾಮ ಜಪಿಸಿ ಅಧಿಕಾರಕ್ಕೆ ಬಂದವರು ರಾಮನ ಭಕ್ತ ಆಂಜನೇಯನನ್ನೇ ಮರೆತು ಬಿಟ್ಟಿದ್ದಾರೆ -ವಿ.ಎಸ್.ಉಗ್ರಪ್ಪ, ಕಾಂಗ್ರೆಸ್ ನಾಯಕ

ಅವನ ಹೆಸರಲ್ಲೂ ಜನರ ನಡುವೆ ಜಗಳ ಹಚ್ಚಬೇಕೇ ?

ಮುಂದಿನ ಚುನಾವಣೆಯಲ್ಲಿ ಗೆದ್ದರೆ ನಾಯಕ ಆಗಬೇಕೆಂಬ ಉದ್ದೇಶದಿಂದ ಪಾದಯಾತ್ರೆ ಮಾಡಲಾಗುತ್ತಿದೆ -ಶ್ರೀರಾಮುಲು, ಸಚಿವ

ಈಗಲೇ ಅವರ ಭವಿಷ್ಯದ ನಾಯಕತ್ವದ ಬಗ್ಗೆ ಚಿಂತಿಸುವಷ್ಟು ನಿಮ್ಮ ಪರಿಸ್ಥಿತಿ ಚಿಂದಿಯಾಗಿದೆಯೇ?

ಸಜ್ಜನರ ಜೊತೆಗಿರಬೇಕು ಎಂದು ಕೊಂಡಿದ್ದೇನೆ -ಸಿ.ಎಂ. ಇಬ್ರಾಹೀಂ, ವಿ.ಪ. ಸದಸ್ಯ

ಅವರು ಒಪ್ಪುತ್ತಾರೆಯೇ?

ಮುಂದೊಂದು ದಿನ ಕೇಸರಿ ಪೇಟಕ್ಕೆ ತಲೆಬಾಗುವ ದಿನ ಬರುತ್ತದೆ -ಕೆ.ಎಸ್.ಈಶ್ವರಪ್ಪ, ಸಚಿವ

ಚಂದದ ಕೇಸರಿ ಬಣ್ಣಕ್ಕೆ ಪೌರೋಹಿತ್ಯದ ಸೆಗಣಿ ಬಳಿದವರು ತಮ್ಮ ವಿನಾಶದ ದಿನಗಳನ್ನು ಹೀಗೆಲ್ಲ ವೈಭವೀಕರಿಸಿ ಸಾಂತ್ವನ ಪಡೆಯುತ್ತಿರುತ್ತಾರೆ.

ಯುದ್ಧಪೀಡಿತ ಉಕ್ರೇನ್‌ನಿಂದ ಒಂದು ಶವ ತರುವ ಜಾಗದಲ್ಲಿ 8-10 ಜನರನ್ನು ಕರೆತರಬಹುದು -ಅರವಿಂದ ಬೆಲ್ಲದ, ಶಾಸಕ

ಒಳಗಿನ ಮನುಷ್ಯತ್ವ ಸಂಪೂರ್ಣ ಸತ್ತಮೇಲೆ ಲೆಕ್ಕಾಚಾರಗಳೆಲ್ಲಾ ಹೀಗೆಯೇ ಇರುತ್ತವೆ.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!