ಕರಾವಳಿಯಲ್ಲಿ ಮಾ.23ರವರೆಗೆ ಮಳೆ ಸಾಧ್ಯತೆ : ಹವಾಮಾನ ಕೇಂದ್ರ ಮುನ್ಸೂಚನೆ
Update: 2022-03-18 14:23 GMT
ಉಡುಪಿ : ಕರಾವಳಿಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಅಲ್ಲಲ್ಲಿ ಇಂದಿನಿಂದ ಮಾ.23ರವರೆಗೆ ತುಂತುರಿನಿಂದ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದು, ನಾಳೆ ಹಾಗೂ ಕರಾವಳಿಯ ಮೂರು ಜಿಲ್ಲೆಗಳಲ್ಲಿ ೨೦ರಿಂದ ೨೩ರವರೆಗೆ ಮಳೆ ಬೀಳುವ ಸಾಧ್ಯತೆ ಇದೆ. ಆದರೆ ಮೂರೂ ಜಿಲ್ಲೆಗಳಿಗೆ ಯಾವುದೇ ಎಚ್ಚರಿಕೆಯನ್ನು ನೀಡಲಾಗಿಲ್ಲ. ಮೂರು ಜಿಲ್ಲೆಗಳಲ್ಲಿ ೨.೫ಮಿ.ಮೀನಿಂದ ೬೪.೫ಮಿ.ಮೀ. ಮಳೆಯಾಗಬಹುದು ಎಂದು ಹವಾಮಾನ ಕೇಂದ್ರದ ಪ್ರಕಟಣೆ ತಿಳಿಸಿದೆ.
ಉಡುಪಿ ನಗರವೂ ಸೇರಿದಂತೆ ಜಿಲ್ಲೆಯ ಅನೇಕ ಕಡೆಗಳಲ್ಲಿ ಇಂದು ಸಂಜೆಯಿಂದ ಮೋಡಕವಿದ ವಾತಾವರಣವಿದ್ದು, ರಾತ್ರಿ ವೇಳೆ ತಂಪುಗಾಳಿ ಜೋರಾಗಿ ಬೀಸುತ್ತಿದೆ. ಕೆಲವು ಕಡೆಗಳಲ್ಲಿ ತುಂತುರು ಮಳೆ ಸುರಿದ ವರದಿಗಳೂ ಬಂದಿವೆ.