ಆನೆ ದಂತ ಕಳವು ಆರೋಪ: ಮೂವರು ಆರೋಪಿಗಳ ಬಂಧನ
Update: 2022-03-19 14:31 GMT
ಬೆಂಗಳೂರು, ಮಾ.19: ಆನೆ ದಂತಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋದಪಡಿ ಮೂವರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಸನ ಜಿಲ್ಲೆಯ ವೀರಾಪುರದ ಚಂದ್ರೇಗೌಡ(46), ಹಾವೇರಿ ಜಿಲ್ಲೆಯ ಬಸವನಾಳದ ಪ್ರವೀಣ್‍ಗುಳೇದ್(24), ಬನ್ಸಾಪುರದ ಸೋಮಲಿಂಗಪ್ಪ ಕೋಡದ್(41) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಹರೀಶ್‍ಪಾಂಡೆ ತಿಳಿಸಿದ್ದಾರೆ.
ಆರೋಪಿಗಳು ಬನಶಂಕರಿ 3ನೆ ಹಂತದ 7ನೆ ಮುಖ್ಯರಸ್ತೆಯಲ್ಲಿ ಕಾರಿನಲ್ಲಿ ಆನೆ ದಂತಗಳನ್ನಿಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಕಾರ್ಯಾಚರಣೆ ಕೈಗೊಂಡ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ 29 ಕೆಜಿ ತೂಕದ 150 ಸೆಂ.ಮೀ ಹಾಗೂ 125 ಸೆಂ.ಮೀ ಉದ್ದದ 2 ಆನೆ ದಂತಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ವನ್ಯಜೀವಿ ಸಂರಕ್ಷಣೆಯಡಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಹೇಳಿದರು.