ಫ್ಲಾಹರ್ಟಿ-ಸಾಕ್ಷ್ಯ ಕಥನಗಳ ಜನಕನ ಸಾಹಸಗಳು

Update: 2022-03-19 19:30 GMT

ಮನುಷ್ಯನು ಅಸ್ತಿತ್ವಕ್ಕಾಗಿ ನಿಸರ್ಗದೊಡನೆ ಹೂಡುವ ಯುದ್ಧದ ಅನೇಕ ಮುಖಗಳನ್ನು ಪರಿಚಯಿಸಿದ ಫ್ಲಾಹರ್ಟಿ 'ಮ್ಯಾನ್ ಆಫ್ ಆರನ್' ಮೂಲಕ ಮತ್ತೆ ತಮ್ಮ ಖ್ಯಾತಿಯನ್ನು ನವೀಕರಿಸಿದರು. ಜಾನ್ ಗ್ರೀರ್ಸನ್‌ರವರು ಈ ಚಿತ್ರವನ್ನು ನೋಡಿದ ನಂತರವೇ ಅದನ್ನು ವಿವರಿಸಲು 'ಡಾಕ್ಯುಮೆಂಟರಿ' ಎಂದು ಕರೆದರೆಂದು ಒಂದು ಮೂಲ ಹೇಳುತ್ತದೆ.



ಕಳೆದ ವಾರದ ಅಂಕಣದಲ್ಲಿ ಬರೆದ 'ನ್ಯಾನೂಕ್ ಆಫ್ ದ ನಾರ್ತ್' ಸಿನೆಮಾ ರೂಪುಗೊಂಡ ವಿವರಗಳು ಮತ್ತು ಅದನ್ನು ರೂಪಿಸಿದ ರಾಬರ್ಟ್ ಫ್ಲಾಹರ್ಟಿಯ ಬದುಕಿನ ವಿವರಗಳು ಮತ್ತು ಅವರ ಸಾಹಸಗಳು ಅಷ್ಟೇ ಕುತೂಹಲಕಾರಿಯಾಗಿವೆ. ಉಂಡಾಡಿ ಗುಂಡನಂತಿದ್ದ ಫ್ಲಾಹರ್ಟಿ ತನ್ನ ಗೊತ್ತುಗುರಿಯಿಲ್ಲದ ಸಾಹಸಗಳ ಮೂಲಕವೇ ಚಿತ್ರಜಗತ್ತಿಗೆ ಅನುಕರಣೀಯ ಮಾದರಿಯ ಸಿನೆಮಾಗಳನ್ನು ರೂಪಿಸಿದ್ದು ಚಿತ್ರಜಗತ್ತಿನ ಮಹಾನ್ ಅಚ್ಚರಿಗಳಲ್ಲೊಂದು.

'ನ್ಯಾನೂಕ್ ಆಫ್ ದಿ ನಾರ್ತ್' ಚಿತ್ರದಿಂದ ಜಗತ್ತಿನ ಗಮನ ಸೆಳೆದ ರಾಬರ್ಟ್ ಜೋಸೆಫ್ ಫ್ಲಾಹರ್ಟಿ ಹುಟ್ಟಿದ್ದು ಅಮೆರಿಕದ ಮಿಚಿಗನ್ ಪ್ರಾಂತದ ಐರನ್ ಮೌಂಟೇನ್ ಎಂಬ ಪ್ರದೇಶದಲ್ಲಿ. (ಜನನ 16ನೇ ಫೆಬ್ರವರಿ 1884). ಜೋಸೆಫ್ ಫ್ಲಾಹರ್ಟಿ ಮತ್ತು ಸೂಸಾನ್ ಫ್ಲಾಹರ್ಟಿ ದಂಪತಿಯ ಆರು ಮಕ್ಕಳಲ್ಲಿ ಮೊದಲ ಮಗನಾದ ರಾಬರ್ಟ್‌ಗೆ 13 ವಯಸ್ಸಾದಾಗ ಕುಟುಂಬವು ಮಿಚಿಗನ್‌ನಿಂದ ಕೆನಡಾದ ಆಂಟೋರಿಯೋಗೆ ವಾಸ್ತವ್ಯ ಬದಲಿಸಿತು. ಬಹುತೇಕ ಬಾಲ್ಯವನ್ನು ಕಳೆದದ್ದು ಗಣಿಗಾರಿಕೆ ನಡೆಸುತ್ತಿದ್ದ ಕೆನಡಾದ ನಗರ ಪಟ್ಟಣಗಳಲ್ಲಿ. ಆತ ಶಾಲೆಗೆ ಹೆಚ್ಚು ಹೋದವನಲ್ಲ. ಸ್ಥಳೀಯ ರೆಡ್ ಇಂಡಿಯನ್ನರ ಜೊತೆ ಕಲೆತು ಕಾಡುಪ್ರಾಣಿಗಳ ಜಾಡನ್ನು ಹಿಡಿದು ಶಿಕಾರಿ ಮಾಡುವ ಗೀಳು ಹಿಡಿಸಿಕೊಂಡಿದ್ದ ಬಾಲಕ. ತಂದೆ ರಾಬರ್ಟ್ ಹೆನ್ರಿ ಫ್ಲಾಹರ್ಟಿ ಉದ್ದಿಮೆದಾರ. ಶ್ರೀಮಂತ. ಹಾಗಾಗಿ 'ಹಾದಿ ತಪ್ಪಿದ' ಮಗನನ್ನು ಸರಿದಾರಿಗೆ ತರಲು ಈಗಿನ ಕೆನಡಾ ರಾಜಧಾನಿಯ ಟೊರೆಂಟೋವಿನ ಅಪ್ಪರ್ ಕೆನಡಾ ಕಾಲೇಜಿಗೆ ಸೇರಿಸಿದರು. ನಾಲ್ಕು ಗೋಡೆಗಳ ನಡುವಿನ ಓದಿನ ರುಚಿ ಹತ್ತದ ಕಿರಿಯ ಫ್ಲಾಹರ್ಟಿ ಬಹುಬೇಗನೆ ಕಾಲೇಜಿಗೆ ವಿದಾಯ ಹೇಳಿದ. ಬಳಿಕ ಅಪ್ಪ ನಡೆಸುತ್ತಿದ್ದ ಗಣಿಗಾರಿಕೆಗೆ ಸೇರಿಕೊಂಡ. ಕಾಡು ಮೇಡು ಅಲೆಯುವುದನ್ನು ಮುಂದುವರಿಸಿದ. ಅಪ್ಪಕೊನೆಯ ಪ್ರಯತ್ನ ನಡೆಸಿ ಮಗನನ್ನು ಮಿಚಿಗನ್‌ನ ಕಾಲೇಜ್ ಆಫ್ ಮೈನ್ಸ್‌ಗೆ ಸೇರಿಸಿದ. ವಿದ್ಯೆ ಕಲಿಯಲು ಬಂದ ಫ್ಲಾಹರ್ಟಿ ಪ್ರಸಿದ್ಧ ಭೂಗರ್ಭ ವಿಜ್ಞಾನಿ ಬ್ರಯಾನ್ ಮಾವರ್‌ನ ಪ್ರತಿಭಾವಂತ ಮಗಳು ಫ್ರಾನ್ಸೆಸ್ ಹಬರ್ಡ್‌ಳಲ್ಲಿ ಅನುರಕ್ತನಾದ. ಆಕೆಗೂ ಕಾಡು ಮೇಡು ಅಲೆಯುವುದು ಪ್ರಾಣಿಗಳನ್ನು ನೋಡುವುದೆಂದರೆ ಅತಿಶಯ ಪ್ರೀತಿ. ಇಬ್ಬರು ಮಾದಕವ್ಯಸನಿಗಳು ಜೊತೆ ಸೇರಿದಾಗ ಸ್ನೇಹಬಂಧ ಬಿಗಿಯಾಗುವಂತೆ ಅವರಿಬ್ಬರೂ ಹತ್ತಿರವಾದರು. ಈ ನಡುವೆ ಏಳು ತಿಂಗಳ ಓದಿನ ನಂತರ ಕಾಲೇಜಿಗೆ ಶರಣು ಹೊಡೆದ ಫ್ಲಾಹರ್ಟಿ ಉತ್ತರ ಪ್ರಾಂತ ತಲುಪಿ ಕಬ್ಬಿಣದ ಅದಿರನ್ನು ಹುಡುಕುವ ಅಪ್ಪನ ಕಾರ್ಯಕ್ಕೆ ಜೊತೆಯಾದ. ಅಲ್ಲಿ ಆತ ಅಪರಿಚಿತ ಪ್ರದೇಶಗಳನ್ನು ಸಮೀಕ್ಷೆ ನಡೆಸಿ ನಕ್ಷೆ ತಯಾರಿಸುವ, ಪ್ರತಿಕೂಲ ಪರಿಸ್ಥಿತಿಯಲ್ಲಿ ಬದುಕುವ ಕಲೆಯನ್ನು ಕರಗತ ಮಾಡಿಕೊಂಡ. ಮುಂದಿನ ಹಲವು ವರ್ಷಗಳಲ್ಲಿ ಅದಿರು ಹುಡುಕುವ ಅನೇಕ ಶೋಧನಾ ಯಾತ್ರೆಗಳಲ್ಲಿ ಸೇರಿಕೊಂಡ ಆತ ಪ್ರಿಯತಮೆ ಫ್ರಾನ್ಸೆಸ್‌ಳ ಜೊತೆ ಮದುವೆ ನಿಶ್ಚಯ ಮಾಡಿಕೊಂಡ. ಕೆನಡಾದ ರಸ್ತೆ ನಿರ್ಮಾಣ ಗುತ್ತಿಗೆದಾರ ಸರ್ ವಿಲಿಯಂ ಮೆಕೆನ್ಜಿ 1910ರಲ್ಲಿ ಪ್ಲಾಹರ್ಟಿಗೆ ಉದ್ಯೋಗ ನೀಡಿ ಹಡ್ಸನ್ ಕೊಲ್ಲಿಯ ಪೂರ್ವ ಕರಾವಳಿಯ ಶೋಧನೆಯನ್ನು ವಹಿಸಿದ. ಈ ಯಾತ್ರೆಯು ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಎಸ್ಕಿಮೋಗಳನ್ನು ಪರಿಚಯಿಸಿತು. ಕ್ರಮೇಣ ಅವರ ಬದುಕಿನ ಅಧ್ಯಯನ ಫ್ಲಾಹರ್ಟಿಗೆ ಗೀಳಾಗಿ ಪರಿವರ್ತನೆಯಾಯಿತು.

1910-12ರ ಅವಧಿಯಲ್ಲಿ ಹಡ್ಸನ್ ಕೊಲ್ಲಿಯ ಪೂರ್ವ ಕರಾವಳಿಯಲ್ಲಿ ಫ್ಲಾಹರ್ಟಿ ತಂಡ ಎರಡು ಬಾರಿ ಸಮೀಕ್ಷಾ ಕಾರ್ಯ ಕೈಗೊಂಡಿತು. ವಿಶಾಲವಾದ ಬಯಲಿನಲ್ಲಿ ನಡೆಯುತ್ತಾ, ಇಲ್ಲವೇ ಹಿಮಬಂಡಿಯಲ್ಲಿ ಅಥವಾ ನಾಡದೋಣಿಯಲ್ಲಿ ಪ್ರಯಾಣಿಸುತ್ತಾ ಅವರು ಆ ಪ್ರದೇಶದ ನಕ್ಷೆ ತಯಾರಿಸಿದರು. ಫ್ಲಾಹರ್ಟಿ ಅಲ್ಲಿನ ಮೂಲ ನಿವಾಸಿಗಳ ಸ್ಥಿರ ಚಿತ್ರಗಳನ್ನು ತೆಗೆಯುತ್ತಾ ಅವರಿಗೆ ಹತ್ತಿರವಾದರು. ಅವರ ಜೀವನ ವಿಧಾನವನ್ನು ಹತ್ತಿರದಿಂದ ಕಂಡು ಮನನ ಮಾಡಿಕೊಂಡರು. ವರ್ಷಪೂರ್ತಿ ನಿಸರ್ಗದ ವಿರುದ್ಧ ಸೆಣೆಸಿ ಜೀವ ಉಳಿಸಿಕೊಳ್ಳುವ ಅವರ ಸರಳವಾದ ಬದುಕು ಫ್ಲಾಹರ್ಟಿಗೆ ಒಂದು ಅದ್ಭುತ ಜೀವನ ಸಮರದಂತೆ ಗೋಚರಿಸಿತು. ಎಸ್ಕಿಮೋಗಳ ಮೇಲೆ ಪ್ರೀತಿ ಉಕ್ಕಿತು.

ಕ್ಯಾಮೆರಾ ಬಳಸಿ ಚಿತ್ರೀಕರಿಸುವ ವಿಧಾನವನ್ನು ಮೂರು ವಾರಗಳ ಕೋರ್ಸಿಗೆ ಸೇರಿ ಕಲಿತು ಬಂದ ಫ್ಲಾಹರ್ಟಿ 1913ರಲ್ಲಿ ತಮ್ಮ ಮೂರನೇ ಯಾತ್ರೆಯನ್ನು ವಿಶೇಷ ಸಿದ್ಧತೆಯೊಡನೆ ಕೈಗೊಂಡರು. ಕೈಯಿಂದ ಸುತ್ತುವ ಮೂವಿ ಕ್ಯಾಮೆರಾ ಮತ್ತು ಸಾಕಷ್ಟು ಕಚ್ಚಾ ಫಿಲಂ ಜೊತೆ ಬಂದ ಫ್ಲಾಹರ್ಟಿ, ಶೋಧನೆಯ ಕಾರ್ಯದಲ್ಲಿ ಬಿಡುವು ದೊರೆತಾಗಲೆಲ್ಲ ತಮ್ಮ ಜೊತೆಯಿದ್ದ ಇನುಯಿಟ್‌ಗಳನ್ನು ಚಿತ್ರಿಸುತ್ತಾ ಹೋದರು. ಕೊನೆ ಕೊನೆಯಲ್ಲಿ ಚಿತ್ರೀಕರಣ ಕಾರ್ಯವು ಮೂಲ ಉದ್ದೇಶವನ್ನು ಮರೆಸುವಷ್ಟು ಗೀಳು ಹಿಡಿಸಿತು. ಈ ಯಾತ್ರೆಯ ಅವಧಿಯಲ್ಲಿ ಸುಮಾರು 17 ಗಂಟೆಗಳು ವೀಕ್ಷಿಸಬಹುದಾದಷ್ಟು (70,000 ಅಡಿ) ದೃಶ್ಯಗಳನ್ನು ಚಿತ್ರೀಕರಿಸಿದ್ದರು. ಆದರೆ ಚಲನಚಿತ್ರಗಳನ್ನು ನಿರ್ಮಿಸುವ ಕ್ಷೇತ್ರದಲ್ಲಿ ಅನುಭವವಿಲ್ಲದ ಕಾರಣ ಬಹುತೇಕ ದೃಶ್ಯಗಳು ಪುನರಾವರ್ತನೆಗೊಂಡಿದ್ದವು. ಚಿತ್ರೀಕರಣದಲ್ಲೂ ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಯಿತು. ಒಮ್ಮೆ ಅವರಲ್ಲಿದ್ದ ದೊಡ್ಡ ದೋಣಿಯೊಂದು ಕಳೆದುಹೋಯಿತು. ಮತ್ತೊಮ್ಮೆ ಅವರು ಯಾನ ಮಾಡುತ್ತಿದ್ದ ದೋಣಿ ಅಪಘಾತಕ್ಕೀಡಾಯಿತು. ಕೊರೆಯುವ ಚಳಿಯಲ್ಲಿ ಒಂದು ವರ್ಷ ಕಳೆದ ನಂತರ ಫ್ಲಾಹರ್ಟಿ ಚಿತ್ರೀಕರಿಸಿದ ಫಿಲಂನೊಂದಿಗೆ ಹಿಂದಿರುಗಿ ಟೊರಂಟೋದಲ್ಲಿ ಸಂಸ್ಕರಿಸಿ ಪ್ರಿಂಟು ತೆಗೆದರು. ಆಗ ಫಿಲಂ ನೆಗೆಟಿವ್‌ಗಳು ನೈಟ್ರೇಟ್ ಮಾಧ್ಯಮದವು. ಆ ಕಾರಣ ಬೆಂಕಿಗೆ ಸುಲಭದ ತುತ್ತಾಗುತ್ತಿದ್ದವು. ಫ್ಲಾಹರ್ಟಿ ಸೇದುತ್ತಿದ್ದ ಸಿಗರೇಟಿನ ಕಿಡಿಯಿಂದಾಗಿ ಅಷ್ಟೂ ನೆಗೆಟಿವ್‌ಗಳು ಹೊತ್ತಿ ಉರಿದುಹೋದವು. ಫ್ಲಾಹರ್ಟಿ ಸಣ್ಣ ಪುಟ್ಟ ಸುಟ್ಟಗಾಯಗಳಿಂದ ಪಾರಾದರು. ನೆಗೆಟಿವ್ ಹಾಳಾದರೂ ಪ್ರಿಂಟ್ ಉಳಿದಿತ್ತು. ಆದರೆ ಅದನ್ನು ವೀಕ್ಷಿಸಿದ ಫ್ಲಾಹರ್ಟಿಗೆ ಸಮಾಧಾನವಾಗಲಿಲ್ಲ. ಮೊದಲನೆಯದಾಗಿ ಅನೇಕ ಕುಟುಂಬಗಳ ದಿನನಿತ್ಯದ ಬದುಕು ಅಲ್ಲಿ ಚಿತ್ರಣಗೊಂಡಿತ್ತು. ಆದರೆ ಆ ಕುಟುಂಬಗಳ ಸಮಗ್ರ ಚಿತ್ರಣವೇನೂ ಇರಲಿಲ್ಲ. ದೃಶ್ಯಗಳ ನಡುವೆ ಸಂಬಂಧದ ಕುಣಿಕೆ ಹೆಣೆಯುವುದು ಸಾಧ್ಯವಾಗದೆನಿಸಿತ್ತು. ಜೊತೆಗೆ ದೀರ್ಘವಾದ ಸಿನೆಮಾ ತೆಗೆದರೆ ಪ್ರೇಕ್ಷಕರಿಗೆ ಬೋರು ಹಿಡಿಸುವುದು ಖಂಡಿತ ಎನಿಸಿತು. ''ಸಿನೆಮಾ ನೋಡಿದ ನನಗೇ ಬೋರಾಯಿತು'' ಎಂದು ಫ್ಲಾಹರ್ಟಿಯೇ ಒಂದೆಡೆ ಹೇಳಿಕೊಂಡರು. ಒಂದು ಕಥನದ ಜೊತೆಗೆ ಅಲ್ಪಾವಧಿಯ ಚಿತ್ರ ರೂಪಿಸುವುದು ದುಸ್ಸಾಧ್ಯವಾಗಿತ್ತು.

ಆದರೆ ತನಗೆ ಸುಪರಿಚಿತರಾದ ಎಸ್ಕಿಮೋ ಜನಾಂಗದ ಒಂದು ಪ್ರಾತಿನಿಧಿಕ ಕುಟುಂಬದ ಬದುಕಿನ ವಿವರಗಳನ್ನು ಜೋಡಿಸಿದರೆ ಒಳ್ಳೆಯ ಚಿತ್ರ ಖಂಡಿತಾ ಮೂಡುತ್ತದೆ ಎಂದು ಅವರಿಗೆ ಭರವಸೆ ಮೂಡಿತು.
ತಮ್ಮ ಹಂಬಲದಂತೆ ಫ್ಲಾಹರ್ಟಿ 1920ರಲ್ಲಿ ಸಿನೆಮಾವೊಂದನ್ನು ತೆಗೆಯಲು ಮತ್ತೆ ಉತ್ತರ ಪ್ರದೇಶದ ಹಿಮಗಿರಿಗೆ ನಡೆದರು. ಅವರ ಯೋಜನೆಗೆ ಚರ್ಮೋದ್ಯಮದಲ್ಲಿ ನಿರತವಾದ ಫ್ರಾನ್ಸ್‌ನ ರೆವಿಲಾನ್ ಫ್ರೆರೆಸ್ ಸಂಸ್ಥೆಯು ಹಣಕಾಸು ನೆರವು ನೀಡಿತು. ಈ ಬಾರಿ ಫ್ಲಾಹರ್ಟಿ ಕ್ಯಾಮೆರಾ ಜೊತೆಗೆ ನೆಗೆಟಿವ್‌ಗಳನ್ನು ಸಂಸ್ಕರಿಸಿ ಅಲ್ಲಿಯೇ ಪ್ರಿಂಟು ತೆಗೆಯುವ ಮತ್ತು ಚಿತ್ರವನ್ನು ಪ್ರೊಜೆಕ್ಟ್ ಮಾಡುವ ಘಟಕವನ್ನು ತೆಗೆದುಕೊಂಡು ಹೊರಟರು. ಚಿತ್ರೀಕರಣವಾದ ದೃಶ್ಯಗಳನ್ನು ಸಂಸ್ಕರಿಸಿ ಪ್ರಿಂಟು ಹಾಕಿಸಿ ಚಿತ್ರದಲ್ಲಿ ಭಾಗಿಯಾದವರಿಗೆ ತೋರಿಸುವುದು ಅವರ ಉದ್ದೇಶವಾಗಿತ್ತು. ಆ ಮೂಲಕ ತಾನು ಮಾಡುತ್ತಿರುವುದೇನು ಎಂದು ಅವರಿಗೆ ತಿಳಿಯುವಂತಾಗಿ ಅವರ ಭಾಗವಹಿಸುವಿಕೆಗೆ ಹೆಚ್ಚಿನ ಅರ್ಥ ಮೂಡುತ್ತದೆಂದು ಭಾವಿಸಿದ್ದರು. ದೃಶ್ಯಗಳನ್ನು ತೆರೆಯ ಮೇಲೆ ಕಂಡಾಗ ಎಸ್ಕಿಮೋಗಳು ಹುಚ್ಚೆದ್ದು ಕುಣಿದರು.

'ನ್ಯಾನೂಕ್......' ಚಿತ್ರಕ್ಕೆ ಕತೆಯಾಗಲೀ, ಚಿತ್ರಕತೆಯನ್ನಾಗಲೀ ಫ್ಲಾಹರ್ಟಿ ಸಿದ್ಧಪಡಿಸಿಕೊಂಡಿರಲಿಲ್ಲ. ಎಸ್ಕಿಮೋ ಸಮುದಾಯದ ಅಲ್ಲಕರಿಯಲ್ಲಕ್‌ನನ್ನು ನಾಯಕ ನ್ಯಾನೂಕ್‌ನ ಪಾತ್ರಕ್ಕೆ ಆರಿಸಿದರು. ಹಾಗೆಯೇ ಇತರ ಪಾತ್ರಗಳನ್ನು ಸಹ ಅಲ್ಲಿಂದಲೇ ಆಯ್ದು ಮಾದರಿ ಸಂಸಾರವನ್ನು ರೂಪಿಸಿದರು. ಅವರನ್ನಿಟ್ಟುಕೊಂಡು ದಿನನಿತ್ಯದ ಬದುಕನ್ನು ಚಿತ್ರಿಸುತ್ತಾ ಹೋದರೇ ಹೊರತು ಗಟ್ಟಿಯಾದ ಚಿತ್ರಕತೆಯನ್ನು ಅನುಸರಿಸಿ ಚಿತ್ರೀಕರಣ ಮಾಡಲಿಲ್ಲ. ಆದರೆ ಸಮಗ್ರವಲ್ಲದಿದ್ದರೂ ನ್ಯಾನೂಕ್‌ನ ಜೀವನ ವಿವರಗಳನ್ನು ಜೋಡಿಸಿದಾಗ, ಹಗ್ಗದ ಎಳೆಗಳು ಒಂದಾಗಿ ಹುರಿಯಾಗುವಂತೆ ಬಿಡಿ ದೃಶ್ಯಗಳೇ ಒಂದು ಅದ್ಭುತ ಕಥನವಾಗಿ ಮಾರ್ಪಟ್ಟವು. ಕತೆಯೇ ಇಲ್ಲದ ಚಿತ್ರವೊಂದು ಕಥನದ ಸ್ವರೂಪ ಪಡೆದು ಫ್ಲಾಹರ್ಟಿಯನ್ನು ಪ್ರಖ್ಯಾತಿಯ ತುತ್ತತುದಿಗೆ ತಂದು ನಿಲ್ಲಿಸಿತು.

ನ್ಯಾನೂಕ್ ಚಿತ್ರದ ಯಶಸ್ಸನ್ನು ಕಂಡ ಹಾಲಿ ವುಡ್‌ನ ನಿರ್ಮಾಣ ಸಂಸ್ಥೆ ಪ್ಯಾರಮೌಂಟ್-ಫ್ಲಾಹರ್ಟಿಯವರಿಗೆ ಷರತ್ತುರಹಿತ ಆಫರ್ ನೀಡಿತು. 'ನ್ಯಾನೂಕ್......'ನಂಥ ಚಿತ್ರವನ್ನು ಜಗತ್ತಿನ ಯಾವ ಭಾಗದಲ್ಲಿಯಾದರೂ ಚಿತ್ರೀಕರಿಸಿ ಕೊಡಬೇಕೆಂಬ ನಿಯಮ ಬಿಟ್ಟರೆ ಸಂಸ್ಥೆಯು ಬೇರಾವುದೇ ಷರತ್ತು ಹಾಕಲಿಲ್ಲ. ಪಾಲಿನೇಸಿಯನ್ ದ್ವೀಪಗಳಲ್ಲಿ ಸಮೋವಾ ದ್ವೀಪವಾಸಿಗಳ ಪರಿಚಯವನ್ನು ಪ್ರಖ್ಯಾತ ಮಾನವಶಾಸ್ತ್ರ ತಜ್ಞೆ ಮಾರ್ಗರೇಟ್ ಮೀಡ್ ಆ ವೇಳೆಗೆ ಜಗತ್ತಿಗೆ ಮಾಡಿಸಿದ್ದರು. ಸಮೋವಾ ನಿವಾಸಿಗಳ ಸ್ವಚ್ಛಂದ ಬದುಕು ಅವರ ದ್ವೀಪದ ಹತ್ತಿರವೇ ಸ್ಥಾಪನೆಯಾದ ಅಮೆರಿಕದ ನೌಕಾನೆಲೆಯಿಂದ 'ಭ್ರಷ್ಟ'ವಾಗುತ್ತಿರುವ ಬಗ್ಗೆ ಜಗತ್ತಿನ ಗಮನ ಸೆಳೆದಿದ್ದರು. ಫ್ಲಾಹರ್ಟಿ ತನ್ನ ಹೆಂಡತಿ ಫ್ರಾನ್ಸೆಸ್ ಹಾಗೂ ಮಕ್ಕಳೊಡನೆ ಸಮೋವಾ ದ್ವೀಪದ ಸಫ್ಯೂನ್ ಗ್ರಾಮದಲ್ಲಿ ಬೀಡುಬಿಟ್ಟರು. ಅಲ್ಲಿನ ಸ್ಥಳೀಯ ಬದುಕನ್ನು ಸಂಪೂರ್ಣವಾಗಿ ಚಿತ್ರೀಕರಿಸಿದರು. 'ನ್ಯಾನೂಕ್...' ಚಿತ್ರದ ಮಟ್ಟಕ್ಕೇರದಿದ್ದರೂ ಅವರು ರೂಪಿಸಿದ 'ಮೋಆನ-ಎ ರೊಮಾನ್ಸ್ ಆಫ್ ದಿ ಗೋಲ್ಡನ್ ಏಜ್' ಚಿತ್ರವು ಸಮೋವಾ ದ್ವೀಪವಾಸಿಗಳ ಪಾರಂಪಾರಿಕ ಬದುಕನ್ನು ಪರಿಚಯಿಸುವುದರಲ್ಲಿ ಯಶಸ್ವಿಯಾಗಿತ್ತು. ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಯಿತು. ಚಿತ್ರದ ನಿರ್ಮಾಣ ಅಂತಿಮ ಘಟ್ಟಕ್ಕೆ ಬಂದಾಗ, ಚಿತ್ರದ ಸಮಯ ದೀರ್ಘವಾಯಿತೆಂದು ಭಾವಿಸಿದ ಪ್ಯಾರಾಮೌಂಟ್ ಆಡಳಿತ ವರ್ಗ, ಕತ್ತರಿಯಾಡಿಸಲು ಒತ್ತಡ ತಂದಿತು. ಫ್ಲಾಹರ್ಟಿ ಅವರಿಗೆ ಸ್ಟುಡಿಯೋ ಸಂಸ್ಥೆಗಳ ನಿರ್ಮಾಣದ ಕಟ್ಟುಪಾಡುಗಳ ಕಹಿ ಅನುಭವ ಮೊದಲ ಬಾರಿಗೆ ಆಯಿತು. ಸ್ವತಂತ್ರ ಮನೋಭಾವದ, ಸಂಪೂರ್ಣ ಸ್ವಾತಂತ್ರ್ಯ ಬಯಸುತ್ತಿದ್ದ ಫ್ಲಾಹರ್ಟಿಗೆ ಮುಂದೆ ಇದೇ ಅನುಭವ 'ಎಂಜಿಎಂ' ಮತ್ತು 'ಫಾಕ್ಸ್ ಸ್ಟುಡಿಯೋ'ಗಳಿಂದಲೂ ಆಯಿತು!
ಸ್ಟುಡಿಯೋ ನಿರ್ಮಾಣದ ಕಟ್ಟಳೆಗಳಿಂದ ಬೇಸತ್ತ ಫ್ಲಾಹರ್ಟಿ ತನಗೆ ಆಫರ್ ಮಾಡಿದ ಎರಡು ಸಿನೆಮಾಗಳಿಂದ ಹಿಂದೆಗೆಯಬೇಕಾಯಿತು. ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿದ ಫ್ಲಾಹರ್ಟಿಗೆ ಅವನ ಹಳೆಯ ಗೆಳೆಯ ಮತ್ತು ಅಭಿಮಾನಿ ಜಾನ್ ಗ್ರೀರ್ಸನ್ ನೆರವಿಗೆ ಬಂದರು. ಲಂಡನ್‌ನಲ್ಲಿ ಎಂಪೈರ್ ಮಾರ್ಕೆಟಿಂಗ್ ಬೋರ್ಡ್ ಫಿಲಂ ಯೂನಿಟ್‌ನ ಮುಖ್ಯಸ್ಥನಾದ ಗ್ರೀರ್ಸನ್ ಅವರು ಬ್ರಿಟನ್‌ನ ಔದ್ಯೋಗಿಕರಣ ಕುರಿತು ಸಾಕ್ಷ್ಯಚಿತ್ರ ತಯಾರಿಸುವ ಹೊಣೆ ನೀಡಿದರು. ಫ್ಲಾಹರ್ಟಿ 'ಇಂಡಸ್ಟ್ರಿಯಲ್ ಬ್ರಿಟನ್' (1933)ಚಿತ್ರವನ್ನು ತಯಾರಿಸಿದರು. ಆದರೆ ಚಿತ್ರಕತೆ, ಚಿತ್ರದ ಅವಧಿಯ ಬಗ್ಗೆ ಎಂದೂ ಮಿತಿ ಹಾಕಿಕೊಳ್ಳದ ಫ್ಲಾಹರ್ಟಿ ಚಿತ್ರೀಕರಣಕ್ಕೆ ಸಾಕಷ್ಟು ಸಮಯ ತೆಗೆದುಕೊಂಡರು. ಬಜೆಟ್ ಮಿತಿ ಮೀರಿತ್ತು. ಚಿತ್ರೀಕರಿಸಿದ ದೃಶ್ಯಗಳು ರಾಶಿರಾಶಿಯಾಗಿ ಬಿದ್ದಿದ್ದವು. ಗ್ರೀರ್ಸನ್ ಅವರು ಫ್ಲಾಹರ್ಟಿಯನ್ನು ಯೋಜನೆಯಿಂದ ಕೈಬಿಟ್ಟು ಬೇರೆಯವರಿಂದ ಚಿತ್ರವನ್ನು ಸಂಕಲಿಸಿಕೊಂಡರು.
ಬ್ರಿಟನ್ ಸಾಮ್ರಾಜ್ಯದ ಪಾರಂಪಾರಿಕ ಕಸುಬುಗಳ ಹಿನ್ನೆಲೆಯಲ್ಲಿ ಆಧುನಿಕ ಉದ್ದಿಮೆಗಳ ಉತ್ಥಾನವನ್ನು ಎದುರುಬದುರಾಗಿಟ್ಟು ಬ್ರಿಟನ್‌ನ ಉದ್ಯಮೀಕರಣವನ್ನು ಫ್ಲಾಹರ್ಟಿಯವರು ನಿರೂಪಿಸುತ್ತಾರೆ. ತಿರುಗುವ ಗಾಳಿಯಂತ್ರದ ರಾಟೆ, ಹುಲ್ಲನ್ನು ಬಣವೆ ಮಾಡುತ್ತಿರುವ ರೈತ, ಕಾಲುವೆಯಲ್ಲಿ ನಿಂತ ದೋಣಿಯ ಚಿತ್ರಗಳು ನಿಧಾನವಾಗಿ ಮಸುಕಾಗುತ್ತಾ ಕೈಗಾರೀಕರಣದಲ್ಲಿ ದಾಪುಗಾಲಿಟ್ಟಿರುವ ಚಿತ್ರಗಳು ತೆರೆಯನ್ನು ಆಕ್ರಮಿಸಿಕೊಳ್ಳುತ್ತವೆ. ಕಲ್ಲಿದ್ದಲ ಗಣಿಯ ಧೂಳು, ಕಾರ್ಖಾನೆಯ ಹೊಗೆ, ಭುಸುಗುಡುವ, ಕಿಡಿಹಾರಿಸುವ ಉಕ್ಕಿನ ಕಾರ್ಖಾನೆಗಳು, ವಿಮಾನಗಳು-ಹೀಗೆ ಪ್ರಗತಿಯಲ್ಲಿ ದಾಪುಗಾಲು ಹಾಕುತ್ತಿರುವ ಬ್ರಿಟನ್‌ನ 'ಭಯಾನಕ ಸೌಂದರ್ಯ' ಅನಾವರಣಗೊಳ್ಳುತ್ತದೆ. ಬ್ರಿಟನ್‌ನಲ್ಲಿ ಪರಂಪರೆಯಾಗಿ ರೂಢಿಯಲ್ಲಿದ್ದ ಕೌಶಲ್ಯಗಳೇ ಆಧುನಿಕ ಕಾಲದಲ್ಲಿ ಕೈಗಾರಿಕೆಯಾಗಿ ಪರಿವರ್ತನೆಯಾಗಿ ಪರಂಪರೆಯೊಡನೆ ನಿರಂತರ ಸಂಬಂಧ ಉಳಿಸಿಕೊಂಡಿರುವುದನ್ನೂ ಹೇಳಲು ಚಿತ್ರ ಪ್ರಯತ್ನಿಸುತ್ತದೆ. ಆದರೂ ಇದು ಫ್ಲಾಹರ್ಟಿಯ ಕ್ರಿಯಾಶೀಲತೆಯನ್ನು ಬಿಂಬಿಸುವ ಚಿತ್ರವಾಗದೆ ಹೊಟ್ಟೆ ಪಾಡಿಗಾಗಿ ತೆಗೆದ 'ಬಾಡಿಗೆ ಕೆಲಸದ ಫಲ'ವಾಯಿತು.
ಬ್ರಿಟನ್‌ನಲ್ಲಿದ್ದ ಸಮಯದಲ್ಲಿ ಫ್ಲಾಹರ್ಟಿಯವರು ಮೈಖೆಲ್ ಬಾಲ್ಕನ್ ಎಂಬ ಅಧಿಕಾರಿಯನ್ನು ಭೇಟಿ ಮಾಡಿದ್ದರು. ಐರ್‌ಲ್ಯಾಂಡಿನ ಪಶ್ಚಿಮ ಕರಾವಳಿಯ ಆಚೆಗಿನ ಸಮುದ್ರದಲ್ಲಿರುವ ಆರನ್ ದ್ವೀಪಸ್ತೋಮದಲ್ಲಿನ ಸ್ಥಳೀಯರ ಬದುಕನ್ನು ದಾಖಲಿಸುವ ಚಿತ್ರಕ್ಕೆ ಫ್ಲಾಹರ್ಟಿಯ ಚಿಂತನೆ ಹರಿದಿತ್ತು. ಚಿತ್ರಕತೆಯನ್ನೇನೂ ಸಿದ್ಧಪಡಿಸಿರಲಿಲ್ಲ. ಆದರೂ ಫ್ಲಾಹರ್ಟಿ ಮಂಡಿಸಿದ ಕತೆಯನ್ನು ಕೇಳಿದ ಬಾಲ್ಕನ್ ಆ ಯೋಜನೆಗೆ ನೆರವು ನೀಡಲು ಮುಂದೆ ಬಂದರು.
 'ನ್ಯಾನೂಕ್ ಆಫ್ ದಿ ನಾರ್ತ್' ಚಿತ್ರದಂತೆಯೇ 'ಮ್ಯಾನ್ ಆಫ್ ಆರನ್' (1934) ಚಿತ್ರವು ಒಂದು ಜನಾಂಗದ ಬದುಕನ್ನು ಹೇಳುವ ಚಿತ್ರ. ಐರ್‌ಲ್ಯಾಂಡ್‌ನ ಪಶ್ಚಿಮ ಕರಾವಳಿಗೆ ಅಂಟಿಕೊಂಡ ಸಮುದ್ರದಲ್ಲಿರುವ ಆರನ್ ದ್ವೀಪಗಳ ಜನರು ಖಂಡ ಪ್ರದೇಶದಿಂದ ಪ್ರತ್ಯೇಕವಾಗಿ ಉಳಿದವರು. ಹದಿನೇಳನೇ ಶತಮಾನದಲ್ಲಿ ವಲಸೆ ಹೋಗಿ ನೆಲೆಯಾದವರು. ಬರೀ ಬಂಡೆಗಳೇ ತುಂಬಿದ ದ್ವೀಪ. ಸುತ್ತಲೂ ಭೋರ್ಗರೆವ ಸಮುದ್ರ. ಜೊತೆಗೆ ಸಾವಿಗೆ ಆಹ್ವಾನ ನೀಡುವಂಥ ಕಡಿದಾದ ಬಂಡೆಗಳು. ಬಂಡೆಗಳ ಮೇಲೆ ಚಿಗುರೊಡೆಸುವ ಅಲ್ಲಿನ ಜನರ ಹೋರಾಟದ ಬದುಕು ಇಡೀ ಚಿತ್ರವನ್ನು ಆವರಿಸಿಕೊಂಡಿದೆ. ಎಲ್ಲಿ ನೋಡಿದರೂ ಬಿಸಿಲಿಗೆ ಕಾಯ್ದ ಬಂಡೆಗಳು. ಸಮುದ್ರದಲ್ಲಿ ಬೆಳೆಯುವ ಕಳೆಯನ್ನು ಸಂಗ್ರಹಿಸಿ ಬೆನ್ನಿನ ಮೇಲೆ ಕುಕ್ಕೆಯಲ್ಲಿ ಹೊತ್ತು ಬಂಡೆಯನ್ನೇರುವ ಹೆಂಗಸರು. ಸುತ್ತಿಗೆಯಿಂದ ಬಂಡೆಯನ್ನೇ ಪುಡಿಮಾಡಿ ಮಟ್ಟಸ ಮಾಡುವ ಗಂಡಸರು. ಬಂಡೆಯಲ್ಲೇ ಮಾಡಿದ ಪಾತಿಗಳಲ್ಲಿ ಕಳೆಯನ್ನು ಸಮತಟ್ಟವಾಗಿ ಹರಡಿ ಜೈವಿಕ ಹಾಸುಗೆಯನ್ನು ಮಾಡುವ ದೇಸೀ ಕೌಶಲ್ಯ. ಬಂಡೆಯ ಕೊರಕಲುಗಳಲ್ಲಿ ಸಂಗ್ರವಾದ ಹುಡಿಮಣ್ಣನ್ನು ಸಂಗ್ರಹಿಸಿ ತಂದು ಕಳೆಯ ಹಾಸುಗೆಯ ಮೇಲೆ ಹರಡಿ ಫಲವತ್ತಾದ 'ನೆಲ'ವನ್ನು ಮಾಡಿ ಅದರಲ್ಲಿ ಆಲೂಗಡ್ಡೆ ಬೀಜ ಬಿತ್ತಿ ಬೆಳೆಯುವ ಸ್ಥಳೀಯರ ಕೃಷಿ ಜ್ಞಾನ. ಅಪಾಯಕಾರಿ ಬಂಡೆಯ ತುತ್ತತುದಿಯಲ್ಲಿ ಕೂತು ಪಾತಾಳಕ್ಕೆ ದಾರವನ್ನು ಎಸೆದು ಮೀನು ಹಿಡಿಯುವ ಮಕ್ಕಳ ಸಾಹಸ. ತಮ್ಮ ಬದುಕಿಗೆ ಬೇಕಾದ ಅನೇಕ ಅವಶ್ಯಕತೆಗಳನ್ನು ಪೂರೈಸುವ ಶಾರ್ಕ್ ಮೀನನ್ನು ಬೇಟೆಯಾಡುವ ಗುಂಪು. ಮೀನು ಬೇಟೆಗೆ ಹೋದವರು ಹಿಂದಿರುಗುವಾಗ ಭಯಂಕರ ಅಲೆಗಳ ಹೊಯ್ದೆಟದಲ್ಲಿ ಸಾವಿನೊಡನೆ ಸೆಣಸುವ ಸಾಹಸ. ಕೆರಳಿದಾಗ ನೂರಾರು ಅಡಿ ಎತ್ತರಕ್ಕೆ ನೊರೆಯಲೆಗಳನ್ನು ಚಿಮ್ಮಿಸುವ ಸಮುದ್ರದ ರುದ್ರನರ್ತನವನ್ನು ನೋಡುತ್ತಲೇ ಬೇಟೆಗೆ ಹೋದ ಗಂಡಸರನ್ನು ಕಾಯುತ್ತಾ ಕೂರುವ ಹೆಂಗಸರು, ಮಕ್ಕಳು-ಹೀಗೆ ಒಂದು ದ್ವೀಪದ ಜನರ ದೈನಂದಿನ ಬದುಕಿನ ವಿವರಗಳ ಮೂಲಕವೇ ರೋಮಾಂಚನಕಾರಿಯಾದ ಕಥನವನ್ನು ಫ್ಲಾಹರ್ಟಿ ಈ ಚಿತ್ರದಲ್ಲಿ ಹೆಣೆದಿದ್ದಾರೆ. ಇದರ ಜೊತೆಗೆ ನಾಡದೋಣಿಯಲ್ಲಿ ಕುಳಿತು ಈಟಿಗಾಳವನ್ನು ಪ್ರಯೋಗಿಸಿ ಶಾರ್ಕ್ ಮೀನನ್ನು ಬೇಟೆಯಾಡುವ ದೃಶ್ಯಗಳಂತೂ ಮೈನವಿರೇಳಿಸುತ್ತವೆ. ನನ್ನ ಪಾಲಿಗೆ ಸ್ಪೀಲ್‌ಬರ್ಗ್‌ನ 'ಜಾಸ್' ಸಿನೆಮಾದಲ್ಲಿರುವ ಶಾರ್ಕ್ ಜೊತೆಗಿನ ಸೆಣೆಸಾಟಕ್ಕಿಂತಲೂ '...ಆರನ್' ಚಿತ್ರದ ಶಾರ್ಕ್ ಬೇಟೆಯೇ ಹೆಚ್ಚು ಪ್ರಿಯ. ಎಷ್ಟೇ ಆದರೂ ಸ್ಪೀಲ್‌ಬರ್ಗ್‌ನ ಶಾರ್ಕ್ ಕೃತಕವಾದದ್ದಲ್ಲವೆ? ಫ್ಲಾಹರ್ಟಿ ಈ ಚಿತ್ರಕ್ಕಾಗಿ ನಿಜವಾದ ಶಾರ್ಕ್ ಬೇಟೆಯನ್ನೇ ಮಾಡಿಸಿದ್ದರು. ಅಷ್ಟೇ ಅಲ್ಲ ಕೊನೆಯ ದೃಶ್ಯಗಳಲ್ಲಿ ಸಮುದ್ರದ ಅಲೆಗಳ ಭಯಾನಕ ನರ್ತನದಲ್ಲಿ ಸಿಕ್ಕಿಕೊಂಡ ನಾಡದೋಣಿಯಲ್ಲಿದ್ದ ಮೂವರು ಸಹಾಯಕ್ಕಾಗಿ ಕೂಗಿಕೊಂಡರೂ ರಕ್ಷಣೆಗೆ ಧಾವಿಸದೆ ಚಿತ್ರೀಕರಣವನ್ನು ಮುಗಿಸಿದ್ದರು. ಮನುಷ್ಯನು ಅಸ್ತಿತ್ವಕ್ಕಾಗಿ ನಿಸರ್ಗದೊಡನೆ ಹೂಡುವ ಯುದ್ಧದ ಅನೇಕ ಮುಖಗಳನ್ನು ಪರಿಚಯಿಸಿದ ಫ್ಲಾಹರ್ಟಿ 'ಮ್ಯಾನ್ ಆಫ್ ಆರನ್' ಮೂಲಕ ಮತ್ತೆ ತಮ್ಮ ಖ್ಯಾತಿಯನ್ನು ನವೀಕರಿಸಿದರು. ಜಾನ್ ಗ್ರೀರ್ಸನ್‌ರವರು ಈ ಚಿತ್ರವನ್ನು ನೋಡಿದ ನಂತರವೇ ಅದನ್ನು ವಿವರಿಸಲು 'ಡಾಕ್ಯುಮೆಂಟರಿ' ಎಂದು ಕರೆದರೆಂದು ಒಂದು ಮೂಲ ಹೇಳುತ್ತದೆ. ಅದಾಗಲೇ ನಿಜ ಬದುಕಿನ ವಿವರಗಳನ್ನು ದಾಖಲಿಸುವ ಅನೇಕ ಚಿತ್ರಗಳು ತಯಾರಾಗಿದ್ದವು. 1920ರಲ್ಲಿಯೇ 'ನ್ಯಾನೂಕ್ ಆಫ್ ದಿ ನಾರ್ತ್' ಚಿತ್ರವನ್ನು ತೆಗೆದ ಫ್ಲಾಹರ್ಟಿಯನ್ನೇ ಡಾಕ್ಯುಮೆಂಟರಿ ಪ್ರಕಾರದ ಪಿತಾಮಹನೆಂದು ಅಂಗೀಕರಿಸಲಾಯಿತು.

Writer - ಕೆ. ಪುಟ್ಟಸ್ವಾಮಿ

contributor

Editor - ಕೆ. ಪುಟ್ಟಸ್ವಾಮಿ

contributor

Similar News