‘ನಮ್ಮ ಅಂಗಡಿ’ ಪ್ರದರ್ಶನ -ಮಾರಾಟ ಮೇಳಕ್ಕೆ ಚಾಲನೆ

Update: 2022-04-08 15:16 GMT

ಉಡುಪಿ : ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (ಎಂಐಸಿ) ಸ್ನಾತಕೋತ್ತರ ವಿಭಾಗದ ವತಿಯಿಂದ ಕುಂದಾಪುರದ ನಮ್ಮ ಭೂಮಿ ಮತ್ತು ಕನ್ಸರ್ನ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಹಯೋಗದಲ್ಲಿ ಮಣಿಪಾಲ ಎಂಐಸಿ ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ‘ನಮ್ಮ ಅಂಗಡಿ’ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಶುಕ್ರವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಕಳೆದ ೧೯ ವರ್ಷಗಳಿಂದ ಇಂತಹ ಉದಾತ್ತ ಉದ್ದೇಶವನ್ನು ಕೈಗೊಂಡಿರುವ ಸಂಸ್ಥೆ ಮತ್ತು ನಮ್ಮ ಭೂಮಿಯೊಂದಿಗೆ ಅವರ ಒಡನಾಟವನ್ನು ಅಭಿನಂದನೀಯವಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸು ವಲ್ಲಿ ಸಂವಹನ ವಿಭಾಗವು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕಿ ಡಾ.ಪದ್ಮಾರಾಣಿ ವಹಿಸಿದ್ದರು. ಕನ್ಸರ್ನ್ ಫಾರ್ ವರ್ಕಿಂಗ್ ಚಿಲ್ಡ್ರನ್ ಇದರ ಸಹಾಯಕ ನಿರ್ದೇಶಕ ಶಿವಾನಂದ ಶೆಟ್ಟಿ ಮಾತನಾಡಿದರು.

ಕಾರ್ಯಕ್ರಮದ ಪ್ರಾಯೋಜಕರಾದ ಐಡಿಪಿ ಕಂಪನಿಯ ಮುಖ್ಯಸ್ಥ ಶಿಜೋ ಮನ್ ಯೇಸುದಾಸ್ ಹಾಗೂ ಸೆಲ್ಕೊ ಸಿಇಒ ಗುರುಪ್ರಕಾಶ್ ಶೆಟ್ಟಿ, ಕಾರ್ಯ ಕ್ರಮ ಸಂಯೋಜಕಿ ಸೌಪರ್ಣಿಕಾ ಅತ್ತಾವರ ಉಪಸ್ಥಿತರಿದ್ದರು. ವಿದ್ಯಾರ್ಥಿ ಯೋಜನಾ ವ್ಯವಸ್ಥಾಪಕ ಷಣ್ಮುಖ ಅನಗ್ ಸ್ವಾಗತಿಸಿದರು. ಉರ್ಬಿ ಚಂದಾ ವಂದಿಸಿದರು.

ಡಿಸಿಯಿಂದ ಉತ್ಪನ್ನ ಖರೀದಿ: ಬಳಿಕ ನಮ್ಮ ಅಂಗಡಿಯ ವಿವಿಧ ಉತ್ಪನ್ನಗಳನ್ನು ವೀಕ್ಷಿಸಿ, ದರ ವಿಚಾರಿಸಿ, ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಅರಿತುಕೊಂಡ ಜಿಲ್ಲಾಧಿಕಾರಿ, ಮಗಳು, ಪುಟ್ಟ ಮಗನಿಗಾಗಿ ಪರಿಸರ ಪೂರಕ ಬಟ್ಟೆ ಖರೀದಿಸಿ ಪ್ರೋತ್ಸಾಹಿಸಿದರು.

ಪ್ರದರ್ಶನದಲ್ಲಿ ಹಪ್ಪಳ, ಸೆಂಡಿಗೆ, ಶ್ಯಾವಿಗೆ, ಪುನರ್ಪುಳಿ, ಗೋಡಂಬಿ, ಲಕ್ಷ್ಮಣ ಫಲ, ಮುಡಿ, ತಿರಿ, ಖಾದಿ ಬಟ್ಟೆ ಬರೆ, ಲಾವಂಚ ಬೇರಿನಿಂದ ಮಾಡಿದ ದೇವರ ಕಲಾಕೃತಿಗಳು ಕಣ್ಮನ ಸೆಳೆಯುತ್ತಿವೆ. ಪೇಪರ್ ಕವರ್, ನಿರುಪಯುಕ್ತ ಬಟ್ಟೆ ಯಿಂದ ಮಾಡಿದ ನೆಲ ಒರಸು, ಮರದ ಆಟಿಕೆ, ತುರಿಮಣೆ, ಮಣ್ಣಿನ ಪಾತ್ರೆ ವೈವಿಧ್ಯಘಿ, ಹೂಜಿ, ಬಿದಿರಿನ ಲೋಟ, ಕೀ ಚೇನ್, ಪೆನ್/ಮೊಬೈಲ್ ಸ್ಟ್ಯಾಂಡ್, ಮಣ್ಣಿನ ಆಮೆ, ಗಾಂಧೀಜಿ ತತ್ವ ಪ್ರತಿಪಾದಿಸುವ ಮಂಗ, ಮಣ್ಣಿನ ಲಾಂಟಾನು ಆಕರ್ಷಣೀಯವಾಗಿದೆ.

ಈಸಿಚೇರ್, ಮರದ ಗೂಡುದೀಪ ಮಾತ್ರವಲ್ಲ ನನ್ನ ಮತ ಮಾರಾಟಕ್ಕಿಲ್ಲ ಎನ್ನುವ ಜಾಗೃತಿ ಮಾಹಿತಿ ಸಹಿತ ಮಕ್ಕಳ ಪರ ಅಭಿಯಾನದ ಸಾಹಿತ್ಯವೂ ಇಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News