ಪುಲ್ವಾಮಾದಲ್ಲಿ ಉಗ್ರರಿಂದ ಆರ್‌ಪಿಎಫ್ ಹೆಡ್‌ಕಾನ್‌ಸ್ಟೇಬಲ್ ಹತ್ಯೆ, ಎಸ್‌ಐಗೆ ಗಾಯ

Update: 2022-04-19 22:25 IST
  • whatsapp icon

ಶ್ರೀನಗರ, ಎ.19: ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್)ಯ ಹೆಡ್‌ಕಾನಸ್ಟೇಬಲ್ ಓರ್ವರನ್ನು ಹತ್ಯೆಗೈದಿದ್ದಾರೆ. ಮೃತರ ಜೊತೆಯಲ್ಲಿದ್ದ ಸಬ್-ಇನ್ಸ್‌ಪೆಕ್ಟರ್ ಗಾಯಗೊಂಡಿದ್ದಾರೆ.

ಸೋಮವಾರ ಸಂಜೆ ಆರ್‌ಪಿಎಫ್ ಸಿಬ್ಬಂದಿಗಳು ಪುಲ್ವಾಮಾದ ಕಾಕಾಪೋರ ರೈಲ್ವೆ ನಿಲ್ದಾಣದ ಹೊರಗಿನ ಚಹಾದಂಗಡಿಗೆ ತೆರಳಿದ್ದಾಗ ಅವರನ್ನು ಗುರಿಯಾಗಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದು,ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಹೆಡ್ ಕಾನಸ್ಟೇಬಲ್ ಸುರಿಂದರ್ ಸಿಂಗ್ ಆ ವೇಳೆಗಾಗಲೇ ಮೃತಪಟ್ಟಿದ್ದು,ಎಸ್‌ಐ ದೇವರಾಜ ಅವರನ್ನು ವಿಶೇಷ ಚಿಕಿತ್ಸೆಗಾಗಿ ಶ್ರೀನಗರದ ಆಸ್ಪತ್ರೆಗೆ ಸಾಗಿಸಲಾಗಿದೆ.

ದಾಳಿಯ ಬೆನ್ನಿಗೇ ಜಮ್ಮು-ಕಾಶ್ಮೀರ ಪೊಲೀಸರು,ಸೇನೆ ಮತ್ತು ಅರೆಮಿಲಿಟರಿ ಪಡೆಗಳು ಪ್ರದೇಶದಲ್ಲಿ ಪ್ರವೇಶ ನಿರ್ಬಂಧಿಸಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದರೂ,ಯಾರನ್ನೂ ಬಂಧಿಸಲಾಗಿಲ್ಲ.

ದ.ಕಾಶ್ಮೀರದಲ್ಲಿ,ವಿಶೇಷವಾಗಿ ಪುಲ್ವಾಮಾದಲ್ಲಿ ಹೊರಗಿನ ಕಾರ್ಮಿಕರ ಮೇಲೆ ದಾಳಿಗಳು ಸೇರಿದಂತೆ ಉಗ್ರರ ದಾಳಿಗಳು ಹೆಚ್ಚುತ್ತಿವೆ. ಈ ದಾಳಿಗಳಲ್ಲಿ ಏಳು ವಲಸೆ ಕಾರ್ಮಿಕರು ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News