ಓ ಮೆಣಸೇ...

Update: 2022-05-01 19:30 GMT

ಕಾಂಗ್ರೆಸ್‌ನಲ್ಲಿ ಈಗ ಸಂಗೀತ ಕುರ್ಚಿ ಸ್ಪರ್ಧೆ ಆರಂಭಗೊಂಡಿದೆ -ನಳಿನ್ ಕುಮಾರ್ ಕಟೀಲು, ಸಂಸದ
ಬಿಜೆಪಿಯೊಳಗಿನ ಜಂಗೀ ಕುಸ್ತಿ ಸ್ಪರ್ಧೆಯ ಫಲಿತಾಂಶವೇನಾಯಿತು?


ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಪತ್ರಕರ್ತರ ವೈಯಕ್ತಿಕ ಅಭಿಪ್ರಾಯ ಹೇರಲು ಅವಕಾಶ ಇರಬಾರದು -ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ

ಏನಿದ್ದರೂ ಆರೆಸ್ಸೆಸ್ ಅಭಿಪ್ರಾಯವನ್ನಷ್ಟೇ ಹೇರಿ ಎನ್ನುವ ಸಲಹೆ ನೀಡುತ್ತಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರಿಡುವುದು ಬೇಡ -ಯಡಿಯೂರಪ್ಪ, ಮಾಜಿ ಸಿಎಂ
ಮಗನ ಹೆಸರಿಡುವುದಕ್ಕೆ ಶಿಫಾರಸು ಮಾಡುತ್ತಿದ್ದಾರೆಯೆ?

ಭಾರತವನ್ನು ವಿಶ್ವ ಗುರು ಮತ್ತು ಚಿನ್ನದ ಹಕ್ಕಿ ಎಂದು ಕರೆಯಲಾಗುತ್ತಿದೆ -ಥಾವರ್‌ಚಂದ್ ಗೆಹ್ಲೋಟ್, ರಾಜ್ಯಪಾಲ
ಮಠದ ಸ್ವಾಮಿಗಳು ತಮ್ಮನ್ನು ತಾವು ಜಗದ್ಗುರು ಎಂದು ಕರೆದಂತೆ.

ಹಾಗೆಯೇ ಅದಾನಿ, ಅಂಬಾನಿ ಪಾಲಿಗೆ ಭಾರತ ಚಿನ್ನದ ಹಕ್ಕಿಯೇ ಸರಿ. ಎಲ್ಲ ಪಕ್ಷಗಳಲ್ಲೂ ಹಗರಣ ಮಾಡುವವರು ಇದ್ದೇ ಇರುತ್ತಾರೆ -ಜಗದೀಶ್ ಶೆಟ್ಟರ್, ಮಾಜಿ ಸಿಎಂ
ನಿಮ್ಮದೂ ಬೇರೆ ಪಕ್ಷಗಳಿಗೆ ಭಿನ್ನ ಅಲ್ಲ ಎಂದಾಯಿತು.


ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದವರನ್ನೇ ತನಿಖೆಗೆ ಒಳಪಡಿಸುವುದು 'ನಾ ಕಳ್ಳ ಪರರ ನಂಬ' ಎಂಬಂತಾಗಿದೆ -ಸಿದ್ದರಾಮಯ್ಯ, ಮಾಜಿ ಸಿಎಂ
ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತುವುದೇ ದೇಶದ್ರೋಹದ ಕೆಲಸವೆಂದು ಘೋಷಿಸಲಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ವಿಧಾನ ಸಭೆಗೆ ಹುಣಸೂರಿನಲ್ಲಿ ಸ್ಪರ್ಧಿಸಿದರೆ ಅವರನ್ನು ಗೆಲ್ಲಿಸುತ್ತೇವೆ -ಎಚ್.ವಿಶ್ವನಾಥ್, ವಿ.ಪ. ಸದಸ್ಯ
ಕಷ್ಟವೇನೂ ಇಲ್ಲ. ನೀವು ಅವರ ಎದುರು ಸ್ಪರ್ಧಿಸಿದರೆ ಸಾಕು.

ಯುದ್ಧದಲ್ಲಿ ಗುರಿ ಸಾಧಿಸಲು ರಶ್ಯ ವಿಫಲವಾಗಿದೆ, ಉಕ್ರೇನ್ ಯಶಸ್ವಿಯಾಗುತ್ತಿದೆ -ಆ್ಯಂಟನಿ ಬ್ಲಿಂಕೆನ್, ಅಮೆರಿಕ ವಿದೇಶಾಂಗ ಕಾರ್ಯದರ್ಶಿ
ಈ ಯುದ್ಧದಲ್ಲಿ ಗೆದ್ದದ್ದು ಅಮೆರಿಕ ಮತ್ತು ಯುರೋಪ್ ಎನ್ನುವುದು ಜಗತ್ತಿಗೆ ಗೊತ್ತಿದೆ.

ಜಾತಿ-ಧರ್ಮದ ಹೆಸರಲ್ಲಿ ವ್ಯಾಪಾರಕ್ಕೆ ನಿಬಂಧನೆ ಹಾಕುವುದು ಒಳ್ಳೆಯದಲ್ಲ -ಬಿ.ಎ.ಶರವಣ, ವಿ.ಪ. ಮಾಜಿ ಸದಸ್ಯ
ಇಲ್ಲಿ ಜಾತಿ, ಧರ್ಮವೇ ಒಂದು ವ್ಯಾಪಾರವಾಗಿದೆ.

ರಾಜ್ಯದ ಯಾವುದೇ ಶಾಲೆಗಳಲ್ಲಿ ಧರ್ಮಗ್ರಂಥಗಳ ಬೋಧನೆಗೆ ಅವಕಾಶ ಇಲ್ಲ -ಬಿ.ಸಿ.ನಾಗೇಶ್, ಸಚಿವ
ತರಗತಿಗಳ ಪಠ್ಯ ಪುಸ್ತಕಗಳನ್ನು ಬೋಧಿಸುವುದಕ್ಕೇ ಶಿಕ್ಷಕರ ಕೊರತೆಯಿರುವಾಗ, ಧರ್ಮ ಗ್ರಂಥ ಬೋಧನೆಗೆ ಯಾರನ್ನು ತರುವುದು?


ಶ್ರೀ ನಾರಾಯಣ ಗುರುಗಳ ಸಂದೇಶವನ್ನು ಎಲ್ಲರೂ ಪಾಲಿಸಿದರೆ ಜಗತ್ತಿನ ಯಾವೊಂದು ಶಕ್ತಿಯೂ ಭಾರತವನ್ನು ವಿಭಜಿಸಲು ಸಾಧ್ಯವಿಲ್ಲ -ನರೇಂದ್ರ ಮೋದಿ, ಪ್ರಧಾನಿ
ಅದಕ್ಕಾಗಿಯೇ ಕಳೆದ ಗಣ ರಾಜ್ಯೋತ್ಸವದಲ್ಲಿ ನಾರಾಯಣ ಗುರು ಟ್ಯಾಬ್ಲೋಗೆ ಅವಕಾಶ ನಿರಾಕರಿಸಲಾಯಿತೆ?

10 ವರ್ಷಗಳಿಂದ ವಿಶ್ವದಲ್ಲಿ ಏನಾಗುತ್ತಿದೆ ಎಂಬುದನ್ನು ಯುರೋಪ್ ಗಮನಿಸಿಯೇ ಇಲ್ಲ -ಎಸ್.ಜೈಶಂಕರ್, ಕೇಂದ್ರ ಸಚಿವ
ಭಾರತ ಏನಾಗುತ್ತಿದೆ ಎನ್ನುವುದರ ಬಗ್ಗೆ ತಾವು ಗಮನ ಕೊಡಿ.

ಕಾಂಗ್ರೆಸ್‌ಗೆ ನಾಯಕತ್ವ ಹಾಗೂ ಸಾಮೂಹಿಕ ಇಚ್ಛಾಶಕ್ತಿಯ ಅಗತ್ಯವಿದೆ -ಪ್ರಶಾಂತ್ ಕಿಶೋರ್, ಚುನಾವಣಾ ಕಾರ್ಯತಂತ್ರ ನಿಪುಣ

ಮತ್ತು ಆ ಇಚ್ಛಾಶಕ್ತಿಯ ಹೆಸರು ಪ್ರಶಾಂತ್ ಕಿಶೋರ್ ಎನ್ನುವುದನ್ನು ನೀವು ಪ್ರತ್ಯೇಕ ಹೇಳಬೇಕಾಗಿಲ್ಲ.
ನಮ್ಮ ಇಲಾಖೆಗೆ ಕಾಯಕಲ್ಪ ಕಲ್ಪಿಸಿದ್ದೇವೆ. ಬ್ರೋಕರ್‌ಗಳನ್ನು ಹೊರಹಾಕಿದ್ದೇವೆ -ವಿ.ಸೋಮಣ್ಣ, ಸಚಿವ

ಬ್ರೋಕರ್ ಕೆಲಸವನ್ನು ಸಚಿವರೇ ನಿರ್ವಹಿಸುತ್ತಿದ್ದಾರಂತೆ.
ವಿಪಕ್ಷ ನಾಯಕ ಸಿದ್ದರಾಮಯ್ಯಅಸಮರ್ಥ ರಾಜಕಾರಣಿ -ನಳಿನ್‌ಕುಮಾರ್ ಕಟೀಲು, ಸಂಸದ
ವಿಪಕ್ಷ ನಾಯಕರು ಅಸಮರ್ಥರಾಗಿರುವುದೇ ಸರಕಾರದ ವೈಫಲ್ಯಕ್ಕೆ ಕಾರಣವೇ?

ರಾಜ್ಯದ ಆರ್ಥಿಕ ಶಕ್ತಿ ಸುಭದ್ರವಾಗಿದೆ -ಬಸವರಾಜ್ ಬೊಮ್ಮಾಯಿ, ಸಿಎಂ
ಶೇ. 40 ಕಮಿಶನ್‌ಗೆ ಯಾವುದೇ ಧಕ್ಕೆಯಾಗಿಲ್ಲ ಎನ್ನುವ ಸಮಾಧಾನ.

ವೈಜ್ಞಾನಿಕ ಪ್ರಗತಿಯ ಹೆಸರಿನಲ್ಲಿ ಮನುಷ್ಯನು ಪ್ರಕೃತಿಯ ಮೊದಲ ಶತ್ರುವಾಗಿ ಪರಿಣಮಿಸಿದ್ದಾನೆ -ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ, ಧರ್ಮಸ್ಥಳ
ಅವನಿಗೆ ಅವನೇ ಶತ್ರುವಾಗಿ ಬದಲಾಗಿದ್ದಾನೆ.

ಬೊಮ್ಮಾಯಿ ಮತ್ತೆ ಸಿಎಂ ಆಗುವುದರಲ್ಲಿ ನಮ್ಮದ್ಯಾರದೂ ತಕರಾರು ಇಲ್ಲ, ಆದರೆ ಜನರನ್ನು ದರಿದ್ರ ಮಾಡುವ ಯೋಜನೆಗಳನ್ನು ಕೈ ಬಿಡಬೇಕು -ಬಸವಗೌಡ ಪಾಟೀಲ್ ಯತ್ನಾಳ್, ಶಾಸಕa
ಅದು ಅವರ ಯೋಜನೆಯಲ್ಲ, ಪ್ರಧಾನಿ ಮೋದಿಯವರ ಯೋಜನೆಯನ್ನು ಯಥಾವತ್ ಜಾರಿಗೊಳಿಸುತ್ತಿದ್ದಾರೆ.

ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಿಂದ ಬಿಜೆಪಿಯ ನಾಲ್ವರು ಶಾಸಕರು ಗೆಲುವು ಸಾಧಿಸಲಿದ್ದಾರೆ -ಕೆ.ಸಿ.ನಾರಾಯಣ ಗೌಡ, ಸಚಿವ
ಇವಿಎಂ ಹ್ಯಾಕರ್‌ಗಳ ಮೇಲೆ ಅಷ್ಟೊಂದು ಭರವಸೆ.

ನಮ್ಮ ಧರ್ಮ, ಸಂಸ್ಕೃತಿ ಬೆಳೆಯಬೇಕಾದರೆ ನಾವು ತ್ಯಾಗ ಮಾಡಬೇಕಾಗುತ್ತದೆ -ಎಸ್.ಅಂಗಾರ, ಸಚಿವ
ಶತಶತಮಾನಗಳಿಂದ ದಲಿತರು ತ್ಯಾಗ ಮಾಡುತ್ತಾ ಬಂದಿರುವುದು ಸಾಕಾಗುವುದಿಲ್ಲವೆ?

ಕಳೆದ 5 ವರ್ಷಗಳಿಂದ ನಮ್ಮ ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೇಗೆ ಅಭಿವೃದ್ಧಿ ಹೊಂದಿದೆ ಎಂದು ಜಗತ್ತಿಗೆ ತೋರಿಸುವ ಕೆಲಸ ನಡೆದಿದೆ -ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಸಭಾಧ್ಯಕ್ಷ
ಪ್ರಜಾಪ್ರಭುತ್ವ ವಿರೋಧಿಗಳು ಅಭಿವೃದ್ಧಿಯಾಗುತ್ತಿರುವುದನ್ನು ಜಗತ್ತು ನೋಡುತ್ತಿದೆ.

ಕೆಲವರು ನಾಲ್ಕು ಕಟ್ಟಡಗಳನ್ನು ಕಟ್ಟುವುದೇ ಶಿಕ್ಷಣ ಅಂದುಕೊಂಡಿದ್ದಾರೆ -ಅಶ್ವತ್ಥ್ ನಾರಾಯಣ, ಸಚಿವ
ಕಟ್ಟಿದ ಆ ನಾಲ್ಕು ಕಟ್ಟಡಗಳನ್ನು ಉದ್ಯಮಿಗಳಿಗೆ ಮಾರುವುದು ಶಿಕ್ಷಣವೆ?

ಹೊರದೇಶಗಳು ಕೂಡಾ ಭಾರತದಲ್ಲಿ ಬೆಳೆಯುತ್ತಿರುವ ಧಾರ್ಮಿಕ ಅಸಹಿಷ್ಣುತೆ ಬಗ್ಗೆ ಬೊಟ್ಟು ಮಾಡಿ ಮಾತನಾಡುವಂತಾಗಿದೆ -ದಿನೇಶ್ ಗುಂಡೂರಾವ್, ಶಾಸಕ
ಆದರೂ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ವಿಷಯ ಇನ್ನೂ ತಲುಪಿಲ್ಲ.

ದೇಶದ ಇತಿಹಾಸದಲ್ಲಿ ಇಂತಹ ಒಬ್ಬ ಪ್ರಧಾನಿಯನ್ನು ನಾನು ನೋಡಿರಲಿಲ್ಲ -ರಾಹುಲ್ ಗಾಂಧಿ, ಕಾಂಗ್ರೆಸ್ ಮಖಂಡ
ಅಂತಹ ಪ್ರಧಾನಿಯ ಸೃಷ್ಟಿಗಾಗಿ ಕಾಂಗ್ರೆಸ್ ಪಟ್ಟ ಕಷ್ಟವೇನು ಕಡಿಮೆಯೆ?


ಕೊರೋನ ನಾಲ್ಕನೇ ಅಲೆ ಜೂನ್‌ನಿಂದ ಅಕ್ಟೋಬರ್‌ವರೆಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ -ಡಾ.ಕೆ.ಸುಧಾಕರ್, ಸಚಿವ
ಇದು ಅಲೆಯಲ್ಲ, ಲಸಿಕೆ ಮಾಫಿಯಾ ನಡೆಸುತ್ತಿರುವ ಹಲ್ಲೆ.

ಸಂಪರ್ಕ ಭಾಷೆಯಾಗಿ ಹಿಂದಿಯನ್ನು ಬಳಸಿದರೆ ಯಾವುದೇ ತಪ್ಪಿಲ್ಲ -ಸಿ.ಟಿ.ರವಿ, ಶಾಸಕ
ಆದರೆ ನಿಮ್ಮ ಹಿಂದಿ, ಇಂಗ್ಲಿಷ್ ಕೇಳಿ ಅಳಿದುಳಿದ ಸಂಪರ್ಕಗಳೂ ಕಡಿದುಹೋಗುವ ಸಾಧ್ಯತೆಗಳಿವೆ.

ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ ಬಿಜೆಪಿಗಿದೆ ಎಂಬುದು ಇತ್ತೀಚಿನ ಕೆಲವು ವಿದ್ಯಮಾನಗಳಿಂದ ಋಜುವಾತಾಗಿದೆ -ಹಾರ್ದಿಕ್ ಪಟೇಲ್, ಗುಜರಾತ್ ಶಾಸಕ
ಕಾಂಗ್ರೆಸ್ ನಿಮ್ಮನ್ನು ಕೈ ಬಿಟ್ಟ ನಿರ್ಧಾರದ ಬಳಿಕ ಋಜುವಾತಾಗಿರಬೇಕು ಅಲ್ಲವೆ?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!