ಕಾದ ಕೆಂಡವಾದ ಭಾರತ

Update: 2022-05-01 18:32 GMT

ಹೊರಗಿನ ಧಗೆಯಿಂದ ಬಚಾವ್ ಆಗಲು ನಾವು ಮನೆ ಮನೆಗೆ ವಾತಾನುಕೂಲ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಏರ್ ಕಂಡಿಶನ್‌ಗಳು ನಮಗೇನೊ ತಂಪು ನೀಡುತ್ತವೆ. ಆದರೆ, ಹೊರಗೆ ಉಷ್ಣಾಂಶ ಹೆಚ್ಚಳಕ್ಕೆ ಕಾರಣವಾಗುತ್ತವೆ. ನಾವು ಕಟ್ಟಿಕೊಳ್ಳುವ ಮನೆಗಳಿಗೆ ಮಿತಿ ಮೀರಿ ಸಿಮೆಂಟ್ ಬಳಸುತ್ತೇವೆ. ದೊಡ್ಡ ಕಿಟಕಿಗಳಿಗೆ ಗಾಜನ್ನು ಅಳವಡಿಸುತ್ತೇವೆ. ಇವೆಲ್ಲ ಉಷ್ಣಾಂಶ ಹೆಚ್ಚಲು ಕಾರಣವಾಗಿದೆ. ಇವುಗಳ ಬದಲಾಗಿ ಸರಳ ಜೀವನ, ಕಡಿಮೆ ವೆಚ್ಚದ ಸಾದಾ ಮನೆ ನಮ್ಮ ಆದ್ಯತೆ ಆಗಬೇಕಿದೆ.



ಬೇಸಿಗೆಯ ಬಿಸಿಲಲ್ಲಿ ಉಷ್ಣಾಂಶ ಏರಿಕೆಯಾಗಿ ಸಕಲ ಜೀವ ಸಂಕುಲ ತತ್ತರಿಸುವುದು ಸಹಜ. ಆದರೆ, ಈ ವರ್ಷದ ಬಿಸಿಲ ಧಗೆ ಹಿಂದಿನಂತಿಲ್ಲ. ಅದಕ್ಕಿಂತ ಭಯಾನಕವಾಗಿದೆ. ಮಾರ್ಚ್ ತಿಂಗಳಿನಲ್ಲೇ ತನ್ನ ಪ್ರತಾಪ ತೋರಿಸಿದ ಬಿಸಿಲ ಧಗೆ ಎಪ್ರಿಲ್ ಕೊನೆಯ ವೇಳೆಗೆ ಬಹುತೇಕ ಎಲ್ಲ ಕಡೆ 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ. ಈ ಸಲದ ಮಾರ್ಚ್ ತಿಂಗಳ ಬಿಸಿಲು ಕಳೆದ 120 ವರ್ಷಗಳಲ್ಲೇ ಅತ್ಯಧಿಕ ಎಂದು ತಜ್ಞರು ಹೇಳುತ್ತಾರೆ.

ಈ ಸಲದ ಬಿಸಿಲು ಉದ್ಯಾನ ನಗರಿ ಬೆಂಗಳೂರನ್ನೂ ಬಿಟ್ಟಿಲ್ಲ. ನಾನು 1973ರಲ್ಲಿ ಅಖಿಲ ಭಾರತ ಯುವಜನ ಫೆಡರೇಶನ್ (ಎಐವೈಎಫ್) ಅಧ್ಯಯನ ಶಿಬಿರದಲ್ಲಿ ಪಾಲ್ಗೊಳ್ಳಲು ಮೊದಲ ಬಾರಿ ಬೆಂಗಳೂರು ನಗರಕ್ಕೆ ಬಂದಾಗ ಮಾರ್ಚ್ ತಿಂಗಳು.
ಆಗ ಬಿಸಿಲುನಾಡು ಬಿಜಾಪುರದಿಂದ ಬಂದ ನನಗೆ ಬೆಂಗಳೂರಿನ ಕೊರೆಯುವ ಚಳಿ ಅಚ್ಚರಿ ಉಂಟು ಮಾಡಿತ್ತು. ಬಿಜಾಪುರದಲ್ಲಿ ಧಗೆಯಿಂದ ಜನರು ತಣ್ಣೀರು ಸ್ನಾನ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಚಳಿಗೆ ಜನ ಸ್ವೆಟರ್ ಹಾಕಿಕೊಂಡು ತಲೆಗೆ ಮಂಕಿ ಕ್ಯಾಪ್ ಹಾಕಿಕೊಂಡು ಓಡಾಡುತ್ತಿದ್ದರು. ಆಗ ಬೆಂಗಳೂರಿನ ಉಷ್ಣಾಂಶ 24 ದಾಟಿರಲಿಲ್ಲ. ಈಗ ಅದು 38 ದಾಟಲು ತುದಿಗಾಲ ಮೇಲೆ ನಿಂತಿದೆ.
ಈ ಬಾರಿ ಮನುಷ್ಯನ ಮಾತ್ರವಲ್ಲ ಸಕಲ ಜೀವ ಜಂತುಗಳ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಲಿರುವ ಬಿಸಿಗಾಳಿ ಅನೇಕ ಸಾವು ನೋವುಗಳಿಗೂ ಕಾರಣವಾಗಬಹುದು ಎನ್ನಲಾಗಿದೆ. ಯಾವುದೇ ಬಯಲು ಪ್ರದೇಶದಲ್ಲಿ ದಿನವೊಂದಕ್ಕೆ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಏರಿಕೆಯಾದರೆ ಅದನ್ನು ಬಿಸಿಗಾಳಿ ಎಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಅತೀ ಹೆಚ್ಚು ಉಷ್ಣಾಂಶ ದಾಖಲಾಗಿರುವುದು (41) ಕಲಬುರಗಿಯಲ್ಲಿ. ಆದರೆ, ವಾಸ್ತವವಾಗಿ ಈ ದಾಖಲಾತಿಗಿಂಥ ಹೆಚ್ಚಿನ ಬಿಸಿಲಿನ ಧಗೆಯ ಅನುಭವ ಅಲ್ಲಿನ ಜನರಿಗೆ ಆಗುತ್ತಿದೆ.
ಕಲಬುರಗಿಯ ಬಿಸಿಲು ಸಾಕಾಗಿ ಬೆಂಗಳೂರಿಗೆ ಬಂದರೆ ಇಲ್ಲಿಯೂ ಧಗೆ ಧಗೆ. ಸಾಮಾನ್ಯವಾಗಿ ಮಾರ್ಚ್, ಎಪ್ರಿಲ್ ತಿಂಗಳಲ್ಲಿ ನಾವು ಮನೆಯಲ್ಲಿ ಫ್ಯಾನ್ ಹಾಕುತ್ತಿರಲಿಲ್ಲ. ಈಗ ಫ್ಯಾನ್ 24 ಗಂಟೆ ಹಾಕಿದರೂ ಈ ಧಗೆಯಿಂದ ತಪ್ಪಿಸಿಕೊಳ್ಳಲು ಆಗುತ್ತಿಲ್ಲ.

ಇದು ಬೆಂಗಳೂರಿನ ಕತೆ ಮಾತ್ರವಲ್ಲ ಬಂಡವಾಳಶಾಹಿ ಅಭಿವೃದ್ಧಿ ಮಾರ್ಗದ ಹುಚ್ಚು ಹೊಳೆಯಲ್ಲಿ ತೇಲಿ ಹೋಗುತ್ತಿರುವ ಭಾರತ ಉಪಖಂಡದ ಜಗತ್ತಿನ ಅನೇಕ ಕಡೆಯ ಪರಿಸ್ಥಿತಿ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಾಣವಾಯುವನ್ನು ನೀಡುವ ಮರ ಗಿಡಗಳನ್ನು ಕಡಿದು, ಕೆರೆ ಕಟ್ಟೆಗಳ ಸಮಾಧಿಯ ಮೇಲೆ ಬಡಾವಣೆಗಳನ್ನು ನಿರ್ಮಿಸಿದ ನಾವು ಬರಲಿರುವ ದಿನಗಳಲ್ಲಿ ಇನ್ನೂ ಭಾರೀ ಬೆಲೆ ತೆರಬೇಕಾಗಿ ಬಂದರೆ ಅಚ್ಚರಿಯಿಲ್ಲ.

ಜಾಗತಿಕ ರಾಜಕೀಯ ಪರಿಸ್ಥಿತಿ ಬದಲಾದ ನಂತರ ಅಂದರೆ ಜಾಗತೀಕರಣದ ಗಾಳಿ ಬೀಸ ತೊಡಗಿದ ನಂತರ ಅಭಿವೃದ್ಧಿಯ ಹೆಸರಿನಲ್ಲಿ ನೈಸರ್ಗಿಕ ಸಂಪತ್ತನ್ನು ಲಂಗು ಲಗಾಮಿಲ್ಲದೇ ದೋಚುವ ಲಾಭಕೋರ ಪ್ರವೃತ್ತಿ ಹೆಚ್ಚಾಯಿತು. ಅಂದರೆ ಎಂಬತ್ತರ ದಶಕದ ಕೊನೆಯಿಂದಲೇ ಭೂಮಿಯ ಉಷ್ಣಾಂಶ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಬಂತು.ಅದರಲ್ಲೂ ಕಳೆದ ಒಂದು ದಶಕದಲ್ಲಿ ಅಂದರೆ 2011-20 ಕಾಲಾವಧಿಯಲ್ಲಿ ಉಷ್ಣಾಂಶ ಹೆಚ್ಚುತ್ತಲೇ ಬಂತು. ಉಷ್ಣಾಂಶ ಹೆಚ್ಚಾಗುವ ಜೊತೆ ಬಿಸಿ ಗಾಳಿ ಬೀಸುತ್ತ ಮನುಷ್ಯನ ಜೀವಕ್ಕೆ ಗಂಡಾಂತರಕಾರಿಯಾಗಿ ಪರಿಣಮಿಸಿದೆ.

ಹಿಮಾಚಲ ಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳೂ ಕಡು ಬಿಸಿಲಿನಿಂದ ತತ್ತರಿಸಿವೆ.
ಈ ವರ್ಷದ ಮಾರ್ಚ್ ಮತ್ತು ಎಪ್ರಿಲ್ ಮಾತ್ರವಲ್ಲ, ಜೂನ್ ತಿಂಗಳು ಕೂಡ ಕಡು ಬಿಸಿಲಿನ ಧಗ ಧಗಿಸುವ ತಿಂಗಳುಗಳಾಗಲಿವೆ ಎಂದು ಪರಿಣಿತರು ಹೇಳುತ್ತಾರೆ. ಅದರಲ್ಲೂ ದುಡಿದುಂಡು ಬದುಕುವ ಜನರ ಪಾಲಿಗೆ ಈ ಬಿಸಿಲು ಯಾತನಾಮಯವಾಗಿ ಪರಿಣಮಿಸಿದೆ.
ಈ ವರ್ಷ ವಾತಾವರಣದಲ್ಲಿ ತೇವಾಂಶ ಕಡಿಮೆ ಆಗಿರುವುದರಿಂದ ಬಿಸಿ ಗಾಳಿಯ ಪರಿಣಾಮ ಅತ್ಯಂತ ತೀವ್ರವಾಗುವ ಸಾಧ್ಯತೆ ಇದೆ.
ಇದು ಅನೇಕ ಸಾವು ನೋವುಗಳಿಗೂ ಕಾರಣವಾಗಬಹುದು.

ಭೂಮಿಯ ಉಷ್ಣಾಂಶದ ಏರಿಕೆಗೆ ನಮ್ಮ ಮಹಾನಗರಗಳ ಆಧುನಿಕ ಐಷಾರಾಮಿ ಬದುಕಿನ ಕೊಡುಗೆಯೂ ಸಾಕಷ್ಟಿದೆ. ರಸ್ತೆ ವಿಸ್ತರಣೆ ಹೆಸರಿನಲ್ಲಿ ನೂರಾರು ವರ್ಷಗಳಿಂದ ಪ್ರಾಣವಾಯು ನೀಡುತ್ತಿದ್ದ ಮರಗಳನ್ನು ಕಡಿದು ಹಾಕಿದೆವು. ನಾವು ನಿರ್ಮಿಸಿಕೊಂಡ ಸಿಮೆಂಟಿನ ಐಷಾರಾಮಿ ಮನೆಗಳು, ಸಿಮೆಂಟ್ ರಸ್ತೆಗಳು, ನಾಲ್ಕು ಜನರಿರುವ ಕುಟುಂಬಕ್ಕೆ ನಾಲ್ಕು ವಾಹನಗಳು, ಏರ್ ಕಂಡಿಶನ್‌ಗಳು ವೈಯಕ್ತಿಕವಾಗಿ ನಮಗೆ ಸುಖದಾಯಕವಾಗಿದ್ದರೂ ಒಳಗೆ ತಂಪು ನೀಡಿ ಅವುಗಳು ಹೊರಗೆ ಬಿಡುವ ಬಿಸಿ ಗಾಳಿಯಿಂದ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ.

ಲಂಗು ಲಗಾಮಿಲ್ಲದ ಅರಣ್ಯ ನಾಶ, ನದಿಗಳ ನಾಶ, ಕೆರೆಗಳ ನಾಶ ಅಭಿವೃದ್ಧಿ ಹೆಸರಿನಲ್ಲಿ ಗಣಿಗಾರಿಕೆ ಮುಂದಿನ ನೂರಾರು ಶತಮಾನಗಳ ಪೀಳಿಗೆಗಳಿಗೆ ಸೇರಿದ ನೈಸರ್ಗಿಕ ಸಂಪತ್ತನ್ನು ಒಮ್ಮಿಂದೊಮ್ಮೆಲೆ ದೋಚಿ ಸಂಪತ್ತು ಸಂಗ್ರಹಿಸುವ ಧನ ದಾಹ ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ. ಹೀಗಾಗಿ ಓರೆನ್ ರಕ್ಷಾ ಪರದೆ ತೆಳುವಾಗುತ್ತ ಹರಿಯುತ್ತಿರುವ ಅಪಾಯಕಾರಿ ಪರಿಸ್ಥಿತಿ ಎದುರಾಗಿದೆ. ಈ ಉರಿ ಬಿಸಿಲಿಗೂ ಅದಕ್ಕೂ ಸಂಬಂಧವಿದೆ. ಆರ್ಥಿಕ ಚಟುವಟಿಕೆ ಕಾರಣದಿಂದ ಪರಿಸರವನ್ನು ಸೇರುವ ಇಂಗಾಲದ ಪ್ರಮಾಣವನ್ನು ತುರ್ತಾಗಿ ಕಡಿಮೆ ಮಾಡಬೇಕಾಗಿದೆ. ಆದರೆ, ಮುಂದುವರಿದ ಬಂಡವಾಳ ಶಾಹಿ ದೇಶಗಳು ಇದಕ್ಕೆ ತಯಾರಿಲ್ಲ.

ಹೊರಗಿನ ಧಗೆಯಿಂದ ಬಚಾವ್ ಆಗಲು ನಾವು ಮನೆ ಮನೆಗೆ ವಾತಾನುಕೂಲ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಏರ್ ಕಂಡಿಶನ್‌ಗಳು ನಮಗೇನೊ ತಂಪು ನೀಡುತ್ತವೆ. ಆದರೆ, ಹೊರಗೆ ಉಷ್ಣಾಂಶ ಹೆಚ್ಚಳಕ್ಕೆ ಕಾರಣವಾಗುತ್ತವೆ. ನಾವು ಕಟ್ಟಿಕೊಳ್ಳುವ ಮನೆಗಳಿಗೆ ಮಿತಿ ಮೀರಿ ಸಿಮೆಂಟ್ ಬಳಸುತ್ತೇವೆ. ದೊಡ್ಡ ಕಿಟಕಿಗಳಿಗೆ ಗಾಜನ್ನು ಅಳವಡಿಸುತ್ತೇವೆ. ಇವೆಲ್ಲ ಉಷ್ಣಾಂಶ ಹೆಚ್ಚಲು ಕಾರಣವಾಗಿದೆ. ಇವುಗಳ ಬದಲಾಗಿ ಸರಳ ಜೀವನ, ಕಡಿಮೆ ವೆಚ್ಚದ ಸಾದಾ ಮನೆ ನಮ್ಮ ಆದ್ಯತೆ ಆಗಬೇಕಿದೆ.

ಜಗತ್ತಿನ ಜನಸಂಖ್ಯೆ ಹೆಚ್ಚುತ್ತಲೇ ಇದೆ. ಜನಸಂಖ್ಯೆ ಹೆಚ್ಚಿದಂತೆ ಅಗತ್ಯಗಳು ಹೆಚ್ಚಾಗುತ್ತವೆ. ನೆಲದಾಳದಿಂದ ಮೇಲೆತ್ತುವ ಕಲ್ಲಿದ್ದಲು, ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಮುಂತಾದ ಇಂಧನಗಳ ಬಳಕೆ ಹೆಚ್ಚಾದಂತೆ ನೈಸರ್ಗಿಕ ಸಮತೋಲನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರ ಜೊತೆಗೆ ಕೊಳವೆಬಾವಿಗಳನ್ನು ಕೊರೆಯುವುದು ಮುಂತಾದವುಗಳಿಂದ ಉಷ್ಣಾಂಶ ಹೆಚ್ಚುತ್ತ ಹೋಗುತ್ತದೆ.

ಇದಿಷ್ಟೇ ಅಲ್ಲ, ಉಷ್ಣಾಂಶ ಹೆಚ್ಚಾಗಲು ಗಿಡ ಮರಗಳ ನಾಶವೂ ಒಂದು ಮುಖ್ಯ ಕಾರಣವಾಗಿದೆ. ಉದಾಹರಣೆಗೆ, ದಾವಣಗೆರೆ ನಗರದಲ್ಲಿ ಕಮ್ಯುನಿಸ್ಟ್ ಪಕ್ಷದ ಪಂಪಾಪತಿ ಅವರು ನಗರಸಭಾ ಅಧ್ಯಕ್ಷರಾಗಿದ್ದಾಗ ನಗರದಲ್ಲಿ ರಸ್ತೆಯ ಎರಡು ಬದಿಗೆ ಸಾವಿರಾರು ಮರ ನೆಟ್ಟು ಬೆಳೆಸಿ ವಾತಾವರಣ ತಂಪಾಗುವಂತೆ ಮಾಡಿದ್ದರು. ಆದರೆ ಈಗ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ರಸ್ತೆ ವಿಸ್ತರಣೆಗಾಗಿ ಆ ಮರಗಳನ್ನೆಲ್ಲ ಕಡಿದು ಸಿಮೆಂಟ್ ರಸ್ತೆಗಳನ್ನು ನಿರ್ಮಿಸಿರುವುದರಿಂದ ದಾವಣಗೆರೆ ಈಗ ಧಗ ಧಗಿಸುತ್ತಿದೆ.

ಬಿಸಿಲ ಧಗೆ ಹೆಚ್ಚಾಗಲು ಭೂಮಿಯ ತಾಪಮಾನ ಹೆಚ್ಚಾಗುತ್ತಿರುವುದು ಬಹು ಮುಖ್ಯ ಕಾರಣ. ಈ ಕುರಿತು ಕಳೆದ ಐದಾರು ವರ್ಷಗಳಿಂದ ವಿಜ್ಞಾನಿಗಳು ಎಚ್ಚರಿಸುತ್ತಲೇ ಇದ್ದಾರೆ. ಆದರೆ, ಅದನ್ನು ನಿಯಂತ್ರಿಸುವ ಯಾವ ಪ್ರಯತ್ನಗಳೂ ಸಫಲವಾಗುತ್ತಿಲ್ಲ. ಕಾರಣ ಲಾಭಕೋರ ಬಂಡವಾಳಶಾಹಿ ಅಭಿವೃದ್ಧಿ ಮಾರ್ಗ ಅದಕ್ಕೆ ಅಡ್ಡಿಯಾಗಿದೆ.

ಇದು ಜಗತ್ತಿನ ಇವತ್ತಿನ ವಾಸ್ತವ ಪರಿಸ್ಥಿತಿ. ತಾಪಮಾನ ಹೆಚ್ಚಳದಿಂದ ನಮಗೆ ಆಸರೆ ನೀಡಿರುವ ಭೂಮಿಯನ್ನು ಕಾಪಾಡಬೇಕೆಂದರೆ ಕ್ರೂರ ಧನ ದಾಹದ ಲಾಭಕೋರ ಬಂಡವಾಳ ಶಾಹಿ ಆರ್ಥಿಕ ಮಾರ್ಗವನ್ನು ಬಿಟ್ಟು ಸಕಲರ ಏಳಿಗೆಯ ಸಮತೆಯ ದಾರಿ ಹಿಡಿಯಬೇಕು. ಅದರೊಂದಿಗೆ ಮಾರುಕಟ್ಟೆ ಆರ್ಥಿಕತೆ ನಮ್ಮ ದುಡಿಯುವ ವರ್ಗ ಸೇರಿದಂತೆ ಸಕಲರಲ್ಲೂ ಹೆಚ್ಚಿಸಿದ ಕೊಳ್ಳುಬಾಕು ಸಂಸ್ಕೃತಿಗೆ ತಿಲಾಂಜಲಿ ನೀಡಬೇಕು. ಈ ಅಪಾಯದಿಂದ ಜಗತ್ತನ್ನು ಕಾಪಾಡಲು ಸರಳ ಜೀವನ ಮಾರ್ಗ ಕೂಡ ನಮ್ಮ ಆದ್ಯತೆ ಆಗಬೇಕು. ಅಗತ್ಯಕ್ಕಿಂತ ಹೆಚ್ಚು ಬಳಸುವುದಿಲ್ಲ ಎಂಬ ಸಂಕಲ್ಪವನ್ನು ಮಾಡಬೇಕು. ಅದೊಂದೇ ಉಳಿದ ದಾರಿ.

ದಾವಣಗೆರೆ ಮಾತ್ರವಲ್ಲ ರಾಜ್ಯದ ಬಹುತೇಕ ನಗರಗಳಲ್ಲಿ ಸಿಮೆಂಟ್ ರಸ್ತೆಗಳು ಲಕ್ಷಾಂತರ ಮರಗಳನ್ನು ನಾಶ ಮಾಡಿವೆ. ಸಿಮೆಂಟ್ ಕಾರ್ಖಾನೆ ಗಳಿಗೆ ಅನುಕೂಲ ಮಾಡಿಕೊಡಲು ಡಾಂಬರ್ ರಸ್ತೆಯ ಬದಲಾಗಿ ಸಿಮೆಂಟ್ ರಸ್ತೆಗಳು ಎಲ್ಲೆಡೆ ನಿರ್ಮಾಣವಾಗುತ್ತಿವೆ.
ಜಾಗತಿಕ ತಾಪಮಾನ ಕಡಿಮೆ ಮಾಡಲು 2015ರಲ್ಲಿ 196 ದೇಶಗಳು ಸಭೆ ನಡೆಸಿ ಇಂಧನ ಬಳಕೆಯ ಪ್ರಮಾಣವನ್ನು ಕಡಿಮೆ ಮಾಡಿ ನಿರಂತರ ಶಕ್ತಿ ಮೂಲಗಳಿಗೆ ಪ್ರಾಶಸ್ತ್ಯ ನೀಡಬೇಕು ಎಂದು ತೀರ್ಮಾನಿಸಿದವು. ಗಿಡ ಮರಗಳನ್ನು ಬೆಳೆಸುವ ತೀರ್ಮಾನ ಕೈಗೊಂಡವು. ಇದಕ್ಕಾಗಿ ವಿಶ್ವದ ಮುಂದುವರಿದ ಶ್ರೀಮಂತ ರಾಷ್ಟ್ರಗಳು 100 ಶತಕೋಟಿ ಡಾಲರ್‌ಗಳಷ್ಟು ಹಣವನ್ನು ಮತ್ತು ತಂತ್ರಜ್ಞಾನವನ್ನು ಇತರ ದೇಶಗಳಿಗೆ ಕೊಡಬೇಕೆಂಬ ತೀರ್ಮಾನ ಕೈಗೊಳ್ಳಲಾಯಿತು. ಆದರೆ, ಸಭೆಯಲ್ಲಿ ಇದಕ್ಕೆ ಒಪ್ಪಿಕೊಂಡ ಶ್ರೀಮಂತ ದೇಶಗಳು ನಂತರ ಹೊಣೆಯಿಂದ ಜಾರಿಕೊಂಡವು.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ