87ನೇ ವಯಸ್ಸಿನಲ್ಲಿ ಪಿಯುಸಿ ಪಾಸ್ ಮಾಡಿದ ಚೌತಾಲ!

Update: 2022-05-12 05:36 GMT
Editor : ನಿಕ್

ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲ ವಿಶಿಷ್ಟ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಅವರು ತನ್ನ 87ನೇ ವಯಸ್ಸಿನಲ್ಲಿ ಹತ್ತನೇ ತರಗತಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಪಾಸುಮಾಡಿದ್ದಾರೆ. ಇದಕ್ಕಾಗಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಸಹಿತ ಹಲವಾರು ರಾಜಕಾರಣಿಗಳು, ಸಿನೆಮಾ ನಟರು ಮತ್ತು ಇತರ ಕ್ಷೇತ್ರಗಳ ಗಣ್ಯರು ಅವರನ್ನು ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ. ಕಲಿಯುವುದಕ್ಕೆ ವಯಸ್ಸೆಂಬುದಿಲ್ಲ ಎಂಬರ್ಥದ ಅಬ್ದುಲ್ಲಾ ಅವರ ಟ್ವೀಟ್ ನಿಜ.

ಇತ್ತೀಚೆಗೆ ರಾಜಕಾರಣಿಯೊಬ್ಬ ಜೈಲಿನಿಂದ ಹತ್ತನೇ ತರಗತಿ ಪಾಸ್ ಮಾಡುವ ಕತೆಯಿರುವ ದಸ್‌ವೀ (ಹತ್ತನೇ) ಎಂಬ ಬಾಲಿವುಡ್ ಚಿತ್ರದಲ್ಲಿ ನಟಿಸಿದ್ದ ಅಭಿಷೇಕ್ ಬಚ್ಚನ್ ಮತ್ತು ನಿಮ್ರತ್ ಕೌರ್ ಕೂಡಾ ಚೌತಾಲ ಅವರನ್ನು ಅಭಿನಂದಿಸಿದ್ದಾರೆ. ಇದು ಬಹುಶಃ ಅವರ ಕತೆಯನ್ನೇ ಆಧರಿಸಿದ ಚಿತ್ರ ಎಂಬಂತೆ ಕಾಣುತ್ತದೆ.

ಚೌತಾಲ ಅವರು ಕಳೆದ ವರ್ಷವೇ ಹರ್ಯಾಣದ ಮುಕ್ತ ಪರೀಕ್ಷಾ ಮಂಡಳಿಯಲ್ಲಿ ಪಿಯುಸಿ ಪರೀಕ್ಷೆಗೆ ಕುಳಿತಿದ್ದರು. ಆದರೆ, ಹತ್ತನೇ ತರಗತಿಯ ಇಂಗ್ಲಿಷ್ ಪರೀಕ್ಷೆಯಲ್ಲಿ ಅವರು ಪಾಸಾಗಿಲ್ಲ ಎಂಬ ಕಾರಣಕ್ಕೆ ಆಧಿಕಾರಿಗಳು ಈ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡದೆ ಕಾದಿರಿಸಿದ್ದರು. ಇದೀಗ ಅವರು ಹತ್ತನೇ ತರಗತಿಯನ್ನು ಪಾಸುಮಾಡಿರುವುದರಿಂದ, ಎರಡೂ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗಿದೆ. ಪರೀಕ್ಷೆಯ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದ ಚೌತಾಲ, ಈಗ ನಾನೊಬ್ಬ ವಿದ್ಯಾರ್ಥಿ ಮಾತ್ರ ಎಂದು ಉತ್ತರಿಸಿದ್ದರು. ಈಗ ಅವರೇ ಈ ಫಲಿತಾಂಶವನ್ನು ಮಂಗಳವಾರ (ಮೇ 10) ಬಹಿರಂಗಪಡಿಸಿದ್ದಾರೆ. ಎರಡೂ ಪರೀಕ್ಷೆಗಳಲ್ಲಿ ಅವರು ಪ್ರಥಮ ದರ್ಜೆಯಲ್ಲಿ ಪಾಸಾಗಿರುವುದು ಮಾತ್ರವಲ್ಲ; ಬಾಕಿ ಉಳಿದಿದ್ದ ಹತ್ತನೇ ತರಗತಿಯ ಇಂಗ್ಲಿಷಿನಲ್ಲಿ 88 ಅಂಕಗಳನ್ನು ಗಳಿಸಿದ್ದಾರೆ.

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಮಗ ಅಜಯ್ ಸಿಂಗ್ ಚೌತಾಲ ಜೊತೆಗೆ ಅವರು ಹತ್ತು ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದರು. ದಿಲ್ಲಿಯ ತಿಹಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವಾಗ, ಏಕಾಏಕಿಯಾಗಿ ಅವರಿಗೆ ಹತ್ತನೇ ತರಗತಿ ಪಾಸುಮಾಡುವ ಯೋಚನೆ ಬಂತು. ಹಾಗೆ ಅವರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್ ಮುಖಾಂತರ 2017ರಲ್ಲಿ ಹತ್ತನೇ ತರಗತಿಯ ಪರೀಕ್ಷೆ ಬರೆದಿದ್ದರು. 2019ರಲ್ಲಿ ಅವರ ಪತ್ನಿ ಸ್ನೇಹಲತಾ ಅವರು ನಿಧನರಾದುದರಿಂದಾಗಿ ಅವರ ುುಂದಿನ ಕಲಿಕೆ ಮುಂದೆಹೋಯಿತು.

ಹರ್ಯಾಣದ ಅತ್ಯಂತ ಪ್ರಭಾವಿ ಮತ್ತು ಆನುಭವಿ ರಾಜಕೀಯ ಕುಟುಂಬಕ್ಕೆ ಸೇರಿದ ಓಂ ಪ್ರಕಾಶ್ ಚೌತಾಲ ಅವರು, ಭಾರತದ ಉಪಪ್ರಧಾನಿ ಮತ್ತು ಅತ್ಯಂತ ಪ್ರಭಾವಿ ರಾಜಕಾರಣಿಯಾಗಿದ್ದ ದೇವಿಲಾಲ್ ಅವರ ಮಗ. ಜನವರಿ 1, 1935ರಲ್ಲಿ ಜನಿಸಿದ ಓಂ ಪ್ರಕಾಶ್ ಚೌತಾಲ, ಹೆಚ್ಚಿನ ಶಿಕ್ಷಣ ಇಲ್ಲದೆುೂ ಮಾಡಿದ ಸಾಧನೆ ಕಡಿಮೆಯೇನಲ್ಲ.

ಹರ್ಯಾಣದ ಜಿಂಡ್ ಮತ್ತು ಉಚನ ಕ್ಷೇತ್ರಗಳಿಂದ ಶಾಸಕರಾಗಿದ್ದ ಅವರು, ಹಿಸ್ಸಾರ್‌ನಿಂದ ಲೋಕಸಭಾ ಸದಸ್ಯರೂ ಆಗಿದ್ದರು. ಮಗ ಅಭಯ್ ಸಿಂಗ್ ಚೌತಾಲ ಎಲೆನಾಬಾದ್ ಶಾಸಕರಾಗಿದ್ದು, 2014-19ರ ನಡುವೆ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿದ್ದರು. ಮೊಮ್ಮಗ ದುಶ್ಯಂತ ಚೌತಾಲ ಹರ್ಯಾಣದ ಉಪಮುಖ್ಯಮಂತ್ರಿ.

ಸ್ವತಃ ಓಂ ಪ್ರಕಾಶ್ ಚೌತಾಲ ಅವರು ಭಾರತೀಯ ಲೋಕದಳದವರಾಗಿದ್ದು, ಡಿಸೆಂಬರ್ 2, 1989ರಿಂದ ಮೇ 22, 1990; ಜುಲೈ 12, 1990ರಿಂದ ಜುಲೈ 17, 1990; ಮಾರ್ಚ್ 22, 1991ರಿಂದ ಎಪ್ರಿಲ್ 6, 1991; ಜುಲೈ 24, 1999ರಿಂದ ಮಾರ್ಚ್ 5, 2005ರ ತನಕ ಹರ್ಯಾಣದ ಮುಖ್ಯಮಂತ್ರಿಯಾಗಿದ್ದರು. ಹೆಚ್ಚಾಗಿ ಅವರು ಯುಪಿಎ ಮತ್ತು ಎನ್‌ಡಿಎಗೆ ಹೊರತಾದ ಮೂರನೇ ರಂಗದಲ್ಲೇ ಇದ್ದರು.

2008ರ ಜೂನ್‌ನಲ್ಲಿ ಚೌತಾಲ, ಅವರ ಮಗ ಅಜಯ್ ಸಿಂಗ್ ಮತ್ತು 52 ಇತರರ ಮೇಲೆ 3,206 ಶಿಕ್ಷಕರ ನೇಮಕಾತಿ ಹಗರಣದಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಅನ್ವಯ ಆರೋಪ ಹೊರಿಸಲಾಗಿತ್ತು. ಈ ಹಗರಣ 1999-2000ದಲ್ಲಿ ನಡೆದಿದ್ದು, 2013ರಲ್ಲಿ ದಿಲ್ಲಿ ನ್ಯಾಯಾಲಯವೊಂದು ಅವರಿಗೆ ಹತ್ತು ವರ್ಷಗಳ ಶಿಕ್ಷೆ ವಿಧಿಸಿತ್ತು. ನಂತರ ದಿಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಈ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.

ಅವರು ಬಹಳ ಸಮಯದಿಂದ ಪೆರೋಲ್ ಮೇಲೆ ಹೊರಗಿದ್ದರೂ, ಅವರನ್ನು ತಿಹಾರ್ ಜೈಲಿನಲ್ಲಿ ಹತ್ತು ವರ್ಷಗಳ ಶಿಕ್ಷೆಯಿಂದ ಜುಲೈ 2, 2021ರಲ್ಲಿ ಔಪಚಾರಿಕ ಕ್ರಮಗಳನ್ನು ಮುಗಿಸಿದ ನಂತರ ಅಧಿಕೃತವಾಗಿ ಬಿಡುಗಡೆಗೊಳಿಸಲಾಗಿತ್ತು.

ಅವರ ರಾಜಕೀಯ ಹಿನ್ನೆಲೆ, ಜೀವನ, ಭ್ರಷ್ಟಾಚಾರ, ಜೈಲು ಶಿಕ್ಷೆ, ಇದೀಗ ಇಳಿ ವಯಸ್ಸಿನಲ್ಲಿ ಅವರು ಹತ್ತನೇ ಮತ್ತು ಪಿಯುಸಿ ಪರೀಕ್ಷೆಯನ್ನು ಪಾಸುಮಾಡಿರುವುದು ಕೆಲವು ವಿಷಯಗಳ ಕುರಿತು ಯೋಚಿಸುವಂತೆ ಮಾಡುತ್ತದೆ. ಹೇಳಿಕೇಳಿ ಅವರು ಉತ್ತರ ಭಾರತದ ಒಂದು ತಲೆಮಾರಿನ ರಾಜಕಾರಣಿಗಳ ಪ್ರತಿನಿಧಿ. ಎಲ್ಲಾ ಫ್ಯೂಡಲ್ ಗುಣಗಳು, ಹಳ್ಳಿಯ ಚಾಕಚಕ್ಯತೆ, ಅಧಿಕಾರದಲ್ಲಿ ಮೇಲೇರುವ ಖುಬಿ, ದಕ್ಷತೆ, ಭ್ರಷ್ಟತೆ, ಛಲ, ಎಲ್ಲವೂ ಅವರಲ್ಲಿ ಮಿಳಿತವಾಗಿದ್ದವು. ಅವರು ರಾಜಕೀಯ ವ್ಯವಸ್ಥೆಯ ಭಾಗವಾಗಿದ್ದರು.

ಭಾರತದಲ್ಲಿ ಒಂದು ವಾದವಿದೆ. ಜನಪ್ರತಿನಿಧಿಯಾಗಲು ಒಂದು ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸಬೇಕು ಎಂಬುದೇ ಆ ವಾದ. ಆದರೆ, ಕಾಮರಾಜ್ ಅವರಿಂದ ಆರಂಭಿಸಿ ಅನೇಕ ಮಂದಿ- ಹೆಚ್ಚಿನ ಶಾಲಾ ಶಿಕ್ಷಣ ಇಲ್ಲದ ರಾಜಕಾರಣಿಗಳು- ದಕ್ಷತೆ ಮತ್ತು ಮುತ್ಸದ್ದಿತನಕ್ಕೆ ಹೆಸರಾಗಿದ್ದಾರೆ. ಶಾಲಾ ಶಿಕ್ಷಣವು ದಕ್ಷತೆಯನ್ನಾಗಲೀ, ಪ್ರಾಮಾಣಿಕತೆಯನ್ನಾಗಲೀ ತಂದುಕೊಡುವುದಿಲ್ಲ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬಹಳಷ್ಟು ಉನ್ನತ ಶಾಲಾ ಶಿಕ್ಷಣ ಇರುವ ಭ್ರಷ್ಟ, ವಿಚಾರಹೀನ, ಕುಟಿಲ ರಾಜಕಾರಣಿಗಳನ್ನು ನಾವು ಕಂಡಿದ್ದೇವೆ. ಇದರಲ್ಲಿ ಇರುವ ವೈರುಧ್ಯವನ್ನು ನಾವು ಗಮನಿಸಬೇಕು. ಇದು ಶಾಲಾ ಶಿಕ್ಷಣ ವ್ಯವಸ್ಥೆಯ ದೋಷವೇ ಅಥವಾ ರಾಜಕೀಯ ವ್ಯವಸ್ಥೆಯ ದೋಷವೆ?

ಚೌತಾಲ ಅವರಿಗೆ ಜೀವನದ ಈ ಹಂತದಲ್ಲಿ ಶಾಲಾ ಶಿಕ್ಷಣ ಪಡೆಯುವ ಮನಸ್ಸಾದುದಾದರೂ ಏಕೆ? ಏನೇ ಇದ್ದರೂ, ಒಂದು ವಯಸ್ಸಿನ ನಂತರ, ತಮ್ಮದೆಲ್ಲಾ ಮುಗಿಯಿತು; ಇನ್ನು ಏನು ಮಾಡಿದರೂ ಏನು ಪ್ರಯೋಜನ ಎಂದು ಯೋಚಿಸುವವರಿಗೆ ಚೌತಾಲ ಅವರು ತನ್ನ ಇಳಿ ವಯಸ್ಸಿನಲ್ಲಿಯಾದರೂ ಸವಾಲು ಹಾಕಿದ್ದು ಸಂತೋಷದ ವಿಷಯವೇ.

Writer - ನಿಕ್

contributor

Editor - ನಿಕ್

contributor

Similar News