ಶ್ರೀಲಂಕಾ ದುರಂತ: ಭಾರತ ಕಲಿಯಬೇಕಾದ ಪಾಠ
ಶ್ರೀಲಂಕಾ ವಿದ್ಯಮಾನಗಳಿಂದ ಭಾರತ ಕಲಿಯಬೇಕಾದುದು ಸಾಕಷ್ಟಿದೆ. ಕಳೆದ ಏಳು ವರ್ಷಗಳಿಂದ ಆರ್ಥಿಕವಾಗಿ ಬಿಕ್ಕಟ್ಟಿನ ಸುಳಿಗೆ ಸಿಲುಕಿರುವ ದೇಶ ಇಷ್ಟು ಬೇಗ ಶ್ರೀಲಂಕಾದಂತೆ ದಿವಾಳಿಯಾಗುವುದಿಲ್ಲ. ಕಳೆದ ಎಪ್ಪತ್ತು ವರ್ಷಗಳಿಂದ ಅಂದರೆ ನೆಹರೂ ಕಾಲದಿಂದ ಹಾಕಿದ ಭದ್ರ ಬುನಾದಿ ಅಷ್ಟು ಸುಲಭವಾಗಿ ಕೊಚ್ಚಿ ಹೋಗುವುದಿಲ್ಲ. ಆದರೆ ಧಾರ್ಮಿಕ ದುರಭಿಮಾನದ ಮೂಲಕ ದೇಶದ ನೈಜ ಆರ್ಥಿಕ, ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಹೊರಟವರು ಅಧಿಕಾರದಲ್ಲಿ ಮುಂದುವರಿದರೆ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯೂ ಇನ್ನೂ ಹದಗೆಟ್ಟರೆ ಅಚ್ಚರಿ ಪಡಬೇಕಾಗಿಲ್ಲ.
ಒಂದು ದೇಶ ಆರ್ಥಿಕವಾಗಿ ಕುಸಿದಾಗ, ಅದನ್ನು ಕಾಪಾಡಲು ಅಂಧ ರಾಷ್ಟ್ರೀಯವಾದ ಇಲ್ಲವೇ ಬಹುಸಂಖ್ಯಾತ ದಾದಾಗಿರಿ ಉಪಯೋಗಕ್ಕೆ ಬರುವುದಿಲ್ಲ ಎಂಬುದಕ್ಕೆ ನಮ್ಮ ಪಕ್ಕದ ಶ್ರೀಲಂಕಾ ಎಂಬ ದ್ವೀಪ ದೇಶ ಒಂದು ಪ್ರತ್ಯಕ್ಷ ಉದಾಹರಣೆಯಾಗಿದೆ.
ಶ್ರೀಲಂಕಾದಲ್ಲಿ ನಮ್ಮ ಆದಿತ್ಯನಾಥ್‌ನಂಥ ಬೌದ್ಧ ಧರ್ಮಗುರುವೊಬ್ಬ ಇದ್ದಾನೆ. ಆತನ ಹೆಸರು ಗುಲಕೋಡ ಜ್ಞಾನ ಸಾರ.
ಈತ ಪುಟ್ಟ ದ್ವೀಪದ ಸಿಂಹಳಿ ಜನರ ತಲೆಯಲ್ಲಿ ಜನಾಂಗೀಯ ದ್ವೇಷ ತುಂಬುತ್ತ ಬಂದ. ‘ಮುಸಲ್ಮಾನರಿಂದ, ಕ್ರೈಸ್ತರಿಂದ ದೇಶಕ್ಕೆ ಅಪಾಯವಿದೆ. ಅವರ ಜನಸಂಖ್ಯೆ ಹೆಚ್ಚಾಗುತ್ತಿದೆ’ ಎಂದೆಲ್ಲಾ ಪ್ರಚೋದನಾಕಾರಿ ಭಾಷಣ ಮಾಡುತ್ತ ಜನರನ್ನು ಅಡ್ಡ ಹಾದಿ ಹಿಡಿಸಿದ. ದೇಶದ ಆರ್ಥಿಕತೆಯನ್ನು ಹಳ್ಳ ಹಿಡಿಸಿದ ಪ್ರಧಾನಿ ಮಹಿಂದ ರಾಜಪಕ್ಸಗೆ ಕೂಡ ಇದೇ ಬೇಕಾಗಿತ್ತು. ಜನರಲ್ಲಿ ದ್ವೇಷದ ವಿಷ ಬೀಜ ಬಿತ್ತುವ ಸಂಘಟನೆಗಳಿಗೆ ಪ್ರೋತ್ಸಾಹಿಸುತ್ತ ಬಂದ ಚುನಾವಣಾ ಗೆಲುವಿಗೆ ಇದನ್ನೇ ಮೆಟ್ಟಿಲಾಗಿ ಬಳಸಿಕೊಂಡ. ಪ್ರಭುತ್ವದ ಮೇಲೆ ರಾಜಪಕ್ಸ ಕುಟುಂಬದ ಹಿಡಿತ ಬಲವಾಯಿತು. ಇನ್ನೊಂದೆಡೆ ದೇಶ ದುರ್ಬಲವಾಯಿತು.
2019ರ ಚುನಾವಣೆಯಲ್ಲಿ ರಾಜಪಕ್ಷೆ ಜಯಶಾಲಿಯಾಗಿದ್ದು ಆರ್ಥಿಕ, ಸಾಮಾಜಿಕ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಮೇಲೆ ಅಲ್ಲ. ಮುಸ್ಲಿಮ್ ಮತ್ತಿತರ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಬಹುಸಂಖ್ಯಾತ ಬೌದ್ಧರನ್ನು ಎತ್ತಿ ಕಟ್ಟಿ ಜನಾಂಗೀಯ ದುರಭಿಮಾನ ಕೆರಳಿಸಿ ಅಧಿಕಾರಕ್ಕೆ ಬಂದ ನಂತರವೂ ಆರ್ಥಿಕತೆಯ ಪುನಶ್ಚೇತನಕ್ಕೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ರಿಸರ್ವ್ ಬ್ಯಾಂಕನ್ನೇ ದಿವಾಳಿ ಮಾಡಿದ. ಇದರ ಪರಿಣಾಮವಾಗಿ ಶ್ರೀಲಂಕಾ ಇವತ್ತು ಮೇಲೇಳದಂತೆ ಪಾತಾಳಕ್ಕೆ ಕುಸಿದಿದೆ.
ಈ ವೈಫಲ್ಯವನ್ನು ಮುಚ್ಚಿಕೊಳ್ಳಲು ಒಂದೇ ಧರ್ಮ, ಒಂದೇ ಭಾಷೆ, ಒಂದೇ ಜನಾಂಗ ಎಂದೆಲ್ಲ ಭಾವನಾತ್ಮಕ ಹುಚ್ಚು ಹೊಳೆ ಹರಿಸಲು ಹೋದ ರಾಜಪಕ್ಸ ಜನರ ಆಕ್ರೋಶಕ್ಕೆ ಗುರಿಯಾಗಿ ರಾಜೀನಾಮೆ ಕೊಟ್ಟು ಪಲಾಯನ ಮಾಡಬೇಕಾಗಿ ಬಂತು.
ಏಶ್ಯ ಖಂಡದ ದಕ್ಷಿಣ ಭಾಗದಲ್ಲಿರುವ ದ್ವೀಪ ರಾಷ್ಟ್ರ ಶ್ರೀಲಂಕಾದ ಹಿಂದಿನ ಹೆಸರು ಸಿಂಹಳ. ವೆಡ್ಡಾ ಜನಾಂಗದವರು ಇಲ್ಲಿನ ಮೂಲ ನಿವಾಸಿಗಳು. ಕ್ರಿ.ಪೂ. ಆರನೇ ಶತಮಾನದಲ್ಲಿ ಭಾರತದಿಂದ ವಲಸೆ ಬಂದ ಸಿನ್ಹಾಲ ಜನಾಂಗದವರು ಇಲ್ಲಿನ ಮೂಲ ನಿವಾಸಿಗಳ ಮೇಲೆ ದೌರ್ಜನ್ಯ ನಡೆಸಿ ಇಲ್ಲಿ ನೆಲೆಯೂರಿ ಅಧಿಕಾರ ಸ್ಥಾಪಿಸಿದರು. ದೇಶಕ್ಕೆ ಸಿಂಹಳ ಎಂದು ನಾಮಕರಣ ಮಾಡಿದವರು ಕೂಡ ಇವರೇ. ಕ್ರಿ.ಶ. ಮೂರನೇ ಶತಮಾನದಲ್ಲಿ ಶ್ರೀಲಂಕಾ ಬೌದ್ಧ ಮತ ಪ್ರಚಾರದ ಮುಖ್ಯ ಕೇಂದ್ರವಾಯಿತು. ಅದೇ ಕಾಲಘಟ್ಟದಲ್ಲಿ ದಕ್ಷಿಣ ಭಾರತದ ತಮಿಳು ರಾಜರ ದಾಳಿಗೆ ಹಲವಾರು ಬಾರಿ ತುತ್ತಾದರೂ ಸಿಂಹಳೀಯರು ಮಣಿಯಲಿಲ್ಲ.
ಕ್ರಿ.ಶ. 1505ರಲ್ಲಿ ಪೋರ್ಚುಗೀಸರೊಂದಿಗೆ ಇಲ್ಲಿ ಕ್ರೈಸ್ತ ಧರ್ಮದ ಪ್ರವೇಶವಾಯಿತು. ಕ್ರಿ.ಶ. 1648ರಲ್ಲಿ ಡಚ್ಚರು ಆಕ್ರಮಿಸಿ ಹದಿನೆಂಟನೇ ಶತಮಾನದ ಕೊನೆಯವರೆಗೆ ಈ ದ್ವೀಪದ ತೀರ ಪ್ರದೇಶದಲ್ಲಿ ಆಡಳಿತ ಸ್ಥಾಪಿಸಿದರು. ನಂತರ ಬಂದ ಬ್ರಿಟಿಷರು ಈ ದ್ವೀಪ ರಾಷ್ಟ್ರವನ್ನು ಪೂರ್ಣವಾಗಿ ಆಕ್ರಮಿಸಿ ಇದನ್ನು ತಮ್ಮ ವಸಾಹತುವನ್ನಾಗಿ ಮಾಡಿಕೊಂಡರು. ಬ್ರಿಟಿಷರ ಆಡಳಿತದಲ್ಲಿ ಇದಕ್ಕೆ ಸಿಲೋನ್ ಎಂದು ನಾಮಕರಣ ಮಾಡಲಾಯಿತು. ಕಾಫಿ, ಚಹ, ರಬ್ಬರ್ ಕೃಷಿಯನ್ನು ಆರಂಭಿಸಿದ ಬ್ರಿಟಿಷರು ಈ ತೋಟಗಳಲ್ಲಿ ಕೆಲಸ ಮಾಡಲು ಭಾರತದಿಂದ ಕೆಲಸಗಾರರನ್ನು ತಂದು ನೆಲೆಗೊಳಿಸಿದರು.
ಶ್ರೀಲಂಕಾದಿಂದ ಬ್ರಿಟಿಷರು ತೆರವುಗೊಳ್ಳುತ್ತಿದ್ದಂತೆ ಅಲ್ಲಿ ಭಾರತೀಯ ವಲಸೆಗಾರರ ಸಮಸ್ಯೆ ಉಲ್ಬಣಗೊಂಡಿತು. ಇದರ ಬೆನ್ನಲ್ಲೇ ತಮಿಳರ ಪ್ರತ್ಯೇಕತೆ ಸಮಸ್ಯೆ ಉದ್ಭವವಾಯಿತು. ನಂತರ ಅದು ಪ್ರತ್ಯೇಕತಾವಾದಿ ಚಳವಳಿಯ ರೂಪ ತಾಳಿ ಈಳಂ ಹೋರಾಟ ತೀವ್ರಗೊಂಡಿತು. ಕೆಲ ವರ್ಷ ತಮಿಳು ಸಮುದಾಯದ ಉಗ್ರಗಾಮಿ ನಾಯಕ ಪ್ರಭಾಕರನ್ ದೇಶದ ಜಾಫ್ನಾ ಮತ್ತಿತರ ಕೆಲ ಭಾಗಗಳ ಮೇಲೆ ಹಿಡಿತ ಸಾಧಿಸಿದ ಸಂಗತಿ ನಂತರ ಶ್ರೀಲಂಕಾ ಸೇನೆ ಈ ಪ್ರತ್ಯೇಕತಾವಾದವನ್ನು ದಮನ ಮಾಡಿ ಪ್ರಭಾಕರನ್ ಅವರನ್ನು ಕುಟುಂಬ ಸಹಿತ ನಾಶ ಮಾಡಿದ್ದು ಎಲ್ಲರಿಗೂ ತಿಳಿದ ಸಂಗತಿ.
ಶ್ರೀಲಂಕಾದಲ್ಲಿ ಮೊದಲಿನಿಂದಲೂ ಸಿಂಹಳಿಗರದೇ ಪ್ರಾಬಲ್ಯ. ಬ್ರಿಟಿಷರು ದೇಶ ಬಿಟ್ಟು ಹೋಗುವಾಗ ಸಿಂಹಳಿಗರ ತಲೆಯಲ್ಲಿ ‘ನೀವು ಬಹುಸಂಖ್ಯಾತರು. ನೀವೇ ದೇಶದ ಮಾಲಕರು’ ಎಂಬ ಹುಳುವನ್ನು ಬಿಟ್ಟು ಹೋದರು. ಇದರಿಂದ ದುರಭಿಮಾನ ಬೆಳೆಸಿಕೊಂಡ ಸಿಂಹಳೀಯರು ಬೇರೆ ಸಮುದಾಯದವರನ್ನು ವಿಶೇಷವಾಗಿ ಬೌದ್ಧರು ಅಲ್ಲದವರನ್ನು ಕೀಳಾಗಿ ಕಾಣಲು ಶುರು ಮಾಡಿದರು. ಹೀಗಾಗಿ ಇಲ್ಲಿ ಶತಮಾನಗಳಿಂದ ನೆಲೆಸಿದ್ದ ತಮಿಳರು, ಮುಸಲ್ಮಾನರು ಮತ್ತು ಇತರ ಸಮುದಾಯಗಳಲ್ಲಿ ಅಸಮಾಧಾನ ಬೆಳೆಯಿತು. ಆರ್ಥಿಕ ಹಾಗೂ ಶೈಕ್ಷಣಿಕ ಸುಧಾರಣಾ ಕಾರ್ಯಕ್ರಮಗಳಿಂದ ತಮಿಳರನ್ನು ಹೊರಗಿಟ್ಟರು.
ತಮಿಳರ ಯಾವ ಬೇಡಿಕೆಗಳಿಗೂ ಪ್ರಭುತ್ವ ಸ್ಪಂದಿಸದಿದ್ದಾಗ ಬೇರೆ ದಾರಿ ಕಾಣದೇ ಅವರು ಉಗ್ರ ಹೋರಾಟದ ಹಿಂಸೆಯ ದಾರಿಯನ್ನು ಹಿಡಿದರು.
ಭಾರತ ಉಪಖಂಡದ ಇತರ ದೇಶಗಳಂತೆ 1948ರಲ್ಲಿ ಸ್ವಾತಂತ್ರ ಪಡೆದ ಶ್ರೀಲಂಕಾ 1972ರಲ್ಲಿ ಗಣರಾಜ್ಯವಾಯಿತು. ಆಗಲೇ ದೇಶದ ಹೆಸರು ಶ್ರೀಲಂಕಾ ಎಂದು ಬದಲಾಯಿತು.
ತಮಿಳರ ಈ ಹೋರಾಟವನ್ನು ಸೇನೆಯನ್ನು ಬಿಟ್ಟು ಹತ್ತಿಕ್ಕಿದ ನಂತರ ರಾಜಪಕ್ಸ ದೇಶದಲ್ಲಿ ಬೌದ್ಧ ಧರ್ಮಿಯರ ದುರಭಿಮಾನಿ ಚಳವಳಿಗಳಿಗೆ ಪ್ರಚೋದನೆ ನೀಡಿದ. ಸಿಂಹಳ ಸಿಂಹಳಿಗರಿಗಾಗಿ ಉಳಿದವರು ಎರಡನೇ ದರ್ಜೆಯ ಪ್ರಜೆಗಳಾಗಿ ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕು ಎಂದು ದೇಶದ ಪ್ರಧಾನಿಯೇ ಹೇಳತೊಡಗಿದ. ತನ್ನನ್ನು ಪ್ರಶ್ನಿಸಿದ ಪ್ರತಿಪಕ್ಷ ನಾಯಕರನ್ನು, ಮಾಧ್ಯಮಗಳನ್ನು, ಪತ್ರಕರ್ತರನ್ನು, ಜನಪರ ಹೋರಾಟಗಾರರನ್ನು ನಿರ್ದಯವಾಗಿ ಹತ್ತಿಕ್ಕಿ ದೇಶದ ಮೇಲೆ ರಾಜಪಕ್ಸ ಹಿಡಿತ ಸಾಧಿಸಿದರು.
ಪ್ರವಾಸೋದ್ಯಮವನ್ನೇ ಆಧರಿಸಿದ ಇಲ್ಲಿನ ಆರ್ಥಿಕತೆ ಹಳ್ಳ ಹಿಡಿದಿದೆ. ಸಾವಯವ ಕೃಷಿಯನ್ನು ಪ್ರೋತ್ಸಾಹಿಸಲು ಹೋಗಿ ಕೃಷಿ ಉತ್ಪಾದನೆಗೂ ಪೆಟ್ಟು ಬಿದ್ದಿದೆ. ಯುವಕರಿಗೆ ಉದ್ಯೋಗ ಇಲ್ಲ. ಅವರನ್ನು ಜನಾಂಗೀಯ ಹಿಂಸಾಚಾರಕ್ಕೆ ಬಳಸಿಕೊಂಡ ಬೌದ್ಧ ಧರ್ಮಗುರುಗಳ ಬಳಿಯೂ ಮತ್ತು ಪ್ರಧಾನಿ ಬಳಿಯೂ ಇದಕ್ಕೆ ಉತ್ತರವಿಲ್ಲ.
ಶ್ರೀಲಂಕಾ ವಿದ್ಯಮಾನಗಳಿಂದ ಭಾರತ ಕಲಿಯಬೇಕಾದುದು ಸಾಕಷ್ಟಿದೆ.
ಕಳೆದ ಏಳು ವರ್ಷಗಳಿಂದ ಆರ್ಥಿಕವಾಗಿ ಬಿಕ್ಕಟ್ಟಿನ ಸುಳಿಗೆ ಸಿಲುಕಿರುವ ದೇಶ ಇಷ್ಟು ಬೇಗ ಶ್ರೀಲಂಕಾದಂತೆ ದಿವಾಳಿಯಾಗುವುದಿಲ್ಲ. ಕಳೆದ ಎಪ್ಪತ್ತು ವರ್ಷಗಳಿಂದ ಅಂದರೆ ನೆಹರೂ ಕಾಲದಿಂದ ಹಾಕಿದ ಭದ್ರ ಬುನಾದಿ ಅಷ್ಟು ಸುಲಭವಾಗಿ ಕೊಚ್ಚಿ ಹೋಗುವುದಿಲ್ಲ. ಆದರೆ ಧಾರ್ಮಿಕ ದುರಭಿಮಾನದ ಮೂಲಕ ದೇಶದ ನೈಜ ಆರ್ಥಿಕ, ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಹೊರಟವರು ಅಧಿಕಾರದಲ್ಲಿ ಮುಂದುವರಿದರೆ ನಮ್ಮ ದೇಶದ ಆರ್ಥಿಕ ಪರಿಸ್ಥಿತಿಯೂ ಇನ್ನೂ ಹದಗೆಟ್ಟರೆ ಅಚ್ಚರಿ ಪಡಬೇಕಾಗಿಲ್ಲ.
ಬೌದ್ಧ ಧರ್ಮೀಯರ ಅಂಧ ರಾಷ್ಟ್ರೀಯತೆ ಹಾಗೂ ಜನಾಂಗೀಯ ದ್ವೇಷಕ್ಕೆ ಕಳೆದ ಐದಾರು ದಶಕಗಳಿಂದ ಸಾವಿರಾರು ಜನ ಬಲಿಯಾಗಿದ್ದಾರೆ. ರಾಜಪಕ್ಸ ಅಧಿಕಾರ ವಹಿಸಿಕೊಂಡ ನಂತರವಂತೂ ಹಿಂದೂಗಳು ಸೇರಿದಂತೆ ಇತರ ಧರ್ಮೀಯರ ಮಂದಿರ, ಮಸೀದಿ, ಚರ್ಚ್‌ಗಳನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡಿ ನಾಶ ಮಾಡಲಾಯಿತು. ಇದರಿಂದ ದೇಶವನ್ನು ಆರ್ಥಿಕ ದುರವಸ್ಥೆಗೆ ತಳ್ಳಿದ ರಾಜಪಕ್ಸ ಕೆಲ ಕಾಲ ಬಚಾವ್ ಆದರು ಆದರೆ ಈಗ ಪರಿಸ್ಥಿತಿ ಉಲ್ಟಾ ಆಗಿದೆ.
ಆಹಾರ ಧಾನ್ಯಗಳ ಅಭಾವ, ಅನಿಲ ಸಿಲಿಂಡರ್ ಕೊರತೆ, ಬರಿದಾಗಿರುವ ಪೆಟ್ರೋಲ್ ಬಂಕ್, ಕೈಯಲ್ಲಿ ಕಾಸಿಲ್ಲದ ಜನರ ಆಕ್ರಂದನ ಮಿತಿ ಮೀರಿದೆ. ಈ ಆರ್ಥಿಕ ದುಸ್ಥಿತಿಯಿಂದ ಶ್ರೀಲಂಕಾ ಚೇತರಿಸುವ ಸ್ಥಿತಿಯಲ್ಲಿ ಇಲ್ಲ. ಪಾತಾಳಕ್ಕೆ ಕುಸಿದ ದೇಶವನ್ನು ಮೇಲೆತ್ತುವುದು ಸುಲಭವಲ್ಲ. ಜನರ ಆಕ್ರೋಶಕ್ಕೆ ಹೆದರಿ ರಾಜಪಕ್ಸ ರಾಜೀನಾಮೆ ನೀಡಿ ಕುಟುಂಬ ಸಹಿತ ಪಲಾಯನ ಮಾಡಿದ್ದಾರೆ. ಪ್ರತಿಪಕ್ಷ ನಾಯಕ ರಣಿಲ್ ವಿಕ್ರಮ ಸಿಂಘೆ ತಾತ್ಕಾಲಿಕವಾಗಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಭಾರತದ ನೈಜ ಸಮಸ್ಯೆಗಳನ್ನು ಕಡೆಗಣಿಸಿ ಅಲ್ಪಸಂಖ್ಯಾತ ಮುಸ್ಲಿಮ್ ಮತ್ತು ಕ್ರೈಸ್ತ ಸಮುದಾಯಗಳ ವಿರುದ್ಧ ಮತ್ತು ಎಡಪಂಥೀಯರ ವಿರುದ್ಧ ಅದರಲ್ಲೂ ವಿಚಾರವಾದಿಗಳ ವಿರುದ್ಧ ಹಿಂಸೆಗೆ ಪ್ರಚೋದನೆ ನೀಡುತ್ತಾ ಮತಾಂತರ ನಿಷೇಧ, ಲವ್ ಜಿಹಾದ್, ಗೋ ಹತ್ಯೆ ನಿಷೇಧದಂಥ ಶಾಸನಗಳನ್ನು ತಂದು ಹಿಜಾಬ್, ಮೈಕ್‌ನಂಥ ವಿವಾದವನ್ನು ಕೆರಳಿಸುತ್ತ ಹೋದರೆ ಭಾರತದ ಪರಿಸ್ಥಿತಿ ಕೂಡ ಇನ್ನಷ್ಟು ಹದಗೆಡಲಿದೆ.
ಆದರೆ, ಭಾರತದ ಜನ ತಮ್ಮ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಗಳನ್ನು ಉಳಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಭರವಸೆಯ ಬೆಳಕಾಗಿದೆ.