ಪ್ರತಿರೋಧ ಎಂದರೆ ಹೇಗಿರಬೇಕು?

Update: 2022-05-23 08:42 GMT

ನಾಗರಿಕ ಸಂಘಟನೆಗಳು, ಪ್ರತಿ ಊರಿನ ಸಾರ್ವಜನಿಕರು, ಹಿರಿಯರು, ಎಲ್ಲ ಸಮುದಾಯಗಳ ಜೀವ ಪರ ಕಾಳಜಿಯ ಮನಸ್ಸುಗಳು ಒಂದಾಗಿ ಮಂಡ್ಯದ ಗೆಳೆಯರು ಮಾಡಿದಂತೆ ನಮ್ಮ ಊರಿಗೆ ಕೋಮು ಪ್ರಚೋದನಾಕಾರಿ ಭಾಷಣ ಮಾಡಿ, ಶಾಂತಿ ಕದಡುವವರನ್ನು ಊರೊಳಗೆ ಬಿಡುವುದಿಲ್ಲ ಎಂದು ಸಂಕಲ್ಪ ಮಾಡಬೇಕು. ಈ ಬಗ್ಗೆ ಜಿಲ್ಲಾಡಳಿತದ ಮೇಲೆ ಒತ್ತಡ ತರಬೇಕು. ಇಂಥ ನಾಗರಿಕ ಪ್ರಯತ್ನ ಇಂದಿನ ಅಗತ್ಯವಾಗಿದೆ.



ಇವರು ಅಧಿಕಾರಕ್ಕೆ ಬಂದು ಎಂಟು ವರ್ಷಗಳಾಗುತ್ತ ಬಂತು. ಇವರ ಕೈಯಲ್ಲಿ ಸಿಕ್ಕು ಭಾರತದ ಪರಿಸ್ಥಿತಿ ಏನಾಗಿದೆ ಎಂಬುದನ್ನು ವಿವರಿಸಬೇಕಾಗಿಲ್ಲ.ಹಿಂದೆ ವಿಜ್ಞಾನ, ತಂತ್ರಜ್ಞಾನದಲ್ಲಿ ಅದ್ಭುತ ಪ್ರಗತಿಯನ್ನು ಸಾಧಿಸಿ ಚಂದ್ರ ಗ್ರಹ, ಮಂಗಳ ಗ್ರಹದಲ್ಲಿ ನೀರು ಹುಡುಕಲು ಮುಂದಾಗುತ್ತಿದ್ದ ನಾವು ಈಗ ಮಸೀದಿಗಳಲ್ಲಿ ಶಿವಲಿಂಗಗಳನ್ನು ಹುಡುಕುತ್ತ ಹೊರಟಿದ್ದೇವೆ.
ಇದು ಇಲ್ಲಿಗೆ ಮುಗಿಯುವುದಿಲ್ಲ. ಮುಂದಿನ ಲೋಕಸಭಾ ಚುನಾವಣೆ ಯವರೆಗೂ ಮುಂದುವರಿಯುತ್ತದೆ.ಆ ನಂತರವೂ ಇದು ನಿಲ್ಲುವುದಿಲ್ಲ. ಜನರನ್ನು ಪ್ರಜ್ಞಾಹೀನರನ್ನಾಗಿ ಮಾಡಿ ದೋಚಲು ಆಳುವ ವರ್ಗಕ್ಕೆ ಇದರ ಅಗತ್ಯವಿದೆ. ಕಾರ್ಪೊರೇಟ್ ಬಂಡವಾಳಶಾಹಿ ಮತ್ತು ಮನುವಾದಿ ಹಿಂದುತ್ವವಾದಿ ಶಕ್ತಿಗಳ ಜಂಟಿ ಕಾರ್ಯಾಚರಣೆ ಇದು.
ಬಹುತ್ವ ಭಾರತದ ಎಲ್ಲವನ್ನೂ ನಿರ್ನಾಮ ಮಾಡಲು ಹೊರಟಿರುವ ಈ ವಿಧ್ವಂಸಕ ಪಡೆಯ ಕಣ್ಣು ಈಗ ಚಿಕ್ಕಬಳ್ಳಾಪುರ ಜಿಲ್ಲೆಯ ಕರ್ನಾಟಕದ ಜಲಿಯನ್‌ವಾಲಾ ಬಾಗ್ ಎಂದು ಕರೆಯಲ್ಪಡುವ ಗೌರಿಬಿದನೂರಿನ ವಿದುರಾಶ್ವತ್ಥದಲ್ಲಿರುವ ಸ್ಮಾರಕ ಗ್ಯಾಲರಿಯ ಮೇಲೆ ಬಿದ್ದಿದೆ.
ಒಂದೆಡೆ ಮಸೀದಿ, ದರ್ಗಾಗಳಲ್ಲಿ ಶಿವಲಿಂಗದ ಹುಡುಕಾಟ, ಇನ್ನೊಂದೆಡೆ ಕರ್ನಾಟಕದಲ್ಲಿ ಪಠ್ಯಪುಸ್ತಕಗಳಿಂದ ಬಸವಣ್ಣ, ನಾರಾಯಣ ಗುರು, ಭಗತ್ ಸಿಂಗ್, ವಿವೇಕಾನಂದ, ಲಂಕೇಶ್, ದೇವನೂರು, ಮೂರ್ತಿರಾಯರ ಪಾಠಗಳಿಗೆ ಕತ್ತರಿ ಪ್ರಯೋಗ. ಇದೆಲ್ಲ ನಿರಾತಂಕವಾಗಿ ನಡೆದಿದೆ. ನಾವು ಎಷ್ಟೇ ಬೊಬ್ಬೆ ಹೊಡೆದರೂ ಅದು ಅರಣ್ಯ ರೋದನವಾಗಿದೆ.

ಇದೇನು ಹೊಸದಲ್ಲ. ಅನಿರೀಕ್ಷಿತವೂ ಅಲ್ಲ. 90ರ ದಶಕದಲ್ಲಿ ಅಯೋಧ್ಯೆಯ ಬಾಬರಿ ಮಸೀದಿಯನ್ನು ಕೆಡವಿದಾಗಲೇ ದೇಶದಲ್ಲಿ ಇಂಥ 3,000 ಪ್ರಾರ್ಥನಾಲಯಗಳ ಪಟ್ಟಿಯನ್ನು ವಿಶ್ವ ಹಿಂದೂ ಪರಿಷತ್ತು ಸಿದ್ಧಪಡಿಸಿತ್ತು. ಅದರಲ್ಲೂ ಮುಖ್ಯವಾಗಿ ಮಥುರಾ, ಕಾಶಿ ವಿಮೋಚನೆಯ ಸಂಕಲ್ಪ ಮಾಡಿತ್ತು. ಅದು ಅತ್ಯಂತ ವ್ಯವಸ್ಥಿತವಾಗಿ ತನ್ನ ಕಾರ್ಯಸೂಚಿಯನ್ನು ಜಾರಿಗೆ ತರುತ್ತಲೇ ಇದೆ. ಈಗ ಮಂಡ್ಯದ ಶ್ರೀರಂಗಪಟ್ಟಣದಲ್ಲೂ ಮಸೀದಿ ಯ ಜಾಗವನ್ನು ಅಗೆಯಲು ಒತ್ತಾಯಿಸತೊಡಗಿದೆ. ಈ ರೀತಿ ಪಟ್ಟು ಹಿಡಿದು ಆಗ್ರಹಿಸುವವರೆಲ್ಲ ಶೂದ್ರ ಹುಡುಗರು. ಅವರಿಗೆ ನೀವು ಏನು ಹೇಳಿದರೂ ತಲೆಗೆ ಹೋಗುವುದಿಲ್ಲ. ಸೌಹಾರ್ದದ ಹಿತ ವಚನ ಮೊದಲೇ ಹಿಡಿಸುವುದಿಲ್ಲ.

ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ಶೈಕ್ಷಣಿಕ ಕ್ಷೇತ್ರದ ನುರಿತ, ಅನುಭವಿ ಶಿಕ್ಷಕರು ಇರಬೇಕು ಎಂಬುದನ್ನು ಕಡೆಗಣಿಸಿ ಪತ್ರಿಕೆಗಳಲ್ಲಿ ಕೋಮುವಾದಿ ವಿಷ ಹರಡುವ ಲೇಖನಗಳನ್ನು ಬರೆಯುವ ಹಾಗೂ ಪ್ರಚೋದನಕಾರಿ ಭಾಷಣ ಮಾಡುವ ಅತ್ಯಂತ ಕಳಪೆ ದರ್ಜೆಯ ಬಾಡಿಗೆ ಭಾಷಣಕಾರರನ್ನು ತುರುಕಿದ್ದರಿಂದ ಇಂಥ ಅವಾಂತರಗಳು ಉಂಟಾಗುತ್ತಿವೆ.
ಭಾರತದ ಸ್ವಾತಂತ್ರ ಹೋರಾಟ ಎಲ್ಲಾ ಜಾತಿ, ಮತಗಳ, ಭಾಷೆ ಗಳ ಜನತೆ ಒಂದಾಗಿ ನಡೆಸಿದ ಹೋರಾಟ. ಹಿಂದೂ, ಮುಸ್ಲಿಮ್, ಕ್ರೈಸ್ತ, ಜೈನ, ಬೌದ್ಧ ಹೀಗೆ ಎಲ್ಲಾ ಸಮುದಾಯಗಳ ಜನತೆ ಈ ಹೋರಾಟದಲ್ಲಿ ಪಾಲ್ಗೊಂಡಿದ್ದರು.ಇದನ್ನು ಈ ಗ್ಯಾಲರಿಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ.

ಗೌರಿಬಿದನೂರಿನ ವಿದುರಾಶ್ವತ್ಥದಲ್ಲಿ 1938ರಲ್ಲಿ ನಡೆದ ಧ್ವಜ ಸತ್ಯಾಗ್ರಹ ಸಂದರ್ಭದಲ್ಲಿ ಗೋಲಿಬಾರ್ ನಡೆದು 32 ಜನ ಸತ್ತು ಅನೇಕ ಮಂದಿ ಗಾಯಗೊಂಡರು. ಇಲ್ಲಿ ಇಂದು ಸ್ಮಾರಕ ನಿರ್ಮಾಣ ಗೊಂಡಿದೆ. ಇದರ ಭಾಗವಾಗಿ ಸಮಗ್ರ ಭಾರತದ ಸ್ವಾತಂತ್ರ ಹೋರಾಟವನ್ನು ಬಿಂಬಿಸುವ ಬೃಹತ್ ಫೋಟೊ ಗ್ಯಾಲರಿಯನ್ನು 2009ರಲ್ಲಿ ನಿರ್ಮಿಸಲಾಗಿದೆ. ಆಗಿನಿಂದ ಈ ವರೆಗೆ ಸಾವಿರಾರು ಜನ ಇಲ್ಲಿ ಭೇಟಿ ನೀಡಿದ್ದಾರೆ.
ನಾನೂ 3 ರಿಂದ 4 ಸಲ ಅಲ್ಲಿಗೆ ಹೋಗಿ ನೋಡಿ ಬಂದಿದ್ದೇನೆ. ಇದು ಪ್ರಗತಿಪರ ಲೇಖಕ ಬಿ.ಗಂಗಾಧರಮೂರ್ತಿ ಅವರ ಪರಿಕಲ್ಪನೆ ಎಂದರೆ ಅತಿಶಯೋಕ್ತಿಯಲ್ಲ. ಇಂಥದೊಂದು ಗ್ಯಾಲರಿಯನ್ನು ಮಾಡುವ ವಿಷಯವನ್ನು ಗಂಗಾಧರ ಮೂರ್ತಿ ಅವರು ಪ್ರಸ್ತಾಪಿಸಿದಾಗ, ಸ್ಥಳೀಯ ಶಾಸಕ ಶಿವಶಂಕರ ರೆಡ್ಡಿ ಬೆಂಬಲವಾಗಿ ನಿಂತರು. ನಾನು ದಿಲ್ಲಿ ಸೇರಿದಂತೆ ಬೇರೆಲ್ಲೂ ಇಂಥ ಅಪರೂಪದ ಫೋಟೊ ಗ್ಯಾಲರಿಯನ್ನು ನೋಡಿಲ್ಲ.
ಎಲ್ಲಾ ಜನ ಸಮುದಾಯಗಳ ಸ್ವಾತಂತ್ರ ಹೋರಾಟದ ಈ ಫೋಟೊ ಗ್ಯಾಲರಿ ಈಗ ಕೋಮುವಾದಿಗಳ ಹೊಟ್ಟೆಯುರಿಗೆ ಕಾರಣವಾಗಿದೆ. ಮೂರು ವಾರಗಳಿಂದ ಆರೆಸ್ಸೆಸ್, ಬಜರಂಗದಳ, ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಗ್ಯಾಲರಿಯ ಒಳಗೆ ನುಗ್ಗಿ ತಮ್ಮ ಸಿದ್ಧಾಂತಕ್ಕೆ ವಿರೋಧವಾಗಿ ರುವವರ ಚಿತ್ರಗಳನ್ನು ಹಾಕಕೂಡದು ಎಂದು ಬೆದರಿಕೆ ಹಾಕುತ್ತಿದ್ದಾರೆ. ಈ ಚಿತ್ರಗಳನ್ನು ತೆಗೆಯದಿದ್ದರೆ ಪೋಟೊ ಗ್ಯಾಲರಿಯನ್ನು ಸುಟ್ಟು ಹಾಕುವುದಾಗಿ ಹೆದರಿಸುತ್ತಿದ್ದಾರೆ. ಇವರ ವಿಧ್ವಂಸಕ ಕಾರ್ಯದ ಅರಿವಿರುವ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸದೇ ಇರಲಾಗುವುದಿಲ್ಲ.
ವಿದುರಾಶ್ವತ್ಥದ ಸ್ವಾತಂತ್ರ ಹೋರಾಟದ ಫೋಟೊ ಗ್ಯಾಲರಿಯಲ್ಲಿ ಬ್ರಿಟಿಷರ ವಿರುದ್ದ ಪ್ರಾಣ ಪಣಕ್ಕಿಟ್ಟು ಹೋರಾಡಿದ ಟಿಪ್ಪು ಸುಲ್ತಾನರ ಫೋಟೊ ಹಾಕಲಾಗಿದೆ. ಇತರ ಮುಸ್ಲಿಮ್ ಸ್ವಾತಂತ್ರ ಹೋರಾಟಗಾರರ ಫೋಟೊಗಳಿವೆ. ಇವುಗಳನ್ನು ತೆಗೆಯಬೇಕು, ಸಾವರ್ಕರ್‌ಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಇವರು ಬೆದರಿಕೆ ಹಾಕುತ್ತಿದ್ದಾರೆ.
ಹೀಗೆ ಭಾರತದ ಪ್ರತೀ ರಾಜ್ಯದಲ್ಲಿ, ಪ್ರತೀ ಜಿಲ್ಲೆಯಲ್ಲಿ, ಪ್ರತೀ ಊರಿನಲ್ಲಿ ಇತಿಹಾಸದ ತಿಪ್ಪೆಯನ್ನು ಕೆದರುತ್ತ ಯಾವುದೋ ಕಾಲದ ನಾವು ಕಂಡಿರದ ಘಟನೆಗಳಿಗೆ ಈ ಶತಮಾನದಲ್ಲಿ ಇವರು ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ. ಅಧಿಕಾರದಲ್ಲೂ ಅವರೇ ಇರುವುದರಿಂದ ಇವರಿಗೆ ಕಡಿವಾಣ ಹಾಕುವವರೇ ಇಲ್ಲದಂತಾಗಿದೆ.
ದೇಶಕ್ಕೆ ಸ್ವಾತಂತ್ರ ಬಂದಾಗ ನಡೆದ ಗಾಂಧೀಜಿ ಹತ್ಯೆಯ ನಂತರ ಇವರನ್ನು ಭಾರತ ಎಲ್ಲಿಡಬೇಕೋ ಅಲ್ಲಿಟ್ಟಿತ್ತು. ಆದರೆ ಇವರು ಮತ್ತೆ ಮುಂಚೂಣಿಗೆ ಬಂದದ್ದು ಜೆ.ಪಿ. ಚಳವಳಿಯಲ್ಲಿ. ಜಯಪ್ರಕಾಶ್ ನಾರಾಯಣರು ಇವರನ್ನು ಅಪ್ಪಿಕೊಂಡು, ಒಪ್ಪಿಕೊಂಡು ಮತ್ತೆ ಮಾನ್ಯತೆ ತಂದು ಕೊಟ್ಟರು.
ಆ ನಂತರ ಬಾಬರಿ ಮಸೀದಿಯನ್ನು ಕೆಡವಿ ಇವರು ತಮ್ಮ ಕರಾಳ ಸ್ವರೂಪವನ್ನು ತೋರಿಸಿದರು.ಅಡ್ವಾಣಿ ಅವರ ರಥ ಯಾತ್ರೆಯಿಂದ ಲೋಕಸಭೆಯಲ್ಲಿ ಇಬ್ಬರು ಸದಸ್ಯರನ್ನು ಹೊಂದಿದ್ದ ಬಿಜೆಪಿ ಒಮ್ಮೆಲೇ ಎಂಭತ್ತು ಸ್ಥಾನಗಳನ್ನು ಗಳಿಸಿತು.ಆ ನಂತರ ಕೋಮುವಾದದ ಜೈತ್ರಯಾತ್ರೆಯನ್ನು ತಡೆಯಲು ಸಾಧ್ಯವಾಗಲೇ ಇಲ್ಲ.
ಜಾತ್ಯತೀತ ಎಂದು ಹೇಳಿಕೊಳ್ಳುವ ಪಕ್ಷಗಳು ಮತ್ತು ಸಂಘಟನೆಗಳು ಕೋಮುವಾದದ ವಿರುದ್ಧ ಸಭೆ, ಸಮಾವೇಶ, ಮೆರವಣಿಗೆಗಳನ್ನು ಮಾಡುತ್ತಾ ಬಂದಿವೆ. ಅವರು ಎಲ್ಲಾದರೂ ದುಷ್ಕೃತ್ಯ ನಡೆಸಿದಾಗ ನಾವು ಒಂದೆಡೆ ಸೇರಿ ಪ್ರತಿಭಟನೆ ಮಾಡುತ್ತ ಬಂದಿದ್ದೇವೆ. ಆದರೆ ನಮ್ಮ ಯಾವ ಪ್ರತಿಭಟನೆ, ಧರಣಿಗಳಿಂದ ಅವರ ನಾಗಾಲೋಟವನ್ನು ತಡೆಯಲು ಸಾಧ್ಯವಾಗಿಲ್ಲ.
ನಾವು ಅವರ ಕ್ರಿಯೆಗೆ ಪ್ರತಿಕ್ರಿಯೆಯಾಗಿ ಸಭೆ,ಮೆರವಣಿಗೆ, ಪ್ರತಿಭಟನೆ ಮಾಡುತ್ತೇವೆ.ಒಂದು ದಿನ ಮಾಡಿ ನಮ್ಮ ನಮ್ಮ ಕೆಲಸಗಳಲ್ಲಿ ಮುಳುಗಿ ಬಿಡುತ್ತೇವೆ. ಆದರೆ ಅವರ ಸಂಘದ ಸ್ವಯಂ ಸೇವಕರು ಪ್ರತಿನಿತ್ಯ ಮನೆ ಮನೆಗಳಿಗೆ ಹೋಗಿ ಕಿವಿಯೂದಿ ಬರುತ್ತಾರೆ. ದಾರಿಯಲ್ಲಿ, ಬಸ್ ನಿಲ್ದಾಣ ದಲ್ಲಿ ಅದೇ ಮಾತು ಕೇಳುತ್ತೇವೆ. ಭಾರತೀಯರು ಜಾತಿ,ಮತ ಮೀರಿ ಯೋಚಿಸುವ ವಿವೇಚನಾ ಸಾಮರ್ಥ್ಯವನ್ನು ಕಳೆದುಕೊಂಡಿರುವುದರಿಂದ ಅವರು ಹೇಳಿದ್ದೇ ಸತ್ಯವಾಗುತ್ತಿದೆ. ಅನೇಕ ಕಡೆ ಪ್ರಗತಿಪರರ ಮನೆ ಮಕ್ಕಳೇ ಸಂಘದ ಶಾಖೆಗಳಿಗೆ ಹೋಗುತ್ತಾರೆ.
ಇಂಥ ಸನ್ನಿವೇಶದಲ್ಲಿ ಕೋಮು ದ್ವೇಷಕ್ಕೆ ನಮ್ಮ ಪ್ರತಿರೋಧ ಹೇಗಿರಬೇಕು ಎಂಬುದಕ್ಕೆ ಮಂಡ್ಯ ಉತ್ತಮ ಉದಾಹರಣೆಯಾಗಿದೆ.ಒಕ್ಕಲಿಗರ ಪ್ರಾಬಲ್ಯದ ಮಂಡ್ಯವನ್ನು ಇನ್ನೊಂದು ಮಂಗಳೂರು ಮಾಡಲು ಹೊರಟಿರುವ ಕೋಮುವಾದಿಗಳು ಇತ್ತೀಚೆಗೆ ಅಲ್ಲಿ ತಮ್ಮ ಚಟುವಟಿಕೆಗಳನ್ನು ತೀವ್ರ ಗೊಳಿಸಿ ದ್ದಾರೆ. ಈ ಜಿಲ್ಲೆಗೆ ಸಂಬಂಧ ಪಡದ ಕಾಳಿ ಸ್ವಾಮಿ ಎಂಬ ನಕಲಿ ಸ್ವಾಮಿಯೊಬ್ಬ ಇಲ್ಲಿ ನುಸುಳಿ ಕೋಮು ಕಲಹದ ದಳ್ಳುರಿ ಎಬ್ಬಿಸಲು ಮುಂದಾದ.
ಪ್ರಮೋದ ಮುತಾಲಿಕ್ ಕೂಡ ಬಂದು ಹೋಗ ತೊಡಗಿದ.ಇದರಿಂದ ಮಂಡ್ಯದ ಜನರು ಎಚ್ಚೆತ್ತರು. ವಿಶೇಷವಾಗಿ ಲೇಖಕ ಜಗದೀಶ ಕೊಪ್ಪ ಅವರು ಜಿಲ್ಲೆಯ ಜನಪರ ರೈತ, ಕೂಲಿಕಾರ, ದಲಿತ, ಮಹಿಳಾ ಸಂಘಟನೆಗಳನ್ನು ಒಂದೆಡೆ ಸೇರಿಸಿದರು.
ಎಲ್ಲರೂ ಸೇರಿ ಜಿಲ್ಲಾಧಿಕಾರಿಗಳ ಬಳಿ ಹೋಗಿ ಮಂಡ್ಯ ಜಿಲ್ಲೆಯಲ್ಲಿ ಕಾಳಿ ಸ್ವಾಮಿ ಮತ್ತು ಮುತಾಲಿಕ್ ಪ್ರವೇಶಕ್ಕೆ ಅವಕಾಶ ನೀಡಬಾರದೆಂದು ಮನವಿ ಸಲ್ಲಿಸಿದರು. ಒಂದು ವೇಳೆ ನೀವು ನಿರ್ಬಂಧ ಹಾಕದಿದ್ದರೆ ಅವರು ಜಿಲ್ಲೆಯನ್ನು ಪ್ರವೇಶಿಸದಂತೆ ರೈತ ಕಾರ್ಮಿಕ, ದಲಿತ ಸಂಘಟನೆಗಳು ತಡೆಯುತ್ತವೆ ಎಂದು ಎಚ್ಚರಿಕೆ ನೀಡಿದರು.ಇದು ಕೋಮುವಾದಕ್ಕೆ ಪ್ರತಿರೋಧದ ಹೊಸ ಮಾದರಿಯಾಗಿದೆ.
ನಾವು ಕೋಮುವಾದ ವಿರೋಧಿಸುವವರು ಇಷ್ಟು ದಿನ ಸಭೆ, ಸಮಾವೇಶ ಮಾಡುತ್ತ, ಟೌನ್ ಹಾಲ್ ಪ್ರತಿಭಟನೆ ಮಾಡುತ್ತ ಬಂದಿದ್ದೇವೆ. ನಮ್ಮ ಸಭೆಗಳಿಗೆ ಹೊಸಬರಾರು ಬರುವುದಿಲ್ಲ. ನಾವೇ ಭಾಷಣಕಾರರು ನಾವೇ ಸಭಿಕರು. ಹೀಗಾಗಿ ಕೋಮುವಾದಿಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗುತ್ತಿಲ್ಲ.

ಕಲಬುರ್ಗಿ ಮತ್ತು ಅನಂತಮೂರ್ತಿ ಅವರ ಮೇಲೆ ಅವರು ಆಡಿದರೆನ್ನಲಾದ ಮಾತಿನ ಬಗ್ಗೆ ಕೇಸು ಹಾಕಿ ಸಾಕಷ್ಟು ಕಾಡಿದರು.ಆದರೆ ಸೂಲಿಬೆಲೆ, ಮುತಾಲಿಕ್ ಮೊದಲಾದವರ ಕೋಮು ಪ್ರಚೋದನಾಕಾರಿ ಭಾಷಣಗಳ ಮೇಲೆ, ಬೆದರಿಕೆಗಳ ಮೇಲೆ ಕೇಸು ಹಾಕಿ ತಾರ್ಕಿಕ ಅಂತ್ಯಕ್ಕೆ ಒಯ್ಯುವ ಒಂದು ಸಂಘಟಿತ ಯತ್ನ ನಡೆದಿಲ್ಲ. ಹೀಗಾಗಿ ಅವರನ್ನು ಕಟ್ಟಿ ಹಾಕುವವರು ಇಲ್ಲವಾಗಿದೆ.ಇದರ ಜೊತೆಗೆ ಹೊಸ ಪೀಳಿಗೆಯ ಇಪ್ಪತ್ತರೊಳಗಿನ ತರುಣರ ಮನದ ಬಾಗಿಲು ತಟ್ಟಲು ನಮ್ಮಿಂದ ಆಗಿಲ್ಲ
ಇಂಥ ಸನ್ನಿವೇಶದಲ್ಲಿ ನಾಗರಿಕ ಸಂಘಟನೆಗಳು, ಪ್ರತಿ ಊರಿನ ಸಾರ್ವಜನಿಕರು, ಹಿರಿಯರು, ಎಲ್ಲ ಸಮುದಾಯಗಳ ಜೀವ ಪರ ಕಾಳಜಿಯ ಮನಸ್ಸುಗಳು ಒಂದಾಗಿ ಮಂಡ್ಯದ ಗೆಳೆಯರು ಮಾಡಿದಂತೆ ನಮ್ಮ ಊರಿಗೆ ಕೋಮು ಪ್ರಚೋದನಾಕಾರಿ ಭಾಷಣ ಮಾಡಿ, ಶಾಂತಿ ಕದಡುವವರನ್ನು ಊರೊಳಗೆ ಬಿಡುವುದಿಲ್ಲ ಎಂದು ಸಂಕಲ್ಪ ಮಾಡಬೇಕು. ಈ ಬಗ್ಗೆ ಜಿಲ್ಲಾಡಳಿತದ ಮೇಲೆ ಒತ್ತಡ ತರಬೇಕು. ಇಂಥ ನಾಗರಿಕ ಪ್ರಯತ್ನ ಇಂದಿನ ಅಗತ್ಯವಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News