ಓ ಮೆಣಸೇ...
ದಲಿತ ನಾಯಕ ಸಿಎಂ ಆಗುತ್ತಾನೆ ಎಂಬ ಕನಸು ಕಾಣುವವನು ಹುಚ್ಚ ನಾರಾಯಣಸ್ವಾಮಿ, ಕೇಂದ್ರ ಸಚಿವ
ಇದೂ ಅಚ್ಛೇ ದಿನ್ ಹಾಗೆ ಇನ್ನೊಂದು ಜುಮ್ಲಾ ಅಲ್ಲವೇ?
ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ - ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ
ಇರಬಹುದು. ಬಿಜೆಪಿ ಸೋತಲ್ಲೂ ಬಿಜೆಪಿ ಸರಕಾರ ತರುವುದು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ.
ಕಾಂಗ್ರೆಸ್ ಬಾಲ ಅಲ್ಲಾಡಿಸುತ್ತಿರುವುದು ಕರ್ನಾಟಕದಲ್ಲಿ ಮಾತ್ರ - ರಘುಪತಿ ಭಟ್, ಶಾಸಕ
ಈಗ ಆ ಬಾಲ ಬಂದು ನಿಮ್ಮ ಪಕ್ಕದಲ್ಲಿ ಕುಳಿತು ತಲೆ ಆಗಿದೆಯಲ್ಲ...
ಈ ಬಾರಿ ಯಾವ ಸೋಂಕಿನ ಕಾಟವೂ ಇಲ್ಲದ ಕಾರಣ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು - ಬಿ.ಸಿ.ನಾಗೇಶ್, ಸಚಿವ
ಈಗ ಎಲ್ಲಾ ಪೋಷಕರಿಗೆ ಲಸಿಕೆ ಇಲ್ಲದ ಕೋಮು ಸೋಂಕಿನದ್ದೇ ಚಿಂತೆ ಸರ್.
ರಾಜಕಾರಣಿಗಳಿಗಿಂತ ಮೂರ್ಖರು ಯಾರೂ ಇಲ್ಲ - ಕುಂ.ವೀರಭದ್ರಪ್ಪ, ಸಾಹಿತಿ
ಮೂರ್ಖರು ತೀರಾ ಬೇಜಾರು ಮಾಡಿಕೊಳ್ಳುವ ಹೋಲಿಕೆ ಇದು
ಬಿಜೆಪಿಯಲ್ಲಿರುವ ಎಲ್ಲರೂ ಕೋಮುವಾದಿಗಳಲ್ಲ - ರಮೇಶ್ ಕುಮಾರ್, ಮಾಜಿ ಸಭಾಪತಿ
ಹೌದು. ಕಾಂಗ್ರೆಸ್‌ನಲ್ಲೂ ಎಲ್ಲರೂ ಕೋಮುವಾದಿಗಳಲ್ಲ.
ಒಬ್ಬ ಕಾಮನ್ ಮ್ಯಾನ್ ಮುಖ್ಯಮಂತ್ರಿಯಾಗಿ ಸಿಎಂ ಬೊಮ್ಮಾಯಿ ಜನರಿಗೆ ಹತ್ತಿರವಾಗುತ್ತಿದ್ದಾರೆ - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ನೀವು ಹೇಳುತ್ತಿರುವುದರಿಂದ ಇದು ಕಂಪ್ಲೆಂಟೋ, ಕಾಂಪ್ಲಿಮೆಂಟೋ ಎಂಬ ಗೊಂದಲದಲ್ಲಿದ್ದಾರೆ ಅವರು.
ಬದಲಾವಣೆಗಾಗಿ ಬಿಜೆಪಿಗೆ ಸೇರಿದೆೆ - ಬಸವರಾಜ ಹೊರಟ್ಟಿ, ವಿ.ಪ. ಮಾಜಿ ಸಭಾಪತಿ
ಕನಿಷ್ಠ ಹೇಳಿಕೆಯಲ್ಲಾದರೂ ಏನಾದರೂ ಬದಲಾವಣೆ ಮಾಡಿಕೊಳ್ಳಬಹುದಿತ್ತು.
ಕೇಂದ್ರ ಸಚಿವ ಅಮಿತ್ ಶಾ ಸುಳ್ಳರ ಬಾದ್‌ಶಾ - ಕೆ.ಟಿ.ರಾಮ್‌ರಾವ್, ತೆಲಂಗಾಣ ಸಚಿವ
ಅವರು ನಿಮ್ಮ ಪಾಲಿನ ಬಾದ್‌ಶಾ ಆಗಲು ಯಾವ ಚುನಾವಣೆ ಬರಬೇಕು?
ಅದೆಷ್ಟು ಬಾರಿ ನನ್ನ ಮೇಲೆ ಸಿಬಿಐ ದಾಳಿ ಆಗಿದೆಯೋ ನನಗೆ ಎಣಿಕೆಯೇ ಸಿಗುತ್ತಿಲ್ಲ - ಕಾರ್ತಿ ಚಿದಂಬರಂ, ಚಿದಂಬರಂ ಪುತ್ರ
ನಿಮ್ಮ ಸಂಪತ್ತಿನ ಲೆಕ್ಕ ಹಾಕಿದ ಮೇಲೆ ಸಿಬಿಐನವರು ಹೀಗೇ ಹೇಳುತ್ತಿದ್ದಾರಲ್ಲ....
ಸರಕಾರ ರಸ್ತೆಗಳ ಅಭಿವೃದ್ಧಿಗೆ ಗರಿಷ್ಠ ಮೊತ್ತದ ಅನುದಾನ ನೀಡುತ್ತಿದೆ - ಸುನೀಲ್ ಕುಮಾರ್, ಸಚಿವ
ಈಗ ಸಂಶಯ ಇರುವುದು ಅದರಿಂದ ಯಾರ ಅಭಿವೃದ್ಧಿ ಆಗುತ್ತಿದೆ ಎಂಬುವುದರ ಬಗ್ಗೆ ಮಾತ್ರ.
ಅಸ್ಪಶ್ಯತೆ ತೊಡೆದು ಹಾಕಲು ‘ವಿನಯ ಸಾಮರಸ್ಯ’ ಎಂಬ ಕಾರ್ಯಕ್ರಮವನ್ನು ಅಭಿಯಾನದ ರೀತಿಯಲ್ಲಿ ಹಮ್ಮಿಕೊಳ್ಳಲಾಗುವುದು -ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಈ ಕಾರ್ಯಕ್ರಮದಲ್ಲಿ ಅಸ್ಪಶ್ಯರಿಗೆ ಪ್ರತ್ಯೇಕ ಆಸನ ಕಲ್ಪಿಸಲು ಎಷ್ಟು ಕೋಟಿ ಖರ್ಚು ಮಾಡಲಾಗುವುದು?
ನಾನು ನಾಟಕ ಮಾಡಿ ರಾಜಕಾರಣ ಮಾಡಿದ್ದರೆ ಯಾವಾಗಲೋ ಮುಖ್ಯಮಂತ್ರಿಯಾಗುತ್ತಿದ್ದೆೆ - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ನೀವು ಮುಖ್ಯಮಂತ್ರಿಯಂತೆ ನಾಟಕ ಮಾಡಲು ಪ್ರಾರಂಭಿಸಿ ಹಲವು ವರ್ಷಗಳಾದವು.
ರಾಜ್ಯ ಸರಕಾರ ಗೂಂಡಾಗಿರಿಯನ್ನು ವಿವಿಧ ಸಂಘಸಂಸ್ಥೆಗಳಿಗೆ ಹೊರಗುತ್ತಿಗೆ ಕೊಟ್ಟಿರುವಂತೆ ಕಾಣುತ್ತಿದೆ - ಯು.ಟಿ.ಖಾದರ್, ಶಾಸಕ
ನಿಮ್ಮ ಸರಕಾರ ಇರುವಾಗ ಕೊಟ್ಟಿದ್ದ ಗುತ್ತಿಗೆಯನ್ನು ನವೀಕರಿಸಿದ್ದೇವೆ ಅಷ್ಟೇ ಎನ್ನುತ್ತಿದ್ದಾರೆ ಅವರು.
ಕಾಂಗ್ರೆಸ್‌ನ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನಿಯಮ ತೀರಾ ಹಾಸ್ಯಾಸ್ಪದ - ಕುಮಾರಸ್ವಾಮಿ, ಮಾಜಿ ಸಿಎಂ
ಇಡೀ ಪಕ್ಷ ಒಂದೇ ಕುಟುಂಬದ ಒಳಗಿದ್ದರೆ ಈ ನಿಯಮ ನಿಜಕ್ಕೂ ಹಾಸ್ಯಾಸ್ಪದ.
ಹೆಡಗೆವಾರ್ ಆರೆಸ್ಸೆಸ್‌ನ್ನು ಸ್ಥಾಪನೆ ಮಾಡಿದ್ದರಿಂದಲೇ ಇಂದು ದೇಶ ಭಕ್ತರ ಸಂಖ್ಯೆ ಹೆಚ್ಚಾಗಿದೆ -ಕೆ.ಎಸ್. ಈಶ್ವರಪ್ಪ, ಶಾಸಕ
40 ಶೇ. ಕಮಿಷನ್‌ನ ದ್ವೇಷ ಭಕ್ತರು!
ಬಸವರಾಜ ಹೊರಟ್ಟಿ ಅವರ ಸೇರ್ಪಡೆಯಿಂದ ಬಿಜೆಪಿಗೆ ಆನೆ ಬಲ ಬಂದಿದೆ - ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಗೋಸುಂಬೆ ಆನೆಯ ಹಾಗೆ ಬಣ್ಣ ಬದಲಾಯಿಸಲು ಸಾಧ್ಯವೇ?
ಪೊಲೀಸರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವುದನ್ನು ಸಹಿಸುವುದಿಲ್ಲ - ಆರಗ ಜ್ಞಾನೇಂದ್ರ, ಸಚಿವ
ಪೊಲೀಸರು ಪೊಲೀಸರ ಕೆಲಸ ಮಾಡಿದರೂ ನೀವು ಸಹಿಸುವುದಿಲ್ಲ ಎಂಬುವುದು ಇತ್ತೀಚೆಗೆ ಆಗಾಗ ಸಾಬೀತಾಗುತ್ತಿದೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ಗಾಂಧಿಯವರೇ ಆದ್ಯತೆಯ ಆಯ್ಕೆಯಾಗಿದ್ದಾರೆ - ಶಶಿ ತರೂರು, ಕಾಂಗ್ರೆಸ್ ನಾಯಕ
ಹೀಗೆ ವಾರಕ್ಕೆ ಎಷ್ಟು ಬಾರಿ ಹೇಳುವುದು ನಿಮಗೆ ಅನಿವಾರ್ಯ?
ಪಕ್ಷದ ಪ್ರತಿಯೊಂದು ಸ್ಥಾನವನ್ನು 50 ವರ್ಷದ ಒಳಗಿನವರಿಗೆ ನೀಡಬೇಕು ಎಂದು ಸಂಕಲ್ಪ ಮಾಡಲಾಗಿದೆ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಹಾಗಾದರೆ ಕೆಪಿಸಿಸಿಗೆ ಹೊಸ ಅಧ್ಯಕ್ಷರು ಯಾರು?
ನಾನು ರಾಜ್ಯ ರಾಜಕಾರಣಕ್ಕೆ ಮರಳುತ್ತೇನೆ ಎಂಬುದು ಕೇವಲ ಉಹಾಪೋಹ - ಶೋಭಾ ಕರಂದ್ಲಾಜೆ , ಕೇಂದ್ರ ಸಚಿವೆ
ನೀವು ಸಂಸದೆ, ಕೇಂದ್ರ ಸಚಿವೆ ಆಗಿದ್ದೀರಿ ಎಂಬುವುದೇ ಊಹಾಪೋಹ ಎಂಬುವುದು ಜನರ ಅಭಿಪ್ರಾಯ.
ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಶ್ರಮಿಸುತ್ತೇನೆ - ಜಗದೀಶ್ ಶೆಟ್ಟರ್, ಮಾಜಿ ಸಿಎಂ
ನಿಮಗೆ ಈ ವಯಸ್ಸಲ್ಲಿ ಹೆಚ್ಚು ಶ್ರಮ ನೀಡಬಾರದು ಎಂಬುವುದು ಪಕ್ಷದ ಕಾಳಜಿ!
ವಿಶ್ವವಿದ್ಯಾನಿಲಯಗಳು ಸೈದ್ಧಾಂತಿಕ ಬಿಕ್ಕಟ್ಟಿನ ತಾಣಗಳಾಗಬಾರದು - ಅಮಿತ್ ಶಾ, ಕೇಂದ್ರ ಸಚಿವ
ಅವುಗಳೇನಿದ್ದರೂ ಹೊಡಿಬಡಿ ತಾಣಗಳಾಗಬೇಕು ಎಂಬುವುದು ನಿಮ್ಮ ಅಲಿಖಿತ ನಿಯಮವಲ್ಲವೇ?