ತಾಳಮದ್ದಲೆ ವಿಶಿಷ್ಟ ಕಲಾಪ್ರಕಾರ: ಕೃಷ್ಣಾಪುರ ಶ್ರೀ
ಉಡುಪಿ, ಮೇ 23: ಉಡುಪಿಯ ಯಕ್ಷಗಾನ ಕಲಾರಂಗದ ವತಿಯಿಂದ ತಾಳಮದ್ದಲೆ ಸಪ್ತಾಹ ‘ಉತ್ತರ ರಾಮಾಯಣ’ ಇಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟನೆಗೊಂಡಿತು.ಸಪ್ತಾಹ ಉದ್ಘಾಟಿಸಿದ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾ ಸಾಗರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ತಾಳಮದ್ದಲೆ ನಮ್ಮ ಪುರಾಣ ಲೋಕವನ್ನು ಅನಾವರಣಗೊಳಿಸುವ ವಿಶಿಷ್ಟ ಕಲಾಪ್ರಕಾರ. ಅರ್ಥಧಾರಿಗಳು ಮೂಲ ಕೃತಿಗೆ ಚ್ಯುತಿ ಬಾರದಂತೆ ವಿಷಯ ಪ್ರತಿಪಾದಿಸಿ ಜನಮಾನಸಕ್ಕೆ ನಮ್ಮ ಪುರಾಣ ಸಂಪತ್ತನ್ನು ತಲುಪಿಸಬೇಕೆಂದರು.
ಮುಖ್ಯ ಅತಿಥಿಗಲಾಗಿ ಜ್ಯೋತಿಷ್ಯ ವಿದ್ವಾನ್ ಕೆ.ಪಿ.ಶ್ರೀನಿವಾಸ ತಂತ್ರಿ, ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಪಿ. ನಿತ್ಯಾನಂದ ರಾವ್, ಮಂಜೇಶ್ವರದ ಕಲಾ ಸಂಘಟಕ ಸಂಕಬೈಲು ಸತೀಶ ಅಡಪ ಮಾತನಾಡಿದರು.ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಎ.ನಟರಾಜ ಉಪಾಧ್ಯ ವಂದಿಸಿದರು. ಬಳಿಕ ಪ್ರಸಿದ್ಧ ಅರ್ಥಧಾರಿಗಳಿಂದ ಅಗ್ನಿಪರೀಕ್ಷೆ ತಾಳಮದ್ದಲೆ ಸಂಪನ್ನಗೊಂಡಿತು.