ಮೋದಿ ಸರಕಾರಕ್ಕೆ ಎಂಟು ವರ್ಷಗಳು: ಭಾರತದ ಮಾನ ಹರಾಜಾದ ಎಂಟು ಪ್ರಸಂಗಗಳು
ಭಾಗ-2
ಅವಮಾನ- 5: ಉತ್ಪ್ರೇಕ್ಷೆಯೆಂದು ಸಾಬೀತಾದ ಬಾಲಾಕೋಟ್ ದಾಳಿ
2019ರ ಸಾರ್ವತ್ರಿಕ ಚುನಾವಣೆಗೆ ಕೇವಲ ಕೆಲವು ತಿಂಗಳುಗಳಿರುವಾಗ ಕಾಶ್ಮೀರದ ಫುಲ್ವಾಮದಲ್ಲಿ ಉಗ್ರಗಾಮಿಗಳ ದಾಳಿಗೆ 40 ಯೋಧರು ಬಲಿಯಾದರು. ಘಟನೆ ನಡೆದು ಮೂರು ವರ್ಷಗಳಾದರೂ ಇದಕ್ಕೆ ಕಾರಣರಾದವರನ್ನು ಪತ್ತೆ ಮಾಡಲು ಮೋದಿ ಸರಕಾರಕ್ಕೆ ಸಾಧ್ಯವಾಗಿಲ್ಲ. ಬದಲಿಗೆ ಘಟನೆ ನಡೆದ ಅವಧಿಯಲ್ಲಿ ಮತ್ತು ಆ ಸ್ಥಳದಲ್ಲಿ ಬಿಜೆಪಿ ಸರಕಾರಕ್ಕೆ ಹತ್ತಿರವಿರುವ ಡಿವೈಎಸ್ಪಿದವಿಂದರ್ ಸಿಂಗ್‌ರಂಥವರ ನಿಗೂಢ ಓಡಾಟ, ಉಗ್ರಗಾಮಿಗಳನ್ನು ಗಡಿದಾಟಿಸುವ ಪ್ರಯತ್ನದಲ್ಲಿರುವಾಗ ಕಾಶ್ಮೀರ ಪೊಲೀಸರಿಂದ ಅವರ ಬಂಧನ, ನಂತರ ಅವರನ್ನು ದಿಲ್ಲಿ ಕೇಂದ್ರದ ಪೊಲೀಸರಿಗೆ ವರ್ಗಾವಣೆ ಮಾಡಿದ್ದು, ಈಗ ಅವರ ಸುದ್ದಿಯೇ ಗೊತ್ತಾಗದಿರುವುದು ಇವೆಲ್ಲಾ ಘಟನೆಯ ಬಗ್ಗೆ ಹಲವಾರು ಥಿಯರಿಗಳನ್ನು ಹುಟ್ಟುಹಾಕಿದೆ. ಅದರ ಬಗ್ಗೆ ಯಾವುದೇ ಸ್ಪಷ್ಟನೆ ಕೊಡಲೂ ಸರಕಾರ ಮುಂದಾಗಿಲ್ಲ. ಇದರ ಜೊತೆಗೆ ಫುಲ್ವಾಮ ಸೇಡನ್ನು ತೀರಿಸಿಕೊಳ್ಳುವ ಭಾರತದ ಆಶಯದ ಭಾಗವಾಗಿ ಮೋದಿ ಆದೇಶದ ಮೇರೆಗೆ ಪಾಕಿಸ್ತಾನದ ಬಾಲಾಕೋಟ್‌ನಲ್ಲಿದ್ದ ಉಗ್ರಗಾಮಿ ತರಬೇತಿ ಕೇಂದ್ರದ ಮೇಲೆ ಭಾರತವು ವಾಯುದಾಳಿ ಮಾಡಿ ಧ್ವಂಸಗೊಳಿಸಿದೆ ಎಂದು 2019ರ ಫೆಬ್ರವರಿ 26ರಂದು ಮೋದಿ ಸರಕಾರ ಘೋಷಿಸಿತು. ಬಿಜೆಪಿ ನಾಯಕ ಯೋಗಿ ಆದಿತ್ಯನಾಥ್ ಈ ದಾಳಿಯಲ್ಲಿ 600 ಉಗ್ರಗಾಮಿಗಳು ಹತರಾದರೆಂದರೆ, ಮೋದಿ ಕ್ಯಾಬಿನೆಟ್‌ನ ಒಬ್ಬೊಬ್ಬ ಮಂತ್ರಿಗಳು ಒಂದೊಂದು ಸಂಖ್ಯೆಯನ್ನು ಹೇಳತೊಡಗಿದರು. ವಾಯುಪಡೆಯು ನಿರ್ದಿಷ್ಟವಾಗಿ ಎಷ್ಟು ಉಗ್ರಗಾಮಿಗಳು ಹತರಾದರೆಂದು ಈವರೆಗೆ ಹೇಳಿಲ್ಲ. ಬದಲಿಗೆ ಅಂತರ್‌ರಾಷ್ಟ್ರೀಯ ಮಾಧ್ಯಮಗಳು ಸ್ವತಂತ್ರ ತನಿಖೆ ನಡೆಸಿ ಭಾರತದ ಕ್ಷಿಪಣಿಗಳು ಉಗ್ರಗಾಮಿ ಶಿಬಿರದಿಂದ ಎರಡು ಕಿ.ಮೀ. ದೂರದಲ್ಲಿ ಬಿದ್ದವು ಎಂದು ವರದಿ ಮಾಡಿದವು. ಈ ದಾಳಿಯನ್ನು ಮುಂದಿಟ್ಟುಕೊಂಡು ಸುರಕ್ಷಿತ ರಾಷ್ಟ್ರ ಬೇಕೆಂದರೆ ಬಲಿಷ್ಠ ನಾಯಕ ಬೇಕೆಂದು ವೋಟುಗಳನ್ನು ಪಡೆದುಕೊಳ್ಳಲು ಬಿಜೆಪಿಗೆ ಸುಲಭವಾಯಿತು. ಆದರೆ ಈಗಲೂ ಮೋದಿ ಸರಕಾರ ಬಾಲಾಕೋಟ್ ದಾಳಿಯ ಬಗ್ಗೆ ಮಾಡಿಕೊಂಡ ಅತ್ಯುತ್ಪ್ರೇಕ್ಷಿತ ಪ್ರಚಾರಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಮುಜುಗುರಕ್ಕೆ ಒಳಗಾಗುತ್ತಲೇ ಇದೆ.
ಅವಮಾನ-6: ಸಿಎಎ-ಎನ್‌ಆರ್‌ಸಿ, ಆರ್ಟಿಕಲ್ 370 ರದ್ದು-ಕೆಳಗಿಳಿದ ಭಾರತದ ಘನತೆ
ಇಡೀ ಜಗತ್ತಿನಲ್ಲಿ ಭಾರತದಷ್ಟು ವೈವಿಧ್ಯಮಯವಾದ ಸಮಾಜ ಬೇರೆಲ್ಲೂ ಇಲ್ಲ. ಹೀಗಾಗಿ ಇಲ್ಲಿ ಪ್ರಜಾತಂತ್ರ ಉಳಿಯುವುದೋ ಇಲ್ಲವೋ ಎಂದು ಇಡೀ ಜಾಗತಿಕ ಸಮುದಾಯ ಗಮನಿಸುತ್ತಿತ್ತು. ಆದರೆ ಇಲ್ಲಿ ಹುಟ್ಟುವ ಪ್ರತಿಯೊಬ್ಬರಿಗೂ ಜಾತಿ, ಧರ್ಮ, ಲಿಂಗ, ವರ್ಣ ಭೇದವಿಲ್ಲದೆ ಸಮಾನವಾದ ನಾಗರಿಕತ್ವ ಹಾಗೂ ನಾಗರಿಕ ಹಕ್ಕುಗಳನ್ನು ಸಂವಿಧಾನ ಕೊಡಮಾಡಿದೆ. ಅದರಿಂದಾಗಿಯೇ ವೈವಿಧ್ಯತೆಯ ನಡುವೆಯೂ ಏಕತೆ ಮತ್ತು ಘನತೆಯಿಂದ ಭಾರತ ಸಮಾಜ ಬಾಳಲು ಸಾಧ್ಯವಾಗುವ ಸಾಂವಿಧಾನಿಕ ಅವಕಾಶ ದಕ್ಕಿದೆ. ಆದರೆ 90ರ ದಶಕದಿಂದೀಚೆಗೆ ಇಲ್ಲಿ ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲಿಮರು ಸಮಾನ ನಾಗರಿಕರಾಗಿ ಸಮಾಜದಲ್ಲಿ ಬಾಳ್ವೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿಧಾನವಾಗಿ ಸೃಷ್ಟಿಯಾಗಲು ಪ್ರಾರಂಭಿಸಿತು. ಆದರೂ ಈವರೆಗೆ ಕನಿಷ್ಠ ಕಾನೂನಿನಲ್ಲಾದರೂ ಸಮಾನತೆಯಿತ್ತು. ಆದರೆ ಮೋದಿ ಸರಕಾರ 2019ರಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದಮೇಲೆ ಸಿಎಎ-ಎನ್‌ಪಿಅರ್-ಎನ್‌ಆರ್‌ಸಿ ಕಾಯ್ದೆಗಳನ್ನು ಜಾರಿಗೆ ತಂದು ಈ ದೇಶದಲ್ಲಿ ಮುಸ್ಲಿಮರಿಗೆ ಸರಿಸಮಾನವಾದ ನಾಗರಿಕತ್ವವನ್ನು ನಿರಾಕರಿಸಿದೆ. ಅದೇ ರೀತಿ ಆರ್ಟಿಕಲ್ 370 ಅನ್ನು ರದ್ದುಗೊಳಿಸಿ, ಕಾಶ್ಮೀರಕ್ಕಿದ್ದ ರಾಜ್ಯದ ಸ್ಥಾನಮಾನವನ್ನೂ ಕಸಿದು, ಅಲ್ಲಿನ ರಾಜಕೀಯ ನಾಯಕರನ್ನೆಲ್ಲಾ ಬಂಧನದಲ್ಲಿರಿಸಿ, ಇಂಟರ್‌ನೆಟ್ ಅನ್ನು ವರ್ಷಾನುಗಟ್ಟಲೇ ಕಸಿದು ಸಮೂಹ ಜೀವನ ಇಲ್ಲದಂತೆ ಮಾಡಿದೆ. ಇತ್ತೀಚೆಗೆ ಯಾವುದೇ ರಾಜಕೀಯ ಪ್ರಕ್ರಿಯೆಗಳನ್ನೇ ನಡೆಸದೆ ಅತ್ಯಂತ ತಾರತಮ್ಯದಿಂದ ಕ್ಷೇತ್ರ ವಿಂಗಡನೆ ಮಾಡಿ ಕಾಶ್ಮೀರದ ಅಸ್ಮಿತೆ ಮತ್ತು ಅಸ್ತಿತ್ವವನ್ನು ಮೋದಿ ಸರಕಾರ ಛಿದ್ರಗೊಳಿಸಿದೆ. ಈ ಎರಡೂ ಬೆಳವಣಿಗೆಗಳು ಭಾರತದ ಪ್ರಜಾಸತ್ತೆಯನ್ನೇ ಜಾಗತಿಕ ಸಮುದಾಯ ಅನುಮಾನದಿಂದ ನೋಡುವಂತೆ ಮಾಡಿದೆ. ಭಾರತವು ಪ್ರಜಾತಂತ್ರವಲ್ಲ-ಅರೆ ಪ್ರಜಾತಂತ್ರ ಎಂದು ಘೋಷಿಸುವಂತೆ ಮಾಡಿದೆ. 1947ರ ನಂತರ ಭಾರತಕ್ಕೆ ಇಂತಹ ಅಪಮಾನವಾಗಿರಲಿಲ್ಲ.
ಅವಮಾನ-7: ಲಾಕ್‌ಡೌನ್ ಹೇರಿಕೆ ಮತ್ತು ಸಾವುಗಳ ನಿರಾಕರಣೆಯಿಂದ ಹರಾಜಾದ ಭಾರತದ ಮಾನ
ಕೋವಿಡ್ ಸಾಂಕ್ರಾಮಿಕ ವಿಶ್ವಕ್ಕೆಲ್ಲಾ ವ್ಯಾಪಿಸಿದರೂ ಎಲ್ಲಾ ದೇಶದ ಜನರು ಒಂದೇ ರೀತಿಯ ಬಾಧೆಗೆ ಒಳಪಟ್ಟಿಲ್ಲ. ಯಾವ ದೇಶಗಳಲ್ಲಿ ಹಿಂದಿನಿಂದಲೂ ಸಮರ್ಥವಾದ ಸಾರ್ವತ್ರಿಕ ವೈದ್ಯಕೀಯ ವ್ಯವಸ್ಥೆಯಿತ್ತೋ ಆ ದೇಶಗಳು ಮೊದಲಲ್ಲಿ ಸಾಕಷ್ಟು ಸಾವು-ನೋವುಗಳನ್ನು ಅನುಭವಿಸಿದರೂ ಬಹುಬೇಗ ಚೇತರಿಸಿಕೊಂಡವು. ಅದರಲ್ಲೂ ಕೋವಿಡ್‌ಗೆ ಲಸಿಕೆಯನ್ನು ಕಂಡುಹಿಡಿದ ಮೇಲೆ ತಮ್ಮ ದೇಶದ ಆರೋಗ್ಯವನ್ನು ಭದ್ರ ಮಾಡಿಕೊಂಡವು. ಆದರೆ ಯಾವ ದೇಶಗಳಲ್ಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹಿಂದಿನಿಂದಲೂ ತುಂಬಾ ಅಸಮರ್ಪಕವಾಗಿತ್ತೋ ಆ ದೇಶಗಳಲ್ಲಿ ಕೋವಿಡ್ ಪರಿಣಾಮ ತೀವ್ರವಾಯಿತು. ಆದರೆ ಅಂತಹ ಕೆಲವು ದೇಶಗಳಲ್ಲೂ ಜವಾಬ್ದಾರಿಯುತ ಪ್ರಜಾತಾಂತ್ರಿಕ ಸರಕಾರ ಇದ್ದಾಗ ಸಾವು-ನೋವುಗಳ ಪ್ರಮಾಣವನ್ನು ಸಾಧ್ಯವಾದ ಮಟ್ಟಿಗೆ ನಿಯಂತ್ರಣಕ್ಕೆ ತರಲು ಸಾಧ್ಯವಾಯಿತು. ಆದರೆ ಭಾರತದಲ್ಲಿ ಕೋವಿಡ್ ಅಪ್ಪಳಿಸಿದಾಗ ಬಲವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೂ ಇರಲಿಲ್ಲ. ಜವಾಬ್ದಾರಿಯುತ ಪ್ರಜಾತಂತ್ರಿಕ ಸರಕಾರವೂ ಇರಲಿಲ್ಲ. ಹೀಗಾಗಿ ಭಾರತದ ಜನತೆ ಒಂದೆಡೆ ಕೋವಿಡ್ ಇನ್ನೊಂದೆಡೆ ಮೋದಿ ಸರಕಾರದ ದಮನಕಾರಿ ಮತ್ತು ಅವಿವೇಕದ ಲಾಕ್‌ಡೌನ್ ಎಂಬ ಎರಡೂ ದಾಳಿಗಳನ್ನು ಏಕಕಾಲದಲ್ಲಿ ಎದುರಿಸಬೇಕಾಯಿತು. ಇದರಿಂದಾಗಿ ಜಗತ್ತಿನಲ್ಲೇ ಅತಿಹೆಚ್ಚು ಕೋವಿಡ್ ಸಾವುಗಳು ಭಾರತದಲ್ಲಿ ಸಂಭವಿಸಿದೆ. ಆದರೆ ಭಾರತ ಸರಕಾರ ಸಾವುಗಳ ಸಂಖ್ಯೆಯನ್ನು ಮುಚ್ಚಿಟ್ಟು ಭಾರತದ ಹಿರಿಮೆಯನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಮೋದಿ ಸರಕಾರ ಸಾವಿನ ಸಂಖ್ಯೆಯನ್ನು ಕೇವಲ 4 ಲಕ್ಷ ಎಂದು ಹೇಳುತ್ತಿದ್ದರೂ ಸರಕಾರದ ಇತರ ಅಂಕಿಅಂಶಗಳನ್ನೇ ಮುಂದಿಟ್ಟು ಅಂತರ್‌ರಾಷ್ಟ್ರೀಯವಾಗಿ ಪ್ರತಿಷ್ಠಿತವಾದ ಲಾನ್ಸೆಟ್‌ನಂತಹ ಸಂಸ್ಥೆಗಳು ಭಾರತದಲ್ಲಿ ಕೋವಿಡ್ ಸಾವಿನ ಸಂಖ್ಯೆ ಏನಿಲ್ಲ ಎಂದರೂ 50 ಲಕ್ಷ ಎಂದು ಹೇಳುತ್ತಿವೆ. ಮೋದಿ ಸರಕಾರ ಈ ವಿಷಯದಲ್ಲಿ ತೋರುತ್ತಿರುವ ಭಂಡತನದಿಂದಾಗಿ ಭಾರತ ಇಡೀ ಜಗತ್ತಿನೆದುರು ತಲೆತಗ್ಗಿಸಬೇಕಾಗಿ ಬಂದಿದೆ.
ಅವಮಾನ-8: ಭಾರತವನ್ನು ಅಮೆರಿಕದ 51ನೇ ರಾಜ್ಯ ಮಾಡಿಬಿಟ್ಟ ಪ್ರಧಾನಿ ಮೋದಿ
ಪ್ರಾಯಶಃ ಜಗತ್ತಿನ ಯಾವುದೇ ಸಾರ್ವಭೌಮಿ ರಾಷ್ಟ್ರದ ಪ್ರಧಾನಿ ಮಾಡದ ಅಪಚಾರವನ್ನು ಮೋದಿಯವರು ಭಾರತದ ಸ್ವಾಭಿಮಾನಕ್ಕೆ ಮಾಡಿದ್ದಾರೆ. ಜಗತ್ತಿನ ಯಾವುದೇ ಸರಕಾರದ ಮುಖ್ಯಸ್ಥ ಮತ್ತೊಂದು ದೇಶಕ್ಕೆ ಅತಿಥಿಯಾಗಿ ಹೋದಾಗ ಆ ದೇಶದ ರಾಜಕಾರಣದಲ್ಲಿ ಮೂಗುತೂರಿಸುವುದಿಲ್ಲ. ತೂರಿಸಬಾರದು. ಆದರೆ ಅಮೆರಿಕವು ಚುನಾವಣೆಯ ಹೊಸ್ತಿಲಲ್ಲಿದ್ದಾಗ ಅಮೆರಿಕಕ್ಕೆ ಭೇಟಿ ಕೊಟ್ಟ ಮೋದಿ, ಅಲ್ಲಿನ ಭಾರತೀಯ ಅಮೆರಿಕನ್ನರನ್ನುದ್ದೇಶಿಸಿ ಮಾತಾಡುವಾಗ ''ಅಬ್ ಕಿ ಬಾರ್ ಟ್ರಂಪ್ ಕಿ ಸರಕಾರ್'' ಎಂದು ಘೋಷಿಸಿ ಟ್ರಂಪ್‌ಗೆ ವೋಟು ಹಾಕಲು ಮನವಿ ಮಾಡಿದರು. ಅಮೆರಿಕದಲ್ಲಿ 50 ರಾಜ್ಯಗಳಿದ್ದು ಅದರ ಮುಖ್ಯಸ್ಥರು ಚುನಾವಣೆಯ ಸಂದರ್ಭದಲ್ಲಿ ತಮ್ಮ ರಾಜಕೀಯಕ್ಕೆ ತಕ್ಕಂತೆ ತಮ್ಮ ಪಕ್ಷಕ್ಕೆ ಮತಹಾಕಲು ಕೇಳುತ್ತಾರೆ. ಆದರೆ ಮೋದಿಯವರು ಬೇರೆ ದೇಶಕ್ಕೆ ಸೇರಿದ್ದರೂ ಟ್ರಂಪ್‌ಗೆ ಮತಹಾಕಲು ಕೇಳಿ ಭಾರತವನ್ನು ಅಮೆರಿಕದ 51ನೇ ರಾಜ್ಯವನ್ನಾಗಿ ಮಾಡಿ ಭಾರತಕ್ಕೆ ಅಪಮಾನ ಮಾಡಿದರು. ಇವು ಮೋದಿಯವರ ಎಂಟು ವರ್ಷಗಳ ಅವಧಿಯಲ್ಲಿ ಭಾರತೀಯರು ಜಗತ್ತಿನೆದುರು ನಾಚಿಕೆಯಿಂದ ತಲೆ ತಗ್ಗಿಸಿ ನಿಲ್ಲಬೇಕಾಗಿ ಬಂದ ಹಲವೆಂಟು ಘಟನೆಗಳಲ್ಲಿ ಎಂಟೇ ಎಂಟು ಪ್ರಮುಖ ಪ್ರಕರಣಗಳು.
ಇದಲ್ಲದೆ ಜಗತ್ತಿನಲ್ಲಿ ನರಮೇಧದ ಸಾಧ್ಯತೆ ಹೆಚ್ಚಿರುವ ದೇಶಗಳ ಬಗ್ಗೆ ಅಧ್ಯಯನ ಮಾಡುವ 'ಜಿನೋಸೈಡ್ ವಾಚ್' ಎಂಬ ಸಂಸ್ಥೆ ಕಳೆದ ವರ್ಷ ಜಗತ್ತಿನಲ್ಲಿ ನರಮೇಧ ನಡೆಯಬಹುದಾದ ಸಾಧ್ಯತೆ ಇರುವ ಎರಡು ಪ್ರಮುಖ ದೇಶಗಳಲ್ಲಿ ಭಾರತವೂ ಒಂದು ಎಂದು ಎಚ್ಚರಿಸಿದೆ. ಜಗತ್ತಿನಲ್ಲಿ ಪ್ರಜಾತಂತ್ರಗಳ ಪರಿಸ್ಥಿತಿಗಳ ಬಗ್ಗೆ ಅಧ್ಯಯನ ಮಾಡುವ ಸ್ವೀಡನ್‌ನ 'ವಿ-ಡೆಮ್' ಸಂಸ್ಥೆ ಭಾರತವನ್ನು ಸತತವಾಗಿ ಮೂರನೇ ವರ್ಷ ಪ್ರಜಾತಂತ್ರವಲ್ಲ ಬದಲಿಗೆ ''ಚುನಾವಣಾ ಸರ್ವಾಧಿಕಾರಿ'' ರಾಷ್ಟ್ರವೆಂದು ಹೆಸರಿಸಿದೆ. ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಅತ್ಯಂತ ಅಪಾಯಕಾರಿ 30 ದೇಶಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಇವಲ್ಲದೆ ಭಾರತದ ಜನಜೀವನದ ಪರಿಸ್ಥಿತಿಯನ್ನು ಸೂಚಿಸುವ 45 ಸೂಚ್ಯಂಕಗಳಲ್ಲಿ ಭಾರತವು ಕಳೆದ ಎಂಟು ವರ್ಷಗಳಿಂದ 41 ಸೂಚ್ಯಂಕಗಳಲ್ಲಿ ಸತತವಾಗಿ ಕುಸಿಯುತ್ತಿದೆ ಎಂದು ಚಿಂತಕ ಆಕಾರ್ ಪಟೇಲ್ ಅವರು ತಮ್ಮ 'ಮೋದೀಸ್ ಇಯರ್ಸ್' ಪುಸ್ತಕದಲ್ಲಿ ತೋರಿಸಿಕೊಟ್ಟಿದ್ದಾರೆ. ಆದ್ದರಿಂದಲೇ ಜಗತ್ತಿನಾದ್ಯಂತ ಸ್ವತಂತ್ರ ಸಂಸ್ಥೆಗಳು ಮತ್ತು ಪ್ರಜಾತಾಂತ್ರಿಕ ಸರಕಾರಗಳು ಟ್ರಂಪ್‌ನ ಅಮೆರಿಕ, ಸರ್ವಾಧಿಕಾರಿ ಪುಟಿನ್‌ರ ರಶ್ಯ, ಸರ್ವಾಧಿಕಾರಿ ಎರ್ದೊಗಾನ್‌ನ ಟರ್ಕಿ ಹಾಗೂ ನಿರಂಕುಶ ಒರ್ಬಾನ್‌ನ ಹಂಗೇರಿಯ ಜೊತೆ ಹೋಲಿಸುತ್ತಾರೆ. ಸ್ವಾತಂತ್ರ್ಯಾ ನಂತರದಲ್ಲೇ ಭಾರತವು ಎಂದೂ ಜಗತ್ತಿನೆದುರು ಇಷ್ಟೊಂದು ನಾಚಿಕೆ ಹಾಗೂ ಮುಜುಗರಗಳಿಂದ ತಲೆತಗ್ಗಿಸಿ ನಿಲ್ಲುವ ಸಂದರ್ಭ ಬಂದಿರಲಿಲ್ಲ. ಮೋದಿ ಹೈತೋ ಮುಮ್ಕಿನ್ ಹೈ ! ಎಷ್ಟು ನಿಜ!!