ಬಿಎಂಟಿಸಿಯಲ್ಲಿ ಪಾಸ್ ಖರೀದಿಸಿದರೂ, ಟೋಲ್ ಕಡ್ಡಾಯ
ಬೆಂಗಳೂರು, ಜೂ. 13: ನಗರದ ಹೊರವಲಯದಲ್ಲಿ ಸಂಚರಿಸುವ ಬಿಎಂಟಿಸಿ ಬಸ್‌ಗಳು ಟೋಲ್ ಅನ್ನು ಹಾದು ಹೋದರೆ, ಟೋಲ್ ಪಾವತಿ ಮಾಡಬೇಕು. ಈ ಟೋಲ್ ಶುಲ್ಕವನ್ನು ಪ್ರಯಾಣಿಕರಿಂದ ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಆದರೆ ಈ ರೀತಿ ಪ್ರತ್ಯೇಕವಾಗಿ ವಸೂಲಿ ಮಾಡಲಾಗಿರುವ ಶುಲ್ಕದ ಲೆಕ್ಕವು ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಲಭ್ಯವಿಲ್ಲ ಎಂಬುದು ಮಾಹಿತಿ ಕಾಯ್ದೆಯಿಂದ ಬಹಿರಂಗವಾಗಿದೆ.
ನಗರದ ಹೊರವಲಯದ ಆನೇಕಲ್, ಹೊಸಕೋಟೆ, ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ, ಡಾಬಸ್ ಪೇಟೆಗಳಿಗೆ ಹೋಗುವ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದರೆ, ಪ್ರಯಾಣಿಕರು ಪ್ರತ್ಯೇಕವಾಗಿ ಟೋಲ್ ಶುಲ್ಕವನ್ನು ಹೆಚ್ಚುವರಿಯಾಗಿ ಭರಿಸಬೇಕಾಗಿರುತ್ತದೆ. ಬಿ.ಶ್ರೀರಾಮುಲು ಸಾರಿಗೆ ಸಚಿವರಾದ ಬಳಿಕ ಮಾಸಿಕ ಪಾಸ್ ಹಾಗೂ ದೈನಂದಿನ ಪಾಸ್‌ಗಳನ್ನು ಪಡೆದವರೂ ಟೋಲ್ ಶುಲ್ಕವನ್ನು ಪ್ರತ್ಯೇಕವಾಗಿ ಪಡೆಯುವಂತೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಶ್ರೀರಾಮುಲು ಸಾರಿಗೆ ಸಚಿವರಾ ಗುವುದಕ್ಕೂ ಮುನ್ನ ಪಾಸ್‌ಗಳನ್ನು ಹೊಂದಿದವರಿಗೆ ಟೋಲ್ ಶುಲ್ಕ ವಿಧಿಸುತ್ತಿರಲಿಲ್ಲ. ಸಾಮಾನ್ಯವಾಗಿ ಮಾಸಿಕ ಪಾಸುಗಳನ್ನು ಪಡೆದು, ಬಿಎಂಟಿಸಿಯಲ್ಲಿ ಪ್ರಯಾಣಿಸುವವರು ಕಾರ್ಮಿಕರಾಗಿರುತ್ತಾರೆ. ಅವರು ರಿಯಾಯ್ತಿ ಪಾಸುಗಳನ್ನು ಪಡೆದುಕೊಂಡರೂ ಟೋಲ್ ಶುಲ್ಕವನ್ನು ಪಾವತಿ ಮಾಡುವುದು ಅನಿವಾರ್ಯ. ಆದರೆ ಈ ಟೋಲ್ ಶುಲ್ಕದ ಲೆಕ್ಕವು ಬಿಎಂಟಿಸಿ ಕೇಂದ್ರ ಕಚೇರಿಯ ಲೆಕ್ಕಧಿಕಾರಿಗಳ ಬಳಿ ಇಲ್ಲದೆ ಇರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಟೋಲ್ ಶುಲ್ಕದ ರೂಪದಲ್ಲಿ ಪಡೆಯುತ್ತಿರುವ ಹಣವು ಸಂಸ್ಥೆಯ ಆದಾಯದ ಮೂಲವಾಗಿದ್ದು, ಲೆಕ್ಕಾಧಿಕಾರಿಗಳು ಆದಾಯದ ಮೂಲವನ್ನು ಮಾಸಿಕವಾಗಿ ತೋರಿಸುತ್ತದೆ. ಪರಿಶೀಲಿಸುವುದು ಅಗತ್ಯವಾಗಿರುತ್ತದೆ. ಆದಾಯ ಮೂಲಗಳನ್ನು ಕಡೆಗಣಿಸಿದ್ದಾರೆ. ಬಿಎಂಟಿಸಿ ನಷ್ಟದಲ್ಲಿದೆ ಎಂದು ಪ್ರತಿಸಲವೂ ಸಚಿವರು ಸೇರಿ ವ್ಯವಸ್ಥಾಪಕರು ಹೇಳಿಕೆಗಳನ್ನು ನೀಡುತ್ತಿದ್ದು, ಸಂಸ್ಥೆಯ ಆಯವ್ಯಯದ ಮೂಲಗಳನ್ನು ಪರಿಶೀಲನೆಗೆ ತೆಗೆದುಕೊಳ್ಳದಿರುವುದು, ಬಿಎಂಟಿಸಿಯಲ್ಲಿ ನಡೆಯುತ್ತಿರುವ ಬೇಜವಾಬ್ದಾರಿಯನ್ನು ತೋರಿಸುತ್ತದೆ.
ಬಿಎಂಟಿಸಿಯ ಒಟ್ಟು 46 ಘಟಕಗಳಿಂದ ಕಾರ್ಯಚಾರಣೆ ಮಾಡುವ ಬಸ್‌ಗಳಲ್ಲಿ ಪ್ರಾಯಾಣಿಕರಿಂದ ಟೋಲ್ ಶುಲ್ಕವನ್ನು ಪ್ರಾಯಾಣಿಕರು ಟಿಕೆಟ್ ರೂಪದಲ್ಲಿ ಪಾವತಿ ಮಾಡುತ್ತಿದ್ದಾರೆಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ಹಕ್ಕಿನಲ್ಲಿ ದಾಖಲೆ ನೀಡಿದ್ದಾರೆ. ಆದರೆ, ಇದುವರೆಗೂ ಎಷ್ಟು ಹಣವನ್ನು ಪ್ರಯಾಣಿಕರಿಂದ ಸಂಗ್ರಹಿಸಲಾಗಿದೆ ಎಂಬ ಮಾಹಿತಿಯನ್ನು ಮರೆಮಾಚಲಾಗಿದೆ. ಇನ್ನು ಬಿಎಂಟಿಸಿ ವಾರ್ಷಿಕವಾಗಿ ಎಷ್ಟು ಹಣವನ್ನು ಟೋಲ್‌ಗೆ ಪಾವತಿ ಮಾಡಲಾಗಿದೆ ಎಂಬ ದಾಖಲೆಯನ್ನು ಲೆಕ್ಕಾಧಿಕಾರಿಗಳು ನೀಡಿದ್ದಾರೆ.
ನಗರಕ್ಕೆ ಕೆಲಸಕ್ಕಾಗಿ ಪ್ರತಿನಿತ್ಯ ಬಿಎಂಟಿಸಿಯಲ್ಲಿ ಪ್ರಯಾಣ ಮಾಡುವವರು ಮಾಸಿಕ ಪಾಸ್‌ಗಳನ್ನು ಪಡೆದುಕೊಂಡಿರುತ್ತಾರೆ. ಈ ರೀತಿ ಮಾಸಿಕ ಪಾಸ್ ಪಡೆದವರಿಗೆ ಟೋಲ್ ಟಿಕೆಟ್ ಹಾಕುವುದು ಸರಿಯಲ್ಲ. ಅಗತ್ಯ ವಸ್ತುಗಳು ಬೆಲೆ ಏರಿಕೆಯಿಂದ ಜನರ ಬದುಕು ದುಸ್ತರವಾಗಿದೆ. ಬಿಎಂಟಿಸಿಯು ಪಾಸ್ ಪಡೆದವರಿಗೆ ಟೋಲ್ ಟಿಕೆಟ್ ಹಾಕುವ ಪ್ರವೃತ್ತಿಯಿಂದ ಮತ್ತಷ್ಟು ಹದಗೆಡುತ್ತದೆ. ಮೊದಲಿಂದ ಟೋಲ್ ಹಾಕದೆ, ಈಗ ಹಾಕುತ್ತಿರುವುದರ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕರನ್ನು ಕೇಳಿದರೆ, ಕೇಂದ್ರ ಕಚೇರಿಯ ಆದೇಶ ಎಂದು ಹೇಳುತ್ತಿದ್ದಾರೆ. ಆದರೆ ಕೇಂದ್ರ ಕಚೇರಿಯಲ್ಲಿ ಟೋಲ್ ಸಂಗ್ರಹದ ಮಾಹಿತಿ ಇಲ್ಲದೆ ಇರುವದೇ ವಿಪರ್ಯಾಸ.
ವಿಜಯ್, ಖಾಸ್ ಕಂಪೆನಿಯ ಉದ್ಯೋಗಿ, ಹೊಸಕೋಟೆ ನಿವಾಸಿ
---------------------------------------------------
(ಟೋಲ್ ಗೇಟ್ ಸ್ಥಳ- ಪ್ರಯಾಣಿಕರಿಂದ ವಸೂಲಿ ಮಾಡುವ ದರ ರೂ.)
►ಹೊಸಕೋಟೆ -3 ರೂ.
►ದೇವನಹಳ್ಳಿ - 8 ರೂ.
► ದೊಡ್ಡಬಳ್ಳಾಪರ - 4 ರೂ.
►ನೆಲಮಂಗಲ – 3 ರೂ.
►ದಾಬಸ್ ಪೇಟೆ - 3 ರೂ.
►ಆನೇಕಲ್ - 10 ರೂ.
ವರ್ಷ- ಬಿಎಂಟಿಸಿ ಟೋಲ್‌ಗೆ ಪಾವತಿಸಿದ ಮೊತ್ತ(ರೂ.) (30.11.2021ರವರೆಗೆ)
2016-17-5,44,50,376 ರೂ.
2017-18-6,49,95,275 ರೂ.
2018-19-6,57,87,068 ರೂ.
2019-20-7,93,93,598 ರೂ.
2020-214,00,84,883 ರೂ.
2021-22-3,09,78,615 ರೂ.