"ಹಿಂಸಾಕೋರರಿಗೆ ರಿಟರ್ನ್ ಗಿಫ್ಟ್'' ವಿಡಿಯೋ ವೈರಲ್: ತನಗೆ ಮಾಹಿತಿಯಿಲ್ಲ ಎಂದ ಸಹರಣಪುರ ಎಸ್‌ಪಿ

Update: 2022-06-16 17:01 IST
"ಹಿಂಸಾಕೋರರಿಗೆ ರಿಟರ್ನ್ ಗಿಫ್ಟ್ ವಿಡಿಯೋ ವೈರಲ್: ತನಗೆ ಮಾಹಿತಿಯಿಲ್ಲ ಎಂದ ಸಹರಣಪುರ ಎಸ್‌ಪಿ
Photo: ndtv.com
  • whatsapp icon

ಲಕ್ನೋ, ಜೂ. 16: ವ್ಯಕ್ತಿಗಳ ಗುಂಪೊಂದಕ್ಕೆ ಪೊಲೀಸ್ ಅಧಿಕಾರಿಗಳು ಥಳಿಸುತ್ತಿರುವಂತೆ ಕಾಣುವ ವೀಡಿಯೊ ಕುರಿತು ಸಹಾರನಪುರ ಪೊಲೀಸರು ತನಿಖೆಗೆ ಆದೇಶಿಸಿದ್ದಾರೆ.

ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನತುಗೊಂಡ ನೂಪುರ್ ಶರ್ಮಾ ಹಾಗೂ ವಜಾಗೊಂಡ ನವೀನ್ ಜಿಂದಾಲ್ ವಿರುದ್ಧ ದೇಶಾದ್ಯಂತ ಜೂನ್ 10ರಂದು ನಡೆದ ಪ್ರತಿಭಟನೆಯಲ್ಲಿ ಈ ವ್ಯಕ್ತಿಗಳು ಪಾಲ್ಗೊಂಡಿದ್ದರು ಎಂದು ಹೇಳಲಾಗಿದೆ. 
‘‘ವೀಡಿಯೊದ ವಿವರಗಳನ್ನು ಖಚಿತಪಡಿಸಿಕೊಳ್ಳಲು ನಾವು ತನಿಖೆಗೆ ಆದೇಶ ನೀಡಿದ್ದೇವೆ’’ ಎಂದು ಸಹಾರನಪುರದ ಹಿರಿಯ ಪೊಲೀಸ್ ಅಧೀಕ್ಷಕ ಆಕಾಶ್ ತೋಮರ್ ಹೇಳಿದ್ದಾರೆ. ‘‘ಪೊಲೀಸ್ ಅಧೀಕ್ಷಕರು ತನಿಖೆ ನಡೆಸಲಿದ್ದಾರೆ. ತನಿಖೆಯ ಸಂದರ್ಭ ನಿರ್ಧರಿಸಲಾದ ಸತ್ಯದ ಆಧಾರದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು’’ ಎಂದು ಅವರು ತಿಳಿಸಿದ್ದಾರೆ. 

ಆದರೆ, ಈ ವೀಡಿಯೊವನ್ನು ಪೊಲೀಸ್ ಠಾಣೆಯಲ್ಲಿ ಚಿತ್ರೀಕರಿಸಲಾಗಿದೆ ಎಂಬುದನ್ನು ಪೊಲೀಸರು ನಿರಾಕರಿಸಿದ್ದಾರೆ. ವೀಡಿಯೊದಲ್ಲಿರುವ ಸ್ಥಳವನ್ನು ನಿರ್ಧರಿಸಲು ವೀಡಿಯೋದ ಡಿಜಿಟಲ್ ಪರೀಕ್ಷೆಗಾಗಿ ನಾವು ಕಾಯುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. 
ವೀಡಿಯೊದಲ್ಲಿ  ಕಂಡು ಬಂದ 20ರ ಹರೆಯದ ಸುಭಾನ್ ಖಾನ್, 19ರ ಹರೆಯದ ಮುಹಮ್ಮದ್ ಆಸೀಫ್, 19ರ ಹರೆಯದ ಮುಹಮ್ಮದ್ ಅಲಿ ಅವರ ಕುಟುಂಬವನ್ನು ಸ್ಕ್ರಾಲ್.ಇನ್ ಭೇಟಿ ಮಾಡಿದೆ. ಈ ಸಂದರ್ಭ ಕುಟುಂಬ, ‘‘ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಹಾಗೂ ಕೊಟ್ವಾಲಿ ನಗರ ಪೊಲೀಸ್ ಠಾಣೆಯಲ್ಲಿ ಜೂನ್ 10ರಂದು ಥಳಿಸಲಾಯಿತು. ಈಗ ಅವರು ಕಾರಾಗೃಹದಲ್ಲಿದ್ದಾರೆ’’ ಎಂದು ತಿಳಿಸಿದ್ದಾರೆ.

ಉತ್ತರಪ್ರದೇಶದ ಬಿಜೆಪಿ ಶಾಸಕ ಶಲಭ್ ಮಣಿ ತ್ರಿಪಾಠಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಈ ವೀಡಿಯೊದಲ್ಲಿ ಪೊಲೀಸ್ ಠಾಣೆಯಂತೆ ಕಾಣುವ ಕೊಠಡಿಯೊಂದರಲ್ಲಿ 9 ಮಂದಿಗೆ ಇಬ್ಬರು ಪೊಲೀಸರು ಬೆತ್ತದಿಂದ ಥಳಿಸುತ್ತಿರುವುದು, ಅವರು ಹೊಡೆಯದಂತೆ ಯಾಚಿಸುತ್ತಿರುವುದು, ಹೊಡೆತದಿಂದ ತಪ್ಪಿಸಿಕೊಳ್ಳಲು ಕೈ ಅಡ್ಡ ಇರಿಸುತ್ತಿರುವುದು ಕಂಡು ಬಂದಿತ್ತು. ಇದು ಸಾಮಾಜಿಕ ಮಾದ್ಯಮದಲ್ಲಿ ವೈರಲ್ ಆಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News