ಹೆಚ್ಚುತ್ತಿರುವ ಆತ್ಮಹತ್ಯೆ; ಹೊಣೆ ಯಾರು?

Update: 2022-07-04 02:40 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತನ್ನ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ, ಪತ್ನಿಯ ಜೊತೆಗೆ ಒಬ್ಬ ಆತ್ಮಹತ್ಯೆಗೆ ಯತ್ನಿಸಿದ. ದುರಂತದಲ್ಲಿ ಮೂವರು ಮಕ್ಕಳು ಮೃತಪಟ್ಟರು. ತಂದೆ ಬದುಕಿಕೊಂಡ. ಈ ಆತ್ಮಹತ್ಯೆಯತ್ನ ಮತ್ತು ಕೊಲೆಗೆ ‘ಆರ್ಥಿಕ ಸಂಕಷ್ಟವೇ ಮುಖ್ಯ ಕಾರಣ’ ಎಂದೂ ಮಾಧ್ಯಮಗಳು ಬರೆದವು. ಮೂವರು ಮಕ್ಕಳ ಸಾವಿಗಾಗಿ ಊರಿಗೆ ಊರೇ ಕಣ್ಣೀರು ಸುರಿಸಿತು. ತನ್ನ ಸಮಸ್ಯೆಗಳಿಗಾಗಿ ಅಮಾಯಕ ಮೂವರು ಮಕ್ಕಳನ್ನು ಕೊಂದು ಹಾಕಿದ ‘ತಂದೆ’ಯ ವಿರುದ್ಧ ಸಮಾಜ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿತು. ಆದರೆ ಯಾವ ತಂದೆಯಾದರೂ ಯಾಕೆ ತನ್ನ ಕಂದಮ್ಮಗಳನ್ನು ಬಾವಿಗೆ ತಳ್ಳಿ ಆತ್ಮಹತ್ಯೆಗೆ ಯತ್ನಿಸುತ್ತಾನೆ? ಆತನನ್ನು ಅಂತಹ ಸ್ಥಿತಿಗೆ ತಲುಪಿಸಿದ ಸನ್ನಿವೇಶವಾದರೂ ಎಂತಹದು ಎನ್ನುವುದರ ಬಗ್ಗೆ ಸಮಾಜ ತಲೆಕೆಡಿಸಿಕೊಳ್ಳಲಿಲ್ಲ. ಕೆಲವು ತಿಂಗಳ ಹಿಂದೆ ದಾವಣಗೆರೆಯಲ್ಲಿ ಪದವಿ ಶಿಕ್ಷಣ ಪೂರೈಸುವುದಕ್ಕೆ ಪಾಲಕರು ಅವಕಾಶ ನೀಡಲಿಲ್ಲ ಎಂದು ನಿರಾಶಳಾಗಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ತಾಯಿ ಕೂಲಿ ಮಾಡಿಕೊಂಡಿದ್ದಳು. ವಿದ್ಯಾರ್ಥಿನಿ ಪ್ರತಿಭಾವಂತೆ. ತನ್ನ ಬದುಕನ್ನೂ ತಾಯಿಯ ಬದುಕಿನಂತೆ ಸವೆಸುವುದಕ್ಕೆ ಆಕೆ ಸಿದ್ಧಳಿರಲಿಲ್ಲ. ಇಲ್ಲಿ ತಪ್ಪು ಯಾರದು? ಆಕೆಯನ್ನು ಆತ್ಮಹತ್ಯೆಯ ಕಡೆಗೆ ತಳ್ಳಿದವರು ಯಾರು? ಈ ಪ್ರಶ್ನೆಗಳಿಗೆ ಸದ್ಯದ ದಿನಗಳಲ್ಲಿ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವಿಲ್ಲ. ಒಂದು ತಿಂಗಳ ಹಿಂದೆ, ರಾಜಸ್ಥಾನದಲ್ಲಿ  ಒಂದೇ ಕುಟುಂಬಕ್ಕೆ ಸೇರಿದ ಸದಸ್ಯರನ್ನು ಮದುವೆಯಾದ ಮೂವರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡರು. ಆತ್ಮಹತ್ಯೆ ಮಾಡಿಕೊಳ್ಳುವಾಗ ಅವರು ತಮ್ಮ ಜೊತೆಗೆ ಎರಡು ಎಳೆ ಮಕ್ಕಳನ್ನೂ ಕೊಂದಿದ್ದಾರೆ. ಇಲ್ಲೂ ಆತ್ಮಹತ್ಯೆಗೆ ಆರ್ಥಿಕ ಸಮಸ್ಯೆಯೇ ಕಾರಣ. ಗಂಡಸರು ಆರ್ಥಿಕ ಸಮಸ್ಯೆ ಎದುರಿಸಿದಾಕ್ಷಣ, ತಕ್ಷಣದ ಸಹಾಯಕ್ಕಾಗಿ ಪತ್ನಿಯ ತವರಿನ ಮೊರೆ ಹೋಗುವುದು ಹೆಚ್ಚಾಗುತ್ತಿದೆ. ಇದು ಅಂತಿಮವಾಗಿ ವರದಕ್ಷಿಣೆ ಕಿರುಕುಳವಾಗಿ ಮಾರ್ಪಡುತ್ತದೆ. ಇಲ್ಲೂ ವರದಕ್ಷಿಣೆಯ ಕಾಟವೇ ಅಂತಿಮವಾಗಿ ಮೂವರು ಸಹೋದರಿಯರ ಕಗ್ಗೊಲೆಗೆ ಕಾರಣವಾಯಿತು. 

ಸದ್ಯದ ದಿನಗಳಲ್ಲಿ ಆತ್ಮಹತ್ಯೆಗಳಿಗೆ ‘ಕೌಟುಂಬಿಕ ಜಗಳ’ ಎನ್ನುವ ಸುಲಭದ ಷರಾ ಬರೆದು ಮುಗಿಸಿ ಬಿಡುವಂತಿಲ್ಲ. ಕೌಟುಂಬಿಕ ಜಗಳ ಎನ್ನುವುದು ಬಹುತೇಕ ಆತ್ಮಹತ್ಯೆಗಳಿಗೆ ಕೊಡುವ ಸಾಧಾರಣ ಕಾರಣಗಳು. ಆದರೆ ಕುಟುಂಬದೊಳಗೆ ಜಗಳ ಸುಮ್ಮನೆ ಸೃಷ್ಟಿಯಾಗುವುದಿಲ್ಲ. ಹೆಚ್ಚಿನ ಜಗಳಗಳು ಮಕ್ಕಳ ಪಾಲನೆ, ಪೋಷಣೆಯ ವಿಷಯಗಳಿಂದಲೇ ಆರಂಭವಾಗುತ್ತವೆ. ಯಾವಾಗ ಕುಟುಂಬದ ಯಜಮಾನ ಅನ್ನಿಸಿಕೊಂಡವನು ಅದರಲ್ಲಿ ಹಿಂಜರಿಕೆ ಅನುಭವಿಸುತ್ತಾನೆಯೋ ಆಗ ಕುಟುಂಬದ ಲಯ ತಪ್ಪತೊಡಗುತ್ತದೆ. ಕೌಟುಂಬಿಕ ಜಗಳದಲ್ಲಿ  ತಂದೆಯೇ ಖಳನಾಯಕನಾಗಬೇಕಾಗಿಲ್ಲ. ಕುಟುಂಬದ ಅವಶ್ಯಕತೆಗಳನ್ನು ಈಡೇರಿಸಲು ಅವನಿಗೆ ಸಾಧ್ಯವಾಗದೇ ಇರುವುದು ಆತನ ಅಪರಾಧವೆಂದು ನಾವು ಬಗೆಯುವಂತೆಯೂ ಇಲ್ಲ. ಯಾಕೆಂದರೆ, ಅದಕ್ಕೆ ಅವನೊಬ್ಬನೇ ಹೊಣೆಗಾರನಲ್ಲ. ನಮ್ಮ ಸಮಾಜ, ನಮ್ಮನ್ನಾಳುವ ರಾಜಕೀಯ ವ್ಯವಸ್ಥೆ, ನಮ್ಮ ಆರ್ಥಿಕ ನೀತಿಗಳು ಎಲ್ಲವೂ ಆತನ ಆರ್ಥಿಕ ಪತನದ ಜೊತೆಗೆ ತಳಕು ಹಾಕಿಕೊಂಡಿರುತ್ತವೆ. ಆದುದರಿಂದ, ಇಂತಹ ಆತ್ಮಹತ್ಯೆಗಳನ್ನು ಯಾರೋ ಒಬ್ಬನ ತಲೆಗೆ ಕಟ್ಟಿ ‘ಮುಗಿಸಿ’ ಬಿಡಬಾರದು. ಬದಲಿಗೆ, ಇಂತಹ ಆತ್ಮಹತ್ಯೆಗಳು ಹೆಚ್ಚುತ್ತಿದ್ದಂತೆಯೇ ಅದರ ಮೂಲ ಕಾರಣಗಳನ್ನು ಹುಡುಕುವ ಕೆಲಸ ನಡೆಯಬೇಕಾಗಿದೆ.

ದಶಕದ ಹಿಂದೆ ಭಾರತದಲ್ಲಿ ರೈತರ ಆತ್ಮಹತ್ಯೆಗಳು, ಎಸೆಸೆಲ್ಸಿ, ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಸುದ್ದಿಯಲ್ಲಿ ಮತ್ತು ಚರ್ಚೆಯಲ್ಲಿರುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ರೈತರು ಮತ್ತು ಈ ವಿದ್ಯಾರ್ಥಿಗಳ ಆತ್ಮಹತ್ಯೆಗಳಿಗೆ ಕಣ್ಣೀರು ಮಿಡಿಯುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಅದರ ಅರ್ಥ ಈ ಆತ್ಮಹತ್ಯೆಗಳಲ್ಲಿ ಇಳಿಕೆಯಾಗಿದೆ ಎಂದಲ್ಲ. ನೋಟು ನಿಷೇಧ ಮತ್ತು ಲಾಕ್‌ಡೌನ್‌ಗಳ ಬಳಿಕ ದೇಶದಲ್ಲಿ ಆತ್ಮಹತ್ಯೆಗಳು ಕೇವಲ ಈ ಎರಡು ವರ್ಗಕ್ಕಷ್ಟೇ ಸೀಮಿತವಾಗಿ ಉಳಿಯದೆ ಎಲ್ಲ ಕ್ಷೇತ್ರಗಳನ್ನು ವಿಸ್ತರಿಸಿಕೊಂಡಿದೆ. ನಿರಂತರ ಕೊರೋನಾ ಮತ್ತು ಲಾಕ್‌ಡೌನ್ ಬಳಿಕ, ದೇಶದಲ್ಲಿ ಮೊದಲ ಬಾರಿಗೆ ಉದ್ಯಮಿಗಳ ಆತ್ಮಹತ್ಯೆಗಳು ಸುದ್ದಿಯಲ್ಲಿವೆ. ಹಲವು ಸಾವಿರ ಕೋಟಿ ರೂ. ಹೂಡಿಕೆ ಮಾಡಿ ಸಂಸ್ಥೆಯನ್ನು ಕಟ್ಟಿ, ಸಾವಿರಾರು ಜನರಿಗೆ ಉದ್ಯೋಗವನ್ನು ನೀಡಿದ ಉದ್ಯಮಿಯೊಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. 2020-21ರಲ್ಲಿ ರೈತರಿಗಿಂತ ಉದ್ಯಮಿಗಳೇ ಆತ್ಮಹತ್ಯೆಯಲ್ಲಿ ಮುಂದಿದ್ದಾರೆ ಎನ್ನುವುದನ್ನು ವರದಿಯೊಂದು ತಿಳಿಸಿತ್ತು. 2020ರಲ್ಲಿ ರೈತರ ಆತ್ಮಹತ್ಯೆಯ ಅಧಿಕೃತ ಸಂಖ್ಯೆ  10,677. ಇದೇ ಸಂದರ್ಭದಲ್ಲಿ ಉದ್ಯಮಿಗಳ ಆತ್ಮಹತ್ಯೆ ಸಂಖ್ಯೆ11,716. ಇವೆಲ್ಲವೂ ಅಧಿಕೃತ ಸಂಖ್ಯೆ ಎನ್ನುವುದು ಗಮನದಲ್ಲಿರಬೇಕಾಗಿದೆ. ಅನಧಿಕೃತ ವಿವರಗಳು ಇನ್ನಷ್ಟು ಭೀಕರವಾಗಿವೆ. ಒಬ್ಬ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಾಗ ಆತನನ್ನು ಅವಲಂಬಿಸಿದ  ನೂರಾರು ಉದ್ಯೋಗಿಗಳೂ ಆತ್ಮಹತ್ಯೆಯ ಕಡೆಗೆ ಮುಖ ಮಾಡಬೇಕಾದ ಸ್ಥಿತಿಗೆ ಬಲಿಯಾಗುತ್ತಾರೆ. ನೋಟು ನಿಷೇಧದಿಂದಾಗಿ ಈ ದೇಶದ ಆರ್ಥಿಕತೆ ನೆಲಕಚ್ಚಿತು. ಅದರ ಬೆನ್ನಿಗೇ ಘೋಷಣೆಯಾದ ಲಾಕ್‌ಡೌನ್ ಅಳಿದುಳಿದ ಉದ್ಯಮಗಳು ಮುಚ್ಚಲು ಕಾರಣವಾಯಿತು. ಪರಿಣಾಮವಾಗಿ ಉದ್ಯಮಿಗಳು ನಷ್ಟಕ್ಕೀಡಾದರು. ಅಲ್ಲಿನ ಸಿಬ್ಬಂದಿ ನಿರುದ್ಯೋಗಿಗಳಾದರು. ಹೀಗೆ ಹೆಚ್ಚಿದ ನಿರುದ್ಯೋಗ ಮನೆ ಮನೆಗಳಲ್ಲಿ ‘ಕೌಟುಂಬಿಕ ಜಗಳ, ಕೌಟುಂಬಿಕ ವೈಮನಸ್ಯ’ದ ರೂಪ ತಾಳಿ ಅಂತಿಮವಾಗಿ ಮನೆಯ ಸದಸ್ಯರನ್ನು ಆತ್ಮಹತ್ಯೆಗಳಿಗೆ ದೂಡುತ್ತಿವೆ.

2017-18ರಲ್ಲಿ ದೇಶದ 12 ಸಾವಿರ ನಿರುದ್ಯೋಗಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಆದರೆ 2020ರಲ್ಲಿ ಇದು ಇನ್ನಷ್ಟು ಭೀಕರ ಸ್ವರೂಪವನ್ನು ತಾಳಿದೆ. ಇಂತಹ ಬಹುತೇಕ ಆತ್ಮಹತ್ಯೆಗಳನ್ನು ಮದ್ಯಪಾನದ ಚಟ, ಕೌಟುಂಬಿಕ ಒತ್ತಡ, ಮಾನಸಿಕ ಕಾಯಿಲೆಗಳ ಹೆಸರಲ್ಲಿ ಮುಚ್ಚಿ ಹಾಕಲಾಗುತ್ತಿದೆ. ಕಳೆದೆರಡು ವರ್ಷಗಳಿಂದ ದೇಶದಲ್ಲಿ ಮಾನಸಿಕ ಕಾಯಿಲೆ ಪೀಡಿತರ ಸಂಖ್ಯೆಯೂ ಹೆಚ್ಚುತ್ತಿವೆ. ಮಾನಸಿಕ ಒತ್ತಡಗಳೇ ಈ ಕಾಯಿಲೆಗಳಿಗೆ ಪ್ರಮುಖ ಕಾರಣ. ನಿರುದ್ಯೋಗ, ಬಡತನ ಮೊದಲಾದ ಕಾರಣದಿಂದ ಹೆಚ್ಚುತ್ತಿರುವ ಹತಾಶೆ ಯುವಕರಲ್ಲಿ ಮತ್ತು ಗೃಹಸ್ಥರಲ್ಲಿ ಆತ್ಮಹತ್ಯೆಯ ಮನಸ್ಥಿತಿಯನ್ನು ಸೃಷ್ಟಿಸುತ್ತಿದೆ ಎಂದು ಮಾನಸಿಕ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಇಂತಹ ಸಂತ್ರಸ್ತರಿಗೆ ಧೈರ್ಯ ತುಂಬುವುದಕ್ಕೆ ಬೇಕಾದ ಮಾನಸಿಕ ವೈದ್ಯರ ಕೊರತೆಯನ್ನು ದೇಶ ಎದುರಿಸುತ್ತಿದೆ. ಇಡೀ ದೇಶವೇ ಆತ್ಮಹತ್ಯೆಯ ಕಡೆಗೆ ಜರಗುತ್ತಿರುವಾಗ, ಯಾವುದೇ ಆತ್ಮಹತ್ಯೆಯಂತಹ ಪ್ರಕರಣಗಳನ್ನು ಒಬ್ಬ ವ್ಯಕ್ತಿಯ ಖಾಸಗಿ ಸಮಸ್ಯೆ ಎಂದು ಭಾವಿಸಬಾರದು.. ಆದುದರಿಂದಲೇ, ಪ್ರತೀ ಆತ್ಮಹತ್ಯೆಯೂ ತನಿಖೆಗೆ ಯೋಗ್ಯವಾಗಿದೆ ಮತ್ತು ಅದರ ಕಾರಣಗಳನ್ನು ಹುಡುಕಿ, ಜಿಲ್ಲಾಡಳಿತಕ್ಕೆ ವರದಿಗಳನ್ನು ಒಪ್ಪಿಸುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದೆ. ಹಾಗೆಯೇ, ಆತ್ಮಹತ್ಯೆಯನ್ನು ತಪ್ಪಿಸಲು, ಆತ್ಮಹತ್ಯಾ ತಡೆಯಂತಹ ಪಡೆಗಳನ್ನು ನಿರ್ಮಿಸುವ ಅಗತ್ಯವಿದೆ. ಆತ್ಮಹತ್ಯೆಯ ಮನಸ್ಥಿತಿಯನ್ನು ಹೊಂದಿದವರನ್ನು ತಲುಪುವ ಹೆಲ್ಪ್‌ಲೈನ್‌ಗಳನ್ನು ಇನ್ನಷ್ಟು ಜನಪ್ರಿಯ ಗೊಳಿಸಬೇಕು. ಯಾವುದೇ ಆರ್ಥಿಕ ಅಥವಾ ಇನ್ನಿತರ ಸಮಸ್ಯೆಗಳು ಎದುರಾದಾಗ ಆತ್ಮಹತ್ಯೆ ಅದಕ್ಕೆ ಪರಿಹಾರವಲ್ಲ ಎನ್ನುವುದನ್ನು ಸ್ಪಷ್ಟಪಡಿಸುವುದಕ್ಕಾಗಿಯೇ ಸಾರ್ವಜನಿಕ ಆಸ್ಪತ್ರೆಗಳು ತಜ್ಞ ವೈದ್ಯರನ್ನು ಮತ್ತು ಸ್ವಯಂಸೇವಕರನ್ನು ಹೊಂದಿರಬೇಕು. ಆತ್ಮಹತ್ಯೆಯ ಕುರಿತಂತೆ ಸಮಾಜದಲ್ಲಿ ಹೆಚ್ಚು ಜಾಗೃತಿಯನ್ನು ಮೂಡಿಸಬೇಕಾದ ಸಮಯ ಇದಾಗಿದೆ. ಯಾಕೆಂದರೆ, ದೇಶ ಆರ್ಥಿಕವಾಗಿ ಇನ್ನಷ್ಟು ಪಾತಾಳಕ್ಕೆ ಸಾಗುತ್ತಿದೆ. ನಮ್ಮ ಸರಕಾರ, ಆತ್ಮಹತ್ಯೆಯನ್ನೇ ಜನರಿಗೆ ಒಂದು ಕೊಡುಗೆಯಾಗಿ ಘೋಷಿಸುವ ದಿನ ಬಂದರೂ ಅದರಲ್ಲಿ ಅಚ್ಚರಿಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News