ಬೇಲಿಯೇ ಎದ್ದು ಹೊಲ ಮೇಯ್ದರೆ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪಿಎಸ್ಸೈ ನೇಮಕಾತಿ ಪ್ರಕರಣದ ಅಕ್ರಮಗಳ ತನಿಖೆ ಪ್ರಮುಖ ತಿರುವೊಂದನ್ನು ಪಡೆದುಕೊಂಡಿದೆ. ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ಆಗಿರುವ ಅಮೃತ್ ಪೌಲ್ ಅವರನ್ನು ಸಿಐಡಿ ಬಂಧಿಸಿದ್ದು, ರಾಜ್ಯದ ಕಾನೂನು ವ್ಯವಸ್ಥೆಯ ಪಾಲಿಗೆ ಇದೊಂದು ಮುಜುಗರದ ಸಂಗತಿಯೇ ಸರಿ. ಎಡಿಜಿಪಿ ದರ್ಜೆಯ ಹಿರಿಯ ಅಧಿಕಾರಿಯೊಬ್ಬರ ಬಂಧನ ರಾಜ್ಯಕ್ಕೆೆ ಹೊಸತು. ಪ್ರಕರಣಕ್ಕೆ ಸಂಬಂಧಿಸಿ ನೇಮಕಾತಿ ವಿಭಾಗದ ಡಿವೈಎಸ್‌ಪಿ ಸಹಿತ ಹಲವರನ್ನು ಈಗಾಗಲೇ ಬಂಧಿಸಲಾಗಿದ್ದು, ಇನ್ನಷ್ಟು ಅಧಿಕಾರಿಗಳು ಬಂಧನವಾಗುವ ಎಲ್ಲ ಸಾಧ್ಯತೆಗಳು ಕಾಣುತ್ತಿವೆ. ಪೊಲೀಸ್ ಇಲಾಖೆಯೆಂದಲ್ಲ, ಅಕ್ರಮಗಳಿಲ್ಲದೆ ಯಾವುದೇ ಸರಕಾರಿ ಇಲಾಖೆಗಳ ನೇಮಕಾತಿ ನಡೆಯುವುದಿಲ್ಲ. ಇಂತಹ ಅಕ್ರಮಗಳು ಮೇಲಧಿಕಾರಿಗಳ ಕೈವಾಡವಿಲ್ಲದೆ ನಡೆಯುವುದು ಸಾಧ್ಯವೂ ಇಲ್ಲ. ಸರಕಾರಿ ಇಲಾಖೆಗಳಲ್ಲಿ ಮಡುಗಟ್ಟಿರುವ ಭ್ರಷ್ಟಾಚಾರದ ಮೂಲ, ಅದರ ನೇಮಕಾತಿಯಲ್ಲೇ ಇದೆ ಎನ್ನುವ ಸತ್ಯ ಎಲ್ಲರಿಗೂ ತಿಳಿದಿರುವಂತಹದೇ. ಈ ಹಿಂದೆ, ನೇಮಕಾತಿಯೊಳಗಿನ ಅಕ್ರಮ ಬಹಿರಂಗವಾಗಿಲ್ಲ ಎಂದಾಕ್ಷಣ ಅಕ್ರಮ ನಡೆದಿಲ್ಲ ಎಂದು ನಾವು ಭಾವಿಸುವಂತಿಲ್ಲ. ಹೊಲ ಕಾಯಲು ಬೇಲಿಯನ್ನು ಹಾಕಿದರೆ, ಬೇಲಿಯೇ ಇಲ್ಲಿ ಹೊಲ ಮೇಯುತ್ತದೆ. ಅಕ್ರಮಗಳನ್ನು ತನಿಖೆ ನಡೆಸಬೇಕಾದ ಪೊಲೀಸ್ ಅಧಿಕಾರಿಗಳೇ ಅಕ್ರಮಗಳಲ್ಲಿ ಶಾಮೀಲಾಗುತ್ತಾರೆ ಎಂದ ಮೇಲೆ ಪೊಲೀಸ್ ಇಲಾಖೆಗಳ ತಳಸ್ತರದಲ್ಲಿ ಪೊಲೀಸ್ ಸಿಬ್ಬಂದಿ ಪಡೆಯುವ ಲಂಚಗಳನ್ನು ತಡೆಯುವುದಕ್ಕೆ ಸಾಧ್ಯವೇ? ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿ, ಪ್ರಾಥಮಿಕ ನ್ಯಾಯವನ್ನು ಪಡೆಯಬೇಕಾದರೂ ಲಂಚವಿಲ್ಲದೆ ಸಾಧ್ಯವಿಲ್ಲ ಎನ್ನುವ ವಾತಾವರಣ ನಿರ್ಮಾಣ ಯಾಕಾಗಿದೆ ಎನ್ನುವುದಕ್ಕೆ ಉತ್ತರ, ಎಡಿಜಿಪಿ ಅಮೃತ್ ಪೌಲ್ ಬಂಧನದಲ್ಲಿದೆ.25 ಪಿಎಸ್ಸೈ ಹುದ್ದೆಗಳಿಗೆ ಸುಮಾರು 5 ಕೋಟಿ ರೂಪಾಯಿ ಬೇಡಿಕೆಯನ್ನು ಇಟ್ಟ ಆರೋಪ ಎಡಿಜಿಪಿ ಅವರ ಮೇಲಿದೆ. ಪರೀಕ್ಷೆಯ ಉತ್ತರಗಳನ್ನು ಅವರೇ ನೇರವಾಗಿಯೇ ತಿದ್ದಿದ್ದಾರೆ ಎನ್ನಲಾಗುತ್ತಿದೆ. ಪೊಲೀಸ್ ಅಧಿಕಾರಿಗಳೇ ಪಾತ್ರಧಾರಿಗಳಾಗಿರುವ ಈ ಅಕ್ರಮದಿಂದಾಗಿ, ಪೊಲೀಸ್ ಅಧಿಕಾರಿಗಳಾಗಬೇಕಾಗಿದ್ದ ಹಲವರ ಭವಿಷ್ಯ ಅತಂತ್ರದಲ್ಲಿದೆ.
ಈ ಅಕ್ರಮಗಳಿಂದಾಗಿ ಎರಡು ರೀತಿಯಲ್ಲಿ ಪೊಲೀಸ್ ವ್ಯವಸ್ಥೆಗೆ ಹಾನಿಯಾಗುತ್ತಿದೆ. ಒಂದೆಡೆ ಅರ್ಹ ಫಲಾನುಭವಿಗಳು ಲಂಚ ನೀಡುವುದಕ್ಕೆ ಸಾಧ್ಯವಿಲ್ಲ ಎನ್ನುವ ಒಂದೇ ಕಾರಣದಿಂದ ಅನರ್ಹರಾಗುತ್ತಾರೆ. ಇದೇ ಸಂದರ್ಭದಲ್ಲಿ ಅನರ್ಹರು ಲಂಚದ ಬಲದಿಂದಲೇ ಇಲಾಖೆಯೊಳಗೆ ನುಸುಳುತ್ತಾರೆ. ಅರ್ಹರಿಗೆ ಹುದ್ದೆ ಸಿಗಲಿಲ್ಲ ಮಾತ್ರವಲ್ಲ, ಅನರ್ಹರ ಕೈಗೆ ಖಾಕಿ ಧಿರಿಸುಗಳನ್ನು ನೀಡಿ ಅವರ ಕೈಗೆ ನಾಡಿನ ಕಾನೂನು ಸುವ್ಯವಸ್ಥೆಯನ್ನು ನೀಡಲಾಗುತ್ತದೆ ಮತ್ತು ಅವರಿಂದ ನಾವು ಕರ್ತವ್ಯ ನಿಷ್ಠೆಯನ್ನು, ವೃತ್ತಿ ಧರ್ಮವನ್ನು ನಿರೀಕ್ಷಿಸುತ್ತೇವೆ. ತನ್ನನ್ನು ಆಯ್ಕೆ ಮಾಡಿರುವುದು ಹಣ ಎನ್ನುವುದು ಅಧಿಕಾರಿಗಳಿಗೆ ಸ್ಪಷ್ಟವಾಗಿ ಗೊತ್ತಿರುವಾಗ, ಅವರು ಇಲಾಖೆ ಸೇರಿದ ಮೇಲೆ ಹಣದ ಕಡೆಗೆ ಕಣ್ಣು ಹಾಯಿಸುತ್ತಾರೆಯೇ ಹೊರತು, ಕರ್ತವ್ಯ ಪಾಲನೆಯ ಕಡೆಗಲ್ಲ. ಪೊಲೀಸ್ ಇಲಾಖೆ ಭ್ರಷ್ಟವಾಗುತ್ತಾ ಹೋದಂತೆಯೇ ಅಧಿಕಾರಿಗಳು ರಾಜಕಾರಣಿಗಳ ಸೂತ್ರಕ್ಕೆ ತಕ್ಕ ಹಾಗೆ ಕುಣಿಯಬೇಕಾಗುತ್ತದೆ. ಅಧಿಕಾರಿಗಳು ಭ್ರಷ್ಟರಾದಷ್ಟು ರಾಜಕಾರಣಿಗಳು ಅದರ ಲಾಭವನ್ನು ತಮ್ಮದಾಗಿಸಿಕೊಳ್ಳುತ್ತಾ ಹೋಗುತ್ತಾರೆ. ಅಕ್ರಮ ದಾರಿಯಲ್ಲಿ ಪೊಲೀಸ್ ಇಲಾಖೆಯನ್ನು ಪ್ರವೇಶಿಸಿದವರ ತಲೆಯ ಮೇಲೆ ರಾಜಕಾರಣಿಗಳ ಅಭಯ ಹಸ್ತ ಇದ್ದೇ ಇರುತ್ತದೆ. ಅಕ್ರಮದಲ್ಲಿ ಎಡಿಜಿಪಿಯೇ ಶಾಮೀಲಾಗಿದ್ದಾರೆ ಎಂದ ಮೇಲೆ, ಇದರಲ್ಲಿ ರಾಜಕಾರಣಿಗಳ ಪಾತ್ರ ಇಲ್ಲದೇ ಇರುವುದಕ್ಕೆ ಸಾಧ್ಯವಿಲ್ಲ. ಸರಕಾರದೊಳಗಿರುವ ಶಕ್ತಿಗಳ ಬೆಂಬಲವಿಲ್ಲದೆ ನೇರವಾಗಿ ಒಬ್ಬ ಎಡಿಜಿಪಿ ಈ ಮಟ್ಟದಲ್ಲಿ ಅಕ್ರಮದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ. ಆದುದರಿಂದ, ಪೌಲ್ ಅವರು ಬೇಡಿಕೆ ಇಟ್ಟಿದ್ದಾರೆನ್ನಲಾದ ಹಣದಲ್ಲಿ ಯಾರೆಲ್ಲ ಪಾಲುದಾರರು ಎನ್ನುವುದು ತನಿಖೆಯಿಂದ ಹೊರಬೀಳಬೇಕು. ರಾಜಕಾರಣಿಗಳ ಪಾತ್ರಗಳ ಬಗ್ಗೆ ತನಿಖೆ ನಡೆಯದೇ ಇದ್ದರೆ ಸಂತ್ರಸ್ತರಿಗೆ ಪೂರ್ಣ ಪ್ರಮಾಣದಲ್ಲಿ ನ್ಯಾಯ ಸಿಗಲು ಸಾಧ್ಯವಿಲ್ಲ.
ನೇಮಕಾತಿ ಅಕ್ರಮ ಪ್ರಕರಣದಲ್ಲಿ ದಿವ್ಯಾ ಹಾಗರಗಿ ಎನ್ನುವ ಸಣ್ಣ ಮಿಕವನ್ನು ಹಿಡಿಯಲು ಪೊಲೀಸರು ಹರಸಾಹಸಪಡಬೇಕಾಯಿತು. ಇದಕ್ಕೆ ಕಾರಣವೂ ಸ್ಪಷ್ಟವಿದೆ. ಆಕೆಗೆ ಬಿಜೆಪಿಯ ನಾಯಕರೊಂದಿಗೆ ನೇರ ಸಂಬಂಧವಿತ್ತು. ಸರಕಾರದೊಳಗಿರುವ ಶಕ್ತಿಗಳೇ ಆಕೆಯನ್ನು ರಕ್ಷಿಸಲು ಕೊನೆಯವರೆಗೂ ಪ್ರಯತ್ನಿಸಿದ್ದವು. ಕೊನೆಗೂ ಆಕೆಯ ಬಂಧನವಾಯಿತು. ಆರಂಭದಲ್ಲಿ ಸಣ್ಣ ಪುಟ್ಟ ಮೀನುಗಳನ್ನಷ್ಟೇ ಹಿಡಿಯಲು ಸಿಐಡಿಗೆ ಸಾಧ್ಯವಾಯಿತು. ಇದೀಗ ನೋಡಿದರೆ ದೊಡ್ಡ ದೊಡ್ಡ ಶಾರ್ಕ್‌ಗಳ ಹೆಸರು ಕೇಳಿ ಬರುತ್ತಿದೆ. ಸಿಐಡಿ ಸಿಬ್ಬಂದಿ ತಮ್ಮ ಹಿರಿಯ ಅಧಿಕಾರಿಗಳನ್ನೇ ಬಂಧಿಸುವ ಮಟ್ಟಕ್ಕೆ ಪ್ರಕರಣ ತಲುಪಿದೆ. ನಿಜಕ್ಕೂ ಪ್ರಕರಣವನ್ನು ದಡ ತಲುಪಿಸುವುದು ಸಿಐಡಿ ಅಧಿಕಾರಿಗಳಿಗೆ ಸಾಧ್ಯವೇ? ಎನ್ನುವ ಅನುಮಾನ ಇದೀಗ ನಾಡಿನ ಪ್ರಜ್ಞಾವಂತರನ್ನು ಕಾಡುತ್ತಿದೆ. ಅದಕ್ಕೆ ಮುಖ್ಯ ಕಾರಣ, ಸಿಐಡಿ ಈವರೆಗೆ ಯಾವುದೇ ರಾಜಕಾರಣಿಗಳನ್ನು ಮುಟ್ಟುವ ಸಾಹಸಕ್ಕೆ ಇಳಿಯದೆ ಇರುವುದು. ಕನಿಷ್ಠ ಎಡಿಜಿಪಿಯ ಬಂಧನವಾದ ಬಳಿಕವಾದರೂ, ಗೃಹ ಸಚಿವರು ತಮ್ಮ ಖಾತೆಗೆ ರಾಜೀನಾಮೆ ನೀಡುವುದು ತನಿಖೆಯ ದೃಷ್ಟಿಯಿಂದ ಅಗತ್ಯವಾಗಿತ್ತು. ಈ ಅಕ್ರಮದಲ್ಲಿ ಗೃಹ ಖಾತೆಯೊಳಗಿರುವ ಉನ್ನತ ವ್ಯಕ್ತಿಗಳ ಕೈವಾಡವನ್ನು ನಿರಾಕರಿಸುವಂತೆ ಇಲ್ಲ. ಈಗಾಗಲೇ ರಾಜ್ಯ ಸರಕಾರ ಶೇ. 40 ಕಮಿಷನ್‌ಗಾಗಿ ಸುದ್ದಿಯಲ್ಲಿದೆ. ಒಬ್ಬ ಗುತ್ತಿಗೆದಾರ ಕಮಿಷನ್ ಚಿತ್ರಹಿಂಸೆಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಬಿಜೆಪಿಯ ಹಿರಿಯ ನಾಯಕರೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಹೀಗಿರುವಾಗ, ಪಿಎಸ್ಸೈ ನೇಮಕಾತಿಯ ಅಕ್ರಮದಲ್ಲಿ ರಾಜಕಾರಣಿಗಳ ಪಾತ್ರವೆಷ್ಟು ಎನ್ನುವುದು ತನಿಖೆ ನಡೆಯುವುದು ಬೇಡವೆ? ಆದುದರಿಂದ, ಗೃಹ ಸಚಿವರ ರಾಜೀನಾಮೆ ತನಿಖೆ ನಡೆಸುವ ಅಧಿಕಾರಿಗಳಿಗೆ ನೈತಿಕ ಸ್ಥೈರ್ಯವನ್ನು ನೀಡಬಹುದು.
ಒಂದು ವೇಳೆ ಸಚಿವರು ರಾಜೀನಾಮೆಗೆ ಸಿದ್ಧವಿಲ್ಲ ಎಂದಾದರೆ, ಇಡೀ ತನಿಖೆಯನ್ನು ಸ್ವತಂತ್ರ ಸಂಸ್ಥೆಗೆ ಹಸ್ತಾಂತರಿಸುವುದು ವಾಸಿ. ‘ಭ್ರಷ್ಟಾಚಾರ ತಡೆಗೆ ರಚಿಸಲಾಗಿರುವ ಭ್ರಷ್ಟಾಚಾರ ನಿಗ್ರಹ ದಳವೇ ಭ್ರಷ್ಟಾಚಾರದ ಗೂಡಾಗಿವೆ’ ಎಂದು ಎರಡು ದಿನಗಳ ಹಿಂದೆ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಸಿಬಿ ಭ್ರಷ್ಟಾಚಾರವನ್ನು ಪ್ರಶ್ನಿಸಿದ್ದಕ್ಕೆ ತನಗೆ ವರ್ಗಾವಣೆಯ ಬೆದರಿಕೆ ಬಂದಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಒಬ್ಬ ನ್ಯಾಯ ನೀಡುವ ನ್ಯಾಯಾಧೀಶರ ಸ್ಥಿತಿಯೇ ಹೀಗಾದರೆ, ತನಿಖೆ ನಡೆಸುವ ಪೊಲೀಸರನ್ನೇ ತನಿಖೆ ನಡೆಸಬೇಕಾದ ಸ್ಥಿತಿ ತಲುಪಿರುವ ತನಿಖಾಧಿಕಾರಿಗಳ ಸ್ಥಿತಿ ಹೇಗಿರಬಹುದು? ಯಾವೆಲ್ಲ ದಿಕ್ಕಿನಿಂದ ಅವರು ಒತ್ತಡಗಳನ್ನು ಎದುರಿಸಬೇಕಾಗಬಹುದು? ತನಿಖೆಗೆ ಪೂರ್ಣ ಸಹಕಾರ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. ಆದರೆ ಎಲ್ಲಿಯವರೆಗೆ ಗೃಹಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲವೋ, ಅಲ್ಲಿಯವರೆಗೆ ಮುಖ್ಯಮಂತ್ರಿಯ ಮಾತು ವಿಶ್ವಾಸಾರ್ಹತೆಯನ್ನು ಪಡೆಯುವುದಿಲ್ಲ.