ದ್ವೇಷದುರಿ ಹಚ್ಚಿ ಒಲೆಯುರಿ ಆರಿಸುತ್ತಿರುವ ಮೋದಿ ಸರಕಾರ

Update: 2022-07-08 02:11 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸಾಮಾನ್ಯ ಜನರು ಬಳಸುತ್ತಿದ್ದ 14.2 ಕೆ.ಜಿ. ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಸರಕಾರ ಮೊನ್ನೆ ಮತ್ತೊಮ್ಮೆ ರೂ. 50ರಷ್ಟು ಹೆಚ್ಚಳ ಮಾಡಿದೆ. ಇದರಿಂದಾಗಿ ಇಂದು ಗ್ಯಾಸ್ ಸಿಲಿಂಡರ್ ಬೆಲೆ ರೂ.1,129ಗೆ ಮುಟ್ಟಿದೆ. ಆದರೆ ಒಂದು ವರ್ಷ ಹಿಂದೆ, 2021ರ ಜುಲೈನಲ್ಲಿ ಇದೇ ಗ್ಯಾಸ್ ಸಿಲಿಂಡರ್ ಬೆಲೆ 812 ರೂ. ಇತ್ತು. ವರ್ಷ ಒಪ್ಪತ್ತಿನಲ್ಲಿ ಮೋದಿ ಸರಕಾರ ಗ್ಯಾಸ್ ಸಿಲಿಂಡರ್ ಬೆಲೆಯನ್ನು 317 ರೂ.ಯಷ್ಟು ಏರಿಸಿದೆ. ಅಂದರೆ ಹೋದ ವರ್ಷಕ್ಕೆ ಹೋಲಿಸಿದಲ್ಲಿ ಶೇ. 40ರಷ್ಟು ಬೆಲೆ ಏರಿಕೆ. ಆದರೆ ಈ ದೇಶದಲ್ಲಿ ಅದೇ ಪ್ರಮಾಣದಲ್ಲಿ ದುಡಿಯುವ ಜನರ ಆದಾಯ ಎಂದೂ ಹೆಚ್ಚಳವಾಗುವುದಿಲ್ಲ. ಈ ದೇಶದ ರೈತರು ಬೆಳೆಯುವ ಬೆಳೆಗಳಿಗೆ ಸರಕಾರ ಕೊಡುವ ಕನಿಷ್ಠ ಬೆಂಬಲ ಬೆಲೆ ವರ್ಷಕ್ಕೆ ಶೇ. 10-15ರಷ್ಟು ಹೆಚ್ಚಾಗುತ್ತದೆ. ಆದರೆ ಅದಕ್ಕೆ ಮುಂಚೆ ಸರಕಾರ ಡೀಸೆಲ್, ರಸಗೊಬ್ಬರ ಮತ್ತು ಕ್ರಿಮಿನಾಶಕಗಳ ಬೆಲೆಯನ್ನು ಶೇ. 30-50ರಷ್ಟು ಹೆಚ್ಚಿಸಿರುತ್ತದೆ. ಹೀಗಾಗಿ ಈ ದೇಶದ ರೈತಾಪಿಯ ಆದಾಯ ಒಟ್ಟಾರೆಯಾಗಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಹೋಗುತ್ತಿದೆ.

ಹಾಗೆಯೇ ಈ ದೇಶದ ಶೇ.95ರಷ್ಟು ಶ್ರಮಶಕ್ತಿಗೆ ಕೆಲಸ ಕೊಡುವ ಅಸಂಘಟಿತ ಕ್ಷೇತ್ರದಲ್ಲಿ ವರ್ಷಾವರಿ ಕೂಲಿ/ಸಂಬಳ ಹೆಚ್ಚಳವೇನೂ ಆಗುವುದಿಲ್ಲ. ಹೆಚ್ಚಾಗುವ ಸಂಬಳವೂ ಶೇ.5-10 ಕ್ಕಿಂತ ಹೆಚ್ಚಿರುವುದಿಲ್ಲ. ಸಂಘಟಿತ ಕ್ಷೇತ್ರದಲ್ಲಿನ ಸಂಬಳವಂತೂ ನೈಜ ದರದಲ್ಲಿ ಶೇ. 5-10ಕ್ಕಿಂತ ಹೆಚ್ಚಿಗೆಯಾಗಿರುವುದೇ ಇಲ್ಲ. ಗ್ಯಾಸ್ ಸಿಲಿಂಡರ್ ದರಗಳ ಜೊತೆಗೆ ಸರಕಾರ ಕೊಡುತ್ತಿದ್ದ ಸೇವೆ ಮತ್ತು ಸರಕುಗಳ ಬೆಲೆಗಳು ಶೇ.20-40ರಷ್ಟು ಹೆಚ್ಚಾಗುತ್ತಿದೆ. ಇದರ ಅರ್ಥ ಈ ದೇಶದ ಬಹುಪಾಲು ಜನ ತಾವು ತಿನ್ನುವುದನ್ನು ಪ್ರತಿವರ್ಷ ಶೇ. 20-40 ರಷ್ಟು ಕಡಿತ ಮಾಡದಿದ್ದರೆ ಸಂಸಾರ ತೂಗುವುದಿಲ್ಲ. ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಸರಕಾರಿ ಗ್ಯಾಸ್ ಸಿಲಿಂಡರ್ ಗಳ ಲೆಕ್ಕದಲ್ಲಿ ಸಬ್ಸಿಡಿ ಮತ್ತು ಸಬ್ಸಿಡಿಯೇತರ ಸಿಲಿಂಡರ್‌ಗಳೆಂಬ ವರ್ಗೀಕರಣಕ್ಕೆ ಯಾವ ಅರ್ಥವೂ ಉಳಿದುಕೊಂಡಿಲ್ಲ. ಏಕೆಂದರೆ 2013ರಲ್ಲಿ ಗ್ಯಾಸ್ ಸಬ್ಸಿಡಿಗಾಗಿ ಆಗಿನ ಸರಕಾರ 53,000 ಕೋಟಿ ರೂ.ಯನ್ನು ಎತ್ತಿಟ್ಟಿದ್ದರೆ, ಈ ವರ್ಷ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಗ್ಯಾಸ್ ಸಬ್ಸಿಡಿಗಾಗಿ ನೀಡಿರುವುದು 12,000 ಕೋಟಿಗಿಂತ ಕಡಿಮೆ. ಆದ್ದರಿಂದಲೇ ಕಳೆದ ಎರಡು ವರ್ಷಗಳಿಂದ ಗ್ಯಾಸ್ ಸಬ್ಸಿಡಿಗಳು ಯಾವುದೇ ನೇರ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗಿಲ್ಲ. ಇದೀಗ ವಿದ್ಯುತ್ ಹಾಗೂ ರಸಗೊಬ್ಬರಗಳ ಸಬ್ಸಿಡಿಗಳನ್ನೂ ಕೂಡಾ ನೇರ ಫಲಾನುಭವಿ ವರ್ಗಾವಣೆ ಯೋಜನೆಯಡಿ ತರುವ ಯೋಜನೆಯನ್ನು ಸರಕಾರ ಘೋಷಿಸಿದೆ. ಇದರ ಅರ್ಥ ಮೊದಲ ಎರಡು ವರ್ಷಗಳ ನಂತರ ಅಥವಾ ಚುನಾವಣಾ ವರ್ಷದ ನಂತರ ವಿದ್ಯುತ್ ಹಾಗೂ ರಸಗೊಬ್ಬರ ಸಬ್ಸಿಡಿಗಳನ್ನೂ ಸರಕಾರ ನಿಲ್ಲಿಸಲಿದೆ. ಆಗ ಅವುಗಳ ಬೆಲೆಯೂ ದುಪ್ಪಟ್ಟಾಗಿ ಸಾಮಾನ್ಯರ ಜನಜೀವನ ಬಾಣಲೆಯಿಂದ ನೇರ ಬೆಂಕಿಗೆ ಬೀಳಲಿದೆ. ಈಗಾಗಲೇ, ಹಣದುಬ್ಬರದ ಗತಿಯನ್ನು ರಿಸರ್ವ್ ಬ್ಯಾಂಕು ನಿರ್ವಹಿಸಲಾಗದ ಹಂತವನ್ನು ಮುಟ್ಟಿವೆ. ಶೇ.4ರ ಒಳಗೆ ಇರಬೇಕಾದ ಗ್ರಾಹಕ ಹಣದುಬ್ಬರ ಕಳೆದ ಮೂರು ತಿಂಗಳಿಂದ ಶೇ. 7ರ ಕೆಳಗೆ ಇಳಿಯುತ್ತಿಲ್ಲ. ಹಣದುಬ್ಬರವೆಂದರೆ ಸರಕಾರದ ಬೆಂಬಲದೊಂದಿಗೆ ಮಾರುಕಟ್ಟೆಯು ಜನಸಾಮಾನ್ಯರಿಂದ ಸುಲಿಯುವ ಕಾನೂನು ಬಾಹಿರ ತೆರಿಗೆಯೇ ಆಗಿದೆ. ಈ ಹಣದುಬ್ಬರದಿಂದಾಗಿ ಈಗಾಗಲೇ ಎಲ್ಲಾ ದರಗಳು ಗಗನಕ್ಕೇರಿ ಜನಸಾಮಾನ್ಯರ ತಟ್ಟೆಯಿಂದ ರೊಟ್ಟಿಗಳು ಮಾಯವಾಗುತ್ತಿವೆ. ಹಾಲಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಯ ಜೊತೆಗೆ ಇತರ ಸರಕುಗಳ ಬೆಲೆಯೂ ನಿಲುಕದಷ್ಟು ಏರಿವೆ. ಅವು ಕಡಿಮೆಯಾಗುವ ಸೂಚನೆಯೇನೂ ಇಲ್ಲ. ಹೀಗಾಗಿ ತೈಲ, ಅಡುಗೆ ಎಣ್ಣೆ ಇತ್ಯಾದಿ ಅತ್ಯಗತ್ಯ ಆಮದು ಸರಕುಗಳ ಬೆಲೆ ಮೊದಲಿಗಿಂತ ತುಟ್ಟಿಯೇ ಆಗಲಿದೆ. ಮೋದಿ ಸರಕಾರದ ಬೇಜವಾಬ್ದಾರಿ ಆರ್ಥಿಕ ನೀತಿಗಳಿಂದಾಗಿ ದೇಶದ ರಫ್ತಿಗಿಂತ ಆಮದು ಹೆಚ್ಚಾಗಿ ಇತಿಹಾಸದಲ್ಲಿ ಭಾರತವು ಅತ್ಯಧಿಕ ವಾಣಿಜ್ಯ ಕೊರತೆಯನ್ನು ಅನುಭವಿಸುತ್ತಿದೆ. ಇದು ಭಾರತದ ವಿದೇಶಿ ವಿನಿಮಯ ಸಂಗ್ರಹದ ಮೇಲೆ ಮತ್ತು ಅದರಿಂದಾಗಿ ರೂಪಾಯಿಯ ವಿನಿಮಯ ದರದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇದಲ್ಲದೆ, ಮೋದಿ ಆಡಳಿತದಲ್ಲಿ ಸೃಷ್ಟಿಯಾಗಿರುವ ಕೋಮು ಉದ್ವಿಗ್ನ ಅರಾಜಕ ಪರಿಸ್ಥಿತಿಯಿಂದಾಗಿ ಕಳೆದ ಒಂದೇ ತಿಂಗಳಲ್ಲಿ 50,000 ಕೋಟಿಗೂ ಹೆಚ್ಚು ವಿದೇಶಿ ಶೇರು ಹೂಡಿಕೆದಾರರು ಭಾರತದಿಂದ ಬಂಡವಾಳವನ್ನು ಹಿಂದೆಗೆದುಕೊಂಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಒಂದು ಲಕ್ಷ ಕೋಟಿಗೂ ಹೆಚ್ಚು ಶೇರು ಮಾರುಕಟ್ಟೆ ಹೂಡಿಕೆ ಹಿಂದೆ ಸರಿದಿದೆ. ಇದು ರೂ.ಯನ್ನು ಮತ್ತಷ್ಟು ಅಪಮೌಲ್ಯಗೊಳಿಸಿದೆ. ಈ ಎಲ್ಲಾ ಕಾರಣಗಳಿಂದಾಗಿ ವಿಶ್ವಗುರುವಿನ ಆಳ್ವಿಕೆಯಲ್ಲಿ ಭಾರತದ ರೂ. ಮೌಲ್ಯ ಹೆಚ್ಚಾಗುವುದಿರಲಿ, ಡಾಲರಿನೆದುರು ಇತಿಹಾಸದಲ್ಲೇ ಅತ್ಯಧಿಕ ಕುಸಿತ ಕಂಡು ಒಂದು ಡಾಲರಿಗೆ 80 ರೂ.ಗಳಿಗೆ ಬಿಕರಿಯಾಗುತ್ತಿದೆ. ಇದರ ಒಟ್ಟು ಸಾರಾಂಶ ಇನ್ನಷ್ಟು ಆಮದು ತುಟ್ಟಿ. ಅರ್ಥಾತ್ ಇನ್ನಷ್ಟು ಬೆಲೆ ಏರಿಕೆ. ಇಂಥ ಸಂದರ್ಭದಲ್ಲಿ ಒಂದು ಜನಪರ ಸರಕಾರವು ಜನಸಾಮಾನ್ಯರನ್ನು ಮಾರುಕಟ್ಟೆಯ ದಾಳಿಗೆ ಬಲಿಗೊಡದೆ ರಿಯಾಯಿತಿ, ವಿನಾಯಿತಿಗಳನ್ನು ಒದಗಿಸುವ ಮೂಲಕ ಸಹಾಯಕ್ಕೆ ಬರಬೇಕು. ಇದು ಸರಕಾರವು ಸಬ್ಸಿಡಿಗಳನ್ನು ಮತ್ತು ಹೂಡಿಕೆಗಳನ್ನು ಹೆಚ್ಚಿಸಬೇಕಾದ ಸಂದರ್ಭ. ಆದರೆ ಮೋದಿ ಸರಕಾರ ಅದಕ್ಕೆ ತದ್ವಿರುದ್ಧವಾದುದನ್ನು ಮಾಡುತ್ತಿದೆ. ಇತ್ತೀಚೆಗೆ ಕೇಂದ್ರ ಸರಕಾರವು ರಾಜ್ಯಗಳ ಹಣಕಾಸು ಮಂತ್ರಿಗಳೊಂದಿಗೆ ನಡೆಸಿದ ಸಮಾಲೋಚನೆಯಲ್ಲಿ ಎಲ್ಲಾ ಸಬ್ಸಿಡಿಗಳನ್ನು ಕಡಿತಗೊಳಿಸಬೇಕೆಂದೂ, ಸರಕಾರವು ಜನರಿಗೆ ಒದಗಿಸುವ ವಿದ್ಯುತ್, ನೀರು ಇತ್ಯಾದಿಗಳ ದರವನ್ನು ಹೆಚ್ಚಿಸಬೇಕೆಂದು ಸಲಹೆ ಮಾಡಿದೆ. ಗ್ಯಾಸ್ ಸಬ್ಸಿಡಿಯ ಹಿಂದೆಗೆತ ಹಾಗೂ ಅದರ ನಿರಂತರ ಬೆಲೆ ಹೆಚ್ಚಳಗಳು ಕೂಡ ಇದೇ ಜನದ್ರೋಹಿ ಆರ್ಥಿಕ ನೀತಿಯ ಭಾಗವಾಗಿದೆ. ಇದು ಜನಸಾಮಾನ್ಯರ ತಟ್ಟೆಯಲ್ಲಿರುವ ಅನ್ನವನ್ನು ರೊಟ್ಟಿಯನ್ನು ಇನ್ನಷ್ಟು ಬರಿದು ಮಾಡಲಿದೆ. ಮನದೊಳಗೆ ದ್ವೇಷದ ಉರಿಯನ್ನು ಹಚ್ಚಿ ಮನೆಯೊಳಗೆ ಒಲೆಯುರಿ ಆರಿಸುವುದೇ ಮೋದಿ ಸರಕಾರದ ನೀತಿಯಾಗಿದೆಯೇ? ಎಂದು ದೇಶ ತನಗೆ ತಾನೇ ಪ್ರಶ್ನಿಸಿಕೊಳ್ಳಬೇಕಾದ ಸಮಯ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News