ಸರಕಾರದ ನೀತಿಗಳೇ ವಿದ್ಯಾರ್ಥಿಗಳು ಶಾಲೆ ತೊರೆಯಲು ಕಾರಣವಾದವೇ?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜ್ಯದ 14 ವರ್ಷದ ಒಳಗಿನ 12 ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆ ಮತ್ತು ಅಂಗನವಾಡಿಗಳಿಂದ ಹೊರಗುಳಿದಿದ್ದಾರೆ ಎನ್ನುವ ಅಂಶವನ್ನು ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ. ಶಾಲೆಯಿಂದ ಹೊರಗುಳಿದ 18 ವರ್ಷದೊಳಗಿನ ಮಕ್ಕಳ ವಿವರಗಳಿಗಾಗಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಗ್ರಾಮೀಣಾಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳು ನಡೆಸಿರುವ ಸಮೀಕ್ಷೆಯ ಆಧಾರದಲ್ಲಿ ಈ ವರದಿಯನ್ನು ಹೈಕೋರ್ಟ್‌ಗೆ ನೀಡಲಾಗಿದೆ. ವರದಿಯನ್ನು ದಾಖಲಿಸಿಕೊಂಡಿರುವ ಹೈಕೋರ್ಟ್, ಈ ಬಗ್ಗೆ ಸಭೆ ನಡೆಸಿ, ಅವರನ್ನು ಮರಳಿ ಶಾಲೆಗೆ ಸೇರಿಸುವ ಬಗ್ಗೆ ಯಾವ ರೀತಿಯ ಕ್ರಮ ತೆಗೆದುಕೊಳ್ಳಬಹುದು ಎನ್ನುವ ಬಗ್ಗೆ ಸಲಹೆ ನೀಡಬೇಕು ಎಂದೂ ಹೇಳಿದೆ. ದೇಶ ಆರ್ಥಿಕವಾಗಿ ಹಿಂದಕ್ಕೆ ಚಲಿಸಿದಂತೆಯೇ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ನೋಟು ನಿಷೇಧದ ಬಳಿಕ ದೇಶ ಎದುರಿಸುತ್ತಿರುವ ಆರ್ಥಿಕ ಹಿಂಜರಿತ, ಕೊರೋನ ಮತ್ತು ಲಾಕ್‌ಡೌನ್‌ನಿಂದಾಗಿ ಇನ್ನಷ್ಟು ವಿಷಮ ಸ್ಥಿತಿಗೆ ತಲುಪಿತು. ಲಾಕ್‌ಡೌನ್ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಎದುರಾದ ಆರ್ಥಿಕ ಸಂಕಷ್ಟಗಳ ಕಾರಣದಿಂದ, ಬಹುತೇಕ ವಿದ್ಯಾರ್ಥಿಗಳು ಶಾಲೆ ತೊರೆದು ತೋಟ, ಗದ್ದೆ, ಹಟ್ಟಿಯಲ್ಲಿ ದುಡಿದು ಮನೆಗೆ ಆರ್ಥಿಕವಾಗಿ ನೆರವಾಗಬೇಕಾದ ಅನಿವಾರ್ಯ ಸೃಷ್ಟಿಯಾಯಿತು. ಹೆಚ್ಚಿನ ಮನೆಗಳಲ್ಲಿ ಗಂಡು ಮಗುವಿನ ಕಲಿಕೆಗಾಗಿ ಹೆಣ್ಣು ಮಗು ಶಾಲೆ ತೊರೆಯಬೇಕಾಯಿತು. ಕೊರೋನೋತ್ತರ ದಿನಗಳಲ್ಲಿ ಸರಕಾರದ ಮುಂದಿದ್ದ ಅತಿ ದೊಡ್ಡ ಸವಾಲು, ಶಾಲೆ ತೊರೆದ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆತರುವುದು. ವಿಪರ್ಯಾಸವೆಂದರೆ, ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆ ತರುವ ಯಾವ ಯೋಜನೆಗಳನ್ನೂ ಹಮ್ಮಿಕೊಳ್ಳಲಾಗಿಲ್ಲ. ಅವರನ್ನು ಮರಳಿ ಶಾಲೆಗೆ ಕರೆ ತರುವ ದಾರಿಯನ್ನು ಕಂಡುಕೊಳ್ಳುವುದಕ್ಕಾಗಿ ಇನ್ನೂ ಯಾವುದೇ ಯೋಜನೆಗಳು ಸಿದ್ಧಗೊಂಡಿಲ್ಲ. ಮುಖ್ಯವಾಗಿ ಶಾಲೆ ತೊರೆದ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವುದು ಸರಕಾರದ ಹೊಣೆಗಾರಿಕೆ ಎನ್ನುವುದರ ಅರಿವು ಸರಕಾರದೊಳಗಿರುವ ನಾಯಕರಿಗೆ ಇದ್ದಂತಿಲ್ಲ. ಇಲ್ಲದೇ ಇದ್ದರೆ ‘‘ಮಕ್ಕಳು ಶೂ, ಸಾಕ್ಸ್‌ಗಾಗಿ ಶಾಲೆಗೆ ಬರುವುದಲ್ಲ’’ ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ಶಿಕ್ಷಣ ಸಚಿವರು ನೀಡುತ್ತಿರಲಿಲ್ಲ.
ಶಾಲೆಯಿಂದ ದೂರ ಉಳಿದಿರುವ ಮಕ್ಕಳನ್ನು ಶಾಲೆಯೆಡೆಗೆ ಸೆಳೆಯಲು ಕಳೆದ ನಾಲ್ಕು ದಶಕಗಳಿಂದ ಸುದೀರ್ಘ ಆಂದೋಲನಗಳು ನಡೆದಿವೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಈ ಆಂದೋಲನಗಳಿಗಾಗಿ ಕೋಟ್ಯಂತರ ರೂಪಾಯಿಯನ್ನು ವ್ಯಯ ಮಾಡಿವೆ. ಗ್ರಾಮೀಣ ಪ್ರದೇಶದಲ್ಲಿ ಹಸಿವಿನ ಕಾರಣದಿಂದ ಮಕ್ಕಳು ಶಾಲೆಗಳಿಂದ ದೂರ ಉಳಿದಿದ್ದಾರೆ ಎನ್ನುವುದನ್ನು ಅರಿತು, ‘ಬಿಸಿಯೂಟ ಯೋಜನೆ’ಯನ್ನು ಆರಂಭಿಸಲಾಯಿತು. ಗ್ರಾಮೀಣ ಪ್ರದೇಶದಲ್ಲಿ ಈ ಯೋಜನೆ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿತು. ಆರಂಭದಲ್ಲಿ ಪ್ರಾಥಮಿಕ ಶಾಲೆಗಳಿಗೆ ಸೀಮಿತವಾಗಿದ್ದ ಈ ಯೋಜನೆ ಮುಂದೆ ಮೇಲಿನ ತರಗತಿಗಳಿಗೂ ವಿಸ್ತರಿಸಿತು. ಅಷ್ಟೇ ಅಲ್ಲ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಆಕರ್ಷಿಸುವುದಕ್ಕಾಗಿ ಹಿಂದಿನ ಹಲವು ಸರಕಾರಗಳು ಮಕ್ಕಳಿಗೆ ಉಚಿತ ಯೂನಿಫಾರ್ಮ್, ಪುಸ್ತಕಗಳು ಅಷ್ಟೇ ಯಾಕೆ, ಸೈಕಲ್‌ಗಳನ್ನೂ ನೀಡಿದವು. ಬಡ ಕುಟುಂಬಗಳು ಈ ಆಕರ್ಷಣೆಯಿಂದಾಗಿ ತಮ್ಮ ಮಕ್ಕಳನ್ನು ಕೆಲಸದಿಂದ ಬಿಡಿಸಿ ಶಾಲೆಗೆ ಕಳುಹಿಸತೊಡಗಿದವು. ಇಷ್ಟೆಲ್ಲವನ್ನು ಅಂದಿನ ಸರಕಾರ ಯಾಕೆ ಮಾಡಿತು ಎಂದರೆ, ಬಡವರಿಗೆ ಶಿಕ್ಷಣವನ್ನು ನೀಡಿ ಅವರನ್ನು ಅಭಿವೃದ್ಧಿಯ ಕಡೆಗೆ ಮುನ್ನಡೆಸುವುದು ತನ್ನ ಹೊಣೆಗಾರಿಕೆ ಎನ್ನುವ ಅರಿವು ಇದ್ದುದರಿಂದ. ಆದರೆ, ಮೊದಲ ಬಾರಿಗೆ ರಾಜ್ಯದಲ್ಲಿ ಒಂದು ಸರಕಾರ, ಮಕ್ಕಳನ್ನು ಶಾಲೆಗೆ ಮರಳಿ ಕರೆ ತರುವ ಹೊಣೆಗಾರಿಕೆಯನ್ನು ಮರೆತು, ಶಾಲೆಯಲ್ಲಿ ಇರುವ ಮಕ್ಕಳನ್ನೇ ವಿವಿಧ ನೆಪವೊಡ್ಡಿ ಶಾಲೆಯಿಂದ ಹೊರ ಹಾಕಿಸಲು ಯತ್ನಿಸುತ್ತಿದೆ. ಶಾಲೆಯಿಂದ ಹೊರ ತಳ್ಳಲ್ಪಟ್ಟ ವಿದ್ಯಾರ್ಥಿಗಳ ಬಗ್ಗೆ ಯಾವ ಕ್ರಮ ತೆಗೆದುಕೊಂಡಿದ್ದೀರಿ? ಎಂದು ಸರಕಾರವನ್ನು ಕೇಳುತ್ತಿರುವ ನ್ಯಾಯಾಲಯವೂ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಗಿಡುವುದಕ್ಕೆ ತನ್ನ ಕೊಡುಗೆಯ ಬಗ್ಗೆಯೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಶಿಕ್ಷಣ ಮುಖ್ಯವೋ, ಸಮವಸ್ತ್ರ ಮುಖ್ಯವೋ ಎನ್ನುವ ಜಗ್ಗಾಟದ ಹೊತ್ತಿಗೆ ನ್ಯಾಯಾಲಯ ಪರೋಕ್ಷವಾಗಿ ಸಮವಸ್ತ್ರದ ‘ಹಿರಿಮೆ’ಯನ್ನು ಎತ್ತಿ ಹಿಡಿದು ನೂರಾರು ವಿದ್ಯಾರ್ಥಿನಿಯರು ಹೈಸ್ಕೂಲು, ಪದವಿಪೂರ್ವ ಕಾಲೇಜುಗಳನ್ನು ತೊರೆಯುವುದಕ್ಕೆ ಕಾರಣವಾಯಿತು. ನ್ಯಾಯಾಲಯದ ದ್ವಂದ್ವ ತೀರ್ಪಿನಿಂದಾಗಿ ಹಲವು ಮಕ್ಕಳು ಸಮವಸ್ತ್ರದ ಹೆಸರಿನಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗದೆ ಶಾಲೆಯಿಂದ ಮನೆಗೆ ಮರಳಬೇಕಾಯಿತು. ಕೊರೋನೋತ್ತರ ದಿನಗಳಲ್ಲಿ ಮಕ್ಕಳು ಮತ್ತೆ ಮರಳಿ ಶಾಲೆಗೆ ಬಂದಿದ್ದಾರಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವ ಬದಲು, ಶಾಲೆಗೆ ಬಂದ ಮಕ್ಕಳಿಗೆ ಕಡ್ಡಾಯ ಸಮವಸ್ತ್ರವನ್ನು ಹೇರಿ, ಶಿಕ್ಷಣಕ್ಕಿಂತ ಸಮವಸ್ತ್ರವೇ ಹಿರಿದು ಎನ್ನುವ ನಿಲುವನ್ನು ಸರಕಾರ ತಾಳಿತು. ಅದೇ ಸರಕಾರ ಇದೀಗ ‘ಮಕ್ಕಳು ಶಾಲೆಗೆ ಬರುವುದು ಶೂ, ಸಾಕ್ಸ್‌ಗಳಿಗಾಗಿ ಅಲ್ಲ’ ಎಂಬ ಬೇಜವಾಬ್ದಾರಿ ಮಾತುಗಳನ್ನು ಆಡುತ್ತಿದೆ. ಶಾಲೆಗಳಲ್ಲಿ ಶೂ ಸಾಕ್ಸ್‌ಗಳು ಮುಖ್ಯವಲ್ಲ, ಶಿಕ್ಷಣವೇ ಮುಖ್ಯ ಎಂದಾದರೆ ಸಮವಸ್ತ್ರದ ಹೆಸರಿನಲ್ಲಿ ನೂರಾರು ವಿದ್ಯಾರ್ಥಿನಿಯರನ್ನು ಸರಕಾರ ಶಾಲೆಯಿಂದ ಯಾಕೆ ಬಹಿಷ್ಕರಿಸಿತು? ಎನ್ನುವ ಪ್ರಶ್ನೆಗೆ ಶಿಕ್ಷಣ ಸಚಿವರು ಉತ್ತರ ಹೇಳಬೇಕು.
ಸಮವಸ್ತ್ರದ ಹೆಸರಿನಲ್ಲಿ ಶಾಲೆಗಳಲ್ಲಿ ಗೊಂದಲಗಳನ್ನು ಸೃಷ್ಟಿಸಿದ ಸರಕಾರ, ಇದೀಗ ಪಠ್ಯಪುಸ್ತಕ ಪರಿಷ್ಕರಣೆಯ ಹೆಸರಿನಲ್ಲೂ ವಿದ್ಯಾರ್ಥಿಗಳನ್ನು ಗೊಂದಲಗಳಿಗೆ ತಳ್ಳಿದೆ. ಶಾಲೆಗಳ ಮೂಲಭೂತ ಅಗತ್ಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಸರಕಾರ, ಅನಗತ್ಯವಾಗಿ ‘ಪುಸ್ತಕ ಪರಿಷ್ಕರಣೆ’ ಎನ್ನುವ ಪ್ರಹಸನಕ್ಕಿಳಿದು, ಅದಕ್ಕಾಗಿ ನೂರಾರು ಕೋಟಿ ರೂಪಾಯಿಯನ್ನು ವ್ಯಯ ಮಾಡಿದೆ. ಆದರೆ ಈಗಲೂ ಪಠ್ಯ ಪುಸ್ತಕದ ಕುರಿತ ಗೊಂದಲಗಳು ನಿವಾರಣೆಯಾಗಿಲ್ಲ. ಇಂತಹ ವಾತಾವರಣದಲ್ಲಿ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಅದರಲ್ಲೂ ಕನ್ನಡ ಮೀಡಿಯಂ ಶಾಲೆಗಳಿಗೆ ಕಳುಹಿಸಲು ಪೋಷಕರು ಸಿದ್ಧರಿರುತ್ತಾರೆಯೆ? ರಾಜ್ಯ ಶಿಕ್ಷಣದ ಗುಣಮಟ್ಟವ ಬಗ್ಗೆಯೇ ಅನುಮಾನಗಳಿರುವಾಗ, ಪೋಷಕರು ಯಾಕಾಗಿ ಆ ಶಿಕ್ಷಣಕ್ಕೆ ತಮ್ಮ ಮಕ್ಕಳನ್ನು ಬಲಿಪಶು ಮಾಡುತ್ತಾರೆ? ಶಾಲೆ ತೊರೆದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವುದಿರಲಿ, ಇಂದು ಸರಕಾರದ ಬೇಜವಾಬ್ದಾರಿ ನಡೆಗಳಿಂದಾಗಿ ಶಾಲೆಗೆ ಈಗಾಗಲೇ ಬರುತ್ತಿರುವ ಮಕ್ಕಳೇ ಶಾಲೆ ತೊರೆಯುವ ಸಿದ್ಧತೆ ನಡೆಸುತ್ತಿದ್ದಾರೆ. ಆದುದರಿಂದ ಸರಕಾರ, ಈಗಾಗಲೇ ಶಾಲೆಗೆ ಹಾಜರಾಗಿರುವ ಮಕ್ಕಳನ್ನು ಉಳಿಸಿಕೊಳ್ಳುವ ಬಗ್ಗೆ ಆಲೋಚಿಸಬೇಕಾಗಿದೆ. ಶಾಲೆಯೊಳಗೆ ರಾಜಕೀಯ ಅಜೆಂಡಾಗಳನ್ನು ಜಾರಿಗೊಳಿಸುವ ಕ್ರಮದಿಂದ ಹಿಂದೆ ಸರಿದು, ಮಕ್ಕಳಿಗೆ ಅತ್ಯುತ್ತಮ ಶಿಕ್ಷಣವನ್ನು ನೀಡಲು ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಸರಕಾರ ಗಮನ ನೀಡಬೇಕಾಗಿದೆ.