ವಿದ್ಯುತ್ ದರ ಏರಿಕೆ; ಗಾಯದ ಮೇಲೆ ಬರೆ

Update: 2022-07-12 04:06 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಜೀವನಾವಶ್ಯಕ ಪದಾರ್ಥಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ಸಂಕಷ್ಟದ ಸುಳಿಗೆ ಸಿಲುಕಿದೆ. ಕೋವಿಡ್ ಪರಿಣಾಮವಾಗಿ ಸಾವಿರಾರು ಜನ ಕೆಲಸ ಕಳೆದುಕೊಂಡಿದ್ದಾರೆ. ಆದಾಯದ ಮೂಲಗಳೇ ಇಲ್ಲವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಕರ್ನಾಟಕ ಸರಕಾರ ವಿದ್ಯುತ್ ದರ ಏರಿಸಲು ಹೊರಟಿದೆ. ಇನ್ನು ಮುಂದೆ 100 ಯೂನಿಟ್‌ಗೂ ಹೆಚ್ಚು ವಿದ್ಯುತ್ ಬಳಸುವವರು ಹೆಚ್ಚುವರಿಯಾಗಿ 19ರಿಂದ 31 ರೂ. ತೆರಬೇಕಾಗುತ್ತದೆ. ಇತ್ತೀಚೆಗೆ ಎಪ್ರಿಲ್ ತಿಂಗಳಲ್ಲಿ ಪ್ರತೀ ಯೂನಿಟ್ ವಿದ್ಯುತ್‌ಗೆ 35 ಪೈಸೆ ಹೆಚ್ಚಿಸಲಾಗಿತ್ತು. ಇದು ಸಾಲದೆಂಬಂತೆ ಸರಕಾರ ಮತ್ತೆ ವಿದ್ಯುತ್ ದರ ಏರಿಸಲು ಹೊರಟಿರುವುದು ಸರಿಯಲ್ಲ.

ಸರಕಾರ ಸಲ್ಲದ ಸ್ಪಷ್ಟೀಕರಣ ನೀಡಿ ವಿದ್ಯುತ್ ದರ ಏರಿಕೆಯನ್ನು ಸಮರ್ಥಿಸಿಕೊಳ್ಳುವುದು ಸರಿಯಲ್ಲ. ವಿದ್ಯುತ್ ಸರಬರಾಜು ಕಂಪೆನಿಗಳು ತಮ್ಮ ಮೇಲೆ ಬೀಳುತ್ತಿರುವ ಹೊರೆಯನ್ನು ಗ್ರಾಹಕರ ಹೆಗಲಿಗೆ ಹೊರಿಸಲು ಬಯಸಿದ್ದವು. ಅವುಗಳ ಮನವಿಗೆ ವಿದ್ಯುತ್ ನಿಯಂತ್ರಣ ಆಯೋಗ ಸಮ್ಮತಿ ನೀಡಿದೆ. ಇದರಲ್ಲಿ ಸರಕಾರದ ಪಾತ್ರವಿಲ್ಲ ಎಂಬ ಇಂಧನ ಸಚಿವರ ಸಮಜಾಯಿಷಿಯಲ್ಲಿ ಅರ್ಥವಿಲ್ಲ. ತಾಂತ್ರಿಕವಾಗಿ ಯಾರೇ ಒಪ್ಪಿಗೆ ಕೇಳಿರಲಿ, ಯಾರೇ ಅನುಮತಿ ಕೊಟ್ಟಿರಲಿ ತೊಂದರೆಯಾಗುವುದು ಜನಸಾಮಾನ್ಯರಿಗೆ, ವಿದ್ಯುತ್ ಬಳಕೆದಾರರಿಗೆ. ಕೊನೆಯಲ್ಲಿ ಆದಾಯ ಹೋಗಿ ಸೇರುವುದು ಸರಕಾರದ ಖಜಾನೆಗೆ. ಸಚಿವರ ಜಾರಿ ಕೊಳ್ಳುವ ಉತ್ತರ ಸಮರ್ಥನೀಯವಲ್ಲ.

ವಿದ್ಯುತ್ ದರ ಏರಿಕೆ ಮಾಡಲು ಕಾರಣ ಕಲ್ಲಿದ್ದಲು ದರ ಏರಿಕೆ. ಅದರಿಂದಾಗಿ ವಿದ್ಯುತ್ ಉತ್ಪಾದನಾ ಖರ್ಚು, ವೆಚ್ಚ ಹೆಚ್ಚಾಗಿ ವಿದ್ಯುತ್ ದರ ಹೆಚ್ಚಿಸಬೇಕಾಗಿದೆ ಎಂಬುದು ವಿದ್ಯುತ್ ನಿಯಂತ್ರಣ ಆಯೋಗದ ಸ್ಪಷ್ಟೀಕರಣ. ಸರಕಾರ ಏನೇ ನೆಪ ಹೇಳಲಿ ಕಲ್ಲಿದ್ದಲು ಕೊರತೆಯಿಂದಾಗಿ ಅದರ ದರ ಹೆಚ್ಚಾಗುವುದು ಗೊತ್ತಿದ್ದರೂ ಸರಕಾರ ಮುನ್ನೆಚ್ಚರಿಕೆ ಕ್ರಮವನ್ನು ಏಕೆ ಕೈಗೊಳ್ಳಲಿಲ್ಲ? ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರವಿದ್ದರೆ ಅನುಕೂಲವಾಗುತ್ತದೆ ಎಂದು ಹೇಳುತ್ತಾ ಬಂದ ಆಡಳಿತ ಪಕ್ಷದ ನಾಯಕರು ಇದಕ್ಕೇನು ಉತ್ತರ ನೀಡುತ್ತಾರೆ?

ದರ ಏರಿಕೆಯನ್ನು ಸಮರ್ಥಿಸಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ಸೋರಿಕೆಯ ಇನ್ನೊಂದು ಕಾರಣವನ್ನು ನೀಡುತ್ತದೆ. ವಿದ್ಯುತ್ ಸೋರಿಕೆಯನ್ನು ತಡೆಯಲು ಎಸ್ಕಾಂ ಹಾಗೂ ಸರಕಾರಕ್ಕೆ ಸಲಹೆ ನೀಡುತ್ತದೆ. ಆದರೆ ತಾನು ನೀಡಿರುವ ಸಲಹೆಗಳು ಜಾರಿಯಾಗಿವೆಯೇ?ಎಂದು ವಿಚಾರಿಸಲು ಅದು ಹೋಗುವುದಿಲ್ಲ. ತನ್ನ ಸಲಹೆಗಳ ಜಾರಿಗಾಗಿ ಕಣ್ಗಾವಲು ವ್ಯವಸ್ಥೆಯನ್ನು ಮಾಡುವುದಿಲ್ಲ. ಕಲ್ಲಿದ್ದಲು ಬೆಲೆ ಹೆಚ್ಚಾದಾಗ ವಿದ್ಯುತ್ ದರವನ್ನು ಜಾಸ್ತಿ ಮಾಡುವ ಸರಕಾರ ವಿದ್ಯುತ್ ಸೋರಿಕೆ ತಡೆಯಲು ಯಾವ ಕ್ರಮ ಕೈಗೊಂಡಿದೆ?

ವಿದ್ಯುತ್ ಮಂಡಳಿಗಳ ಬಿಕ್ಕಟ್ಟಿಗೆ ಇನ್ನೊಂದು ಕಾರಣ ವಿದ್ಯುತ್ ಬಿಲ್ ಮೊತ್ತದ ಬಾಕಿ. ಅನೇಕ ಸರಕಾರಿ ಹಾಗೂ ಖಾಸಗಿ ಉದ್ದಿಮೆಗಳು ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡಿವೆ. ಎಸ್ಕಾಂಗಳಿಗೆ ಹನ್ನೊಂದು ಸಾವಿರ ಕೋಟಿ ರೂಪಾಯಿ ಬಾಕಿ ಬರಬೇಕಾಗಿದೆ. ಬಾಕಿ ಉಳಿಸಿಕೊಂಡವರಲ್ಲಿ ಸಕ್ಕರೆ ಕಾರ್ಖಾನೆ ಮಾಲಕರೂ ಇದ್ದಾರೆ. ಅವರಲ್ಲಿ ಕೆಲವರು ರಾಜ್ಯ ಸರಕಾರದಲ್ಲಿ ಮಂತ್ರಿ ಗಳಾಗಿದ್ದಾರೆ. ಇದನ್ನು ಬಿಟ್ಟರೆ ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಇಲಾಖೆಗಳ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳು ಬಹುದೊಡ್ಡ ಮೊತ್ತವನ್ನು ಬಾಕಿ ಉಳಿಸಿಕೊಂಡಿವೆ. ಸರಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಸಲ್ಲದ ಸಮರ್ಥನೆಗೆ ಇಳಿಯಬಾರದು.

ರಾಜ್ಯ ಸರಕಾರಕ್ಕೆ ಜಿಎಸ್‌ಟಿಯ ನ್ಯಾಯವಾದ ಪಾಲನ್ನು ನೀಡಲು ಕೇಂದ್ರ ಸರಕಾರ ಹಿಂದೇಟು ಹಾಕುತ್ತಿರುವುದರಿಂದ ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳಲು ಅನಿವಾರ್ಯವಾಗಿ ವಿದ್ಯುತ್ ದರ ಹೆಚ್ಚಿಸಬೇಕಾಗಿರಬಹುದು.ಇದು ಕೇವಲ ರಾಜ್ಯ ಸರಕಾರದ ತೀರ್ಮಾನವಲ್ಲ. ಕೇಂದ್ರದ ಸಲಹೆಯಂತೆ ದರ ಹೆಚ್ಚಿಸಲು ಹೊರಟಿರುವುದು ಗುಟ್ಟಿನ ಸಂಗತಿಯಲ್ಲ. ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪರಿಹಾರವನ್ನು ನೀಡಿದರೆ ಇಂತಹ ಸಮಸ್ಯೆಗಳು ಉದ್ಭವಿಸುವುದಿಲ್ಲ.

ಕರ್ನಾಟಕ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ.ಇಂತಹ ಸಂದರ್ಭದಲ್ಲಿ ಕೇಂದ್ರದ ಒತ್ತಡಕ್ಕೆ ಮಣಿದು ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳಲು ವಿದ್ಯುತ್ ಮತ್ತು ನೀರಿನ ದರ ಹೆಚ್ಚಿಸಲು ಸರಕಾರ ಹೊರಟಿರುವುದು ಮತ್ತು ಅದನ್ನು ಸಮರ್ಥಿಸಿಕೊಳ್ಳುತ್ತಿರುವುದು ಸರಿಯಲ್ಲ. ದರ ಏರಿಕೆಯ ಬದಲಾಗಿ ವಿದ್ಯುತ್ ಸೋರಿಕೆಗೆ ಕಡಿವಾಣ ಹಾಕಬೇಕು ಮತ್ತು ವಿದ್ಯುತ್ ಬಿಲ್ ಬಾಕಿ ವಸೂಲಿಗೆ ಮುಂದಾಗಬೇಕು. ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ವಿದ್ಯುತ್ ಉತ್ಪಾದನಾ ವೆಚ್ಚ ಮತ್ತು ಸೋರಿಕೆಯನ್ನು ಕಡಿಮೆ ಮಾಡಲು ಬದಲಿ ಮಾರ್ಗವನ್ನು ಸರಕಾರ ಕಂಡು ಹಿಡಿಯಬೇಕು.ಜನರಿಗೆ ತೊಂದರೆಯಾಗದಂತೆ ಕಡಿಮೆ ದರದಲ್ಲಿ ವಿದ್ಯುತ್ ಪೂರೈಸಬೇಕು.

ಈಗಾಗಲೇ ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಸಿಲಿಂಡರ್ ದರ ಹೆಚ್ಚಳದಿಂದ ಜನ ಬಳಲಿ ಬೆಂಡಾಗಿದ್ದಾರೆ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮುನ್ನ ಕೇವಲ ಲೀಟರ್‌ಗೆ 65 ರೂಪಾಯಿ ಇದ್ದ ಪೆಟ್ರೋಲ್ ದರ ಈಗ ನೂರರ ಗಡಿ ದಾಟಿದೆ. 400 ರೂಪಾಯಿ ಸಿಗುತ್ತಿದ್ದ ಅನಿಲ ಸಿಲಿಂಡರ್ ದರ ರೂ. 1,055ಕ್ಕೆ ಬಂದು ತಲುಪಿದೆ. ಉಳಿದಂತೆ ಆಹಾರ ಧಾನ್ಯಗಳ ಬೆಲೆಗಳು ಗಗನಕ್ಕೇರಿವೆ. ಇಂತಹ ಸನ್ನಿವೇಶದಲ್ಲಿ ವಿದ್ಯುತ್ ದರ ಜಾಸ್ತಿ ಮಾಡುವುದು ಗಾಯದ ಮೇಲೆ ಬರೆ ಎಳೆದಂತೆ. ಹಾಗಾಗಿ ಸರಕಾರ ವಿದ್ಯುತ್ ದರ ಏರಿಕೆ ಪ್ರಸ್ತಾವನೆಯನ್ನು ಕೈ ಬಿಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News