ಜನಸಂಖ್ಯೆ ಸಂಪನ್ಮೂಲವಾಗಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಜನಸಂಖ್ಯೆಯ ಗುಮ್ಮ ಭಾರತವನ್ನು ಕಾಡುತ್ತಿರುವುದು ಇಂದು ನಿನ್ನೆಯಲ್ಲ. ಶೀಘ್ರದಲ್ಲೇ ಭಾರತವು ಚೀನಾವನ್ನು ಹಿಂದಿಕ್ಕಲಿದೆ ಎನ್ನುವ ಬೆದರಿಕೆಯ ಅಂಕಿಅಂಶಗಳು ಹಲವು ದಶಕಗಳ ಹಿಂದೆಯೇ ನಮ್ಮ ಬೆನ್ನು ಹತ್ತಿದೆ. ಭಾರತದೊಳಗಿರುವ ಎಲ್ಲ ಸಮಸ್ಯೆಗಳ ಕಾರಣವನ್ನೂ ಇಲ್ಲಿರುವ ಜನಸಂಖ್ಯೆಯ ತಲೆಗೆ ಕಟ್ಟಲಾಗಿದೆ. ಇದೀಗ ವಿಶ್ವಸಂಸ್ಥೆಯ ವರದಿಯೊಂದು ಹೊರ ಬಿದ್ದಿದ್ದು, 2023ರ ವೇಳೆಗೆ ಜನಸಂಖ್ಯೆಯಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಲಿದೆ ಎಂದು ಅದು ಹೇಳುತ್ತಿದೆ. 2050ರ ವರೆಗೆ ಜಾಗತಿಕ ಜನಸಂಖ್ಯೆಯ ಹೆಚ್ಚಳದ ಅರ್ಧದಷ್ಟು ಕೇವಲ ಎಂಟು ರಾಷ್ಟ್ರಗಳಿಗೆ ಸೀಮಿತವಾಗಲಿದೆ. ಅದರಲ್ಲಿ ಭಾರತವು ಒಳಗೊಳ್ಳಲಿದೆ ಎನ್ನುವುದನ್ನು ವರದಿ ಹೇಳುತ್ತಿದೆ. ಅಂದರೆ ಭಾರತ ಇನ್ನಷ್ಟು ಬಡತನ, ಆರ್ಥಿಕ ಹಿಂಜರಿತಗಳನ್ನು ಈ ಮೂಲಕ ಅನುಭವಿಸಲಿದೆಯೆ? ಭಾರತದ ವಿಶಾಲ ಭೂಪ್ರದೇಶ, ಇಲ್ಲಿರುವ ಸ್ವಾಭಾವಿಕ ಸಂಪನ್ಮೂಲ, ಇಲ್ಲಿರುವ ನದಿಗಳು, ಸುತ್ತ ಆವರಿಸಿರುವ ಕಡಲು ಇವುಗಳಿಗೆ ಹೋಲಿಸಿದರೆ ಜನಸಂಖ್ಯೆ ಭಾರತಕ್ಕೆ ನಿಜಕ್ಕೂ ಭಾರವಾಗಿದೆಯೆ? ಅಥವಾ ಇರುವ ಜನಸಂಖ್ಯೆಯನ್ನು ಸಂಪನ್ಮೂಲವಾಗಿ ಬದಲಿಸದೆ ನಮಗೆ ನಾವೇ ಭಾರವಾಗಿಸಿಕೊಂಡಿದ್ದೇವೆಯೆ? ಈ ಪ್ರಶ್ನೆಗೆ ನಾವು ಇನ್ನಾದರೂ ಉತ್ತರವನ್ನು ಕಂಡುಕೊಳ್ಳಲೇ ಬೇಕಾಗಿದೆ. ಇಂದು ವಿಶ್ವದಲ್ಲಿ ಜನಸಂಖ್ಯೆಗಾಗಿ ಒಂದನೇ ಸ್ಥಾನದಲ್ಲಿರುವ ಚೀನಾ, ಇತ್ತೀಚೆಗೆ ತನ್ನ ಜನಸಂಖ್ಯಾ ನೀತಿಯನ್ನು ಬದಲಿಸಿತು. ಒಬ್ಬನಿಗೆ ಒಂದೇ ಮಗು ಎನ್ನುವ ನೀತಿಯಿಂದ ಹಿಂದೆ ಸರಿದು ಹೆಚ್ಚು ಮಕ್ಕಳನ್ನು ಹೆರುವುದಕ್ಕೆ ಅದು ಪ್ರೋತ್ಸಾಹ ನೀಡ ತೊಡಗಿದೆ
. ಅತಿ ಹೆಚ್ಚು ಜನಸಂಖ್ಯೆಯಿಂದಾಗಿ ಚೀನಾ ಬಡ ರಾಷ್ಟ್ರವಾಗಿ ವಿಶ್ವದಲ್ಲಿ ಗುರುತಿಸುತ್ತಿಲ್ಲ. ಬದಲಿಗೆ ಅದು ಅಮೆರಿಕ, ರಶ್ಯಕ್ಕೆ ಸೆಡ್ಡು ಹೊಡೆಯುವಷ್ಟು ಪ್ರಬಲವಾಗಿ ಬೆಳೆದಿದೆ. ಭಾರತಕ್ಕೆ ಹೋಲಿಸಿದರೆ ಎಲ್ಲ ಕ್ಷೇತ್ರಗಳಲ್ಲೂ ಚೀನಾ ಅಭೂತಪೂರ್ವ ಸಾಧನೆಯನ್ನು ಮಾಡಿ ತೋರಿಸಿದೆ. ಅದು ತನ್ನ ಜನಸಂಖ್ಯೆಗಾಗಿ ಯಾವತ್ತೂ ಕೊರಗಿಲ್ಲ. ಒಲಿಂಪಿಕ್ಸ್‌ನಲ್ಲಿ ಅದು ತೋರಿಸುವ ಸಾಧನೆಗಳನ್ನು ನಾವು ಗಮನಿಸೋಣ. ಅಂದರೆ ಚೀನಾ ಯುವಶಕ್ತಿಯನ್ನು ಸದ್ಬಳಕೆ ಮಾಡುವಲ್ಲಿ ಯಶಸ್ವಿಯಾಗಿದೆ. ಸಂಶೋಧನೆ, ತಂತ್ರಜ್ಞಾನ, ಕುಶಲ ಗುಡಿಗಾರಿಕೆಗಳಲ್ಲೂ ಅಲ್ಲಿನ ಜನರು ಅಪಾರ ಸಾಧನೆಯನ್ನು ಮಾಡಿದ್ದಾರೆ. ಇಂದು ವಿಶ್ವದ ಎಲ್ಲೆಡೆಯೂ ಚೀನಾದ ಜನರು ಹರಡಿಕೊಂಡು, ಚೀನಾದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿದ್ದಾರೆ. ಕಡ್ಡಾಯ ಕುಟುಂಬ ಯೋಜನೆಯ ಮೂಲಕ, ಒಂದು ಕುಟುಂಬಕ್ಕೆ ಒಂದೇ ಮಗು ಎನ್ನುವ ನೀತಿಯಿಂದ ಇಂದು ಚೀನಾ ಸಮಸ್ಯೆಯನ್ನು ಎದುರಿಸುತ್ತಿದೆ. ಚೀನಾದಲ್ಲಿ ವೃದ್ಧರ ಸಂಖ್ಯೆ ಹೆಚ್ಚಳವಾಗುತ್ತಾ, ಯುವಕರ ಸಂಖ್ಯೆ ಇಳಿಮುಖವಾಗಿದೆ. ಯಾವುದೇ ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚಿದ್ದಾಗಷ್ಟೇ ಅದು ಬಲಿಷ್ಠವಾಗಿ ಬೆಳೆಯುವುದಕ್ಕೆ ಸಾಧ್ಯ. ಈ ಕಾರಣದಿಂದಲೇ ಅದು ತನ್ನ ಜನಸಂಖ್ಯಾ ನೀತಿಯಿಂದ ಹಿಂದೆ ಸರಿದು, ಹೆಚ್ಚು ಮಕ್ಕಳನ್ನು ಹೆರುವುದಕ್ಕೆ ಕುಟುಂಬಗಳಿಗೆ ಪ್ರೋತ್ಸಾಹ ನೀಡ ತೊಡಗಿದೆ. ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಮೀರಿಸಲಿದೆ ಎನ್ನುವ ಬೆದರಿಕೆಗೆ ಸದ್ಯ ಯಾವ ಅರ್ಥವೂ ಉಳಿದಿಲ್ಲ. ಭಾರತದ ಜನಸಂಖ್ಯೆಯನ್ನು ಚೀನಾದ ಜನಸಂಖ್ಯೆಯ ಜೊತೆಗೆ ಹೋಲಿಸುವುದೇ ನಾವು ಮಾಡುವ ಪ್ರಮಾದವಾಗಿದೆ.
ಚೀನಾ ತನ್ನ ಜನಸಂಖ್ಯೆಯನ್ನು ಸಂಪನ್ಮೂಲವಾಗಿಸುವಲ್ಲಿ ಬಹುತೇಕ ಯಶಸ್ವಿಯಾಗಿದೆ. ಆದುದರಿಂದಲೇ, ಅದು ಮತ್ತೆ ಜನಸಂಖ್ಯೆಯ ಹೆಚ್ಚಳಕ್ಕೆ ಮನ ಮಾಡಿದೆ. ಭಾರತದಲ್ಲಿ ನಿರುದ್ಯೋಗ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆ ಕಾರಣ ಜನಸಂಖ್ಯೆಯ ಹೆಚ್ಚಳ ಎಂದು ಸರಕಾರ ತಪ್ಪು ಮಾಹಿತಿಗಳನ್ನು ಹರಡುತ್ತಾ, ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ. ಕಳೆದೆರಡು ವರ್ಷಗಳಲ್ಲಿ ಒಂದು ಕೋಟಿಗೂ ಅಧಿಕ ಮಂದಿ ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಬಡತನ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆರೋಗ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಭಾರೀ ಹಿನ್ನಡೆಗಳಾಗಿವೆ. ಇವೆಲ್ಲವೂ ಜನಸಂಖ್ಯೆಯ ಹೆಚ್ಚಳದ ಕಾರಣದಿಂದ ಸಂಭವಿಸಿರುವುದೇ ಆಗಿದ್ದರೆ, ಈ ದೇಶದ ಅಂಬಾನಿ, ಅದಾನಿಗಳು ವಿಶ್ವದ ಶ್ರೀಮಂತರಲ್ಲಿ ಅಗ್ರಸ್ಥಾನವನ್ನು ಪಡೆಯುತ್ತಿರಲಿಲ್ಲ. ಅತಿ ಹೆಚ್ಚು ಬಡತನವುಳ್ಳ ಈ ದೇಶದಲ್ಲಿ ಬಿಲಿಯಾಧಿಪತಿಗಳು ಇದ್ದಾರೆ. ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯೆನ್ನುವುದು ಕಾರ್ಪೊರೇಟ್ ಕುಳಗಳನ್ನು ಕೇಂದ್ರವಾಗಿಟ್ಟು ನಡೆಯುತ್ತಿದೆ. ಇವರಿಗೆ ಪೂರಕವಾಗಿ ಆರ್ಥಿಕ ನೀತಿಗಳು ಜಾರಿಯಾಗುತ್ತಿವೆ. ಪರಿಣಾಮವಾಗಿ ದೇಶದ ಬಹುಸಂಖ್ಯಾತರು ಅದರಲ್ಲೂ ಯುವಕರು ಹಸಿವು, ನಿರುದ್ಯೋಗಗಳಿಂದ ನರಳಬೇಕಾಗಿದೆ. ಸಂಪತ್ತು ಕೆಲವೇ ಕೆಲವು ಮಂದಿಯ ಕೈಯಲ್ಲಿ ಶೇಖರಣೆಯಾಗುತ್ತಿದೆ. ಆ ಸಂಪತ್ತು ಸಮಾನವಾಗಿ ಹಂಚಿಕೆಯಾದ ದಿನ, ಭಾರತದ ಪಾಲಿಗೆ ಜನಸಂಖ್ಯೆ ಸಮಸ್ಯೆಯಾಗುವುದಿಲ್ಲ, ಬದಲಿಗೆ ಸಂಪನ್ಮೂಲವಾಗುತ್ತದೆ.
ನಮ್ಮ ಯುವಜನರನ್ನು ಸಮರ್ಥವಾಗಿ ಬಳಸುವ, ದೇಶಕ್ಕಾಗಿ ದುಡಿಸುವ ಯೋಜನೆಗಳನ್ನು ಸರಕಾರ ರೂಪಿಸಿದ್ದೇ ಆದರೆ, ಇಂದು ಭಾರತ ಒಲಿಂಪಿಕ್ಸ್‌ನಲ್ಲಿ ಅಗ್ರಸ್ಥಾನದಲ್ಲಿರುತ್ತಿತ್ತು. ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆಯಿರುವ ದೇಶಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆಯನ್ನು ಪಡೆದೂ ಒಲಿಂಪಿಕ್ಸ್‌ನಲ್ಲಿ ಒಂದು ಅಥವಾ ಎರಡು ಪದಕಗಳಿಗೆ ತೃಪ್ತಿ ಪಡಬೇಕಾದ ಸ್ಥಿತಿ ನಮಗೆ ಯಾಕೆ ಬಂದಿದೆ? ಎನ್ನುವ ಆತ್ಮ ವಿಮರ್ಶೆಯನ್ನು ಸರಕಾರ ನಡೆಸಿದಾಗ ಜನಸಂಖ್ಯೆ ಭಾರತದಲ್ಲಿ ಯಾಕೆ ಸಮಸ್ಯೆಯಾಗಿದೆ ಎನ್ನುವುದಕ್ಕೆ ಉತ್ತರ ಸಿಗಬಹುದು. ಒಂದಂತೂ ಸತ್ಯ. ಕಳೆದ ಐದು ವರ್ಷಗಳಿಂದ ಭಾರತ ಆರ್ಥಿಕವಾಗಿ ಹಿಂದಕ್ಕೆ ಚಲಿಸುತ್ತಿದೆ. ಇದು ಭಾರತದಲ್ಲಿರುವ ಜನಸಂಖ್ಯೆಯ ಗುಣಮಟ್ಟವನ್ನು ಇನ್ನಷ್ಟು ಕಳಪೆಯಾಗಿಸಲಿದೆ. ಕಳಪೆ ಗುಣಮಟ್ಟದ ಜನಸಂಖ್ಯೆ ಭಾರತದ ಪಾಲಿಗೆ ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸುವ ಸಾಧ್ಯತೆಗಳು ಅಧಿಕ. ಆ ಕಾರಣಕ್ಕಾಗಿ, ನಾವು ಹೆಚ್ಚುತ್ತಿರುವ ಜನಸಂಖ್ಯೆಯ ಬಗ್ಗೆ ಆತಂಕ ಪಡಬೇಕಾಗಿದೆ. ಜನಸಂಖ್ಯೆ ನಿಯಂತ್ರಣದ ಅಗತ್ಯವಿದೆ ನಿಜ. ಆದರೆ ಜೊತೆ ಜೊತೆಗೇ ಇರುವ ಜನಸಂಖ್ಯೆಯನ್ನು ಸಂಪನ್ಮೂಲವಾಗಿಸುವಲ್ಲಿ ಸರಕಾರ ಯೋಜನೆಗಳನ್ನು ರೂಪಿಸಬೇಕು. ಯುವಶಕ್ತಿಯನ್ನು ಪೋಲಾಗಿಸುವುದಕ್ಕೆ ಬಿಡದೆ ಅವರನ್ನು ಸದ್ಬಳಕೆ ಮಾಡಬಲ್ಲ ಯೋಜನೆಗಳು ಜಾರಿಗೊಳ್ಳಬೇಕು. ಜನಸಂಖ್ಯೆಯನ್ನು ನಿಯಂತ್ರಣ ಮಾಡುವುದರಿಂದ ಈ ದೇಶವನ್ನು ಮುಂದಕ್ಕೆ ತರಬಹುದು ಎನ್ನುವುದು ಅರ್ಧ ಸತ್ಯ. ಅದು ಪೂರ್ತಿ ಸತ್ಯವಾಗಿದ್ದರೆ ಚೀನಾ ತನ್ನ ಜನಸಂಖ್ಯಾ ನಿಯಂತ್ರಣ ನೀತಿಯನ್ನು ಹಿಂದಕ್ಕೆ ಪಡೆಯುತ್ತಿರಲಿಲ್ಲ. ಸಂಪನ್ಮೂಲ ಮತ್ತು ಜನಸಂಖ್ಯೆಯ ನಡುವೆ ಸಮನ್ವಯತೆಯನ್ನು ತರುವ ಬಗ್ಗೆ ಸರಕಾರ ಯೋಚಿಸುವ ಅಗತ್ಯವಿದೆ. ನೂರು ಜನ ಖಾಲಿ ತಟ್ಟೆ ಹಿಡಿದು ನಿಂತಿರುವಾಗ, ನೂರು ಜನರು ಉಣ್ಣುವ ಅನ್ನ ಒಬ್ಬನ ತಟ್ಟೆಯಲ್ಲೇ ಕೊಳೆಯಬಾರದು. ಅದನ್ನು ಕನಿಷ್ಠ ಐವತ್ತು ಜನರಿಗಾದರೂ ಹಂಚುವ ಕೆಲಸ ಸರಕಾರದಿಂದ ನಡೆಯಬೇಕು.