​ಖಾಸಗಿ ವಲಯದಲ್ಲಿ ಮೀಸಲಾತಿ: ರಾಜ್ಯ ಸರಕಾರದ ಹೊಣೆಗಾರಿಕೆ

Update: 2022-07-25 02:49 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕನ್ನಡಿಗರಿಗೆ ಅಥವಾ ಸ್ಥಳೀಯರಿಗೆ ಉದ್ಯೋಗ ಎನ್ನುವುದು ಇಂದು ನಿನ್ನೆಯ ಕೂಗೇನೂ ಅಲ್ಲ. ಸ್ಥಳೀಯ ಭೂಮಿ, ಸಂಪನ್ಮೂಲಗಳೆಲ್ಲವನ್ನೂ ಬಳಸಿಕೊಂಡು ಬೃಹತ್ ಕಂಪೆನಿಗಳನ್ನು ಸ್ಥಾಪಿಸುವ ಉದ್ಯಮಿಗಳು, ಉದ್ಯೋಗ ನೀಡುವ ಸಂದರ್ಭದಲ್ಲಿ ಮಾತ್ರ ಸ್ಥಳೀಯರನ್ನು ನಿರ್ಲಕ್ಷಿಸುವುದು ಹಲವು ದಶಕಗಳಿಂದ ನಡೆದುಕೊಂಡು ಬಂದಿದೆ. 'ಉದ್ಯೋಗ ಸೃಷ್ಟಿಯಾಗುತ್ತದೆ' ಎನ್ನುವ ಆಮಿಷವೊಡ್ಡಿ ಸ್ಥಳೀಯರ ಫಲವತ್ತಾದ ಭೂಮಿಯನ್ನು ಕಿತ್ತುಕೊಳ್ಳುವ ಕಂಪೆನಿಗಳು , ಆ ಬಳಿಕ 'ಅರ್ಹತೆ'ಯನ್ನು ಮುಂದಿಟ್ಟುಕೊಂಡು ಸ್ಥಳೀಯರಿಗೆ ಉದ್ಯೋಗಗಳನ್ನು ನಿರಾಕರಿಸುತ್ತವೆ. ಈ ಕಂಪೆನಿಗಳ ಪ್ರಕಾರ ಸ್ಥಳೀಯರಾಗಿರುವುದೇ 'ಅನರ್ಹತೆ'ಯಾಗಿದೆ. ಭೂಮಿ, ನದಿ, ಕಡಲು ಎಲ್ಲವನ್ನು ಬೃಹತ್ ಕಂಪೆನಿಗಳಿಗೆ ಒಪ್ಪಿಸುವ ಸ್ಥಳೀಯರಿಗೆ ಅಂತಿಮವಾಗಿ ದೊರಕುವುದು, ಆ ಕಂಪೆನಿಗಳು ಹೊರ ಬಿಟ್ಟ ತ್ಯಾಜ್ಯಗಳಷ್ಟೇ. ಕನ್ನಡಿಗರಿಗೆ ಉದ್ಯೋಗ ನೀಡಲು ಈ ಹಿಂದೆ ಸರೋಜಿನಿ ಮಹಿಷಿ ವರದಿ ನೀಡಿತ್ತು. ಆ ವರದಿಯ ಅನುಷ್ಠಾನಕ್ಕಾಗಿ ವಿವಿಧ ಸರಕಾರಗಳ ಮೇಲೆ ಒತ್ತಡ ಹೇರಲಾಗುತ್ತಿದೆಯಾದರೂ, ಪರಿಣಾಮ ಶೂನ್ಯ. ಬೃಹತ್ ಖಾಸಗಿ ಕಂಪೆನಿಗಳ ಜೊತೆಗೆ ಸರಕಾರ ಕೈ ಜೋಡಿಸಿರುವುದರ ಪರಿಣಾಮ ಇದು. ಇದೀಗ 'ಕರ್ನಾಟಕ ಉದ್ಯೋಗ ನೀತಿ 22-25'ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಬಂಡವಾಳ ಹೂಡಿಕೆ ವಿಸ್ತರಣೆಯನ್ನು ಆಧರಿಸಿ ಕನ್ನಡಿಗರಿಗೆ ಅಂದರೆ ಸ್ಥಳೀಯರಿಗೆ ಹೆಚ್ಚುವರಿ ಉದ್ಯೋಗ ನೀಡಲು ಸರಕಾರ ಕ್ರಮ ತೆಗೆದುಕೊಂಡಿದೆ. ಆದರೆ ಇದು ಅಂತಿಮವಾಗಿ ಕಾರ್ಯರೂಪಕ್ಕೆ ಬರುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಅಥವಾ ಸ್ಥಳೀಯ ಸಂಪನ್ಮೂಲಗಳನ್ನು ಬೃಹತ್ ಕಂಪೆನಿಗಳ ಕೈಗೆ ಒಪ್ಪಿಸುವ ಸಂದರ್ಭದಲ್ಲಿ ಸ್ಥಳೀಯರ ಮೂಗಿಗೆ ಬೆಣ್ಣೆ ತಾಗಿಸುವುದಕ್ಕಷ್ಟೇ ಈ ನೀತಿ ಸೀಮಿತವಾಗುತ್ತದೆಯೇ ಎನ್ನುವುದನ್ನು ಮುಂದಿನ ದಿನಗಳು ಹೇಳಬೇಕು.

ಒಂದಂತೂ ಸತ್ಯ. ಸಾರ್ವಜನಿಕ ಸಂಸ್ಥೆಗಳು ಒಂದೊಂದಾಗಿ ಖಾಸಗಿ ಪಾಲಾಗುತ್ತಿವೆ. ಖಾಸಗೀಕರಣದ ಮೂಲಕವೇ ಅಭಿವೃದ್ಧಿ ಎನ್ನುವುದನ್ನು ನಂಬಿ ಅದಕ್ಕೆ ಪೂರಕವಾಗಿ ಆರ್ಥಿಕ ನೀತಿಗಳನ್ನು ಸರಕಾರ ಜಾರಿಗೊಳಿಸುತ್ತಿದೆ. ಸರಕಾರಿ ಉದ್ಯೋಗಗಳಲ್ಲಿ ಭಾರೀ ಪ್ರಮಾಣದ ಇಳಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಖಾಸಗಿ ವಲಯದಲ್ಲಿ ಮೀಸಲಾತಿಯನ್ನು ಜಾರಿಗೊಳಿಸುವುದು ಅತ್ಯಗತ್ಯವಾಗಿದೆ. ಮೀಸಲಾತಿ ಜಾರಿಗೊಂಡ ಇಷ್ಟು ವರ್ಷಗಳ ಬಳಿಕವೂ ಭಾರತದಲ್ಲಿ ಅಸಮಾನತೆ ವ್ಯಾಪಕವಾಗಿ ತಾಂಡವವಾಡುತ್ತಿದೆ. ಗ್ರಾಮೀಣ-ನಗರ, ಮೇಲ್ಜಾತಿ-ಕೀಳ್ಜಾತಿ, ಇಂಗ್ಲಿಷ್ ಮೀಡಿಯಂ-ಕನ್ನಡ ಮೀಡಿಯಂ, ಸರಕಾರಿ ಶಾಲೆ-ಖಾಸಗಿ ಶಾಲೆ, ಬಹುಸಂಖ್ಯಾತರು-ಅಲ್ಪಸಂಖ್ಯಾತರು ಹೀಗೆ ಬೇರೆ ಬೇರೆ ರೂಪದಲ್ಲಿ ಸಮಾಜ ಒಡೆದು ಹೋಗಿದೆ. ಸಂವಿಧಾನ ಮೀಸಲಾತಿ ಜಾರಿಗೊಳಿಸದೇ ಇದ್ದಿದ್ದರೆ ಇಂದು ಮೇಲ್ಜಾತಿಯ ಸಣ್ಣ ಸಂಖ್ಯೆಯ ಜನರೇ ಎಲ್ಲ ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಿದ್ದರು. ಉಳ್ಳವರ ಮಕ್ಕಳೇ ಸರ್ವ ಅವಕಾಶಗಳನ್ನು ತಮ್ಮದಾಗಿಸಿ ಬಿಡುತ್ತಿದ್ದರು. ಮೀಸಲಾತಿ ಜಾರಿ ಈ ನಿಟ್ಟಿನಲ್ಲಿ ಸಣ್ಣ ಮಟ್ಟಿಗಾದರೂ ಸಾಮಾಜಿಕ ನ್ಯಾಯವನ್ನು ಅನುಷ್ಠಾನಗೊಳಿಸುವಲ್ಲಿ ಕೆಲಸ ಮಾಡಿದೆ. ಆದರೆ ಮೀಸಲಾತಿ ತನ್ನ ಉದ್ದೇಶವನ್ನು ಇನ್ನೂ ಪೂರ್ಣ ಪ್ರಮಾಣದಲ್ಲಿ ಈಡೇರಿಸಿಕೊಂಡಿಲ್ಲ. ಇಂದಿಗೂ ದೇಶದಲ್ಲಿ ವ್ಯಾಪಕ ಅಸಮಾನತೆ ಜಾರಿಯಲ್ಲಿದೆ. ಮೀಸಲಾತಿ ಅಸ್ತಿತ್ವದಲ್ಲಿದ್ದರೂ ತಮ್ಮ ಹಕ್ಕಿನ ಹುದ್ದೆಗಳನ್ನು ತನ್ನದಾಗಿಸಿಕೊಳ್ಳುವುದು ಕೆಳ ಜಾತಿಯ ಜನರಿಗೆ ಸಾಧ್ಯವಾಗುತ್ತಿಲ್ಲ.

ಕೆಳಜಾತಿಯ ಜನರಲ್ಲಿ 'ಅರ್ಹತೆ'ಯ ಕೊರತೆಯಿದ್ದುದು ಇದಕ್ಕೆ ಕಾರಣವಲ್ಲ. ಅವರ ಅನರ್ಹತೆಗೆ ನೇರ ಕಾರಣ ಅವರು ಹುಟ್ಟಿದ ಜಾತಿ. ಉನ್ನತ ಶಿಕ್ಷಣ ವ್ಯವಸ್ಥೆಯಲ್ಲೇ ಈ ಜಾತಿ ಭೀಕರ ರೂಪವನ್ನು ಪಡೆದಿರುವಾಗ, ಕೆಳಸ್ತರದಲ್ಲಿ ಅದರ ಸ್ಥಿತಿ ಹೇಗಿರಬಹುದು. ಐಐಟಿ ದಿಲ್ಲಿಯ ಎಂಟು ವಿಭಾಗಗಳು 2021ರಲ್ಲಿ ಪಿಎಚ್‌ಡಿಗಾಗಿ 637 ಅರ್ಹ ಎಸ್‌ಸಿ, ಎಸ್‌ಟಿ ಒಬಿಸಿ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಸ್ವೀಕರಿಸಿದ್ದವು. ಆದರೆ ದುರಂತವೆಂದರೆ ಅವರಲ್ಲಿ ಯಾರಿಗೂ ಪ್ರವೇಶ ನೀಡಲಾಗಿಲ್ಲ. ಎಲ್ಲ 53 ಪಿಎಚ್‌ಡಿ ಸೀಟ್‌ಗಳು ಸಾಮಾನ್ಯ ವರ್ಗ ಮತ್ತು ಆರ್ಥಿಕವಾಗಿ ಸಮರ್ಥರಾಗಿರುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ದಕ್ಕಿದ್ದವು. 23 ಐಐಟಿಗಳ ಪೈಕಿ ಕನಿಷ್ಠ ಒಂಭತ್ತರಲ್ಲಿ ಇಂತಹ ತಾರತಮ್ಯಗಳು ಬಹಿರಂಗವಾಗಿವೆ. ಇತ್ತ ಬೃಹತ್ ಖಾಸಗಿ ಕಂಪೆನಿಗಳ ಅತ್ಯುನ್ನತ ಸ್ಥಾನಗಳಲ್ಲಿ ಮತ್ತೆ ಮೇಲ್ಜಾತಿಯ ಜನರೇ ಪ್ರಾಬಲ್ಯವನ್ನು ಪಡೆದಿರುವುದು, ತಳಸ್ತರದ ಜನರ ಉದ್ಯೋಗಗಳಿಗೆ ಸಮಸ್ಯೆಗಳನ್ನು ಸೃಷ್ಟಿಸಿದೆ. ಸರಕಾರ ಇಂದು ಖಾಸಗೀಕರಣಕ್ಕೆ ಆದ್ಯತೆಯನ್ನು ನೀಡಿದೆಯೇನೋ ಸರಿ. ಆದರೆ ತಳಸ್ತರದಿಂದ ಮೇಲುಸ್ತರದವರೆಗೆ ಎಲ್ಲರೂ ಒಳಗೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಖಾಸಗೀಕರಣ ವಿಸ್ತರಿಸುತ್ತಿರುವ ಈ ದಿನಗಳಲ್ಲಿ, ಕೆಳಸ್ತರದ ಜನರಿಗೆ ಉದ್ಯೋಗ ನೀಡುವಲ್ಲಿ ಖಾಸಗಿ ಕಂಪೆನಿಗಳು ಹಿಂದುಳಿದರೆ ಅಭಿವೃದ್ಧಿಗೆ ಯಾವ ಅರ್ಥವೂ ಉಳಿಯುವುದಿಲ್ಲ. ಖಾಸಗೀಕರಣ ಈ ದೇಶದಲ್ಲಿ ಮತ್ತೆ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ಹೆಚ್ಚಿಸಲಿರುವ ಆತಂಕ ಕೆಳಜಾತಿಯ ಜನರನ್ನು ಕಾಡುತ್ತಿದೆ. ಖಾಸಗಿ ಕಂಪೆನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ಮೀಸಲಾತಿಯ ಅಗತ್ಯವಿದೆ ಎನ್ನುವುದನ್ನು ಸರಕಾರ ಈಗಾಗಲೇ ಒಪ್ಪಿಕೊಂಡಿದೆ. ಅದರ ಭಾಗವಾಗಿಯೇ ಹೊಸ ನೀತಿಗೆ ಒಪ್ಪಿಗೆಯನ್ನು ನೀಡಿದೆ. ಮೀಸಲಾತಿಯಿಲ್ಲದೇ ಇದ್ದರೆ ಖಾಸಗಿ ಕಂಪೆನಿಗಳಲ್ಲಿ ಸ್ಥಳೀಯರು ತಮ್ಮ ಹಕ್ಕುಗಳನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಸರಕಾರಕ್ಕೆ ಮನವರಿಕೆಯಾಗಿದೆ. ಇದೇ ಸಂದರ್ಭದಲ್ಲಿ ಈ ಖಾಸಗಿ ವಲಯದಲ್ಲಿ ಜಾತಿಯ ಕಾರಣದಿಂದ ಉದ್ಯೋಗಗಳನ್ನು ನಿರಾಕರಿಸಲ್ಪಡುವ ಜನರಿಗೆ ಇದು ಯಾವ ರೀತಿಯ ನ್ಯಾಯವನ್ನು ನೀಡಲಿದೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಸ್ಥಳೀಯರಿಗೆ ಉದ್ಯೋಗ ಎನ್ನುವುದರೊಂದಿಗೆ ಸರಕಾರದ ಹೊಣೆಗಾರಿಕೆ ಮುಗಿಯುವುದಿಲ್ಲ. ಆ ಸ್ಥಳೀಯರಲ್ಲೂ ಗ್ರಾಮೀಣ ಪ್ರದೇಶದ, ದುರ್ಬಲ ಜಾತಿಯ ಅಭ್ಯರ್ಥಿಗಳಿಗೆ ಆದ್ಯತೆಯನ್ನು ನೀಡುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು. ಆಗ ಮಾತ್ರ, ಸ್ಥಳೀಯರಿಗೆ ಮೀಸಲಾತಿ ಅರ್ಥ ಪಡೆಯುತ್ತದೆ.

ಮೀಸಲಾತಿ ಬೇರೆ ಬೇರೆ ಕಾರಣಗಳಿಗಾಗಿ ದುರ್ಬಲವಾಗುತ್ತಿದೆ. ಇಂದು, ದುರ್ಬಲ ರಿಗಾಗಿ ಮೀಸಲಾತಿ ಹೆಸರಿಗಷ್ಟೇ ಇದೆ. ಒಂದೆಡೆ ಸರಕಾರಿ ಉದ್ಯೋಗಗಳು ಇಳಿಮುಖವಾಗುತ್ತಿವೆ. ಮತ್ತೊಂದೆಡೆ, ಬಡ ಮೇಲ್ಜಾತಿಯ ಜನರಿಗಾಗಿ ಶೇ. 10 ರಷ್ಟು ಮೀಸಲಾತಿಯನ್ನು ಜಾರಿಗೊಳಿಸಲಾಗಿದೆ. 'ಬಡತನದ ಅಸಮಾನತೆ' ಮತ್ತು 'ಜಾತಿ ಅಸಮಾನತೆ' ಎರಡನ್ನು ಒಂದಾಗಿ ನೋಡುವ ಮೂಲಕ, ಮೀಸಲಾತಿಯ ಉದ್ದೇಶವನ್ನೇ ಅಪವೌಲ್ಯಗೊಳಿಸಲಾಗಿದೆ. ಇಂತಹ ಸಂದರ್ಭದಲ್ಲಿ ಖಾಸಗಿ ವಲಯ ಸಾರ್ವಜನಿಕ ವಲಯಗಳನ್ನು ನುಂಗುವುದೆಂದರೆ ಪರೋಕ್ಷವಾಗಿ ಕೆಳಜಾತಿಯ ಅಳಿದುಳಿದ ಮೀಸಲಾತಿಯನ್ನು ನುಂಗಿ ಹಾಕುವುದು ಮತ್ತು ಈ ದೇಶದಲ್ಲಿ ಅಸಮಾನತೆಯನ್ನು ಇನ್ನಷ್ಟು ವಿಸ್ತರಿಸುವುದು ಎಂದು ಭಾವಿಸಬೇಕಾಗಿದೆ. ಆದುದರಿಂದ, ಖಾಸಗಿ ಕಂಪೆನಿಗಳಿಗೆ ರಾಜಹಾಸನ್ನು ಹಾಸುವ ಸರಕಾರ, ಆ ವಲಯದಲ್ಲಿ ಮೀಸಲಾತಿಯನ್ನು ಜಾರಿಗೊಳಿಸುವ ಬಗ್ಗೆಯೂ ಕಾರ್ಯಯೋಜನೆಯನ್ನು ರೂಪಿಸಬೇಕಾಗಿದೆ. ಅದಕ್ಕಾಗಿ ಕೇಂದ್ರ ಸರಕಾರದ ಮೇಲೆ ದೊಡ್ಡ ಮಟ್ಟದ ಒತ್ತಡವನ್ನು ಹೇರಬೇಕು. ಇಲ್ಲವಾದರೆ ಸಂವಿಧಾನದ ಆಶಯಗಳಿಗೆ ಖಾಸಗಿ ವಲಯಗಳಿಂದ ಭಾರೀ ಪ್ರಮಾಣದ ಹೊಡೆತ ಬೀಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News