ಅಂದಿನ ಮತ್ತು ಇಂದಿನ ಮಂಗಳೂರು

Update: 2022-08-01 04:21 GMT

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಅದರಲ್ಲೂ ಮಂಗಳೂರು ಮತ್ತು ಉಡುಪಿ ನಾನು ತುಂಬಾ ಇಷ್ಟ ಪಡುವ ಊರುಗಳು. ಉತ್ತರ ಕರ್ನಾಟಕದ ಬಿಜಾಪುರ ಜಿಲ್ಲೆಯ ನಾನು ಮೊದಲ ಬಾರಿ ಈ ಪ್ರೀತಿಯ ನಗರಗಳನ್ನು ನೋಡಿದ್ದು 1977 ರಲ್ಲಿ. ಆಗ ಪುತ್ತೂರಿನಲ್ಲಿ ರಾಜ್ಯ ಪ್ರಗತಿಪಂಥ ಸಮ್ಮೇಳನ. ಅದರಲ್ಲಿ ಭಾಗವಹಿಸಲು ಹುಬ್ಬಳ್ಳಿಯಿಂದ ಅಶೋಕ್ ಶೆಟ್ಟರ್, ನಾನು ಹಾಗೂ ಗೋಕಾಕದ 'ಸಮದರ್ಶಿ' ಪತ್ರಿಕೆಯ ಸಂಪಾದಕರಾಗಿದ್ದ ಬಿ.ಎನ್.ಧಾರವಾಡಕರ ಬಂದಿದ್ದೆವು.


1975ರಲ್ಲಿ ದಾವಣಗೆರೆಯಲ್ಲಿ ನಾವೇ ಸಂಘಟಿಸಿದ ಪ್ರಗತಿಪಂಥ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆದುದರಿಂದ ಸ್ಫೂರ್ತಿ ಪಡೆದ ಪುತ್ತೂರಿನ ಹಿರಿಯ ಲೇಖಕ ನಿರಂಜನರ ಮಿತ್ರ ಬಿ.ಎಂ.ಶರ್ಮಾ ಮತ್ತು ಅವರ ಮಿತ್ರರು ಎರಡನೇ ಸಮ್ಮೇಳನವನ್ನು ಪುತ್ತೂರಿನಲ್ಲಿ ಏರ್ಪಡಿಸಿದ್ದರು.ಆ ಸಮ್ಮೇಳನಕ್ಕೆ ನಿರಂಜನ, ಬಸವರಾಜ ಕಟ್ಟೀಮನಿ, ಕವಿ ಸುಬ್ಬಣ್ಣ ಎಕ್ಕುಂಡಿ ಮೊದಲಾದ ಹಿರಿಯ ಸಾಹಿತಿಗಳು ಬಂದಿದ್ದರು. ಕಮ್ಯುನಿಸ್ಟ್ ನಾಯಕ ಬಿ.ವಿ.ಕಕ್ಕಿಲ್ಲಾಯರು ಬಂಟ್ವಾಳದ ಶಾಸಕರಾಗಿದ್ದರು. ಆಗ ಮಂಗಳೂರು ಬಗ್ಗೆ ಯುವಕರಾದ ನಮಗೆ ಆಕರ್ಷಣೆ. ಕಾರಣ ಮಂಗಳೂರು ಮತ್ತು ಉಡುಪಿ ಆಗ ಎಡಪಂಥೀಯ ಚಳವಳಿಯ ಕೇಂದ್ರ ಗಳಾಗಿದ್ದವು. ಕಕ್ಕಿಲ್ಲಾಯ,

ಕೃಷ್ಣ ಶೆಟ್ಟಿ, ಎಂ.ಎಚ್.ಕೃಷ್ಣಪ್ಪ, ಪಿ.ರಾಮಚಂದ್ರರಾವ್ ಇವರ ಹೆಸರು ಪತ್ರಿಕೆಗಳಲ್ಲಿ ಓದುತ್ತಿದ್ದೆವು.
ಪುತ್ತೂರಿನ 'ಪ್ರಗತಿ ಪಂಥ' ಸಮ್ಮೇಳನಕ್ಕೆ ಬಂದು ವಾಪಸ್ ಊರಿಗೆ ಹೋಗುವಾಗ ಮಂಗಳೂರಿನ ಹಂಪನಕಟ್ಟೆಯ ಹಳೆಯ ಬಸ್ ನಿಲ್ದಾಣದಲ್ಲಿ ಬಸ್‌ಗೆ ಕಾಯುತ್ತಿದ್ದೆವು. ಸಮ್ಮೇಳನಕ್ಕೆ ಬಂದಿದ್ದ ಕವಿ ಸುಬ್ಬಣ್ಣ ಎಕ್ಕುಂಡಿ ಅವರು ವಾಪಸ್ ಅವರು ನೆಲೆಸಿದ್ದ ಬಂಕಿಕೊಡ್ಲಕ್ಕೆ ಹೊರಟಿದ್ದರು. ಅಲ್ಲಿನ ಸಾಲು ಅಂಗಡಿಗಳ ಕಟ್ಟೆಯ ಮೇಲೆ ಕೂತು ಎಕ್ಕುಂಡಿಯವರು ಓದಿದ ಪದ್ಯಗಳನ್ನು ಕೇಳಿದ ಖುಷಿ ಇನ್ನೂ ಹಸಿರಾಗಿದೆ. ಅಪ್ಪಟ ಮನುಷ್ಯರಾಗಿದ್ದ ಜೀವಪರ ಕವಿಯಾಗಿದ್ದ ಸುಬ್ಬಣ್ಣ ಎಕ್ಕುಂಡಿ ಅವರು ಏಕಕಾಲದಲ್ಲಿ ಮಾರ್ಕ್ಸ್‌ವಾದಿ ಮತ್ತು ಮಧ್ವಾಚಾರ್ಯರ ಅಭಿಮಾನಿಯಾಗಿದ್ದರು. ವಿಭಿನ್ನವಾದ ಎರಡು ದರ್ಶನಗಳಿಗೆ ಅವರು ಮಾರು ಹೋಗಿದ್ದರು. ಇದು ಅವರ ಪ್ರಾಮಾಣಿಕ ಶ್ರದ್ಧೆಯಾದ ಕಾರಣ ನಾವು ಅದನ್ನು ಗೌರವಿಸುತ್ತಿದ್ದೆವು. ಹಂಪನಕಟ್ಟೆ ಬಸ್ ನಿಲ್ದಾಣದ ಒಳಗೆ ವೆಂಕಟ್ರಾವ್ ಎಂಬವರ ಬುಕ್‌ಸ್ಟಾಲ್ ಇತ್ತು. ಅಲ್ಲಿ ಎಡಪಂಥೀಯ ಪತ್ರಿಕೆಗಳು ,ಪುಸ್ತಕಗಳು ಮಾರಾಟಕ್ಕೆ ಸಿಗುತ್ತಿದ್ದವು. ಮಂಗಳೂರಿಗೆ ಬಂದಾಗ ಅಲ್ಲಿ ತಪ್ಪದೇ ಭೇಟಿ ನೀಡುತ್ತಿದ್ದೆವು. ಈಗ ಅದು ಇದೆಯೋ ಇಲ್ಲವೋ ಗೊತ್ತಿಲ್ಲ. ಇದು ನನ್ನ ಮನದಲ್ಲಿ ಉಳಿದ ಮಂಗಳೂರಿನ ಅಂದಿನ ಒಂದು ಚಿತ್ರ.

ಮಂಗಳೂರು ವಿದ್ಯಾವಂತರ ಜಿಲ್ಲೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆ ಗಳಲ್ಲಿ ಉಳಿದ ಜಿಲ್ಲೆಗಳಿಗಿಂತ ಮುಂದಿದೆ ಮತ್ತು ಅಲ್ಲಿನ ಜನ ಉದ್ಯಮಶೀಲರು ಎಂಬುದನ್ನು ಕೇಳಿ ತಿಳಿದಿದ್ದೆವು. ಆಗ ಬಿಜಾಪುರ, ಜಮಖಂಡಿ, ಬಾಗಲಕೋಟ ಮುಂತಾದ ನಮ್ಮ ಜಿಲ್ಲೆಯ ಊರುಗಳಲ್ಲಿ ಉಡುಪಿ ಹೋಟೆಲ್‌ಗಳು ಜನ ಮನ ಸೆಳೆದಿದ್ದವು. ಸಿಂಡಿಕೇಟ್ ಬ್ಯಾಂಕ್ ಸ್ಥಾಪನೆಗೆ ಶೇರು ಸಂಗ್ರಹಿಸಲು ಟಿ.ಎಂ.ಎ ಪೈ ನಮ್ಮ ಜಿಲ್ಲೆಯಲ್ಲಿ ಸುತ್ತಾಡಿದ ನೆನಪು. ಶಿವರಾಮ ಕಾರಂತರು ನಮ್ಮ ಬಿಜಾಪುರ ಜಿಲ್ಲೆಯ ಹಲಸಂಗಿಯ ಕವಿ ಮಧುರ ಚೆನ್ನ ಅವರನ್ನು ಭೇಟಿ ಮಾಡಲು ಆಗಾಗ ಬರುತ್ತಿದ್ದರು. ತಮ್ಮ ಊರಲ್ಲಿ ಮಧುರಚೆನ್ನ, ಸಿಂಪಿ ಲಿಂಗಣ್ಣ ಅವರು ಕಟ್ಟಿಕೊಂಡಿದ್ದ ಗೆಳೆಯರ ಬಳಗದ ವಿಚಾರಗೋಷ್ಠಿಗಳಿಗೆ ಕಾರಂತರು ಮಾತ್ರವಲ್ಲ ಬೇಂದ್ರೆ, ಗೋಕಾಕರು ಕೂಡ ಬರುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಬಿಜಾಪುರ ಜಿಲ್ಲೆಯಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಸ್ಥಾಪಿಸಲು ಬಂದು, ಅಲ್ಲೇ ನೆಲೆಸಿ ಅದೇ ಮಣ್ಣಿನಲ್ಲಿ ಮಣ್ಣಾದ ಎನ್.ಕೆ.ಉಪಾಧ್ಯಾಯರು ಮಂಗಳೂರಿನವರು.ನಾವೆಲ್ಲ ಅವರ ಭಾಷಣ ಕೇಳುತ್ತ ಬೆಳೆದವರು. ಹೀಗೆ ಮಂಗಳೂರು ಹಲವಾರು ಕಾರಣಗಳಿಂದ ನಾನು ಇಷ್ಟಪಡುವ ಊರು.

ಪುತ್ತೂರಿನ ಪ್ರಗತಿ ಪಂಥ ಸಾಹಿತ್ಯ ಸಮ್ಮೇಳನದ ನಂತರ ಮಂಗಳೂರು ಮತ್ತು ಉಡುಪಿಗೆ ಅನೇಕ ಸಲ ಭೇಟಿ ನೀಡಿದ್ದೇನೆ. 80ರ ದಶಕದಲ್ಲಿ ಮಂಗಳೂರಿನಲ್ಲಿ ಭಾರತ, ಸೋವಿಯತ್ ಸಾಂಸ್ಕೃತಿಕ ಸಂಘದ (ಇಸ್ಕಸ್) ರಾಜ್ಯ ಸಮ್ಮೇಳನ ನಡೆಯಿತು. ಸೋವಿಯತ್ ಸಮಾಜವಾದಿ ವ್ಯವಸ್ಥೆ ಕುಸಿದ ನಂತರ ಈ ಸಂಸ್ಥೆ ಇಸ್ಕಸ್ ಅಸ್ತಿತ್ವ ಕಳೆದುಕೊಂಡಿತು. 80ರ ದಶಕದ ಕೊನೆಯಲ್ಲಿ ನಡೆದ ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮ್ಮೇಳನದ ನಂತರ 2001 ರಿಂದ 2006ರವರೆಗೆ ಕೋಮು ಸೌಹಾರ್ದ ವೇದಿಕೆಯ ರಾಜ್ಯ ಕಾರ್ಯದರ್ಶಿಯಾಗಿ ಹಲವಾರು ಸಲ ಮಂಗಳೂರು, ಉಡುಪಿ, ಕುಂದಾಪುರಗಳಿಗೆ ಭೇಟಿ ನೀಡಿದ್ದೆ. 90ರ ದಶಕದ ಮಧ್ಯದಿಂದ ದಕ್ಷಿಣ ಕನ್ನಡದ ಚಿತ್ರಣ ಬದಲಾಗುತ್ತ ಬಂತು. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಭೂರಹಿತ ಗೇಣಿದಾರರಿಗೆ ಭೂಮಿಯ ಒಡೆತನ ಸಿಕ್ಕಿತು. ಭೂಮಿ ಪಡೆದವರು ಕೆಂಬಾವುಟ ಹಿಡಿದು ಹೋರಾಟ ಮಾಡಿ ಜಯ ಶಾಲಿಯಾದರು. ಆದರೆ, ಅವರ ಮಕ್ಕಳು ಕೋಮುವಾದಿ ಸಂಘಟನೆಯ ಬಲೆಗೆ ಸಿಲುಕಿದರು. ಈ ಬಗ್ಗೆ ಹಿರಿಯ ಕಮ್ಯುನಿಸ್ಟ್ ನಾಯಕ ಬಿ.ವಿ.ಕಕ್ಕಿಲ್ಲಾಯರು ಕೊನೆಯ ದಿನಗಳಲ್ಲಿ ತುಂಬಾ ನೋವಿನಿಂದ ಮಾತನಾಡುತ್ತಿದ್ದರು.

ಒಮ್ಮೆ ಮಂಗಳೂರಿಗೆ ಹೋದಾಗ, ಎಲ್ಲಿ ನೋಡಿದಲ್ಲಿ ಕೇಸರಿ ಬಾವುಟಗಳು ಹಾರಾಡುತ್ತಿದ್ದವು. ಆವಾಗ ಮಂಗಳೂರಿನ ಕಾರ್ಯಕ್ರಮ ಮುಗಿಸಿ ಶ್ರೀರಾಮ ದಿವಾನ ಮತ್ತು ನಾನು ಸ್ನೇಹಿತರೊಬ್ಬರ ವಾಹನದಲ್ಲಿ ಕೇರಳದ ಕಯ್ಯೂರಿನ ಹುತಾತ್ಮರ ಸ್ಮಾರಕ ನೋಡಲು ಹೊರಟೆವು. ಬೆಳಗ್ಗೆ ಮಂಗಳೂರಿನಿಂದ ಹೊರಟ ದಾರಿಯುದ್ದಕ್ಕೂ ಕೇಸರಿ ಬಾವುಟಗಳು ಕಂಡವು. ಆದರೆ, ಕೇರಳದ ಗಡಿಯನ್ನು ಪ್ರವೇಶಿಸುತ್ತಿದ್ದಂತೆ ಒಮ್ಮೆಲೇ ಎಲ್ಲಿ ನೋಡಿದಲ್ಲಿ ಕೆಂಬಾವುಟ ಕಾಣ ತೊಡಗಿದವು. ಮಂಗಳೂರಿಗೆ ತಗಲಿದ ಕೋಮು ವ್ಯಾಧಿ ಕೇರಳಕ್ಕೆ ತಗಲಿಲ್ಲ ಎಂದು ಖುಷಿಯಾಯಿತು.

ಎಷ್ಟೆಂದರೂ 'ಮನುಷ್ಯರೆಲ್ಲ ಒಂದೇ' ಎಂದು ಸಾರಿದ ನಾರಾಯಣ ಗುರುಗಳು ಓಡಾಡಿದ ಭೂಮಿ ಅಲ್ಲವೇ; ಇಂದಿಗೂ ಕೇರಳ ಸುರಕ್ಷಿತವಾಗಿ ಉಳಿದಿದೆ. ಆದರೆ, ಪಕ್ಕದ ಮಂಗಳೂರು ಬದಲಾಗಿದೆ. ಮಂಗಳೂರಿನಲ್ಲಿ ಸಮುದ್ರವಿದೆ, ದೊಡ್ಡ ಶಿಕ್ಷಣ ಸಂಸ್ಥೆಗಳಿವೆ, ಆಸ್ಪತ್ರೆಗಳಿವೆ. ಮಾಲ್‌ಗಳು ಇವೆ. ವ್ಯಾಪಾರ ವಹಿವಾಟದ ಮಳಿಗೆಗಳಿವೆ. ಆದರೆ, ಇಂತಹ ಜನನಿಬಿಡ ತಾಣದಲ್ಲಿ ಕರ್ಫ್ಯೂ ಹೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಗಳೂರಿನ ನಾಳಿನ ದಿನಗಳು ಆತಂಕಕಾರಿ ಭಯ ಮೂಡಿಸಿವೆ. ಭವಿಷ್ಯಕ್ಕೆ ಕತ್ತಲು ಕವಿದಿದೆ.

ಕಳೆದ ಒಂದು ವಾರದಲ್ಲಿ ಮೂವರು ಯುವಕರು ಬೀದಿ ಹೆಣವಾಗಿದ್ದಾರೆ. ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು, ಕಳಂಜೆ ಗ್ರಾಮದ ಮಸೂದ್ ಮತ್ತು ಸುರತ್ಕಲ್‌ನ ಪಾಝಿಲ್ ಹತ್ಯೆಗಳು ಭಯಾನಕ ವಾಗಿವೆ. 'ನಮ್ಮ ಪಕ್ಷದ ಸರಕಾರವಿದ್ದರೂ ರಕ್ಷಣೆ ಸಿಗಲಿಲ್ಲ' ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಸಂಸದ ಕಟೀಲು ಮತ್ತು ಸಚಿವ ಸುನೀಲ್ ಕುಮಾರ್ ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಇಂಥ ಸಂದರ್ಭದಲ್ಲಿ ರಾಜ್ಯದ ಮುಖ್ಯ ಮಂತ್ರಿಯಾದವರು ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭಯವನ್ನು ನಿವಾರಿಸಬೇಕು. ಆದರೆ, ವಿಷಾದದ ಸಂಗತಿಯೆಂದರೆ ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೇಳಿ ಉರಿಯುವ ಗಾಯಕ್ಕೆ ಉಪ್ಪಿನ ಹುಡಿ ಎರಚಿದ್ದು ಮಾತ್ರವಲ್ಲ, ಹತ್ಯೆ ನಡೆದ ಪ್ರವೀಣ ಮನೆಗೆ ಹೋಗಿ ಮನೆಯವರನ್ನು ಸಂತೈಸಿ ಸರಕಾರದಿಂದ 25 ಲಕ್ಷ ರೂ. ಪರಿಹಾರ ನೀಡಿ ಬಂದ ಮುಖ್ಯಮಂತ್ರಿಯವರು ಅಲ್ಲೇ ಹತ್ತಿರದಲ್ಲಿ ಇದ್ದ ಮಸೂದ್ ಮನೆಗೆ ಹೋಗಿ ಮಗನನ್ನು ಕಳೆದುಕೊಂಡ ಅವರ ತಾಯಿ, ತಂದೆಯ ಕಣ್ಣೀರು ಒರೆಸಲಿಲ್ಲ. ಇದು ರಾಜಧರ್ಮವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಪಕ್ಷಪಾತ ಮಾಡುವುದು ಅವರ ಘನತೆಗೆ ಶೋಭಿಸುವುದಿಲ್ಲ. ರಾಜರ ಕಾಲದಲ್ಲೂ ಪ್ರಜೆಗಳಲ್ಲಿಜಾತಿ, ಮತದ ಹೆಸರಿನಲ್ಲಿ ಭೇದ, ಭಾವ ಮಾಡಿದ ಉದಾಹರಣೆಗಳು ಕಡಿಮೆ.

ಬಸವರಾಜ ಬೊಮ್ಮಾಯಿಯವರು ಅಧಿಕಾರ ವಹಿಸಿಕೊಳ್ಳುವಾಗ ಸ್ವೀಕರಿಸಿದ ಪ್ರಮಾಣ ವಚನಕ್ಕೂ ಅಪಚಾರ ಮಾಡಿದರು ಎಂದರೆ ಅತಿಶಯೋಕ್ತಿಯಲ್ಲ.

1992ರಲ್ಲಿ ಅಯೋಧ್ಯೆಯ ಬಾಬರಿ ಮಸೀದಿ ನೆಲಸಮಗೊಂಡಾಗಿನಿಂದ ನೆಮ್ಮದಿಯ ತಾಣವಾಗಿದ್ದ ದಕ್ಷಿಣ ಕನ್ನಡದಲ್ಲಿ ಅಶಾಂತಿಯ ಬಿರುಗಾಳಿ ಎದ್ದಿದೆ. ಹಿಂದೂಗಳು, ಮುಸಲ್ಮಾನರು, ಬಿಲ್ಲವರು, ಮೊಗವೀರರು, ಕ್ರೈಸ್ತರು, ಜೈನರು ಮತ್ತು ದಲಿತರು ಒಟ್ಟಾಗಿ ಕಟ್ಟಿದ ತುಳುನಾಡಿನ ಬದುಕು ಛಿದ್ರವಾಗಿದೆ. ಪ್ರತೀ ಚುನಾವಣೆ ಸಮೀಪಿಸಿದಾಗ ಹೆಣಗಳ ಮೇಲೆ ಓಟಿನ ಬೆಳೆ ತೆಗೆಯುವ ರಾಜಕಾರಣ ಹೊಸ ಪೀಳಿಗೆಯ ಬದುಕನ್ನು ನಾಶ ಮಾಡುತ್ತಿದೆ. 'ದಲಿತರ ಮಕ್ಕಳು ಓದಿ ದೊಡ್ಡ ಸಾಹೇಬರಾಗಿ ಕಾರಿನಲ್ಲಿ ಹೋದರೆ ಆ ಕಾರಿನ ಧೂಳು ನನ್ನ ಕಣ್ಣಿನಲ್ಲಿ ಬಿದ್ದರೆ ಪುನೀತನಾಗುತ್ತೇನೆ' ಎಂದು ಹೇಳುತ್ತಿದ್ದ ಕುದ್ಮುಲ್ ರಂಗರಾಯರು ನಡೆದಾಡಿದ ನೆಲವಿದು. ನಾರಾಯಣಗುರುಗಳು ಕೇರಳದಿಂದ ಬಂದು ವಂಚಿತ ಸಮುದಾಯಗಳಿಗಾಗಿ ಗೋಕರ್ಣನಾಥೇಶ್ವರ ದೇವಸ್ಥಾನ ಕಟ್ಟಿದ ಜಾಗವಿದು. ಕಾರ್ಪೊರೇಷನ್ ಬ್ಯಾಂಕ್ ಸ್ಥಾಪಿಸಿದ ಬಡವರ ಅನ್ನದಾತ ಎಂದು ಹೆಸರಾಗಿದ್ದ ಹಾಜಿ ಅಬ್ದುಲ್ಲಾ ಸೇಠ್ ಅವರು ಇಲ್ಲೇ ಬದುಕಿದ್ದರು. ಬಾಬಾಸಾಹೇಬ್ ಅಂಬೇಡ್ಕರ್ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಬೆನಗಲ್ ನರಸಿಂಗರಾವ್ ಇದೇ ಮಣ್ಣಿನಿಂದ ಬಂದವರು. ಭಾರತದ ಕಮ್ಯುನಿಸ್ಟ್ ಪಕ್ಷದ ಸ್ಥಾಪಕರಲ್ಲೊಬ್ಬರಾದ ಸಚ್ಚಿದಾನಂದ ವಿಷ್ಣು ಘಾಟೆ ಅವರು ಇದೇ ಮಂಗಳೂರಿ ನವರು. ಹಿರಿಯ ಸಮಾಜವಾದಿ ನಾಯಕರಾಗಿದ್ದ ಕಮಲಾದೇವಿ ಚಟ್ಟೋಪಾಧ್ಯಾಯ, ಜಾರ್ಜ್ ಫೆರ್ನಾಂಡೀಸ್ ಇಲ್ಲಿಂದಲೇ ಬಂದು ರಾಷ್ಟ್ರ ಮಟ್ಟದ ನಾಯಕರಾದವರು. ಒಬ್ಬರೇ, ಇಬ್ಬರೇ ಬಿ.ವಿ.ಕಕ್ಕಿಲ್ಲಾಯ, ಎನ್.ಎಲ್.ಉಪಾಧ್ಯಾಯ, ವೈಕುಂಠ ಬಾಳಿಗಾ, ನಾಗಪ್ಪ ಆಳ್ವಾ, ಬಿ.ಎಂ.ಇದಿನಬ್ಬ, ಬಿ.ಎ.ಮೊಹಿದ್ದೀನ್, ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ, ಶಿವರಾಮ ಕಾರಂತ ಹೀಗೆ ನೂರಾರು ನಾಯಕರನ್ನು ನಾಡಿಗೆ ನೀಡಿದ ಮಂಗಳೂರು ಈಗ ನೀಡುತ್ತಿರುವುದು ಏನನ್ನು?

ಅದೇನೇ ಇರಲಿ, ಕರಾವಳಿಯಲ್ಲಿ ಕೋಮು ವೈಷಮ್ಯದ ಹತ್ಯೆಗಳು ಮತ್ತು ರಕ್ತಪಾತ ಹೊಸದಲ್ಲ. ಆಗಾಗ ನಡೆಯುತ್ತಲೇ ಇವೆ. ರಾಜ್ಯ ಸರಕಾರ ಯಾವುದೇ ಪಕ್ಷದ್ದಾಗಿರಲಿ ಇಂಥ ಘಟನೆಗಳು ನಡೆದಾಗ ಉಗ್ರ ಕ್ರಮಗಳನ್ನು ಕೈಗೊಂಡಿದ್ದರೆ, ಗುಪ್ತಚರ ವ್ಯವಸ್ಥೆಯನ್ನು ಬಲಪಡಿಸಿದ್ದರೆ ಹೀಗಾಗುತ್ತಿರಲಿಲ್ಲ. ಸರಕಾರದ ಅಧಿಕಾರ ಸೂತ್ರ ಹಿಡಿದವರು ಯಾವುದೇ ಪ್ರಜೆಯ ಹತ್ಯೆಯನ್ನು ಕೋಮು ದೃಷ್ಟಿಯಿಂದ ನೋಡಬಾರದು. ರಾಜ್ಯದ ಪ್ರಜೆಯೊಬ್ಬನ ಹತ್ಯೆ ಎಂದು ಇಡೀ ಪ್ರಕರಣವನ್ನು ಜಾತ್ಯತೀತವಾಗಿ ನೋಡಬೇಕು. ಸಮಗ್ರ ತನಿಖೆ ನಡೆಸಿ ಇಂಥ ಹತ್ಯೆಗಳು ಮರುಕಳಿಸ ದಂತೆ ನೋಡಿಕೊಳ್ಳಬೇಕು. ಉತ್ತರ ಪ್ರದೇಶದ ಬುಲ್ಡೋಜರ್ ಮಾದರಿಯ ಇಲ್ಲವೇ ಎನ್ ಕೌಂಟರ್ ನಂಥ ಮಾತುಗಳಿಂದ ಗಾಯ ಮಾಯುವುದಿಲ್ಲ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರೇ, ಉತ್ತರ ಪ್ರದೇಶದ ಯೋಗಿ ಬೇಡ, ನಿಮ್ಮ ನಾಯಕ ಯಡಿಯೂರಪ್ಪನವರು ನಿಮಗೆ ಮಾದರಿಯಾದರೆ ಸಾಕು. ಕನಿಷ್ಠ ಅವರಿಂದ ಕ್ರಿಯೆಗೆ ಪ್ರತಿಕ್ರಿಯೆ ಹೇಳಿಕೆ ಬರಲಿಲ್ಲ. ಕೋವಿಡ್ ಕಾಲದಲ್ಲಿ ಮುಸ್ಲಿಮರ ಮೇಲೆ ಗೂಬೆ ಕೂರಿಸಲು ಹೊರಟಾಗ ಅದಕ್ಕೆ ಅವಕಾಶ ನೀಡಲಿಲ್ಲ. ಸಂಪೂರ್ಣವಾಗಿ ಕೇಶವ ಕೃಪಾದ ಸೂತ್ರದ ಗೊಂಬೆ ಆಗಿರಲಿಲ್ಲ. ಇದಿಷ್ಟು ಬಿಟ್ಟರೆ ಉಳಿದ ರಾಜಕಾರಣಿಗಳ ಕಾಲದ ಹಗರಣಗಳು ಆಗಲೂ ಇದ್ದವು. ಅವರು ಆರೆಸ್ಸೆಸ್ ಮೂಲದಿಂದ ಬಂದವರು. ಆದರೂ ಮಿತಿ ಮೀರಿದ ಮಾತು ಗಳಿರಲಿಲ್ಲ. ಬಸವರಾಜ ಬೊಮ್ಮಾಯಿ ಜನತಾ ಪರಿವಾರ ಮೂಲದವರು.

ತಮ್ಮ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಉತ್ತರ ಪ್ರದೇಶದ ಯೋಗಿ ಮಾದರಿಯ ಮಾತುಗಳನ್ನು ಮುಖ್ಯಮಂತ್ರಿ ಆಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಯವರು ಅಧಿಕಾರ ವಹಿಸಿಕೊಂಡಾಗ ಎಂ.ಎನ್.ರಾಯ್ ಅನುಯಾಯಿ ಎಸ್. ಆರ್.ಬೊಮ್ಮಾಯಿಯವರ ಮಗ ಬಸವರಾಜ ಬೊಮ್ಮಾಯಿ ಬಿಜೆಪಿಯಲ್ಲಿ ಇದ್ದರೂ ಉದಾರವಾದಿ ಎಂದು ಮೆಚ್ಚಿಕೊಂಡವರಲ್ಲಿ ನಾನೂ ಒಬ್ಬ. ಆದರೆ, ಈಗ ಅವರ ನಡೆ ಕಂಡು ಬೇಸರವಾಗುತ್ತಿದೆ.

ಬಿಜೆಪಿ ನಾಯಕರು ತಾವು ಅಧಿಕಾರದ ಸುಖವನ್ನು ಅನುಭವಿಸಿ ಕೋಟಿ, ಕೋಟಿ ಗಳಿಸಿದ್ದಲ್ಲದೆ ತಮ್ಮ ಮಕ್ಕಳನ್ನು ತಮ್ಮ ರಾಜಕೀಯ ಉತ್ತರಾಧಿಕಾರಿಗಳನ್ನಾಗಿ ಮಾಡಿ ವಿಧಾನಸಭೆ, ವಿಧಾನ ಪರಿಷತ್ತು ಮತ್ತು ಸಂಸತ್ತಿಗೆ ಕಳುಹಿಸಲು ಒಳ ಕಸರತ್ತು ನಡೆಸಿರುವಾಗಲೇ ಪ್ರವೀಣ್ ನೆಟ್ಟಾರು ಅವರಂಥ ಬಡವರ ಮಕ್ಕಳು ತಲೆಯಲ್ಲಿ ತುಂಬಿಕೊಂಡ, ತಪ್ಪಾಗಿ ಅರ್ಥೈಸಿಕೊಂಡ ಧರ್ಮದ ಆವೇಶಕ್ಕೆ ಆಹುತಿಯಾಗುತ್ತಿದ್ದಾರೆ. ಈವರೆಗೆ ಬಿಜೆಪಿಯ ಯಾವುದೇ ನಾಯಕನ ಮಕ್ಕಳು ಇಂಥ ಘಟನೆಗಳಲ್ಲಿ ಬಲಿಪಶುವಾಗಿಲ್ಲ. ಆಗಬೇಕೆಂದಲ್ಲ. ಯಾರ ಸಾವು ಕೂಡ ಒಳ್ಳೆಯದಲ್ಲ.

ಮುಖ್ಯಮಂತ್ರಿಯವರು ಇನ್ನಾದರೂ ತಮ್ಮ ಕಾರ್ಯಶೈಲಿಯನ್ನು ಬದಲಿಸಿ ಕೊಳ್ಳಲಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿ. ಉತ್ತರ ಪ್ರದೇಶದ ಬುಲ್ಡೋಜರ್ ಮಾತು ಅವರ ಬಾಯಿಯಿಂದ ಬರಬಾರದು. ಬುಲ್ಡೋಜರ್ ಇರುವುದು ಅಕ್ರಮಕಟ್ಟಡಗಳನ್ನು ನೆಲಸಮಗೊಳಿಸಲು. ಸೌಹಾರ್ದ ಕರ್ನಾಟಕವನ್ನು ಕಟ್ಟುವ ಬದಲುಬುಲ್ಡೋಜರ್ ಮಾತಾಡುವುದು ಸಂವಿಧಾನ ವಿರೋಧಿ ನಡೆ. ಮುಖ್ಯಮಂತ್ರಿ ತಮ್ಮ ಕಾನೂನು ಸಲಹೆಗಾರರ ಸಲಹೆ ಪಡೆದು ಮಾತಾಡುವುದು ಸೂಕ್ತ.
ಕರ್ನಾಟಕಕ್ಕೆ ಅದರದೇ ಆದ ಮಾದರಿಯಿದೆ. ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ಜತ್ತಿ, ದೇವರಾಜ ಅರಸು, ದೇವೇಗೌಡ, ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗಡೆ,ಬಂಗಾರಪ್ಪ, ಸಿದ್ದರಾಮಯ್ಯ, ಧರಂ ಸಿಂಗ್, ಎಸ್.ಎಂ.ಕೃಷ್ಣ,ಎಸ್.ಆರ್.ಬೊಮ್ಮಾಯಿ ಹೀಗೆ ಅನೇಕರು ಉತ್ತಮ ಆಡಳಿತ ನೀಡಿದ್ದಾರೆ. ಇತ್ತೀಚಿನ ಮಂಗಳೂರು ಘಟನೆಗಳನ್ನು ಬಿಟ್ಟರೆ ಉತ್ತರ ಪ್ರದೇಶದಂತೆ ಇಲ್ಲಿ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಎಂದೂ ಕೆಟ್ಟಿಲ್ಲ. ನಮಗೆ ಇವರು ಮಾದರಿಯಾಗಬೇಕೇ ಹೊರತು ಆದಿತ್ಯನಾಥ್ ಅಲ್ಲ.

ಕೊನೆಯದಾಗಿ ಕರಾವಳಿ ಮಾತ್ರವಲ್ಲ ಕರ್ನಾಟಕದ ಎಲ್ಲ ತಾಯಿ, ತಂದೆಯರಿಗೆ ಒಂದು ಕಿವಿ ಮಾತು. ನಿಮ್ಮ ಮಕ್ಕಳ ಚಲನವಲನಗಳ ಬಗ್ಗೆ ನಿಗಾ ಇರಲಿ. ಶಾಲೆ, ಕಾಲೇಜಿಗೆ ಹೋಗುವ ಆತ ಯಾವುದಾದರೂ ಸಂಘದ, ಸಂಘಟನೆಯ ಸಂಪರ್ಕ ಹೊಂದಿದ್ದಾನೆಯೇ? ಅದರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾನೆಯೇ? ಎಂಬ ಬಗ್ಗೆ ಒಂದು ಕಣ್ಣಿರಲಿ. ನಮ್ಮ ಮಕ್ಕಳು ನಮ್ಮ ಕಣ್ಣ ಮುಂದೆ ಬೀದಿ ಹೆಣವಾಗಬಾರದು.
ಮೈ ತುಂಬ ನಶೆ ಏರಿಸುವ ಭಾಷಣಕಾರಾರು ನಿಮ್ಮ ಮಗ ಹೆಣವಾಗಿ ಮಲಗಿದಾಗ ಹೋದ ಜೀವ ತಂದು ಕೊಡುವುದಿಲ್ಲ. ಧರ್ಮ ಮನೆಯಲ್ಲಿ ಇರಲಿ. ಭಕ್ತಿ ಮನದಲ್ಲಿರಲಿ. ನಿಮ್ಮ, ನಿಮ್ಮ ಮಕ್ಕಳನ್ನು ಕಾಪಾಡಿಕೊಳ್ಳಿ. ಮನೆಯ ದೀಪ ಆರಿದರೆ ಘೋರ ಕತ್ತಲು ಕವಿಯುತ್ತದೆ. ದಯವಿಟ್ಟು ನಿಮ್ಮ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವವರಿಂದ ಕಾಪಾಡಿಕೊಳ್ಳಿ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ