ದೇವರಾಜ ಅರಸು: ಅವರವರ ಭಾವದೊಳಗೆ...

Update: 2022-08-20 07:21 GMT

ಇಂದು ದೇವರಾಜ ಅರಸು ಅವರ ಜನ್ಮದಿನ. ಅವರ ರಾಜಕೀಯ ಬದುಕಿನ ಬಗ್ಗೆ ಅವರ ಪುತ್ರಿ ಮತ್ತು ಅವರನ್ನು ಹತ್ತಿರದಿಂದ ಕಂಡ ನಾಡಿನ ಹಲವು ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು, ಕಲಾವಿದರು ವ್ಯಕ್ತಪಡಿಸಿದ ಅನಿಸಿಕೆಗಳು ಇಲ್ಲಿವೆ.

► ಅಲ್ಪಸಂಖ್ಯಾತರಿಗೆ ರಾಜಕೀಯ ಶಕ್ತಿ ಕೊಟ್ಟ ವ್ಯಕ್ತಿ : ಬಿ.ಎ. ಮೊಹಿದೀನ್, ಮಾಜಿ ಸಚಿವ

ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ಮುಖ್ಯವಾಗಿ ಸಾಮಾಜಿಕವಾಗಿ ಹಿಂದುಳಿದವರ ಬಗ್ಗೆ ದೇವರಾಜ ಅರಸು ಅವರಲ್ಲಿ ವಿಶೇಷ ಕಾಳಜಿ ಮತ್ತು ಕಳಕಳಿ ಇತ್ತು. ಅಧಿಕಾರ ಎಷ್ಟು ದಿನ ಎಂಬುದು ಮುಖ್ಯವಲ್ಲ, ಏನು ಮಾಡಿದೆ ಅನ್ನುವುದು ಮುಖ್ಯ ಎಂದು ಯಾವಾಗಲೂ ಹೇಳುತ್ತಿದ್ದರು. ದುರ್ಬಲರ ಕೈಗೆ ಅಧಿಕಾರ ನೀಡಬೇಕು, ಅವರ ದನಿಗೆ ಬೆಲೆ ಬರಬೇಕು, ಸಮ ಸಮಾಜ ನಿರ್ಮಾಣವಾಗಬೇಕು- ಅದೇ ನನ್ನ ಕನಸು ಎನ್ನುತ್ತಿದ್ದರು. ಬಡವರನ್ನು ಕಂಡರೆ ಎಲ್ಲಿಲ್ಲದ ಪ್ರೀತಿ, ಜೇಬಿನಲ್ಲಿ ಇದ್ದುದನ್ನು ಕೈ ಎತ್ತಿ ಕೊಡುತ್ತಿದ್ದರು. ನನ್ನ ಬಳಿಗೆ ಅವರು ಬರಬೇಕಾಗಿಲ್ಲ, ಅವರಿರುವ ಜಾಗಕ್ಕೆ ನಾನೇ ಹೋಗುತ್ತೇನೆ ಎನ್ನುತ್ತಿದ್ದರು, ಹೋಗುತ್ತಿದ್ದರು. ಅದು ಪ್ರಚಾರಕ್ಕಾಗಿ, ಪ್ರತಿಷ್ಠೆಗಾಗಿ, ಆಡಂಬರಕ್ಕಾಗಿ ಮಾಡಿದ್ದಲ್ಲ. ಸ್ವಾರ್ಥ ಇರಲಿಲ್ಲ. ದೌರ್ಬಲ್ಯಗಳಿದ್ದವು, ಆದರೆ ತತ್ವ-ಸಿದ್ಧಾಂತಗಳನ್ನು ಬಲಿ ಕೊಡಲಿಲ್ಲ.

ಅಲ್ಪಸಂಖ್ಯಾತರಿಗೆ ರಾಜಕೀಯ ಶಕ್ತಿ ಕೊಟ್ಟ ವ್ಯಕ್ತಿ, ದೇಶದಲ್ಲಿ ಒಬ್ಬನೇ ಒಬ್ಬ- ಅದು ದೇವರಾಜ ಅರಸು. 1972ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 15 ಮಂದಿ ಅಲ್ಪಸಂಖ್ಯಾತ ಸಮುದಾಯದವರಿಗೆ ಟಿಕೆಟ್ ಕೊಟ್ಟರು, 12 ಜನ ಗೆದ್ದು ಶಾಸಕರಾದರು. ಅದರಲ್ಲಿ ಇಬ್ಬರನ್ನು- ಅಝೀಝ್ ಸೇಠ್ ಮತ್ತು ನದಾಫ್‌ರನ್ನು ಮಂತ್ರಿ ಮಾಡಿದ್ದರು. 1978ರ ಚುನಾವಣೆಯಲ್ಲಿ 15 ಜನರನ್ನು ಆಯ್ದು ಟಿಕೆಟ್ ಕೊಟ್ಟರು, 12 ಶಾಸಕರು ಗೆದ್ದಿದ್ದರು. ಇಲ್ಲಿಯವರೆಗೆ ಯಾವ ಪಾರ್ಟಿಯಿಂದಲೂ ಈ ರೀತಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟಿದ್ದು, ಗೆಲ್ಲಿಸಿದ್ದು, ಅಧಿಕಾರ ಕೊಟ್ಟು ಆತ್ಮವಿಶ್ವಾಸ ತುಂಬಿದ್ದು ಆಗಿಲ್ಲ. ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಲು ಮತ್ತು ನಾಡಿನಲ್ಲಿ ಕೋಮುಸಾಮರಸ್ಯ ಕಾಪಾಡಲು ಅರಸು ಶಕ್ತಿಮೀರಿ ಶ್ರಮಿಸಿದ್ದಾರೆ.

***

► ಜಾತಿ, ಧರ್ಮ, ಜನಾಂಗ, ಭಾಷೆಗಳ ವಿಚಾರದಲ್ಲಿ ರಾಜಕಾರಣ ಬೆರೆಸುವುದು ಜನದ್ರೋಹವೆಂದರು... : ಎಚ್. ವಿಶ್ವನಾಥ್, ಮಾಜಿ ಸಚಿವ

ದೇವರಾಜ ಅರಸರು ನಮ್ಮಂತಹ ತರುಣ ಶಾಸಕ ಸಮೂಹದ ಮೇಲೆ ಬೀರಿದ ಪ್ರಭಾವ ಅವಿಸ್ಮರಣೀಯವಾದುದು. ಮೊದಲ ಶಾಸಕಾಂಗ ಸಭೆಯ ಅರಸರ ಭಾಷಣ ನಮ್ಮ ಚಿಂತನಾ ಕ್ರಮವನ್ನೇ ಬದಲಿಸಿಬಿಟ್ಟಿತು. ಗೆದ್ದಿದ್ದೇ ಸಾಧನೆ ಎಂದು ಭ್ರಮಿಸಿದ್ದ ನಮಗೆ ನಮ್ಮ ಜವಾಬ್ದಾರಿ ಏನು ಎನ್ನುವುದನ್ನು ಆ ಭಾಷಣ ಮನವರಿಕೆ ಮಾಡಿಕೊಟ್ಟಿತ್ತು. ‘‘ನಿಮ್ಮಲ್ಲಿ ಅನೇಕರು ಹೊಸಬರಿದ್ದೀರಿ, ಚಿಕ್ಕವರಿದ್ದೀರಿ. ಆಡಳಿತದ ಅನುಭವದ ಬಯಕೆಗಳನ್ನು ಆಶಿಸುವವರಿದ್ದೀರಿ.ಆದರೆ ಒಂದನ್ನು ತಿಳಿಯಿರಿ, ನೀವೀಗ ನಿಮ್ಮ ಪಕ್ಷದ ಶಾಸಕರಲ್ಲ, ಕ್ಷೇತ್ರದ ಎಲ್ಲ ಜನರ ಪ್ರತಿನಿಧಿ. ನಿಮಗೆ ವಿರೋಧಿಗಳಿಲ್ಲ. ನೀವು ರಾಜಕಾರಣದಲ್ಲಿ ಬಹುಕಾಲ ಉಳಿಯಬೇಕಾದರೆ ಕ್ಷಮಾಗುಣ ಮುಖ್ಯ, ರೂಢಿಸಿಕೊಳ್ಳಿ. ಇದು ನಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುತ್ತದೆ. ಜವಾಬ್ದಾರಿಯ ಜೊತೆಗೆ ಪ್ರಾಮಾಣಿಕತೆ, ಪ್ರೀತಿ, ವಿಶ್ವಾಸದೊಡನೆ ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ಒಪ್ಪಿಸಿ ಅನುಷ್ಠಾನಗೊಳಿಸುವ ಹರಿಕಾರರು ನೀವಾಗಬೇಕು. ನೀವೇ ಸರಕಾರ ಹಾಗೂ ಜನರ ನಡುವಿನ ಬೆಸುಗೆ’’ ಎಂದರು.

ಟೇಬಲ್ ಮೇಲೆ ನೀರಿನ ಲೋಟವಿತ್ತು. ಅದನ್ನು ಎತ್ತಿ ಹಿಡಿದ ಅರಸು ಅವರು, ‘‘ಇದು ಸರಕಾರದ ಕಾರ್ಯಕ್ರಮ. ದಾಹವಿರುವವನಿಗೆ ಕೊಟ್ಟು ಬಾ ಎಂದರೆ, ನೀವು ನಮ್ಮ ಪಕ್ಷದವರಿಗೆ, ನಮ್ಮ ಜಾತಿಯವರಿಗೆ ಎಂದು ಹುಡುಕಿ ಕೊಡಬಾರದು. ಅದು ರಾಜಧರ್ಮಕ್ಕೆ ವಿರೋಧ. ಜನತಂತ್ರಕ್ಕೆ ಅಪಚಾರ. ಕುಡಿಯುವ ನೀರಿಗೆ, ಉರಿಯುವ ದೀಪಕ್ಕೆ, ತಿರುಗುವ ರಸ್ತೆಗೆ, ಓದುವ ಶಾಲೆಗೆ, ರೋಗಿಯ ಚಿಕಿತ್ಸೆಗೆ, ಜಾತಿ, ಧರ್ಮ, ಜನಾಂಗ, ಭಾಷೆಗಳ ವಿಚಾರದಲ್ಲಿ ರಾಜಕಾರಣ ಬೆರೆಸುವುದು ಜನದ್ರೋಹ. ಎಲ್ಲ ವಿಷಯಗಳಲ್ಲೂ ರಾಜಕಾರಣ ಮಾಡುವುದು ಅಪಾಯಕಾರಿ’’ ಎಂದರು.

***

► ಹಿಂದುಳಿದವರ ಬಗ್ಗೆ ವಿಶೇಷವಾದ ಪ್ರೀತಿ ಇತ್ತು : ಶ್ರೀಹರಿ ಖೋಡೆ, ಉದ್ಯಮಿ

ದೇವರಾಜ ಅರಸು ಝಿಯಾಲಜಿ ಸ್ಟೂಡೆಂಟು. ಜನ ಈಗ ಅವರನ್ನು ಸಮಾಜ ವಿಜ್ಞಾನಿ ಅಂತ ಕರೀಬಹುದು. ನಾನು ಮಾತ್ರ ಅವರನ್ನು ಅಪ್ಪಟ ವಿಜ್ಞಾನಿ ಎನ್ನುತ್ತೇನೆ. ಭೂಮಿ, ನೀರು ಮತ್ತು ಸೂರ್ಯನ ಬಗ್ಗೆ ಅಥೆಂಟಿಕ್ಕಾಗಿ ಮಾತನಾಡ್ತಿದ್ರು. ಈ ಮೂರು ಇದ್ರೆ ನೋಟು ಏಕೆ, ಕರೆನ್ಸಿಲೆಸ್ ಲೈಫ್ ಬಂದು ಬಡತನವನ್ನು ನಿರ್ಮೂಲನೆ ಮಾಡಬಹುದು. ಸೂರ್ಯನ ಕಿರಣ ನಮ್ಮ ದೇಶದ ಮೇಲೆ ಯಥೇಚ್ಛವಾಗಿ ಬೀಳುತ್ತೆ, ಸಮರ್ಥವಾಗಿ ಬಳಸಿಕೊಂಡರೆ ಅಭಿವೃದ್ಧಿ ಹೊಂದುತ್ತೇವೆ. ಮನುಷ್ಯ ಈ ಪ್ರಕೃತಿಯ ಸೃಷ್ಟಿ. ಅದನ್ನು ನಾವು ನಿರ್ಲಕ್ಷಿಸಬಾರದು ಎಂದು ಪರಿಸರ ವಿಜ್ಞಾನವನ್ನು ವಿವರಿಸುತ್ತಿದ್ದರು. ಹುಟ್ಟುವ ಸೂರ್ಯನನ್ನು ತೋರಿಸಿ, ‘‘ನೋಡಿ, ಅವನಿಗೆ ಅಹಂಕಾರನೇ ಇಲ್ಲ. ನನ್ನಿಂದ ಈ ಜಗತ್ತು ಬೆಳಗ್ತಾಯಿದೆ, ಈ ಗಿಡ-ಮರಗಳು ಹಸಿರು ಉತ್ಪತ್ತಿ ಮಾಡ್ತಿವೆ, ಅದನ್ನ ಪ್ರಾಣಿ-ಪಕ್ಷಿಗಳು ಅವಲಂಬಿಸಿವೆ ಎನ್ನುವುದರ ಪರಿವೆಯೇ ಇಲ್ಲ. ಸೂರ್ಯನಿಗೆ ವಂಚನೆ ಗೊತ್ತಿಲ್ಲ. ಮನುಷ್ಯ ಪ್ರಾಣಿಗೆ ಮಾತ್ರ ಅಹಂಕಾರ, ವಂಚನೆ, ಪದವಿ, ಪ್ರತಿಷ್ಠೆ ಎಲ್ಲ’’ ಎಂದರು. ಇದನ್ನು ಯಾವ ಸಂತನಿಂದಲೂ, ವಿಜ್ಞಾನಿಯಿಂದಲೂ, ಮಠಾಧೀಶರಿಂದಲೂ ಕೇಳಲು ಸಾಧ್ಯವಿಲ್ಲ. ಇಲ್ಲಿಯವರೆಗೆ ಕೇಳಲಿಕ್ಕೂ ಆಗಿಲ್ಲ.

ಮನುಷ್ಯ ಕೊಡುವ ಅಕ್ಷಯಪಾತ್ರೆಯಾಗಬೇಕು ಎನ್ನುವುದು ಅರಸು ಅವರ ಬಹುದೊಡ್ಡ ಬಯಕೆಯಾಗಿತ್ತು. ಅದಕ್ಕೆ ಅವರದೇ ಆದ ಲಾಜಿಕ್ ಇತ್ತು. ಈಗ ಗಿಡ-ಮರ ಹಣ್ಣು ಕೊಡುತ್ತವೆ, ನಾನು ಕೊಟ್ಟೆ ಅಂತ ಯಾವತ್ತಾದರೂ ಹೇಳಿದ್ದು ನೋಡಿದ್ದೀರಾ? ಪಾತ್ರೆಯಲ್ಲಿ ಅಡುಗೆ ಸಿದ್ಧವಿದೆ. ಹಂಚುವ ಸೌಟು ನನಗೇ ಇರಲಿ ಅಂದರೆ ಆಗುತ್ತಾ? ಹಾಗೆಯೇ ಪಾಲಿಟಿಕ್ಸ್‌ನಿಂದ ಸಿಗುವ ಸೋಷಿಯಲ್ ಪವರ್‌ನ ಎಲ್ಲರಿಗೂ ಸಮಾನವಾಗಿ ಹಂಚಬೇಕಾದ್ದು ಧರ್ಮ. ಅದನ್ನ ನಾನೊಬ್ಬನೇ ಅಲ್ಲ, ಎಲ್ಲರೂ ಮಾಡಬೇಕು ಎಂದು ಹೇಳಿದ್ದರು.

ಹಿಂದುಳಿದವರ ಬಗ್ಗೆ ಅವರಿಗೆ ವಿಶೇಷವಾದ ಪ್ರೀತಿ ಇತ್ತು. ಹಿಂದುಳಿದವರು ಯಾರು ಎಂದರೆ- ಆರೋಗ್ಯ, ಆಶ್ರಯ, ಶಿಕ್ಷಣ ಮತ್ತು ತಮ್ಮ ಕಾಲ ಮೇಲೆ ತಾವು ನಿಲ್ಲಲು ಶಕ್ತಿ ಇಲ್ಲದವರು ಎಂದು ವ್ಯಾಖ್ಯಾನಿಸುತ್ತಿದ್ದರು.ಎಲ್ಲರೂ ಸುಖವಾಗಿರಬೇಕು- ಲಕ್ಷುರಿ ಇಲ್ಲದೇ ಇದ್ದರೂ ಪರವಾಗಿಲ್ಲ, ಮಾನ ಕಾಪಾಡಿಕೊಳ್ಳುವಷ್ಟಾದರೂ ಹಣ ಇರಬೇಕು. ಮುಂದುವರಿದವರು ಭವಿಷ್ಯದ ಬಗ್ಗೆ ಪ್ಲಾನ್ ಮಾಡುತ್ತಾರೆ. ಆದರೆ ಹಿಂದುಳಿದವರಿಗೆ ಪ್ಲಾನ್ ಇರಲಿ, ಟೂಲ್ಸೇ ಇಲ್ಲ. ನಾನು ಆ ಟೂಲ್ಸ್ ಕೊಡಲು ಪ್ರಯತ್ನಿಸುತ್ತಿದ್ದೇನೆ ಎನ್ನುತ್ತಿದ್ದರು.

***

► ಜನರ ಸಮಸ್ಯೆ ಪರಿಹರಿಸಲಿಕ್ಕಾಗಿಯೇ ಹುಟ್ಟಿದವರು : ಎ.ಸಿ. ಲಕ್ಷ್ಮಣ್, ನಿವೃತ್ತ ಐಎಫ್‌ಎಸ್ ಅಧಿಕಾರಿ

ದೇವರಾಜ ಅರಸು ಅವರು ಎಲ್ಲಿಗಾದರೂ ಬರುತ್ತಾರೆಂದು ಗೊತ್ತಾದರೆ, ಅದು ಹೇಗೋ ಜನ ಜಮಾಯಿಸಿಬಿಡುತ್ತಿದ್ದರು. ಆ ಜನರಲ್ಲಿ ಬಡವರು, ಶೋಷಿತರು, ಮಹಿಳೆಯರು, ಅಸಹಾಯಕರು, ಶ್ರೀಮಂತರು, ರೈತರು... ಎಲ್ಲರೂ ಇರುತ್ತಿದ್ದರು. ಅವರ ಕೈಯಲ್ಲೊಂದು ಅರ್ಜಿ ಇರುತ್ತಿತ್ತು.ಅರಸರು ಬರುವುದನ್ನು ಕಾದು ಆ ಅರ್ಜಿಯನ್ನು ಅವರ ಕೈಗಿಡುತ್ತಿದ್ದರು. ಅರಸರೂ ಅಷ್ಟೇ, ಕೊಟ್ಟ ಅರ್ಜಿಯನ್ನು ಅಲ್ಲಿಯೇ ಓದುತ್ತಿದ್ದರು. ಅಲ್ಲೇ ಆ ಸಮಸ್ಯೆ ಏನು, ಅದು ಯಾವ ಇಲಾಖೆಗೆ ಸಂಬಂಧಿಸಿದ್ದು, ಅದನ್ನು ಯಾವ ಅಧಿಕಾರಿಗೆ ಕೊಟ್ಟು ಹೇಳಬೇಕು ಎನ್ನುವುದನ್ನು ನಿಂತ ಜಾಗದಲ್ಲಿಯೇ ನಿರ್ಧರಿಸಿಬಿಡುತ್ತಿದ್ದರು. ಅವರವರಿಗೇ ಕೊಟ್ಟು, ಇಷ್ಟು ದಿನಗಳೊಳಗೆ ಇದಾಗಬೇಕು ಎಂದು ಆದೇಶಿಸುತ್ತಿದ್ದರು.

ಈ ರೀತಿ, ನಿಂತ ನಿಲುವಿನಲ್ಲಿಯೇ ಈ ಅರ್ಜಿ ಇಂಥ ಇಲಾಖೆಗೆ ಸಂಬಂಧಿಸಿದ್ದು, ಇಂತಿಂಥ ಅಧಿಕಾರಿಗಳಿಗೆ ಇದನ್ನು ಕೊಡಬೇಕು ಎನ್ನುವುದನ್ನು ಆ ಕ್ಷಣದಲ್ಲಿಯೇ ನಿರ್ಧರಿಸುತ್ತಿದ್ದರಲ್ಲ, ಅದು ಅವರಲ್ಲಿ ಮಾತ್ರ. ಇದನ್ನು ಮತ್ತಿನ್ಯಾವ ಮುಖ್ಯಮಂತ್ರಿಗಳಲ್ಲೂ ಕಾಣಲಿಲ್ಲ, ಜನರ ಸಮಸ್ಯೆಗಳೂ ನೀಗಲಿಲ್ಲ.

ಮುಖ್ಯಮಂತ್ರಿ ದೇವರಾಜ ಅರಸು ಬರುತ್ತಾರೆಂದರೆ ಸಾಮಾನ್ಯವಾಗಿ ಜಿಲ್ಲೆಯ ಅಷ್ಟೂ ಅಧಿಕಾರಿಗಳು ಅಲ್ಲಿ ಹಾಜರಿರುತ್ತಿದ್ದರು. ಒಂದೊಂದು ಸಲ, ಅಲ್ಲಿದ್ದ ಅಧಿಕಾರಿಯನ್ನೇ ಕರೆದು, ಅವರ ಕೈಗೆ ಅರ್ಜಿ ಕೊಟ್ಟು, ‘ಹೌ ಟು ಸಾಲ್ವ್ ದಿಸ್’ ಎಂದು ಪ್ರಶ್ನಿಸುತ್ತಿದ್ದರು. ಅಧಿಕಾರಿಗಳೂ ಅಷ್ಟೇ, ಅರಸು ಕೊಟ್ಟ ಅರ್ಜಿಗೆ ಸೂಕ್ತ ಸಲಹೆ ಸೂಚಿಸಿ, ಪ್ರಾಮಾಣಿಕವಾಗಿ ಸಮಸ್ಯೆಯನ್ನು ಪರಿಹರಿಸುತ್ತಿದ್ದರು.

ಇದನ್ನೆಲ್ಲ ನೋಡುತ್ತಿದ್ದ ನನಗೆ, ಈ ಮನುಷ್ಯ, ಜನರ ಸಮಸ್ಯೆ ಪರಿಹಾರ ಮಾಡಲಿಕ್ಕಾಗಿಯೇ ಹುಟ್ಟಿ ಬಂದವನೇನೋ ಅನ್ನಿಸುತ್ತಿತ್ತು. ಆ ಮಟ್ಟಿನ ಕಾಳಜಿ, ಕಳಕಳಿ ಮತ್ತೆ ಯಾರಲ್ಲಿಯೂ ಕಾಣಲಿಲ್ಲ.

***

► ಧ್ವನಿಯೇ ಇಲ್ಲದವರಿಗೆ ರಾಜಕೀಯ ಪ್ರಾತಿನಿಧ್ಯ ಕೊಟ್ಟವರು : ಎಂ.ರಘುಪತಿ, ಮಾಜಿ ಸಚಿವ

1971ರ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದಾಗ, ಕರ್ನಾಟಕದ ಅಂದಿನ 26 ಕ್ಷೇತ್ರಗಳಲ್ಲಿ, ಆರೇಳು ಕ್ಷೇತ್ರಗಳಿಗೆ ಮಾತ್ರ ಹಳಬರು, ಮಿಕ್ಕ ಹದಿನೆಂಟರಿಂದ ಇಪ್ಪತ್ತು ಅಭ್ಯರ್ಥಿಗಳು ಹೊಸಬರು. ಬರೀ ಹೊಸಬರಲ್ಲ, ರಾಜಕಾರಣದತ್ತ ಮುಖ ಮಾಡಿ ಮಲಗಿದವರೂ ಅಲ್ಲ. ಬಡವರು, ನಿರ್ಲಕ್ಷಕ್ಕೊಳಗಾದ ಜಾತಿಯ ಜನರು, ಬಹುಸಂಖ್ಯಾತ ಬಲಾಢ್ಯ ಜಾತಿಯ ದರ್ಪ-ದೌರ್ಜನ್ಯವನ್ನು ಸಹಿಸಿಕೊಂಡೇ ಬಂದ ಉಪಜಾತಿಯವರು, ದನಿಯೇ ಇಲ್ಲದ ಅಲ್ಪಸಂಖ್ಯಾತರು, ಅಸಹಾಯಕರು, ಅಧಿಕಾರವೆಂದರೆ ಏನು ಎನ್ನುವುದನ್ನೇ ಕಾಣದವರು... ದೇವರಾಜ ಅರಸರು ಇಂತಹವರನ್ನೆಲ್ಲ ಆಯ್ದು ರಾಜಕಾರಣದ ಅಂಗಳಕ್ಕೆ ತಂದು ಬಿಟ್ಟಿದ್ದರು. ರಾಷ್ಟ್ರ ನಿರ್ಮಾಣದಲ್ಲಿ ಎಲ್ಲರೂ ಭಾಗಿಗಳಾದ ಮೇಲೆ ಅಧಿಕಾರವನ್ನು ಹಂಚಿಕೊಳ್ಳುವುದರಲ್ಲಿಯೂ ಭಾಗಿ ಎಂಬುದನ್ನು ಮನವರಿಕೆ ಮಾಡಿಕೊಟ್ಟರು.

1972ರ ವಿಧಾನಸಭಾ ಚುನಾವಣೆಯಲ್ಲಿಯೂ ಇದನ್ನೇ ಜಾರಿಗೆ ತಂದರು. ಕುರುಬರ ಡಿ.ಕೆ. ನಾಯ್ಕರ್, ದೇವಾಡಿಗರ ವೀರಪ್ಪ ಮೊಯ್ಲಿ, ಕೋಲಿ ಸಮಾಜದ ದೇವೇಂದ್ರಪ್ಪಘಾಳಪ್ಪ, ಬಂಜಾರ ಸಮುದಾಯದ ರಾಠೋಡ್, ಎಡಗೈ ದಲಿತರ ಆರ್.ಡಿ. ಕಿತ್ತೂರು, ಬೆಸ್ತರ ಮನೋರಮಾ ಮಧ್ವರಾಜ್, ಕ್ರಿಶ್ಚಿಯನ್ನರ ಇ.ಇ.ವಾಜ್, ಒಕ್ಕಲಿಗರ ಎಚ್.ಎನ್. ನಂಜೇಗೌಡ, ಬಂಟರ ಸುಬ್ಬಯ್ಯ ಶೆಟ್ಟಿ, ಮುಸ್ಲಿಮ್ ಸಮುದಾಯದ ಅಝೀಝ್ ಸೇಠ್, ಮುಹಮ್ಮದ್ ಅಲಿ, ನಾಯ್ಡು ಕಮ್ಯುನಿಟಿಯ ರಾಮುಲು- ಇವರೆಲ್ಲರೂ ಮೊದಲ ಬಾರಿಗೆ ಚುನಾವಣೆಯನ್ನು ಎದುರಿಸಿ, ಗೆದ್ದುಬಂದವರು. ಅರಸು ಅವರ ಸಾಮಾಜಿಕ ನ್ಯಾಯದಡಿಯಲ್ಲಿ ಸಚಿವರಾಗಿ ಅಧಿಕಾರವನ್ನು ಅನುಭವಿಸಿದವರು. ಶೋಷಿತ ಸಮುದಾಯಗಳಿಗೆ ಧೈರ್ಯ ತುಂಬಿದವರು, ಪ್ರಜಾಪ್ರಭುತ್ವದ ಘೋಷವಾಕ್ಯವಾದ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಎನ್ನುವುದನ್ನು ಅಕ್ಷರಶಃ ಅನುಷ್ಠಾನಗೊಳಿಸಿದವರು.

1978ರ ವಿಧಾನಸಭಾ ಚುನಾವಣೆಯ ಸಮಯಕ್ಕೆ ತಾವು ಬೆಳೆಸಿದವರು ಪಕ್ಷ ತೊರೆದು ಹೋದರೂ, ಕಷ್ಟ ಕೊಟ್ಟರೂ ಮತ್ತೆ ತಮ್ಮ ಮೂಲಮಂತ್ರವಾದ ಸಾಮಾಜಿಕ ನ್ಯಾಯಕ್ಕೇ ಜೋತುಬಿದ್ದರು. ರಾಜಕಾರಣವೆಂಬ ಚದುರಂಗದಾಟಕ್ಕೆ ಬಿಸಿ ರಕ್ತದ ತರುಣರ ಪಡೆಯನ್ನು ಮತ್ತೆ ತಂದು ನಿಲ್ಲಿಸಿದರು. ಆ ತಂಡದಲ್ಲಿ ಟಿ.ಬಿ. ಜಯಚಂದ್ರ, ಕೆ.ಆರ್. ರಮೇಶ್‌ಕುಮಾರ್, ಚೌಡರೆಡ್ಡಿ, ಡಿ.ಟಿ. ರಾಮು, ಎಚ್. ವಿಶ್ವನಾಥ್, ಎಂ.ಸಿ. ನಾಣಯ್ಯ, ಬಿ.ಎ. ಮೊಹಿದೀನ್, ರೊಡ್ರಿಗಸ್, ಮೋಟಮ್ಮ, ಎಸ್.ಎಂ. ಯಹ್ಯಾ, ಬಿ.ಬಿ. ಚಿಮ್ಮನಕಟ್ಟಿ, ವೀರಣ್ಣ ಮತ್ತಿಕಟ್ಟಿಯಂತಹ ಎಲ್ಲ ಜಾತಿಯ, ಸಮುದಾಯದ ಸುಮಾರು 40 ಜನ ಯುವಕರಿದ್ದರು. ಕೇಂದ್ರದಲ್ಲಿ ಜನತಾ ಸರಕಾರವಿದ್ದರೂ, ಇಂದಿರಾ ಗಾಂಧಿ ಸೋತಿದ್ದರೂ, ದೇಶದೆಲ್ಲೆಡೆ ಕಾಂಗ್ರೆಸ್ ವಿರೋಧಿ ಅಲೆ ಇದ್ದರೂ, ಕರ್ನಾಟಕದ ಜನ ಕಾಂಗ್ರೆಸನ್ನು 149 ಸ್ಥಾನಗಳಲ್ಲಿ ಗೆಲ್ಲಿಸುವ ಮೂಲಕ ದೇವರಾಜ ಅರಸು ಅವರನ್ನೇ ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿ ಆರಿಸಿಕೊಂಡಿದ್ದರು. ಇದು ಅರಸು ಅವರ ಸಾಮಾಜಿಕ ನ್ಯಾಯಕ್ಕೆ ಸಿಕ್ಕ ಜಯ.

***

► ಯಾರೂ ಮುಖ್ಯಮಂತ್ರಿಯಾಗಬಹುದೆಂದು ತೋರಿಸಿಕೊಟ್ಟರು : ಜೆ.ಸಿ. ಲಿನ್, ನಿವೃತ್ತ ಐಎಎಸ್ ಅಧಿಕಾರಿ

ದೇವರಾಜ ಅರಸರು ಸಣ್ಣ ಸಂಗತಿಗಳತ್ತ ಗಮನ ಹರಿಸುವುದಷ್ಟೇ ಅಲ್ಲ, ಬಹಳ ದೊಡ್ಡ ಯೋಜನೆಗಳನ್ನು ತಲೆ ತುಂಬ ತುಂಬಿಕೊಂಡಿದ್ದರು ಮತ್ತು ಅವುಗಳನ್ನು ಅನುಷ್ಠಾನಕ್ಕೆ ತರಲು ಬೇಕಾದ ಭೂಮಿಕೆ ಸಿದ್ಧವಾಗಿತ್ತು, ಬದ್ಧತೆಯನ್ನೂ ಹೊಂದಿದ್ದರು. ಅದಕ್ಕಾಗಿ ಅಧಿಕಾರ ವರ್ಗವನ್ನು ಸಮರ್ಪಕವಾಗಿ ಬಳಸಿಕೊಂಡರು. ಅಂತಹ ಯೋಜನೆಗಳಲ್ಲಿ ನನಗೆ ಬಹುಮುಖ್ಯವೆನಿಸಿದ್ದು ಲ್ಯಾಂಡ್ ಟ್ರಿಬ್ಯುನಲ್ ಮತ್ತು ಹಾವನೂರ್ ಕಮಿಷನ್.

ಹಾವನೂರ್ ಕಮಿಷನ್ ಜಾರಿಗೆ ತರಲು ದೇವರಾಜ ಅರಸು ಮೂರು ವರ್ಷ ಕಾದರು. ಮೊದಲಿಗೆ ಎಲ್.ಜಿ. ಹಾವನೂರ್ ಅವರಿಂದ ಕರ್ನಾಟಕದ ಜಾತಿ ಜನಗಣತಿ ಮಾಡಿಸಿದರು. ಅದರಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಯಾವ್ಯಾವ ಜಾತಿಯ ಜನಕ್ಕೆ ಏನೇನು ಅನುಕೂಲಗಳಿವೆ, ಏನಿಲ್ಲ ಎಂಬುದನ್ನು ಅರಿತುಕೊಂಡರು. ಈ ಪ್ರೋಸೆಸ್ ಇತ್ತಲ್ಲ, ಇದು ತುಂಬಾನೇ ನಿಧಾನವಾಗಿ, ಸಾವಧಾನವಾಗಿತ್ತು. ಅಳೆದು ಸುರಿದು, ನಮ್ಮನ್ನು ಸೇರಿಸಿಕೊಂಡು ಚರ್ಚೆ ಮಾಡಿ ಎಲ್ಲರಿಗೂ ಅನ್ವಯವಾಗುವಂತೆ, ಎಲ್ಲರಿಗೂ ನ್ಯಾಯ ದೊರಕುವಂತೆ ನೋಡಿಕೊಂಡಿದ್ದಾಗಿತ್ತು.

ದೇವರಾಜ ಅರಸರ ಕೆಲಸಗಳಲ್ಲಿ ಹಾವನೂರ್ ಕಮಿಷನ್ ತುಂಬಾ ಮಹತ್ವದ, ಮುಖ್ಯವಾದ ಕಾರ್ಯಕ್ರಮ ಅಂತನ್ನಿಸಿದ್ದು ಏಕೆಂದರೆ, ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು ಎಂಬುದನ್ನು ತೋರಿಸಿಕೊಟ್ಟದ್ದಕ್ಕಾಗಿ. ನೋಡಿ... ಗುಂಡೂರಾವ್, ರಾಮಕೃಷ್ಣ ಹೆಗಡೆ, ವೀರಪ್ಪಮೊಯ್ಲಿ, ಬಂಗಾರಪ್ಪ, ಧರಂಸಿಂಗ್, ಸಿದ್ದರಾಮಯ್ಯ ಇವರೆಲ್ಲ ಸಣ್ಣ, ಅತಿ ಸಣ್ಣ ಜಾತಿ-ಜನಾಂಗಗಳಿಗೆ ಸೇರಿದವರು. ಇವರು ಮುಖ್ಯಮಂತ್ರಿಗಳಾಗಿದ್ದೇ ಅರಸರ ಸೋಷಿಯಲ್ ಜಸ್ಟಿಸ್‌ನಿಂದಾಗಿ. ದಟ್ಸ್ ದ ಬ್ಯೂಟಿ ಆಫ್ ಡೆಮಾಕ್ರಸಿ. ಅದಕ್ಕೆ ಕಾರಣ ಅರಸು. 

***

► ಹಳ್ಳಿಯ ಜನಗಳ ಬಗ್ಗೆ ವಿಶೇಷ ಮಮತೆ ಇತ್ತು : ಬಿ.ಎನ್. ಗರುಡಾಚಾರ್, ನಿವೃತ್ತ ಪೊಲೀಸ್ ಅಧಿಕಾರಿ

ದೇವರಾಜ ಅರಸು ಎಂದಾಕ್ಷಣ ನನಗೆ ಹಳ್ಳಿ ನೆನಪಾಗುತ್ತದೆ. ಅರಸು ಹಳ್ಳಿಯಿಂದ ಬಂದವರು, ಕೃಷಿ ಕುಟುಂಬದ ಕಷ್ಟ-ಸುಖ ಉಂಡವರು. ಆ ಕಾಲಕ್ಕೇ ಪದವಿ ಪಡೆದಿದ್ದರೂ, ಸರಕಾರಿ ಕೆಲಸಕ್ಕೆ ಹೋಗದೆ, ಹಳ್ಳಿಗೆ ಮರಳಿ ಮಣ್ಣಿನೊಂದಿಗೆ ಬೆರೆತು ಬದುಕಿದವರು.ಹಾಗಾಗಿ ಹಳ್ಳಿಯವರ ಸಹಜ ಹಿಂಜರಿಕೆ, ಮುಗ್ಧತೆ ಮತ್ತು ನೇರವಾಗಿ ಮಾತನಾಡುವ ಗುಣ ಅರಸರಲ್ಲಿತ್ತು.ಅವರಲ್ಲಿ ಹಳ್ಳಿ ಎನ್ನುವುದು ಮೈ ಮನಗಳೊಂದಿಗೆ ಬೆರೆತುಹೋಗಿತ್ತು. ಹಾಗಾಗಿಯೇ ಮುಖ್ಯಮಂತ್ರಿ ಅರಸರಿಗೆ ನಮ್ಮಂತಹ ಅಧಿಕಾರಿಗಳು ಎದುರಾದರೆ, ಹೊಸ ಯೋಜನೆಗಳು, ಕಾರ್ಯಕ್ರಮಗಳ ಬಗ್ಗೆ ವಿವರಿಸಿದರೆ, ‘ಹಳ್ಳಿ ಜನಗಳ ಬಗ್ಗೆ ಅನುಕಂಪ ಇರಲಿ’ ಎಂದು ಒತ್ತಿ ಒತ್ತಿ ಹೇಳುತ್ತಿದ್ದರು. ಇದು ಅವರ ಸ್ಟಾಂಡಿಂಗ್ ಇನ್ಸ್ ಟ್ರಕ್ಷನ್ ಆಗಿತ್ತು.

***

► ದಲಿತರನ್ನು ಹುಡುಕಿ ಸ್ಥಾನಮಾನ ಕೊಟ್ಟರು : ಕಲ್ಲೇ ಶಿವೋತ್ತಮ ರಾವ್, ಹಿರಿಯ ಪತ್ರಕರ್ತ

ನಿಜಲಿಂಗಪ್ಪನವರ ಕಾಲದಲ್ಲಿ ಒಬ್ಬ ದಲಿತನನ್ನು ಮಂತ್ರಿ ಮಾಡಲಾಗಿತ್ತು. ಅದು ಬಿಟ್ಟರೆ ಚೆನ್ನಿಗರಾಯ ಅಂತ ಇನ್ನೊಬ್ಬರು ಸ್ಪೀಕರ್ ಆಗಿದ್ದ ನೆನಪು. ಇಷ್ಟು ಬಿಟ್ಟರೆ, ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ದಲಿತರಿಗೆ ಸ್ಥಾನಮಾನವನ್ನು, ಅಧಿಕಾರ ಅನುಭವಿಸುವ ಅವಕಾಶವನ್ನು ಯಾವ ಸರಕಾರಗಳೂ ಮಾಡಿಕೊಟ್ಟಿದ್ದಿಲ್ಲ. ಆದರೆ ದೇವರಾಜ ಅರಸು ಅವರ ಕಾಲದಲ್ಲಿ ಐವರು ದಲಿತ ನಾಯಕರನ್ನು- ಬಿ. ಬಸವಲಿಂಗಪ್ಪ, ಕೆ.ಎಚ್.ರಂಗನಾಥ್, ಆರ್.ಡಿ.ಕಿತ್ತೂರ್, ರಾಮಸ್ವಾಮಿ, ಶಿವಣ್ಣ ಮಂತ್ರಿ ಮಾಡಿದರು. ಇದು ಸಾಮಾನ್ಯ ಸಂಗತಿಯಲ್ಲ. ಕರ್ನಾಟಕದ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಲಿಂಗಾಯತರು, ಒಕ್ಕಲಿಗರೆಂಬ ಫ್ಯೂಡಲ್‌ಗಳದೇ ದರ್ಬಾರು. ಅವರಿಗೆ ದಲಿತರು ಎಂದರೆ ಅಷ್ಟಕ್ಕಷ್ಟೆ. ಆದರೆ ಅದನ್ನು ತೋರಿಸಿಕೊಳ್ಳುತ್ತಿರಲಿಲ್ಲ, ಅಧಿಕಾರವನ್ನೂ ಕೊಟ್ಟಿರಲಿಲ್ಲ. ಇದನ್ನು ಖುದ್ದು ಕಂಡಿದ್ದ ದೇವರಾಜ ಅರಸು, 1972ರಲ್ಲಿ ವಿದ್ಯಾವಂತ ದಲಿತರನ್ನು ಹುಡುಕಿ ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಿ, ಮಂತ್ರಿ ಮಾಡಿದ್ದರು. ಹೀಗೆ ಮಂತ್ರಿ ಮಾಡುವುದರಿಂದ ಆ ಸಮುದಾಯ ಸಾಮಾಜಿಕವಾಗಿ ಎದೆಯುಬ್ಬಿಸಿ ನಡೆಯುವಂತಾಗಿತ್ತು.ಆ ಸಾಧನೆ ಅಷ್ಟಿಷ್ಟಲ್ಲ, ಎಲ್ಲರಿಗೂ ಸಾಧ್ಯವಿಲ್ಲ. ದಲಿತರ ಸ್ಥಿತಿ ಯಾರಿಗೂ ಅರ್ಥವಾಗುವಂಥದ್ದೂ ಅಲ್ಲ.

***

► ಭೂ ಸುಧಾರಣೆ ಕಾಯ್ದೆಯಲ್ಲಿ ಇಡೀ ರಾಜ್ಯಕ್ಕೆ ಮಾದರಿ : ಭಾರತಿ ಅರಸು, ದೇವರಾಜ ಅರಸು ಅವರ ಪುತ್ರಿ

ಭೂ ಸುಧಾರಣೆ ಕಾಯ್ದೆ ಜಾರಿಗೆ ಬಂದಾಗ, ಅಪ್ಪಾಜಿ ಅದು ನನ್ನಿಂದಲೇ ಆರಂಭವಾಗಲಿ, ಇಡೀ ರಾಜ್ಯಕ್ಕೆ ಮಾದರಿಯಾಗಲಿ ಎಂದು ನನ್ನ ಹೆಸರಿನಲ್ಲಿದ್ದ 15 ಎಕರೆ ಜಮೀನನ್ನು ಚೆಲುವಯ್ಯನ ಹೆಸರಿಗೆ ಬರೆದುಕೊಟ್ಟಿದ್ದರು.

ಅಪ್ಪಾಜಿ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು ‘ಅಧಿಕಾರ ಎನ್ನುವುದು ಜನ ನನಗೆ ಕೊಟ್ಟಿರುವುದು, ಅದು ನನ್ನದಲ್ಲ. ಅವರು ಕೊಟ್ಟಿರುವ ಅಧಿಕಾರ ಅವರಿಗಾಗಿಯೇ ಬಳಕೆಯಾಗಬೇಕು; ಎಲ್ಲರೂ ಚೆನ್ನಾಗಿರಬೇಕು; ಎಲ್ಲರಿಗೂ ಅವಕಾಶ ಕೊಡಬೇಕು. ಅವಕಾಶನೇ ಇಲ್ಲದಿದ್ದರೆ ಅವರು ಮುಂದೆ ಬರಲು ಹೇಗೆ ಸಾಧ್ಯ’ ಎನ್ನುತ್ತಿದ್ದರು. ಆ ಕಾರಣಕ್ಕಾಗಿಯೇ ರಾಜಕೀಯದಲ್ಲಿ ಮೀಸಲಾತಿಯನ್ನು ಜಾರಿಗೆ ತಂದರು. ಆದರೆ ಆ ಮೀಸಲಾತಿ ಕಾಯ್ದೆಯ ಮೂಲಕ ಮೇಲ್ಜಾತಿಯವರನ್ನು ಕಡೆಗಣಿಸಲಿಲ್ಲ.

***

► ಹಳ್ಳಿಯೊಂದಕ್ಕೆ ಆಧುನಿಕ ಯಂತ್ರ ಬಂದಾಗ... : ಕೆ.ಎಸ್. ಅಪ್ಪಾಜಯ್ಯ, ಚಿತ್ರಕಲಾ ಪರಿಷತ್ತಿನ ಉಪಾಧ್ಯಕ್ಷ

ನಮ್ಮ ತಂದೆ ಶಿವನಂಜಪ್ಪನವರು ಮತ್ತು ದೇವರಾಜ ಅರಸು ಬಾಲ್ಯ ಸ್ನೇಹಿತರು. ನಮ್ತಂದೆ ಹಲ್ಲರ್ ಮಿಲ್ ಉದ್ಘಾಟನೆಗೆ ಅರಸರನ್ನು ಕರೆಸಿದ್ದರು. ಮುಖ್ಯ ಅತಿಥಿಗಳಾಗಿ ಬಂದ ದೇವರಾಜ ಅರಸು ಅವರು, ‘‘ಶಿವನಂಜಪ್ಪ ಮಾಡರ್ನ್ ಮನುಷ್ಯ. ಹಳ್ಳಿಗೆ ಆಧುನಿಕ ಯಂತ್ರ ತಂದಿದ್ದಾನೆ. ಜನರ ಸಮಯ ಉಳಿಸಿದ್ದಾನೆ. ಮಹಿಳೆಯರಿಗೆ ಅನುಕೂಲ ಮಾಡಿಕೊಟ್ಟಿದ್ದಾನೆ.. ಇದೆಲ್ಲವೂ ನಿಜ...

ಆದರೆ ಶಿವನಂಜಪ್ಪನಮ್ಮ ಹಳ್ಳಿಯ ಹೆಂಗಸರನ್ನು ಸೋಮಾರಿಗಳನ್ನಾಗಿ ಮಾಡ್ತಿದಾನೆ. ಬರೀ ಸೋಮಾರಿಗಳನ್ನಲ್ಲ, ಹೆಂಗಸರು ರಾಗಿ ಬೀಸುವಾಗ ಆಡುತ್ತಿದ್ದ ಪದಗಳು, ಲಾವಣಿಗಳು, ಹಾಡುಗಳು ಕೂಡ ಮರೆಯಾಗಿಹೋಗಲಿವೆ. ಅಷ್ಟೇ ಅಲ್ಲ, ಹೆಂಗಸರು ರಾಗಿ ಬೀಸುವ ನೆಪದಲ್ಲಿ ತಮ್ಮ ಕಷ್ಟ-ಸುಖಗಳನ್ನು ಹೇಳಿಕೊಳ್ಳುತ್ತಿದ್ದ, ಸಂತೈಸುವಿಕೆಯ ದಾರಿ ಕಂಡುಕೊಳ್ಳುತ್ತಿದ್ದ ಹಾದಿಗೂ ಮುಳ್ಳಾಕಿದ್ದಾನೆ. ರಾಗಿ ಬೀಸುವುದು ದೈಹಿಕ ಶ್ರಮದ ಕೆಲಸ, ಆ ಮೂಲಕ ಹೆಂಗಸರ ಕೈ-ಬಾಯಿಗಳ ಚಲನಶೀಲತೆಯನ್ನೆ ಸ್ತ�

Writer - ಬಸವರಾಜು ಮೇಗಲಕೇರಿ

contributor

Editor - ಬಸವರಾಜು ಮೇಗಲಕೇರಿ

contributor

Similar News