ಓ ಮೆಣಸೇ ...

Update: 2022-08-21 18:33 GMT

ದೇಶದ ಬ್ಯಾಂಕುಗಳಿಂದ ಸಾಲ ಪಡೆದು ಓಡಿಹೋಗುವವರ ವಿರುದ್ಧ ಕಾರ್ಯಾಚರಣೆ ಪ್ರಗತಿಯಲ್ಲಿದೆ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ಅವರೆಲ್ಲಾ ತಮ್ಮ ಆಯ್ಕೆಯ ಸುರಕ್ಷಿತ ತಾಣಗಳಲ್ಲಿ ಸೆಟ್ಲ್ ಆಗುವ ತನಕವೂ ಈ ಕಾರ್ಯಾಚರಣೆ ಜಾರಿಯಲ್ಲಿರುತ್ತದೆ.

ಇನ್ನು ಒಂದು ವರ್ಷದೊಳಗಾಗಿ ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದನೆಯ ಶವ ಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯಲಾಗುವುದು - ಮನೋಜ್ ಸಿನ್ಹಾ, ಜಮ್ಮು-ಕಾಶ್ಮೀರ ಲೆಫ್ಟ್ಟಿನೆಂಟ್ ಗವರ್ನರ್
ಇತಿಹಾಸವಾಗಲಿ ವರ್ತಮಾನವಾಗಲಿ ನಿಮ್ಮ ಪರವಾಗಿಲ್ಲವಾದ್ದರಿಂದ ಈ ರೀತಿ ಭವಿಷ್ಯವಾಣಿಗಳಲ್ಲೇ ಆಶ್ರಯ ಪಡೆಯಿರಿ.

ಮನಸ್ಸು ಒಂದಾದರೆ ಎಲ್ಲ ಸಾಧನೆಗಳನ್ನು ಮಾಡಬಹುದು -ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ನೀವೇನೇ ಹೇಳಿ. ಯಡಿಯೂರಪ್ಪನವರು ಒಪ್ಪುವವರಲ್ಲ.

ಅಜ್ಜ ನೆಟ್ಟ ಆಲದ ಮರಕ್ಕೆ ಕಾಂಗ್ರೆಸ್ ನಾಯಕರು ನೇತು ಬಿದ್ದಿದ್ದಾರೆ - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಎಲ್ಲರ ಅಜ್ಜಂದಿರು ಸೇರಿ ಕಟ್ಟಿದ ದೇಶವನ್ನು ನೇಣಿಗೆ ಹಾಕುವುದಕ್ಕಿಂತ ಅದು ವಾಸಿ.

ನನಗೆ ಎಲ್ಲವೂ ಸಿಕ್ಕಿದ್ದು ಜನರಿಂದ, ಜನಸಾಮಾನ್ಯರಿಂದ - ಯಡಿಯೂರಪ್ಪ, ಮಾಜಿ ಸಿಎಂ
ದೋಚಲು ಸಿಕ್ಕಿದ್ದೂ ಅವರೇ ತಾನೇ?

ಆರೆಸ್ಸೆಸ್ ಕೂಡಾ ರಾಷ್ಟ್ರಧ್ವಜ ಹಾರಿಸಿದೆ ಎಂಬ ಸುದ್ದಿ ಕೇಳಿ ಸಂತೋಷವಾಯಿತು -ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಆರೆಸ್ಸೆಸ್ ಬಗ್ಗೆ ಇಷ್ಟಾದರೂ ಬಾಯಿ ಬಿಚ್ಚಲು ನೀವು ಧೈರ್ಯ ತೋರಿದ್ದನ್ನು ಕಂಡು ಹಲವರು ಸಂತಸ ಪ್ರಕಟಿಸಿದ್ದಾರೆ.

ಸರಕಾರ ನಡೆಯುತ್ತಿಲ್ಲ, ಮ್ಯಾನೇಜ್ ಮಾಡುತ್ತಿದ್ದೇವೆ ಅಷ್ಟೇ - ಮಾಧುಸ್ವಾಮಿ, ಸಚಿವ
ಮಿಸ್ ಮ್ಯಾನೇಜ್ ಮಾಡುತ್ತಿದ್ದೇವೆ ಎಂದು ಹೇಳಿದ್ದರೆ ಜನರು ಒಪ್ಪುತ್ತಿದ್ದರು.

ಸಿಎಂ ಬದಲಾವಣೆ ಬಗ್ಗೆ ಮಾತನಾಡುವವರೆಲ್ಲ ನಿದ್ದೆಯ ಮಂಪರಿನಲ್ಲಿದ್ದಾರೆ -ಶಿವರಾಮ ಹೆಬ್ಬಾರ್, ಸಚಿವ
ನಿದ್ದೆಯಿಂದ ಎದ್ದರೆ ಮಾತು ಬಿಟ್ಟು ಕಾರ್ಯಾಚರಣೆಗೆ ಇಳಿಯುತ್ತಾರೆ.

ಇಂದು ಇಡೀ ವಿಶ್ವ ವಿರೋಧಾಭಾಸಗಳ ನಡುವೆ ಸಿಲುಕಿಕೊಂಡಿದ್ದು, ಭಾರತವೊಂದೇ ಈ ಎಲ್ಲ ದ್ವಂದ್ವಗಳನ್ನು ಸರಿಪಡಿಸಿಕೊಂಡು ಹೋಗಬಲ್ಲ ಸಾಮರ್ಥ್ಯ ಹೊಂದಿದೆ - ಮೋಹನ್ ಭಾಗವತ್, ಆರೆಸ್ಸೆಸ್ ಸರಸಂಘ ಚಾಲಕ
ವಿರೋಧಾಭಾಸಗಳನ್ನು ಮ್ಯಾನೇಜ್ ಮಾಡುವ ವಿಷಯದಲ್ಲಿ ಆರೆಸ್ಸೆಸ್‌ಗೆ ಇರುವ ನೈಪುಣ್ಯ ಬೇರೆ ಯಾರಲ್ಲೂ ಇಲ್ಲ ಎಂಬುದನ್ನು ನಿಮ್ಮನ್ನು ಬಲ್ಲವರೆಲ್ಲ ಹಿಂದೆಯೇ ಒಪ್ಪಿಕೊಂಡಿದ್ದಾರೆ.

ಕಾಂಗ್ರೆಸ್ ಮುಖಂಡರು ಪ್ರಾಮಾಣಿಕವಾಗಿ ಪಕ್ಷವನ್ನು ಹೇಗೆ ಕಟ್ಟಿಬೆಳೆಸಬೇಕೆಂದು ಬಿಜೆಪಿಯನ್ನು ನೋಡಿ ಕಲಿಯಬೇಕು - ಸತೀಶ್ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ
ಅವರು ಹಾಗೆ ನೋಡಲು ಹೊರಟರೆ ಅವರಿಗೆ ಬಿಜೆಪಿ ಮಾತ್ರ ಹಲವೆಡೆ ಕಾಣ ಸಿಕ್ಕೀತು. ಬಿಜೆಪಿ ಇದ್ದಲ್ಲಿ ಪ್ರಾಮಾಣಿಕತೆಯ ನೆರಳು ಕೂಡಾ ಕಾಣಲು ಸಿಗಲಾರದು.

ಸ್ವಾತಂತ್ರದ ಜಾಹೀರಾತಿನಲ್ಲಿ ಉದ್ದೇಶಪೂರ್ವಕವಾಗಿಯೇ ನಾವು ನೆಹರೂ ಚಿತ್ರವನ್ನು ಹಾಕಿಲ್ಲ -ರವಿಕುಮಾರ್, ಬಿಜೆಪಿ ಪ್ರ.ಕಾರ್ಯದರ್ಶಿ
ಗೋಡ್ಸೆ ಬದಲು ಆತನ ಗುರು ಸಾವರ್ಕರ್ ಚಿತ್ರವನ್ನು ಹಾಕಿದ್ದು ಕೂಡಾ ಉದ್ದೇಶಪೂರ್ವಕವಲ್ಲವೇ?

ರಾಷ್ಟ್ರ ಮೊದಲು ಎಂಬ ಉತ್ಕಟ ಮನೋಭಾವದಿಂದ ಕೆಲಸ ಮಾಡಿದಾಗ ವೈವಿಧ್ಯದ ನಡುವೆಯೂ ಏಕಭಾರತ ಸಾಧ್ಯವಾಗುತ್ತದೆ - ದ್ರೌಪದಿ ಮುರ್ಮು, ರಾಷ್ಟ್ರಪತಿ
ಅಂಬಾನಿ ಮೊದಲೋ ಅದಾನಿ ಮೊದಲೋ ಎಂಬುದು ಮೊದಲು ತೀರ್ಮಾನವಾಗಲಿ.

ಸ್ವತಂತ್ರ ದೇಶ ಹೇಗಿರಬೇಕೆಂದು ಭಾರತವನ್ನು ನೋಡಿ ಕಲಿಯಬೇಕು - ಇಮ್ರಾನ್ ಖಾನ್, ಪಾಕ್ ಮಾಜಿ ಪ್ರಧಾನಿ
ನಿಮ್ಮಂತೆ ದೂರದಿಂದಲೇ ನೋಡಬೇಕು ಎಂದು ಕೂಡಾ ಉಪದೇಶಿಸಿ.

ಮಹಾರಾಷ್ಟ್ರದ ಸರಕಾರಿ ನೌಕರರು ಇನ್ನು ಮುಂದೆ ಫೋನ್‌ನಲ್ಲಿ 'ಹಲೋ' ಬದಲು 'ವಂದೇ ಮಾತರಂ' ಎಂದು ಸಂಭಾಷಣೆ ಪ್ರಾರಂಭಿಸಬೇಕು - ಸುಧೀರ್ ಮುಂಗಂಟೀವಾರ್, ಮಹಾರಾಷ್ಟ್ರ ಸಚಿವ
ಸಚಿವರುಗಳು ಉದ್ಯಮಿಗಳಿಂದ ನೋಟಿನ ಚೀಲಗಳನ್ನೂ ಪಡೆಯುವಾಗಲೂ ಥ್ಯಾಂಕ್ ಯೂ ಅನ್ನುವ ಬದಲು 'ವಂದೇ ಮಾತರಂ' ಎನ್ನಬೇಕೆಂಬ ನಿಯಮವನ್ನೂ ಜಾರಿಗೊಳಿಸಿ.

ಅಹಿಂಸೆಯಿಂದ ಮಾತ್ರ ಸ್ವಾತಂತ್ರ ಬಂದಿದೆ ಎಂದರೆ ಕ್ರಾಂತಿಕಾರಿಗಳ ಹೋರಾಟಕ್ಕೆ ಅವಮಾನ ಮಾಡಿದಂತೆ - ಸಿ.ಟಿ.ರವಿ, ಶಾಸಕ
ಹಿಂಸೆಯಿಂದ ಮಾತ್ರ ಸ್ವಾತಂತ್ರ ಬಂದಿದೆ ಎಂದರೆ ಕ್ಷಮಾಪತ್ರ ಶೂರರ ಗೌರವ ಹೆಚ್ಚುತ್ತೆ.

ರಾಜ್ಯದಲ್ಲಿ ಪ್ರತೀ ವಿಚಾರದಲ್ಲೂ ವಿವಾದಗಳು ಯಾಕೆ ಸೃಷ್ಟಿಯಾಗುತ್ತಿವೆ ಎಂದು ಗೊತ್ತಾಗುತ್ತಿಲ್ಲ - ಜಗದೀಶ್ ಶೆಟ್ಟರ್, ಮಾಜಿ ಸಚಿವ
ಸಂಜೆಯ ವಾತಾವರಣ ಹಾಗಿರುತ್ತದೆ. ಬೆಳಗ್ಗೆ ಎದ್ದು ಒಂದು ಕಪ್ ಖಡಕ್ ಕಾಫಿ ಕುಡಿದು ಕಣ್ಣು ತೆರೆದು ಸುತ್ತ ಮುತ್ತ ನೋಡಿ.ಎಲ್ಲ ಸಮಸ್ಯೆಗಳಿಗೆ ಕಾರಣ ತಿಳಿಯುತ್ತೆ.

ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ಕಾಂಗ್ರೆಸೇ ಬೇರೆ, ಈಗಿರುವ ಕಾಂಗ್ರೆಸೇ ಬೇರೆ - ಕುಮಾರಸ್ವಾಮಿ, ಮಾಜಿ ಸಿಎಂ
ಚುನಾವಣೆಗೆ ಮುಂಚಿನ ಕುಮಾರಸ್ವಾಮಿ ಮತ್ತು ಚುನಾವಣೆಯ ನಂತರದ ಕುಮಾರ ಸ್ವಾಮಿ ಬೇರೆಬೇರೆ ಅಲ್ಲವೇ?

ಇಡೀ ಜಗತ್ತು ಈಗ ನಮ್ಮ ದೇಶದತ್ತ ಗೌರವದಿಂದ ನೋಡುತ್ತಿದೆ - ನಳಿನ್ ಕುಮಾರ್ ಕಟೀಲು, ಸಂಸದ
ಇಲ್ಲಿಯ ದುಸ್ಥಿತಿ ಶಾಶ್ವತವಲ್ಲ, ಆಡಳಿತಗಾರರು ಬದಲಾದರೆ ಪರಿಸ್ಥಿತಿ ಉತ್ತಮವಾಗುತ್ತದೆ ಎಂಬ ವಿಶ್ವಾಸ ಅವರಿಗಿದೆ.

ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣುವುದು ಭಾರತದ ಅಭಿವೃದ್ಧಿಗೆ ಅತ್ಯಂತ ಮುಖ್ಯ -ನರೇಂದ್ರ ಮೋದಿ, ಪ್ರಧಾನಿ
ಈ ಕುರಿತು ಯಶೋಧಾಬೆನ್ ಏನನ್ನುತ್ತಾರೆಂದು ಕೇಳಿ ನೋಡಿ. ಬಿಲ್ಕಿಸ್ ಬಾನುವಿನ ಹತ್ತಿರವೂ ಸುಳಿಯಬೇಡಿ.

ಯಾವುದೇ ತೀರ್ಪು ನಿಮಗೆ ಸರಿ ಕಾಣದಿದ್ದಲ್ಲಿ ಆ ತೀರ್ಪನ್ನು ಟೀಕಿಸಿ, ನ್ಯಾಯಮೂರ್ತಿಗಳನ್ನು ಟೀಕಿಸಬೇಡಿ - ಯು.ಯು.ಲಲಿತ್, ಸುಪ್ರೀಂಕೋರ್ಟ್ ಭಾವಿ ಮುಖ್ಯ ನ್ಯಾಯಮೂರ್ತಿ
ತಪ್ಪನ್ನು ಟೀಕಿಸಿ, ತಪ್ಪಿತಸ್ಥನನ್ನು ಟೀಕಿಸಬೇಡಿ ಎನ್ನುವ ನೀವು ಶಿಕ್ಷೆ ವಿಧಿಸುವಾಗ ಅಪರಾಧಿಯನ್ನು ರಕ್ಷಿಸಿ ಅಪರಾಧವನ್ನು ಶಿಕ್ಷಿಸುವಿರಾ?

ದ.ಕ.ಜಿಲ್ಲೆಯನ್ನು ಕನಸಿನ ಮಂಗಳೂರು, ಆಕರ್ಷಣೀಯ ಮಂಗಳೂರು, ಅಭಿವೃದ್ಧಿ ಪಥದಲ್ಲಿ ಮಂಗಳೂರು ಎಂಬ ಮೂರು ಆಶಯಗಳನ್ನು ಮುಂದಿರಿಸಿಕೊಂಡು ಅಭಿವೃದ್ಧಿ ಪಡಿಸಲಾಗುವುದು - ಸುನೀಲ್ ಕುಮಾರ್, ಸಚಿವ
ಶಾಂತಿಗೆ ಮತ್ತು ನೆಮ್ಮದಿಗೆ ನಿಮ್ಮ ಆಶಯಗಳಲ್ಲೂ ಜಾಗವಿಲ್ಲವೇ?

ಭಗವಂತ ಆಶೀರ್ವಾದ ಮಾಡಿದರೆ ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಆಸೆ ಪಡುವ ವ್ಯಕ್ತಿಗಳಲ್ಲಿ ನಾನೂ ಒಬ್ಬ - ಶ್ರೀರಾಮುಲು, ಸಚಿವ
ಎಲ್ಲ ಶಿಬಿರಗಳಲ್ಲೂ ಒಂದು ಸೀಟು ಬುಕ್ ಮಾಡಿಡುವುದು ಜಾಣತನ.

ಮುಖ್ಯಮಂತ್ರಿಯವರು ರಾಜೀನಾಮೆ ನೀಡಿ ಎಂದು ಹೇಳಿದರೆ ಮರು ಮಾತನಾಡದೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ - ಮಾಧುಸ್ವಾಮಿ, ಸಚಿವ
ಆಗ ಮಾತನಾಡಿ ಲಾಭವೇನಿದೆ?

ನಿನ್ನೆ ಮೊನ್ನೆವರೆಗೂ ಕ್ರಿಕೆಟ್ ಆಡುತ್ತಿದ್ದ ಹುಡುಗರೂ ಚಾಕು, ಚೂರಿ ಹಿಡಿದು ಓಡಾಡುತ್ತಿರುವುದು ಆತಂಕಕಾರಿ ವಿಷಯ - ಬಿ.ವೈ.ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ
ನೀವು ಕೊಡುವ ತ್ರಿಶೂಲ, ತಲವಾರು, ಪಿಸ್ತೂಲುಗಳು ಎಲ್ಲರಿಗೂ ಇಷ್ಟವಾಗಬೇಕಾಗಿಲ್ಲ. ಉದ್ಯೋಗ ಕೊಡಿ ಎಲ್ಲರೂ ಸ್ವೀಕರಿಸುತ್ತಾರೆ.

ಅಂಡಮಾನ್ ಸೆಲ್ಯುಲರ್ ಜೈಲಿಗೆ ಹೋದರೆ ಸಾವರ್ಕರ್ ಬಗ್ಗೆ ತಿಳಿಯುತ್ತದೆ - ಆರಗ ಜ್ಞಾನೇಂದ್ರ, ಸಚಿವ
ಅವರು ಬರೆದ ಕ್ಷಮಾಪಣಾಪತ್ರಗಳಾಗಲಿ ಅವರ ಅಪರಾಧಿ ಸಂಚುಗಳ ದಾಖಲೆಗಳಾಗಲಿ ಅಲ್ಲಿ ಇಲ್ಲವಾದ್ದರಿಂದ ಅದು ಸುರಕ್ಷಿತ.

ಪ್ರತಿಪಕ್ಷಗಳು ಹಿಂದೂ - ಮುಸ್ಲಿಮರ ಮಧ್ಯೆ ಗಲಭೆ ಮಾಡಿಸಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ - ಎಸ್. ಟಿ.ಸೋಮಶೇಖರ್, ಸಚಿವ
ನಿಮ್ಮ ಹಕ್ಕನ್ನು ಅವರು ಕಿತ್ತು ಕೊಳ್ಳುತ್ತಿದ್ದಾರೆಂಬ ಆತಂಕವೇ?

ಕೈ ಕಾಲು ಗಟ್ಟಿ ಇರುವವರೆಗೂ (ಬಿಜೆಪಿ)ಪಕ್ಷದ ಸೇವೆ ಮಾಡುತ್ತೇನೆ - ಯಡಿಯೂರಪ್ಪ, ಮಾಜಿ ಸಿಎಂ
ತಲೆ ಹೇಗಿದ್ದರೇನಂತೆ?
ಯಡಿಯೂರಪ್ಪರ ಹಿರಿತನ, ಶ್ರಮ ಗಮನಿಸಿ ಪಕ್ಷದಲ್ಲಿ ದೊಡ್ಡ ಸ್ಥಾನ ನೀಡಲಾಗಿದೆ -ಎಸ್.ಟಿ.ಸೋಮಶೇಖರ್, ಸಚಿವ
ಹೊರಲಾಗದೆ ದಿಲ್ಲಿಯಲ್ಲೇ ಕುಸಿದು ಬೀಳಲಿ ಎನ್ನುವ ಉದ್ದೇಶ ಇರಬಹುದೇ ?

ಬಿಜೆಪಿ ಭಾರತವನ್ನು ಹಿಂದೂ ರಾಷ್ಟ್ರವಾಗಿಸಲು ಪ್ರಯತ್ನಿಸಿದರೆ ಪಾಕಿಸ್ತಾನಕ್ಕೆ ಬಂದ ಗತಿಯೇ ಇಲ್ಲಿಯೂ ಬರಲಿದೆ - ಅಶೋಕ್ ಗೆಹ್ಲೋಟ್, ರಾಜಸ್ಥಾನ ಸಿಎಂ
ಭಾರತವನ್ನು ಇನ್ನೊಂದು ಪಾಕಿಸ್ತಾನ ಮಾಡುವುದೇ ಅವರ ಗುರಿಯೂ ಆಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿರುವುದಕ್ಕೆ ನಾನು ಖುಷಿ ಪಡುವುದಿಲ್ಲ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
ಬೇರೇನು ಎಸೆಯಬೇಕು ಎನ್ನುವ ನಿಮ್ಮ ಆಸೆಯನ್ನು ಹೇಳಿ ಬಿಡಿ.

Writer - ಪಿ.ಎ. ರೈ

contributor

Editor - ಪಿ.ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!