ಉಡುಪಿ ರಜತೋತ್ಸವ: ಲಾಂಛನ ಬಿಡುಗಡೆ, ವೆಬ್‌ಸೈಟ್‌ಗೆ ಚಾಲನೆ

Update: 2022-08-22 20:38 IST
ಉಡುಪಿ ರಜತೋತ್ಸವ: ಲಾಂಛನ ಬಿಡುಗಡೆ, ವೆಬ್‌ಸೈಟ್‌ಗೆ ಚಾಲನೆ
  • whatsapp icon

ಉಡುಪಿ, ಆ.22: ಉಡುಪಿ ಜಿಲ್ಲಾಡಳಿತದ ವತಿಯಿಂದ ಇದೇ ಆ.25ರಂದು ನಡೆಯುವ ಉಡುಪಿ ಜಿಲ್ಲೆಯ ರಜತ ಮಹೋತ್ಸವದ ಲಾಂಛನದ ಬಿಡುಗಡೆ ಹಾಗೂ ವೆಬ್‌ಸೈಟ್‌ಗೆ ಇಂದು ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.

ರಜತೋತ್ಸವಕ್ಕೆ ಸಂಬಂಧಿಸಿದಂತೆ ಉಡುಪಿಯ ಜನಪ್ರತಿನಿಧಿಗಳು, ಗಣ್ಯರು ಹಾಗೂ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರು ಕಲಾವಿದ ಪುರುಷೋತ್ತಮ ಅಡ್ವೆ ಅವರು ರಚಿಸಿ ಲಾಂಛನ ಬಿಡುಗಡೆ ಗೊಳಿಸಿದರೆ ಹಾಗೂ ಕಾಪು ಶಾಸಕ ಲಾಲಾಜಿ ಮೆಂಡನ್ ವೆಬ್‌ಸೈಟ್‌ಗೆ ಚಾಲನೆ ನೀಡಿದರು.

ಆ.25ರಿಂದ ಜ.25ರವರೆಗೆ ಐದು ತಿಂಗಳ ಕಾಲ ನಡೆಯುವ ಉಡುಪಿ ರಜತ ಮಹೋತ್ಸವ ಸಮಾರಂಭದ ಆಯೋಜನೆಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ರಜತೋತ್ಸವ ಸಮಿತಿಯೊಂದನ್ನು ರಚಿಸಿದ್ದಾರೆ ಎಂದು ರಘುಪತಿ ಭಟ್ ತಿಳಿಸಿದರು. ಈ ಸಂಬಂಧ ಈಗಾಗಲೇ ಗ್ರಾಪಂನ ತಳಮಟ್ಟದ ಅಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳೊಂದಿಗೆ ಈಗಾಗಲೇ ಸಭೆ ನಡೆಸಲಾಗಿದೆ. ಅವರೆಲ್ಲರೂ ಇದರಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.

ರಜತೋತ್ಸವದ ಸಂಬಂಧ ಆ.24 ಮತ್ತು 25ರಂದು 75ಕಿ.ಮೀ. ದೂರದ ಅಗ್ನಿಪಥ್ ದೌಡ್ ನಡೆಯಲಿದೆ. ಈ ಓಟಕ್ಕೆ 24ರಂದು ಮುಂಜಾನೆ 8:00ಗಂಟೆಗೆ ಕಾರ್ಕಳದಲ್ಲಿ ಸಚಿವ ಸುನಿಲ್‌ಕುಮಾರ್ ಚಾಲನೆ ನೀಡಲಿದ್ದಾರೆ. ಅತ್ತೂರು ಚರ್ಚ್ ಮಾರ್ಗವಾಗಿ ಸೇನಾಕಾಂಕ್ಷಿ ವಿದ್ಯಾರ್ಥಿಗಳು 10ಗಂಟೆ ಸುಮಾರಿಗೆ ನಿಟ್ಟೆ ವಿದ್ಯಾಸಂಸ್ಥೆ ತಲುಪಲಿದ್ದಾರೆ. ಅಲ್ಲಿ ವಿನಯಹೆಗ್ಡೆ ಓಟಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.ಜಿಲ್ಲೆಯ ಸುಮಾರು 25 ವಿದ್ಯಾಸಂಸ್ಥೆಗಳ ಮೂಲಕ ಈ ರ್ಯಾಲಿ ಹಾದುಹೋಗಲಿದೆ ಎಂದು ಅವರು ವಿವರಿಸಿದರು.

ಆ.25ರಂದು ಉಡುಪಿ ಬೋರ್ಡ್ ಹೈಸ್ಕೂಲ್ ಆವರಣದಿಂದ ಅಜ್ಜರಕಾಡು ವರೆಗೆ ಪುರಮೆರವಣಿಗೆ ನಡೆಯಲಿದೆ. ಇದರಲ್ಲಿ ಸಾವಿರಾರು ಮಂದಿ ವಿದ್ಯಾರ್ಥಿಗಳು, ಸ್ವಸಹಾಯ ಗುಂಪಿನ ಮಹಿಳೆಯರು, ವಿವಿಧ ಸಂಘಸಂಸ್ಥೆಗಳ ಸದಸ್ಯರು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರತಿ ಗ್ರಾಪಂನಿಂದ ಕನಿಷ್ಠ 50 ಮಂದಿ, ನಗರಸಂಸ್ಥೆಗಳ ವಾರ್ಡುಗಳಿಂದ ತಲಾ 50 ಮಂದಿ ಸೇರಿ ಸುಮಾರು 15,000 ಮಂದಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದರು.

ರಾಜ್ಯಪಾಲರಿಂದ ಉದ್ಘಾಟನೆ
ಉಡುಪಿ ರಜತೋತ್ಸವವನ್ನು ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆ.25ರ ಸಂಜೆ 5:00ಗಂಟೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಉದ್ಘಾಟಿಸಲಿದ್ದಾರೆ. ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಉಡುಪಿ ಕುರಿತ ಕಿರುಪುಸ್ತಕವನ್ನು ರಾಜ್ಯಪಾಲರು ಬಿಡುಗಡೆಗೊಳಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ರಾತ್ರಿ 7:00ರಿಂದ ಖ್ಯಾತ ಸಂಗೀತ ಸಂಯೋಜಕ ಹಾಗೂ ನಿರ್ದೇಶಕ ಅರ್ಜುನ್ ಜನ್ಯ ಜೊತೆಗೆ ಸರಿಗಮಪ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ರಜತೋತ್ಸವದ ಸಮಾರೋಪ ಮುಂದಿನ ಜ.25ರಂದು ಮಲ್ಪೆ ಬೀಚ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ. ಇದರ ಪ್ರತಿ ತಿಂಗಳು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಉಡುಪಿಯ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮ, ವಿಚಾರಸಂಕಿರಣ, ಸಮ್ಮೇಳನ, ಸಮಾವೇಶಗಳು ನಡೆಯಲಿವೆ ಎಂದು ರಘುಪತಿ ಭಟ್ ತಿಳಿಸಿದರು.

ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಎಎಸ್ಪಿ ಎಸ್.ಟಿ ಸಿದ್ಧಲಿಂಗಪ್ಪ, ಕುಂದಾಪುರ ಸಹಾಯಕ ಆಯುಕ್ತ ರಾಜು ಕೆ. ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News