ಕಾಯಿದೆ ಜಾರಿಗೆ ತರುವ ಮೊದಲು ಸಾರ್ವಜನಿಕ ಚರ್ಚೆ ಅಗತ್ಯ: ಭೋಜೇಗೌಡ

Update: 2022-08-27 14:21 GMT

ಉಡುಪಿ : ಸರಕಾರ ಯಾವುದೇ ಕಾಯಿದೆಯನ್ನು ಜಾರಿಗೆ ತರುವ ಮೊದಲು ಸಂವಿಧಾನದಡಿಯಲ್ಲಿ ತರಬೇಕು. ಆ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡಬೇಕು. ಆದರೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಕಾಯಿದೆ ಹಾಗೂ ಸುತ್ತೋಲೆಗಳಿಗೆ ವ್ಯಾತ್ಯಾಸ ಇದ್ದು, ಅದನ್ನು ಅಧಿಕಾರಿಗಳು ಅರ್ಥೈಸಿಕೊಂಡು ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಉಡುಪಿ ಜಿಲ್ಲಾ ಘಟಕದ ಆಶ್ರಯದಲ್ಲಿ ಅಜ್ಜರಕಾಡು ಪುರಭವನದಲ್ಲಿ ಶನಿವಾರ ಆಯೋಜಿಸಲಾದ ೨೦೨೧ -೨೨ನೇ ಸಾಲಿನ ಶೈಕ್ಷಣಿಕ ಸಮ್ಮೇಳನ, ಪ್ರತಿಭಾ ಪುರಸ್ಕಾರ, ಸನ್ಮಾನ ಮತ್ತು ಸರ್ವ ಸದಸ್ಯರ ಮಹಾಸಭೆಯಲ್ಲಿ ಅವರು ಮಾತನಾಡುತಿದ್ದರು.

ವೇತನ, ಭತ್ಯೆ, ಭಡ್ತಿ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಶಿಕ್ಷಕರು ಬೀದಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ. ಆದುದರಿಂದ ಸರಕಾರ ಆತ್ಮಾವಲೋಕಿಸಿ ಕಳೆದ ಅನೇಕ ವರ್ಷಗಳಿಂದ ನೆನೆಗುಂದಿಗೆ ಬಿದ್ದಿರುವ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.

ಸಮ್ಮೇಳನವನ್ನು ಉದ್ಘಾಟಿಸಿದ ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಸಚಿವರು, ಶಾಸಕರು, ನೌಕರರು, ಅಧಿಕಾರಿಗಳು ಮಾಜಿಗಳಾದರೂ ಶಿಕ್ಷಕರು ಎಂದಿಗೂ ಮಾಜಿಗಳಾಗುವುದಿಲ್ಲ. ಆದುದರಿಂದ ಶಿಕ್ಷಕರು ತಮ್ಮ ವೃತ್ತಿ ಗೌರವ ಉಳಿಸಿಕೊಳ್ಳಲು ಜವಾಬ್ದಾರಿಯುತವಾಗಿರಬೇಕು. ಶಿಕ್ಷಕರು ಅಪ್‌ಡೇಟ್ ಆಗಿ ಉತ್ತಮ ಶಿಕ್ಷಣ ನೀಡಬೇಕು. ಶಿಕ್ಷಕರ ದಿನಾಚರಣೆಗೆ ರಜೆ ಕೇಳುವ ಬದಲು ಮಕ್ಕಳಿಂದ ಶಿಕ್ಷಕ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ತಿಳಿಸಿದರು.  

ಸಂಘದ ರಾಜ್ಯಾಧ್ಯಕ್ಷ ಸಿದ್ಧಬಸಪ್ಪ ಬಿ. ಮಾತನಾಡಿ, ೫೦:೫೦ ಅನುಪಾತದಲ್ಲಿ ಯಾವುದೇ ಮಾನದಂಡ, ಪ್ರಾಥಮಿಕ ಪರೀಕ್ಷೆ ನಡೆಸದೆ ಶಿಕ್ಷಕರಿಗೆ ಭಡ್ತಿಯನ್ನು ನೀಡುವಂತೆ ಬೆಂಗಳೂರಿನಲ್ಲಿ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸ ಲಾಗುವುದು. ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ ಪ್ರತ್ಯೇಕಗೊಂಡ ಪರಿಣಾಮ ಮುಖ್ಯೋಪಾಧ್ಯಾಯರ ಕೊರತೆಯಿಂದ ಶೈಕ್ಷಣಿಕವಾಗಿ ಕುಂದು ಉಂಟಾಗಿದೆ. ಮುಖ್ಯೋಪಾಧ್ಯಾಯರ ಕೊರತೆ ನೀಗಿಸುವ ನಿಟ್ಟಿನಲ್ಲಿ ೬೧೫ ಹುದ್ದೆಗಳಿಗೆ ಸರಕಾರ ಅನುಮೋದನೆ ಪಡೆದುಕೊಳ್ಳಲಾಗಿದೆ ಮತ್ತು ೨೨೫ ಹುದ್ದೆ ಗಳನ್ನು ತಕ್ಷಣವೇ ಭರ್ತಿ ಮಾಡಲಾಗುವುದೆಂದು ಆಯುಕ್ತರು ಭರವಸೆ ನೀಡಿ ದ್ದಾರೆ ಎಂದರು.

ಎಲ್ಲ ಇಲಾಖೆಯಲ್ಲೂ ಭಡ್ತಿ ಪಡೆದವರಿಗೆ ಸಂಬಳ ಜಾಸ್ತಿಯಾದರೆ ಶಿಕ್ಷಣ ಇಲಾಖೆಯಲ್ಲಿ ಭಡ್ತಿ ಪಡೆದುಕೊಂಡವರ ಸಂಬಳ ಮಾತ್ರ ಕಡಿಮೆಯಾಗುತ್ತಿದೆ. ಯಾಕೆಂದರೆ ಭಡ್ತಿಯಿಂದಾಗಿ ಅವರೆಲ್ಲ ಇಂಕ್ರಿಮೆಂಟ್‌ನಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ಗರಿಷ್ಠ ೧೦ಸಾವಿರ ರೂ. ಕಡಿಮೆ ಸಂಬಳ ಪಡೆದುಕೊಳ್ಳುತ್ತಿ ದ್ದಾರೆ. ಇದರ ವಿರುದ್ಧ ಹೋರಾಟ ನಡೆಸಿ ನ್ಯಾಯ ಸಿಗುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು.

ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಎನ್.ಕೆ.ಶಿವರಾಜ್, ಡಯಟ್ ಉಪ ಪ್ರಾಂಶುಪಾಲ ಅಶೋಕ್ ಕಾಮತ್, ಹೆಬ್ರಿ ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ್ ಶೆಟ್ಟಿ, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದಿನಕರ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ೬೨೫ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಂಘದ ನಿಕಟಪೂರ್ವ ಉಡುಪಿ ಜಿಲ್ಲಾಧ್ಯಕ್ಷ ಕೆ.ಕಿರಣ್ ಹೆಗ್ಡೆ ದಂಪತಿಯನ್ನು ಸನ್ಮಾನಿಸಲಾಯಿತು. ಉಡುಪಿ ಟೀಚರ್ಸ್‌ ಕೋಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು. ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಕಾರ್ಯದರ್ಶಿ ನಾಗರಾಜ್ ತೆಕ್ಕಟ್ಟೆ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಪ್ರಭಾಕರ್, ಕೊಡಗು ಜಿಲ್ಲಾಧ್ಯಕ್ಷ ಸೋಮಶೇಖರ್, ದ.ಕ. ಜಿಲ್ಲಾಧ್ಯಕ್ಷ ಮುಹಮ್ಮದ್ ರಿಯಾಝ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News