ದ್ವೇಷ ವಿಸ್ತರಣೆಯ ತಡೆಗೆ ಸಂವಿಧಾನ ದಾರಿ ದೀಪ: ಪ್ರೊ. ಅಪೂರ್ವನಂದ

Update: 2022-08-27 15:47 GMT

ಮಂಗಳೂರು, ಆ.27: ದೇಶದಲ್ಲಿ ನಿರ್ದಿಷ್ಟ ಉದ್ದೇಶಗಳಿಗಾಗಿ ಕೆಲವು ಘಟನೆಗಳ ಮೂಲಕ ದ್ವೇಷವನ್ನು ಬಿತ್ತಲಾಗುತ್ತಿದೆ. ಸಂವಿಧಾನದ ಮೌಲ್ಯಗಳಾದ ಸ್ವಾತಂತ್ರ್ಯ, ನ್ಯಾಯ, ಸಮಾನತೆ, ಭಾತೃತ್ವವನ್ನು ಎತ್ತಿ ಹಿಡಿದು ಒಗ್ಗಟ್ಟಿನಿಂದ ದ್ವೇಷ ಭಾವನೆಯ ವಿಸ್ತರಣೆಯನ್ನು ತಡೆಯಬೇಕಾಗಿದೆ ಎಂದು ದೆಹಲಿ ವಿಶ್ವ ವಿದ್ಯಾನಿಲಯದ  ಪ್ರೊ.  ಅಪೂರ್ವನಂದ ತಿಳಿಸಿದ್ದಾರೆ.

ನಗರದ ಬಲ್ಮಠದ ಬಿಷಪ್ ಜತ್ತನ್ನ ಸಭಾಂಗಣದಲ್ಲಿಂದು ಅವರು ಸಮದರ್ಶಿ ವೇದಿಕೆ, ಹೊಸತು ಪತ್ರಿಕೆ ಮತ್ತು ಎಂ.ಎಸ್.ಕೃಷ್ಣನ್ ಸ್ಮಾರಕ ಟ್ರಸ್ಟ್ ಸಹಯೋಗದೊಂದಿ ಹಮ್ಮಿಕೊಂಡಿದ್ದ ಬಿ.ವಿ.ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ದಲ್ಲಿಂದು  ವಿವರಿಸಿದ್ದಾರೆ.

ಮನುಷ್ಯನ ಮನಶಾಸ್ತ್ರದ ಪ್ರಕಾರ ಆತನಲ್ಲಿ ಹುದಗಿರುವ, ಭಯ, ಆತಂಕ, ಖಿನ್ನತೆ ಸೇರಿದಂತೆ ಆತನ ಮಾನಸಿಕ ದೌರ್ಬಲ್ಯವನ್ನು ಎದುರಿಸಲು ಇನ್ನೊಬ್ಬರನ್ನು ದ್ವೇಷಿಸಲು ಆರಂಭಿಸುತ್ತಾನೆ. ದ್ವೇಷ ಸಹಜವಾಗಿ ಬಂದಿರುವ ಗುಣವಲ್ಲ. ದ್ವೇಷ ಮನುಷ್ಯನೊಳಗಿನ ನ್ಯೂನತೆಯಿಂದ ಉತ್ಪಾದನೆಯಾಗಿದೆ. ದ್ವೇಷ ಹುಟ್ಟು ಹಾಕುವ ವ್ಯಕ್ತಿ, ಸಂಘಟನೆಗಳಿಂದ  ಸಮಾಜಕ್ಕೆ ಸಾಕಷ್ಟು ಹಾನಿಯಾಗುತ್ತಿದೆ. ದೇಶದಲ್ಲಿ ಇಂತಹ ಸಾಕಷ್ಟು ಘಟನೆಗಳನ್ನು ನಾವು ಕಾಣಬಹುದಾಗಿದೆ. ದೆಹಲಿಯ ಜೆ.ಎನ್ ವಿ.ವಿ.ಯಲ್ಲಿ  ಕನ್ನಯ್ಯ ಪ್ರಕರಣದ ಘಟನೆ ಯನ್ನು ದ್ವೇಷ ಭಾವನೆಯಿಂದ ಸೃಷ್ಟಿ ಸಲಾಯಿತು. ಅದನ್ನು ಪೂರ್ವಯೋಜಿತವಾಗಿ ದೇಶಾದ್ಯಂತ  ನಿರ್ದಿಷ್ಟ ಚಾನೆಲ್ ಒಂದರ  ಮೂಲಕ ಪಸರಿಸುವಂತೆ ಮಾಡಲಾಯಿತು. ಲವ್ ಜಿಹಾದ್ ಪ್ರಚಾರ ಗುಜರಾತ್ ಮೂಲಕ ಆರಂಭಗೊಂಡು, ಕೇರಳ ಬಳಿಕ ಕರ್ನಾಟಕ ನಂತರ ಉತ್ತರ ಪ್ರದೇಶಕ್ಕೆ ವಿಸ್ತರಿಸಿತು. ಕೆಲವು ರಾಜ್ಯಗಳಲ್ಲಿ ಇದರ ವಿರುದ್ಧ ಕಾನೂನು ಮಾಡಲಾಗಿದೆ. ಬಾಲಿವುಡ್ ಸಿನಿಮಾ ಗಳಲ್ಲಿ ಖ್ಯಾತಿ ಪಡೆದ ಶಾರುಖ್ ಖಾನ್, ಆಮಿರ್ ಖಾನ್ ಅವರ ವಿರುದ್ಧ ದ್ವೇಷ ವನ್ನು ಬಿತ್ತಿ ಅವರ ಚಲನ ಚಿತ್ರ ವನ್ನು ಬಹಿಷ್ಕಾರ ಮಾಡುವ ಯತ್ನ ನಡೆದಿದೆ. ಇವೆಲ್ಲವೂ ದ್ವೇಷ ಭಾವನೆ ಗಳ ಮೂಲಕ  ಹುಟ್ಟಿ ಕೊಂಡ ಘಟನೆಗಳು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದಂತೆ ಈ ದೇಶದ ಸಂಪತ್ತು ಮೊದಲು ಪ.ಪಂಗಡ, ಪ ಪ.ಜಾತಿ, ಅಲ್ಪ ಸಂಖ್ಯಾತರು,  ದಲಿತರು, ಹಿಂದುಳಿದವರ ಏಳಿಗೆಗೆ ಬಳಕೆಯಾಗಬೇಕು ಎಂದಿದ್ದರು. ಇದರ ಅರ್ಥ ದೇಶದ ಸಂಪತ್ತು ಮೊದಲು ಯಾರು ಹಿಂದುಳಿದವರು ಇದ್ದಾರೋ ಅವರ ಅಭಿವೃದ್ಧಿಗೆ ಬಳಕೆಯಾಗಬೇಕು ಎನ್ನುವ ಆಶಯವನ್ನು ಹೊಂದಿದೆ. ದ್ವೇಷ ಭಾವನೆಯಿಂದ ನೋಡಿದರೆ  ಸಂವಿಧಾನದ ಸಮಾನತೆಯ ಆಶಯ ಈಡೇರಲು ಸಾಧ್ಯವಿಲ್ಲ. ದೇಶದಲ್ಲಿ ದ್ವೇಷ ಭಾವನೆ  ಹಿಂದೂ, ಮುಸಲ್ಮಾನರು, ಕ್ರೈಸ್ತರ ನಡುವೆ ಹುಟ್ಟಿಸಿರುವುದು ಪರಸ್ಪರ ಘರ್ಷಣೆಗೆ ಕಾರಣವಾಗುವಂತಹ ಘಟನೆಗಳು ಮನುಕುಲಕ್ಕೆ ಮಾರಕ. ಅದಕ್ಕಾಗಿ ಚರಿತ್ರೆಯ ಘಟನೆ ಗಳನ್ನು ಶಿವಾಜಿ-ಔರಂಗಜೇಬರ  ವಿಚಾರಗಳನ್ನು ಪ್ರಚಾರ ಮಾಡುವುದು ಶಿಕ್ಷಣ, ವ್ಯಾಪಾರ, ಉದ್ಯಮ ಕ್ಷೇತ್ರದಲ್ಲಿ ಜಿಹಾದ್ ನಡೆಯುತ್ತಿದೆ ಎನ್ನುವ ಅಪಪ್ರಚಾರ ಸಮುದಾಯ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಅಸಮಾನತೆ, ಸಾಮಾಜಿಕ ನ್ಯಾಯ ದಿಂದ ವಂಚತರ ನ್ನಾಗಿಸುವ ಘಟನೆಗಳು ಹೆಚ್ಚು ನಡೆಯು ವಂತಾಗಿದೆ. ಅಲ್ಪಸಂಖ್ಯಾತರು , ದಲಿತರು, ಮಹಿಳೆಯರ ಮೇಲೆ ನಡೆಯುತ್ತಿರುವ  ದ್ವೇಷ, ಅಸಹನೆಯ ಹಿಂದೆ ಅದನ್ನು  ಸೃಷ್ಟಿ ಮಾಡಿರುವವರ ಹಿತಾಸಕ್ತಿ ಗಳು ಅಡಗಿವೆ. ಈ ರೀತಿಯ ದ್ವೇಷ ವನ್ನು ಪ್ರೀತಿಯಿಂದ ಗೆಲ್ಲಬಹುದು ಎಂಬ ಮಾತಿದೆ. ಆದರೆ ವಾಸ್ತವದಲ್ಲಿ ಅದು ಅಷ್ಟು ಸುಲಭವಲ್ಲ. ಇಂತಹ ದ್ವೇಷ ಹರಡುವವರಿಗೆ ಪ್ರೋತ್ಸಾಹ ನೀಡದೆ ಇರುವುದು ಅವರನ್ನು ನಿರ್ಲಕ್ಷಿಸುವುದರಿಂದ ಸಮಾಜಕ್ಕೆ ಒಳಿತಾಗಬಹುದು. ಸಂವಿಧಾನದ ಮುನ್ನುಡಿಯಲ್ಲಿ ಹೇಳಿರುವ ಮೌಲ್ಯಗಳು ಈ ನಿಟ್ಟಿನಲ್ಲಿ ನಮಗೆ ದಾರಿ ದೀಪ ವಾಗಬಹುದು ಎಂದು ಅಪೂರ್ವನಂದ ತಿಳಿಸಿದರು.

ದಿ.ಬಿ.ವಿ.ಕಕ್ಕಿಲಾಯರು ಜನಸಾಮಾನ್ಯರು, ಕಾರ್ಮಿಕರ ಜೊತೆ ಸ್ಪಂದಿಸಿರುವ ರೀತಿ ನಮಗೆ ಮಾದರಿಯಾಗಿದೆ ಎಂದರು.

ಸಮಾರಂಭದಲ್ಲಿ ಡಾ. ಶ್ರೀನಿವಾಸ ಕಕ್ಕಿಲಾಯ ಸ್ವಾಗತಿಸಿದರು. ಡಾ.ಬಾಲ ಸರಸ್ವತಿ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ನಾಗೇಶ್ ಕಲ್ಲೂರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News