BMTC ಚಾಲಕ ಆತ್ಮಹತ್ಯೆ: ನ್ಯಾಯಕ್ಕೆ ಆಗ್ರಹಿಸಿ ಡಿಪೋ ಬಳಿ ಮೃತದೇಹವಿಟ್ಟು ಆಪ್ ನಿಂದ ಅಹೋರಾತ್ರಿ ಧರಣಿ

Update: 2022-08-30 15:04 GMT

ಬೆಂಗಳೂರು, ಆ.30: ಬಿಎಂಟಿಸಿ ನೌಕರ ಹೊಳೆಬಸಪ್ಪ ಆತ್ಮಹತ್ಯೆಯನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ ನೂರಾರು ಜನ ಕಾರ್ಯಕರ್ತರು ಎಎಪಿ ಮುಖಂಡ ಮೋಹನ್ ದಾಸರಿ ನೇತೃತ್ವದಲ್ಲಿ ಮಂಗಳವಾರ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ. 

ರಾಜರಾಜೇಶ್ವರಿನಗರದ ಚನ್ನಸಂದ್ರ ಡಿಪೋ ಬಳಿ ಪಾರ್ಥೀವ ಶರೀರವನ್ನು ಇಟ್ಟುಕೊಂಡು ಆಮ್ ಆದ್ಮಿ ಪಕ್ಷದಿಂದ ಡಿಪೋ ಮ್ಯಾನೇಜರ್ ಅಮಾನತು ಮಾಡಬೇಕು. ಸಾರಿಗೆ ಸಚಿವ ಶ್ರೀರಾಮುಲು ಸ್ಥಳಕ್ಕೆ ಆಗಮಿಸಬೇಕು ಹಾಗೂ ಸರಕಾರ ತಕ್ಷಣವೇ ಐವತ್ತು ಲಕ್ಷ ರೂ.ಗಳ ಪರಿಹಾರ ಧನವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಬಸ್ ಘಟಕದ ವ್ಯವಸ್ಥಾಪಕನ ಕಿರುಕುಳ ಆರೋಪ: ಡಿಪೋ ಆವರಣದಲ್ಲೇ BMTC ಚಾಲಕ ಆತ್ಮಹತ್ಯೆ

ಕೇವಲ 24 ಗಂಟೆಗಳಲ್ಲಿ ಜಿಗಣಿ, ಬನಶಂಕರಿ ಹಾಗೂ ಚನ್ನಸಂದ್ರ ಡಿಪೋಗಳ ಮೂವರು ಸಾರಿಗೆ ನೌಕರರು ಆತ್ಮಹತ್ಯೆಗೆ ಶರಣಾಗಿರುವುದು ಭಾರಿ ದುರಂತವಾಗಿದೆ. ಸರಕಾರ ಇಷ್ಟೆಲ್ಲಾ ಅನಾಹುತಗಳ ಆಗುತ್ತಿದ್ದರೂ, ಕಣ್ಣು ಕಿವಿ ಕೇಳಿಸದಂತೆ ಮೂಕ ಪ್ರೇಕ್ಷಕನಾಗಿರುವುದು ದುರದೃಷ್ಟಕರ ಎಂದು ಪ್ರತಿಭಟನಾಕಾರರು ತಿಳಿಸಿದರು. 

ಆತ್ಮಹತ್ಯೆಗೆ ಕಾರಣರಾದ ಡಿಪೋ ಮ್ಯಾನೇಜರ್ ಬಂಧಿಸಿ, ಅಮಾನತುಗೊಳಿಸಬೇಕು. ಮೃತನ ಕುಟುಂಬಕ್ಕೆ 50ಲಕ್ಷ ರೂ. ಪರಿಹಾರವನ್ನು ಸ್ಥಳದಲ್ಲೇ ಘೋಷಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. 

ಸಾರಿಗೆ ಇಲಾಖೆ ನೌಕರರಿಗೆ ನಿರಂತರ ಕಿರುಕುಳ, ಲಂಚಕೋರತನ ಇವುಗಳೆಲ್ಲವೂ ಶಾಶ್ವತವಾಗಿ ಪರಿಹಾರವಾಗಬೇಕು. ಸಾರಿಗೆ ನೌಕರರ ವಿರುದ್ಧ ಸರಕಾರದ ದ್ವೇಷ ನೀತಿಯನ್ನು ಪ್ರತಿಭಟನಾಕಾರರು ಖಂಡಿಸಿದರು.

ಪ್ರತಿಭಟನೆಯಲ್ಲಿ ಮುಖಂಡ ಚನ್ನಪ್ಪಗೌಡ ನಲ್ಲೂರು, ಸುರೇಶ್ ರಾಥೋಡ್, ನಂಜಪ್ಪ ಕಾಳೇಗೌಡ, ಶ್ಯಾಮಸುಂದರ್ ಮನಂ ಶಶಿಧರ ಆರಾಧ್ಯ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News