ಓ ಮೆಣಸೇ...

Update: 2022-09-04 18:42 GMT

ಪ್ರಧಾನಿ ಮೋದಿ ಆಡುವ ಮಾತಿಗೂ, ಮಾಡುವ ವೃತ್ತಿಗೂ ಒಂದಕ್ಕೊಂದು ಸಂಬಂಧವಿಲ್ಲ - ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಸಂಬಂಧವಿಲ್ಲ ಎನ್ನುವುದು ತಪ್ಪು. ಅವರು ಎಲ್ಲ ವಿಷಯಗಳಲ್ಲೂ ತಾನು ಹೇಳಿದ್ದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಇದನ್ನು ವಿರೋಧಾಭಾಸದ ಸಂಬಂಧವೆನ್ನುತ್ತಾರೆ.

ಯುವಜನತೆ ಮಾತೃ ಭಾಷೆಯಲ್ಲಿ ಓದುವುದು, ಬರೆಯುವುದು, ಮಾತನಾಡುವ ಮೂಲಕ ಭಾಷೆಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಕೈಜೋಡಿಸಬೇಕು-ಅಮಿತ್ ಶಾ, ಕೇಂದ್ರ ಸಚಿವ
ಈ ಮಧ್ಯೆ ನೀವು ಸ್ವಲ್ಪ ಪುರುಸೊತ್ತು ಮಾಡಿಕೊಂಡು ಮಾನವೀಯ ಭಾಷೆ ಮಾತನಾಡಲು ಕಲಿಯಬಹುದಲ್ಲಾ!

ಅಪೌಷ್ಟಿಕತೆ ನಿವಾರಣೆಗೆ ಜನರ ಸಾಮೂಹಿಕ ಹೋರಾಟದ ಅಗತ್ಯವಿದೆ- ನರೇಂದ್ರ ಮೋದಿ, ಪ್ರಧಾನಿ
ಜನರನ್ನು ಪರಸ್ಪರರ ವಿರುದ್ಧ ಹೋರಾಟಕ್ಕಿಳಿಸುವುದೇ ಎಲ್ಲ ಸಮಸ್ಯೆಗಳಿಗೆ ಇರುವ ಪರಿಹಾರ ಎಂಬ ನಿಮ್ಮ ಹಳೆಯ ನಂಬಿಕೆ ಇನ್ನೂ ಬದಲಾಗಿಲ್ಲವೇ?

ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್‌ಗಾಂಧಿಗೆ ಸರಿಸಮನಾದ ನಾಯಕರು ಯಾರೂ ಇಲ್ಲ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
ಈ ಮಟ್ಟದ ದಾರಿದ್ರ್ಯಕ್ಕೆ ಪರಿಹಾರವಿಲ್ಲವೇ?

ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಆಂತರಿಕ ಪ್ರಜಾಪ್ರಭುತ್ವ ಇದೆ - ಜೈರಾಮ್ ರಮೇಶ್, ಕಾಂಗ್ರೆಸ್ ಪ್ರ.ಕಾರ್ಯದರ್ಶಿ
ಪ್ರಜೆಗಳು ತುಂಬಾ ಕಡಿಮೆ ಇದ್ದಾಗ ಪ್ರಜಾಪ್ರಭುತ್ವ ಇರುತ್ತದೆ.

ಮುರುಘಾ ಮಠದ ಸ್ವಾಮೀಜಿಗಳ ವಿರುದ್ಧದ ಸುದ್ದಿ ಸುಳ್ಳಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆೆ- ಈಶ್ವರಪ್ಪ, ಶಾಸಕ
40 ಪರ್ಸೆಂಟಿಗೆ ಸಂಬಂಧಿಸಿದ ಪ್ರಾರ್ಥನೆಗಳ ಫಲಿತಾಂಶ ಬಂತೇ?

ಕಾಂಗ್ರೆಸ್ ಮುಖಂಡರೇ ಗಾಂಧಿ ಕುಟುಂಬವನ್ನು ಟೀಕಿಸಲು ಆರಂಭಿಸಿದ್ದಾರೆ - ಸ್ಮತಿ ಇರಾನಿ, ಕೇಂದ್ರ ಸಚಿವೆ
ಮರ್ಯಾದಸ್ಥರನ್ನು ಮರ್ಯಾದಸ್ಥರು ಟೀಕಿಸುವುದುಂಟು.

ತುಮಕೂರು ವಿವಿಯಲ್ಲಿ ಸಾವರ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ಅಗತ್ಯವಾದ ಎಲ್ಲ ನೆರವನ್ನು ಸರಕಾರದಿಂದ ನೀಡಲಾಗುವುದು-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಪಕ್ಕದಲ್ಲೇ ಗೋಡ್ಸೆ, ವೀರಪ್ಪನ್ ಮುಂತಾದವರ ಹೆಸರಲ್ಲೂ ಪೀಠ ಸ್ಥಾಪನೆ ಮಾಡುವ ಯೋಜನೆ ಇದೆಯಂತೆ?

ನಾವು ಸಾಬರು, ನಾವು ಹೇಳುವ ಜೋತಿಷ್ಯ ಎಂದೂ ಸುಳ್ಳಾಗುವುದಿಲ್ಲ - ಸಿ.ಎಂ.ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
ನೀವು ಶೀಘ್ರವೇ ಜೆಡಿಎಸ್ ಬಿಡ್ತೀರಿ ಎಂದು ಕೆಲವು ಸಾಬರುಗಳು ಹೇಳುತ್ತಿದ್ದಾರಲ್ಲ!

ಅನಾರೋಗ್ಯ ಪೀಡಿತ ಕಾಂಗ್ರೆಸ್, ವೈದ್ಯರಿಂದ ಔಷಧ ಪಡೆದುಕೊಳ್ಳುವ ಬದಲು ಕಂಪೌಂಡರ್‌ಗಳಿಂದ ಔಷಧ ಪಡೆದುಕೊಳ್ಳುತ್ತಿದೆ - ಗುಲಾಂ ನಬಿ ಆಝಾದ್, ಕಾಂಗ್ರೆಸ್‌ನ ಮಾಜಿ ನಾಯಕ
ನಿಮ್ಮ ನಿರ್ಗಮನದೊಂದಿಗೆ ಆ ಪಕ್ಷವು ಒಂದು ದೊಡ್ಡ ಅನಾರೋಗ್ಯದಿಂದ ಮುಕ್ತವಾಗಿದೆ.

ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆಧಾರ ರಹಿತ ಆರೋಪ ಮಾಡುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ - ಬಿ.ಸಿ.ನಾಗೇಶ್, ಸಚಿವ
ಆಧಾರ ಸಹಿತ ಆರೋಪ ಮಾಡುವವರ ವಿರುದ್ಧ ನಡೆಸಲಾಗುವ ಕ್ರೂರ ಕಾರ್ಯಾಚರಣೆಗಳನ್ನೇಕೆ ಗುಟ್ಟಾಗಿಡುತ್ತೀರಿ?

ಒಂದು ವೇಳೆ ನಾನು ಅಧಿಕಾರದಲ್ಲಿ ಇಲ್ಲದಿರುತ್ತಿದ್ದರೆ ಸುಳ್ಳು ಹೇಳುವವರ ನಾಲಗೆ ಸೀಳುವಂತೆ ನಮ್ಮ ಜನರಿಗೆ ಸೂಚಿಸುತ್ತಿದ್ದೆ - ಮಮತಾ ಬ್ಯಾನರ್ಜಿ, ಪ.ಬಂ. ಸಿಎಂ
ಅಧಿಕಾರ ಗದ್ದುಗೆ ಆ ಮಟ್ಟಿಗೆ ನಿಮ್ಮ ಕೈಕಟ್ಟುವುದಾದರೆ ನಿಮಗೆ ಅಂತಹ ಅಧಿಕಾರ ಯಾಕೆ ತಾನೇ ಬೇಕು?

ಯಾವತ್ತೂ ನದಿಮೂಲ ಹಾಗೂ ಋಷಿಮೂಲವನ್ನು ಕೆದಕಬಾರದು - ಸಿ.ಟಿ.ರವಿ, ಶಾಸಕ
ವಿಷ ಮೂಲ ಹುಡುಕುತ್ತಾ ನಿಮ್ಮಲ್ಲಿಗೆ ತಲುಪುವವರಿಗೆ ನಿಮ್ಮ ಕಿವಿಮಾತೇನು?

ಕೊಡಗಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರದ ಅಗತ್ಯವಿದೆ - ಎಚ್.ವಿಶ್ವನಾಥ್, ವಿ.ಪ.ಸದಸ್ಯ
ಪ್ರತ್ಯೇಕ ರಾಜ್ಯ ಸ್ಥಾನಮಾನ ನೀಡಿಬಿಟ್ಟರೆ ಉಳಿದದ್ದೆಲ್ಲಾ ತನ್ನಿಂತಾನೇ ಬಂದು ಬಿಡುತ್ತೆ.

ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಚುನಾವಣೆಗೆ ಸ್ಪರ್ಧಿಸಲು ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು - ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಪ್ರ.ಕಾರ್ಯದರ್ಶಿ
ಅರ್ಜಿ ಸಲ್ಲಿಸುವವರಿಗೆ ಇಂತಿಷ್ಟು ಅಂತ ಬಹುಮಾನ ಘೋಷಿಸಿ ನೋಡಿ. ಏನಾದರೂ ಪ್ರತಿಕ್ರಿಯೆ ಬಂದೀತು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ವರ್ತಮಾನ ಹಾಗೂ ಭವಿಷ್ಯವನ್ನು ಉಜ್ವಲ ಮತ್ತು ಸುರಕ್ಷಿತಗೊಳಿಸಲಿದೆ- ಥಾವರ್ ಚಂದ್ ಗೆಹ್ಲೋಟ್, ರಾಜ್ಯಪಾಲ
ಅದು ಗತಕಾಲದ ಎಲ್ಲ ಕರಾಳತೆಗಳನ್ನು ವೈಭವೀಕರಿಸಿರುವುದಂತೂ ನಿಜ.

ಸರಕಾರದ ಮೇಲೆ ಶೇ.40 ಕಮಿಷನ್ ಆರೋಪ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ - ಭೈರತಿ ಬಸವರಾಜ್, ಸಚಿವ
ಲಜ್ಜೆಯೇ ಇಲ್ಲದವರು ಕೇವಲ ಆರೋಪಗಳಿಗೆಲ್ಲಿ ಬಗ್ಗುತ್ತಾರೆ?

ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ರಿಗೆ ಅಧಿಕಾರದ ಮದ ತಲೆಗೆ ಹತ್ತಿದೆ - ಅಣ್ಣಾ ಹಝಾರೆ, ಸಾಮಾಜಿಕ ಹೋರಾಟಗಾರ
ಕೇಂದ್ರ ಸರಕಾರದ ಎಲ್ಲ ಭ್ರಷ್ಟತೆ ಮತ್ತು ವೈಫಲ್ಯಗಳ ಪಾಲಿಗೆ ಇಷ್ಟೊಂದು ಕುರುಡರಾಗಿರುವ ನಿಮ್ಮ ತಲೆಗೆ ಏನು ಹತ್ತಿದೆ?

Writer - ಪಿ.ಎ. ರೈ

contributor

Editor - ಪಿ.ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!