ಓ ಮೆಣಸೇ...!

Update: 2022-10-09 19:30 GMT

ಗಾಂಧಿ ಚಿಂತನೆಗಳೇ ನಮಗೆ ದಾರಿದೀಪ

-ಬಸವರಾಜ ಬೊಮ್ಮಾಯಿ, ಸಿಎಂ

ಇದೇನು ನಿಮ್ಮ ಪಾಪಗಳ ಮೂಟೆಯನ್ನು ತಾತನ ತಲೆಗೆ ಕಟ್ಟುವ ದುಷ್ಟ ಹುನ್ನಾರವೇ?

-------------------------------

ಪಾಕಿಸ್ತಾನ ಮತ್ತು ಭಾರತವನ್ನು ಒಂದು ಮಾಡುವ ಮೂಲಕ ಅಖಂಡ ಭಾರತವನ್ನು ಮಾಡಿಯೇ ತೀರುತ್ತೇವೆ -ಈಶ್ವರಪ್ಪ, ಶಾಸಕ

ಈ ರೀತಿ ಪದೇ ಪದೇ ಪಾಕಿಸ್ತಾನದ ಬಗ್ಗೆ ಚಿಂತಿಸಿ ದೇಶದ್ರೋಹಿ ಅನಿಸಿಕೊಳ್ಳುವ ಅಗತ್ಯ ಈ ವಯಸ್ಸಿನಲ್ಲಿ ನಿಮಗೇಕೆ ಬಂತು?

-------------------------------

ಭಾರತವನ್ನು ನಿಜವಾಗಿಯೂ ತುಂಡು ಮಾಡಿದ್ದು ಯಾರು ಎಂದು ಚರಿತ್ರೆ ನೋಡಿದರೆ ಗೊತ್ತಾಗುತ್ತದೆ -ಎಸ್.ಅಂಗಾರ, ಸಚಿವ

ಮಾಡುತ್ತಿರುವುದು ಯಾರು ಎಂಬುದನ್ನು ತಿಳಿಯಲು ಕಣ್ಣುತೆರೆದು ನೋಡಿದರೆ ಸಾಕಾಗುತ್ತದೆ.

-------------------------------

ಸರಕಾರದ ಅಡಿಕೆ ಆಮದು ನಿಲುವಿನಲ್ಲಿ ಊಹಾ ಪೋಹಗಳಿಗೆ ಯಾರೂ ತಲೆಕಡಿಸಿಕೊಳ್ಳಬಾರದು -ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಸಭಾಧ್ಯಕ್ಷ

ಯಾರಿಂದಲೋ ಲಂಚ ಪಡೆದು ನಾಡಿನ ಕೃಷಿಕರ ಎದೆಗೆ ಇರಿದ ವಿಷಯದಲ್ಲಿ ಜನರಿಗೆ ಇರುವ ಖಚಿತ ಮಾಹಿತಿಯನ್ನು ಊಹಾಪೋಹಗಳೆಂದು ಕರೆದು ಲೇವಡಿ ಮಾಡಬೇಡಿ.

-------------------------------

ನೆಹರೂ ಕಾಲದಿಂದಲೂ ಕಾಂಗ್ರೆಸ್‌ಗೆ ತುಷ್ಟೀಕರಣದ ರಾಜಕಾರಣ ರೂಢಿ ಆಗಿ ಬಿಟ್ಟಿದೆ -ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ

ಕಾಂಗ್ರೆಸ್‌ನಲ್ಲಿ ತಿಲಕ್ ಕಾಲದಿಂದಲೇ ಅಸಹ್ಯ ಪ್ರಮಾಣದ ಬ್ರಾಹ್ಮಣ ತುಷ್ಟೀಕರಣ ನಡೆಯುತ್ತಿದೆ.

-------------------------------

ಡಿ.ಕೆ.ಶಿವಕುಮಾರ್ ನಟನಾಗಿದ್ದರೆ ಅವರು ಆಸ್ಕರ್ ಪ್ರಶಸ್ತಿ ಪಡೆಯಬಹುದಿತ್ತು -ಸಿ.ಟಿ.ರವಿ, ಶಾಸಕ

ಅದು ಸಿಗಲಿ ಸಿಗದಿರಲಿ, ನಿಮಗಂತೂ ಜೋಕರ್ ಪ್ರಶಸ್ತಿ ಖಚಿತ.

-------------------------------

‘ಭಾರತ ಜೋಡೊ ಯಾತ್ರೆ’ ನಿಜಕ್ಕೂ ಕುತೂಹಲ ಮೂಡಿಸಿದೆ. ಯಾರ ಭಾರತ? ಯಾರು ಜೋಡಿಸುವುದು? ಅದು ಕಡಿದು ಹೋಗಿದೆಯೆ? -ಸಿ.ಎಂ.ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ

 ಗೌಡರ ಕುಟುಂಬದ ಆಚೆಗೂ ಒಂದು ಭಾರತ ಇದೆ. ತುಂಬಾ ದೊಡ್ಡ ಭಾರತ. ಆ ನಿಮ್ಮ ಹಳೆಯ ಕಪ್ಪು ಕನ್ನಡಕವನ್ನು ಬದಿಗಿಟ್ಟು ಕಣ್ಣು ತೆರೆದು ನೋಡಿ.

-------------------------------

 ಸ್ವಾತಂತ್ರದ 75 ವರ್ಷಗಳ ಬಳಿಕವೂ ಕೆಲವು ಕಡೆ ಅಸ್ಪಶ್ಯತೆ ಕಂಡು ಬರುತ್ತಿರುವುದು ವಿಪರ್ಯಾಸ -ಕೋಟ ಶ್ರೀನಿವಾಸ ಪೂಜಾರಿ, ಸಚಿವ

 ಉಳಿದೆಡೆಗಳಲ್ಲಿ ನೀವು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ತಿರುಗಾಡಿದಂತಿದೆಯಲ್ಲ!

-------------------------------

  ಯಾವ ಶಿಕ್ಷಣವು ವ್ಯಕ್ತಿತ್ವವನ್ನು ರೂಪಿಸುವುದಿಲ್ಲವೋ ಅದು ಶಿಕ್ಷಣವೇ ಅಲ್ಲ -ಸುನೀಲ್ ಕುಮಾರ್, ಸಚಿವ

 ಗಲಭೆಕೋರರನ್ನು ಮತ್ತು ಜಾತಿವಾದಿಗಳನ್ನು ರೂಪಿಸುವ ನಿಮ್ಮ ನೆಚ್ಚಿನ ಶಿಕ್ಷಣ ಕೂಡಾ ಅಷ್ಟೇ ಅಪಾಯಕಾರಿ

-------------------------------

ಪ್ರಧಾನಿ ಮೋದಿಗೆ ಇಲ್ಲಿಯವರೆಗೆ ಎಲ್ಲಿಯೂ ಪ್ರೀತಿ ಸಿಕ್ಕಿಲ್ಲ, ಹೀಗಾಗಿ ಈಗ ಎಲ್ಲರನ್ನೂ ದ್ವೇಷಿಸುತ್ತಿದ್ದಾರೆ -ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ

 ಭಾರತೀಯರ ಪ್ರೀತಿ ಸಿಗುವ ಸಾಧ್ಯತೆ ಇನ್ನಿಲ್ಲವೆಂದು ಖಚಿತವಾದ ಮೇಲೆ ಅವರು ಪ್ರೀತಿ ಪಡೆಯಲಿಕ್ಕೆಂದೇ ತುಂಬಾ ದೂರದ ದೇಶಗಳಿಂದ ಮುದ್ದಾದ ಮುಗ್ಧ ಚುಕ್ಕೆ ಬೆಕ್ಕುಗಳನ್ನು ಆಮದು ಮಾಡಿಕೊಂಡಿದ್ದಾರಂತೆ?

-------------------------------

ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗೆ ಪ್ರತೀ ಬಾರಿಯೂ ಸಿಎಂ ಮನೆ ಬಾಗಿಲು ಕಾಯುವ ಅಧ್ಯಕ್ಷ ನಾನಲ್ಲ -ಮಹೇಶ್ ಜೋಶಿ, ಕಸಾಪ ಅಧ್ಯಕ್ಷ

 ಅದು ಭಟ್ಟರ ಮನೆಬಾಗಿಲಾಗಿದ್ದರೆ ವಿಷಯ ಬೇರೆಯೇ ಇರುತ್ತಿತ್ತು.

-------------------------------

ದುಬಾರಿಯಾಗಿರುವುದರಿಂದ ನನ್ನಂಥವರಿಗೂ ಮರ್ಸಿಡಿಸ್ ಕಾರು ಖರೀದಿಸುವುದು ಕಷ್ಟ -ನಿತಿನ್ ಗಡ್ಕರಿ, ಕೇಂದ್ರ ಸಚಿವ

 ಹಾಗೆಲ್ಲ ಸುತ್ತಿ ಬಳಸಿ ಹೇಳಿದರೇನು ಲಾಭ? ಮೋದಿಯನ್ನು ಒದ್ದು ಮನೆಗೆ ಕಳುಹಿಸಬೇಕೆಂದು ಸ್ಪಷ್ಟವಾಗಿ ಹೇಳಿ.

-------------------------------

ನನಗೆ ಕೆಲಸ ಮಾಡುವುದು ಮಾತ್ರ ಗೊತ್ತಿದೆ. ಕೆಲಸ ಮಾಡಲು ನನಗೊಂದು ಅವಕಾಶ ಕೊಡಿ -ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ

 ಮುಂದಿನ ನಿಮ್ಮ ಹುದ್ದೆ ಭಟ್ಟಂಗಿತನದಲ್ಲಿ ನಿಮ್ಮ ಪ್ರಾವೀಣ್ಯ ಎಷ್ಟೆಂಬುದನ್ನು ಅವಲಂಬಿಸಿದೆ.

-------------------------------

 ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳ ಮಾಲಕರಿಗೆ ಪರಿಹಾರ ನೀಡಲು 2 ಕೋಟಿ ರೂ. ಬಿಡುಗಡೆ ಮಾಡಲಾಗಿದೆ -ಪ್ರಭು ಚವ್ಹಾಣ್, ಸಚಿವ

 ಆ ರೋಗದಿಂದಾಗಿ ಸಮಾಜಕ್ಕೇನಾದರೂ ಗುಣ ಉಂಟೆ ಎಂಬ ಕುರಿತು ಸಂಶೋಧನೆ ನಡೆಸಲು ಒಂದಿನ್ನೂರು ಕೋಟಿಯನ್ನಾದರೂ ಬಿಡುಗಡೆ ಮಾಡಿದ್ದರೆ...!

-------------------------------

 ಕಾಂಗ್ರೆಸ್ ನಾಯಕರ ಬಾಯಲ್ಲಿ ಭ್ರಷ್ಟಾಚಾರದ ಮಾತು ಕೇಳುವುದೇ ಹಾಸ್ಯಾಸ್ಪದ -ಬಿ.ವೈ.ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ

 ನಿಮ್ಮ ಭ್ರಷ್ಟತೆಯ ಗಾತ್ರಕ್ಕೆ ಹೋಲಿಸಿದರೆ ಅವರದ್ದು ಅಷ್ಟು ಕ್ಷುಲ್ಲಕವೇ?

-------------------------------

ಮಲ್ಲಿಕಾರ್ಜುನ ಖರ್ಗೆಯವರಂತಹ ನಾಯಕರಿಂದ ಕಾಂಗ್ರೆಸ್‌ನಲ್ಲಿ ಬದಲಾವಣೆ ಸಾಧ್ಯವಿಲ್ಲ -ಶಶಿ ತರೂರು, ಸಂಸದ

 ಹೌದು. ನಿಮ್ಮ ಮಟ್ಟದ ದೈತ್ಯರನ್ನು ಶಿಸ್ತಿಗೊಳಪಡಿಸಲು ಖರ್ಗೆ ಸಾಲದು.

-------------------------------

 ನನಗೆ ಹಾಲಿವುಡ್ ಅಲ್ಲ, ದಕ್ಷಿಣ ಭಾರತದ ಚಿತ್ರರಂಗ ಪ್ರವೇಶಿಸುವ ಆಸೆ -ಸಲ್ಮಾನ್ ಖಾನ್, ನಟ

ಮೂರು ದಶಕಗಳ ಮುನ್ನ ಟ್ರೈ ಮಾಡಿದ್ದರೆ ಚಾನ್ಸ್ ಇತ್ತು. ಇಲ್ಲಿ ಸಾಕಷ್ಟು ದೃಢ ಯುವಕರಿದ್ದಾರೆ. ನೀವಿನ್ನು ದಕ್ಷಿಣ ಭಾರತದ ಚಿತ್ರರಂಗಕ್ಕಾಗಿ ನಿಮ್ಮ ಮಕ್ಕಳನ್ನು ತಯಾರು ಮಾಡಿ.

-------------------------------

 ಭೂತಾನ್‌ನಿಂದ ಅಡಿಕೆ ಆಮದು ಮಾಡಿಕೊಳ್ಳುವುದರಿಂದ ದೇಶೀಯ ಅಡಿಕೆ ಮಾರುಕಟ್ಟೆಯ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಆಗುವುದಿಲ್ಲ -ಆರಗ ಜ್ಞಾನೇಂದ್ರ, ಸಚಿವ

 ನಿಮ್ಮ ಸರಕಾರವನ್ನು ಕಿತ್ತೊಗೆದು ಬೇರೊಂದು ಸರಕಾರವನ್ನು ತಂದರೂ ಅಷ್ಟೇ. ಎಲ್ಲ ಪರಿಣಾಮಗಳೂ ಅನುಕೂಲಕರವಾಗಿಯೇ ಇರುತ್ತವೆ.

-------------------------------

 ಹಳೆಯದಾದ ಕಟ್ಟಡಗಳಿಗೆ 50 ವರ್ಷವಾದರೂ ಮಾರುಕಟ್ಟೆ ವೌಲ್ಯ ಲೆಕ್ಕ ಹಾಕುತ್ತಾ ಕೂರುವುದು ಸರಿಯಲ್ಲ -ಆರ್.ಅಶೋಕ್, ಸಚಿವ

 ನೂರು ವರ್ಷ ಹಳೆಯ ಸಂಘವನ್ನು ಗುಜರಿಗೆ ಕೊಡುತ್ತೀರಾ?

-------------------------------

ಕಾಂಗ್ರೆಸ್ ಈ ದೇಶಕ್ಕೆ ದೊಡ್ಡ ಶಾಪ, ಅದನ್ನು ನಿಷೇಧಿಸಬೇಕು -ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ

ಶಾಪಗಳನ್ನೆಲ್ಲ ನಿಷೇಧಿಸಲು ಹೊರಟರೆ ನಿಮ್ಮನ್ನೇನು ಮಾಡಬೇಕಂತೀರಿ?

-------------------------------

ಭಾರತದಲ್ಲಿ ಸರ್ವರಿಗೂ ಅನ್ವಯವಾಗುವ ಜನಸಂಖ್ಯೆ ನಿಯಂತ್ರಣ ನೀತಿಯ ತುರ್ತು ಅಗತ್ಯವಿದೆ -ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

ಸದ್ಯ ದ್ವೇಷ ಹಬ್ಬುವವರನ್ನು ಮತ್ತವರ ಬೆಂಬಲಿಗರನ್ನು ನಿಯಂತ್ರಿಸಿಟ್ಟರೂ ಸಮಾಜ ಸ್ವಸ್ಥವಾಗಿರುತ್ತದೆ.

-------------------------------

 ನರೇಂದ್ರ ಮೋದಿ ಸರಕಾರವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ -ಅಮಿತ್ ಶಾ, ಕೇಂದ್ರ ಸಚಿವ

 ಆ ಹೆಸರನ್ನು ಬಳಸದೆ ಎಷ್ಟು ನರ ಸಂಹಾರ ನಡೆಸಿದರೂ ಪರವಾಗಿಲ್ಲ ಅಲ್ವೇ ಸಾರ್?

-------------------------------

ಸಂಸ್ಕೃತದಲ್ಲಿ ಕ್ರಿಕೆಟ್ ವೀಕ್ಷಕ ವಿವರಣೆಯನ್ನು ನೋಡುವುದು ಹೃದಯ ಸ್ಪರ್ಶಿಯಾಗಿದೆ -ನರೇಂದ್ರ ಮೋದಿ, ಪ್ರಧಾನಿ

ಆಸಾಮಿ, ಏನೂ ಅರ್ಥ ಆಗದೆ ಒಂದು ಗಂಟೆಯಾದರೂ ಗಮ್ಮತ್ತು ಮಲಗಿರಬೇಕು.

-------------------------------

ಆರೆಸ್ಸೆಸ್‌ನ ಸಾಮಾನ್ಯ ಸ್ವಯಂಸೇವಕ ಎಷ್ಟು ಎತ್ತರಕ್ಕೂ ಏರಬಲ್ಲ ಎನ್ನುವುದಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಉದಾಹರಣೆ -ಸಿ.ಟಿ.ರವಿ, ಶಾಸಕ

ಅಷ್ಟೆತ್ತರ ಏರಿದವರನ್ನು ಒಂದು ಕುಖ್ಯಾತ ಸಂಘಟನೆಯ ಜೊತೆ ಜೋಡಿಸಿ ಅಪಮಾನಿಸುವುದೇಕೆ?

-------------------------------

 ಎಣ್ಣೆ (ಸಿದ್ದು) ಮತ್ತು ಸೀಗೆಕಾಯಿ (ಡಿಕೆಶಿ) ಎಂದಾದರೂ ಒಂದಾಗಲು ಸಾಧ್ಯವೇ -ಗೋವಿಂದ ಕಾರಜೋಳ, ಸಚಿವ

ಅವರದು ಎಣ್ಣೆ ಮತ್ತು ಬಾಡು ನಡುವಿನ ಸಂಬಂಧವಂತೆ.

-------------------------------

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಬಂದ ಮಾತ್ರಕ್ಕೆ ಮಂಡ್ಯದ ಜನತೆ ನಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ ಕಡಿಮೆಯಾಗುವುದಿಲ್ಲ -ಕುಮಾರಸ್ವಾಮಿ, ಮಾಜಿ ಸಿಎಂ

 ಬಿಜೆಪಿಗಿಂತ ನೀವೇ ಹೆಚ್ಚು ಕಂಗಾಲಾದಂತಿದೆ.

-------------------------------

ಬಿಜೆಪಿಯನ್ನು ಟೀಕಿಸಲು ಕಾಂಗ್ರೆಸ್‌ಗೆ ನೈತಿಕತೆಯಿಲ್ಲ -ಬಿ.ಬಸವರಾಜ, ಸಚಿವ

 ನೈತಿಕತೆಯನ್ನು ಕೊಂದೇ ಬಿಟ್ಟವರನ್ನು ಟೀಕಿಸುವುದಕ್ಕೂ ನೈತಿಕತೆ ಬೇಕೇ?

Writer - ಪಿ.ಎ. ರೈ

contributor

Editor - ಪಿ.ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!