ಉಳ್ಳಾಲ: ದಂಪತಿ ಮೇಲೆ ಹಲ್ಲೆ ಪ್ರಕರಣ; ಆರೋಪಿ ಶೇಖರ್ ಬಂಧನ
ಉಳ್ಳಾಲ: ಕ್ಷುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ದಂಪತಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶೇಖರ್ ಕನೀರುತೋಟ ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ರವಿವಾರ ರಾತ್ರಿ ವಿಜಯಲಕ್ಷ್ಮಿ ಅವರು ತಮ್ಮ ಮನೆಯ ಸಾಕು ನಾಯಿಗೆ ಅನ್ನ ಹಾಕುತ್ತಿದ್ದ ವೇಳೆ ಮನೆಯಂಗಳದ ಹೊರಗೆ ಸ್ಕೂಟರಲ್ಲಿ ತೆರಳುತ್ತಿದ್ದ ಶೇಖರ್ ವಿನಾ ಕಾರಣ ಹಾರ್ನ್ ಹೊಡೆದಿದ್ದು, ಈ ವಿಚಾರವನ್ನು ವಿಜಯಲಕ್ಷ್ಮಿ ಪ್ರಶ್ನಿಸಿದ್ದರು. ಇದರಿಂದ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು.
ನಂತರ ಶೇಖರ್ ತನ್ನ ಸ್ನೇಹಿತರಾದ ಹರೀಶ್, ನೂತನ್, ಯಶ್ ರಾಜ್ ಎಂಬವರೊಂದಿಗೆ ಸೇರಿ ರವಿವಾರ ರಾತ್ರಿ ವಿಜಯ ಲಕ್ಷ್ಮಿ ಅವರ ಮನೆಗೆ ಅಕ್ರಮ ಪ್ರವೇಶ ಮಾಡಿ ದಂಪತಿಗೆ ಹಲ್ಲೆ ನಡೆಸಿದ್ದರು. ಇದರಿಂದ ಗಾಯಗೊಂಡ ವಿಜಯಲಕ್ಷ್ಮಿ ಅವರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ, ಉಳ್ಳಾಲ ಠಾಣೆಗೆ ದೂರು ನೀಡಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿ ಶೇಖರ್ ಕನೀರುತೋಟನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.