ವಿದ್ಯಾರ್ಥಿನಿ ಮೇಲೆ BMTC ಬಸ್ ಹರಿದ ಪ್ರಕರಣ: ತರಗತಿ ಬಹಿಷ್ಕರಿಸಿ ಧರಣಿ ಮುಂದುವರಿಸಿದ ವಿದ್ಯಾರ್ಥಿಗಳು
ಬೆಂಗಳೂರು, ಅ. 12: ಬೆಂಗಳೂರು ವಿವಿಯ ಜ್ಞಾನಭಾರತಿ ಆವರಣದಲ್ಲಿ ಸರಣಿ ಅಪಘಾತ ಸಂಬವಿಸುತ್ತಿದ್ದು, ವಿವಿ ಆವರಣದಲ್ಲಿ ಸಾರ್ವಜನಿಕ ವಾಹನ ನಿಷೇಧ ಮಾಡುವಂತೆ ಬುಧವಾರ ತರಗತಿಗಳನ್ನು ಬಹಿಷ್ಕರಿಸಿ ರಸ್ತೆ ತಡೆದು ವಿದ್ಯಾರ್ಥಿಗಳು ಧರಣಿ ನಡೆಸಿದರು.
ರಸ್ತೆ ಅಪಘಾತದಿಂದಾಗಿ ಶಿಲ್ಪ ಎಂಬ ವಿದ್ಯಾರ್ಥಿನಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಪಘಾತಕ್ಕೆ ಕಾರಣವಾದ ಬಿಎಂಟಿಸಿ ಡ್ರೈವರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಪಘಾತ ಸಂಭವಿಸಿ ಎರಡು ದಿನಗಳು ಕಳೆದರೂ, ಉನ್ನತ ಶಿಕ್ಷಣ ಸಚಿವರು, ಸಾರಿಗೆ ಸಚಿವರು ವಿದ್ಯಾರ್ಥಿನಿ ದಾಖಲಾಗಿದ್ದ ಆಸ್ವತ್ರೆಗೆ ಬೇಟಿ ನೀಡಿಲ್ಲ. ಸಚಿವರು ಬರುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದರು.
ವಿವಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಮಾಡಬೇಕು. ವಿವಿ ರಸ್ತೆಗಳಲ್ಲಿ ವೈಜ್ಞಾನಿಕವಾಗಿ ಹಂಪ್ ಅಳವಡಿಸಬೇಕು. ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಿ ಉತ್ತಮ ಶೈಕ್ಷಣಿಕ ಪರಿಸರ ರೂಪಿಸಬೇಕು. ವಿವಿ ಆವರಣದೊಳಕ್ಕೆ ಮದ್ಯ ಸೇವಿಸಿ ಬರುವವರ ತಪಾಸಣೆ ನಡೆಸಬೇಕು. ವಿವಿ ಐಡಿ ಕಾರ್ಡ್ ಹೊಂದಿರುವ ವಿವಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಬೇಕು ಎಂದು ಧರಣಿ ನಿರತ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಖಾಸಗಿ ವಾಹನಗಳಿಗೆ ನಿಷೇಧ: ಬೆಂಗಳೂರು ವಿವಿ ಆವರಣದೊಳಗೆ ಖಾಸಗಿ ವಾಹನ ಸಂಚಾರ ನಿಷೇಧ ಮಾಡುವ ವಿಚಾರವಾಗಿ ಬೆಂಗಳೂರು ವಿವಿಯಲ್ಲಿ ಬುಧವಾರ ಸಭೆ ನಡೆದಿದೆ. ಕುಲಪತಿ, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಖಾಸಗಿ ವಾಹನಗಳಿಗೆ ಸಮಯವನ್ನು ನಿಗದಿ ಮಾಡಿದ್ದು, ಬೆಳಿಗ್ಗೆ 6 ರಿಂದ ರಾತ್ರಿ 8ರವರೆಗೆ ಮಾತ್ರ ಖಾಸಗಿ ವಾಹನ ಸಂಚಾರಕ್ಕೆ ಅವಕಾಶ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಆವರಣದಲ್ಲಿರುವ ರಸ್ತೆಗಳಿಗೆ ಹಂಪ್ಸ್ ಗಳನ್ನು ಅಳವಡಿಸಲು ಹಾಗೂ ರಸ್ತೆಗಳಲ್ಲಿ ಸಿಸಿ ಕ್ಯಾಮಾರಗಳನ್ನು ಅಳವಡಿಸಲು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸರಕಾರದ ಅನುಮತಿ ದೊರೆತ ಬಳಿಕ ಕ್ರಮ ವಹಿಸುವುದಾಗಿ ಬೆಂಗಳೂರು ವಿವಿಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: 'ಹೇ ದೋಸ್ತಿ ಹಮ್ ನಹೀ ಚೋಡೆಂಗೆ': ಸಿದ್ದರಾಮಯ್ಯ- ಡಿಕೆಶಿ ಫೋಟೊ ಹಂಚಿಕೊಂಡ ಸುರ್ಜೆವಾಲಾ