ಇಶಾ ಫೌಂಡೇಶನ್‍ಗೆ 250 ಎಕರೆ ಜಾಗ, 100 ಕೋಟಿ ರೂ.ನೀಡಿರುವುದು ಹಗರಣ: ರಮೇಶ್ ಬಾಬು ಆರೋಪ

Update: 2022-10-20 15:03 GMT
 ರಮೇಶ್ ಬಾಬು

ಬೆಂಗಳೂರು, ಅ.20: ''ಚಿಕ್ಕಬಳ್ಳಾಪುರದಲ್ಲಿ 250 ಎಕರೆ ಜಾಗವನ್ನು ‘ಇಶಾ ಫೌಂಡೇಶನ್'ಗೆ (Isha Foundation) ನೀಡುವುದರ ಜತೆಗೆ ಸುಮಾರು 100 ಕೋಟಿ ಹಣವನ್ನು ಮಣ್ಣಿನ ಸಂರಕ್ಷಣೆ ಅಭಿಯಾನ ಹೆಸರಲ್ಲಿ ಜಗ್ಗಿ ವಾಸುದೇವ್ ಅವರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಸರಕಾರ ನೀಡಿದೆ. ಇದು ಮತ್ತೊಂದು ರೀತಿಯ ಹಗರಣವಾಗಿದೆ'' ಎಂದು ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಆರೋಪಿಸಿದರು.

ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 'ಈ ದೇಶದಲ್ಲಿ ಸ್ವಯಂ ಘೋಷಿತ ದೇವಮಾನವರು ಸರಕಾರ ಅಲ್ಲಾಡಿಸುವ ಕೆಲಸ ಮಾಡುತ್ತಿದ್ದು, ನಮ್ಮ ರಾಜ್ಯದಲ್ಲಿ ಬಿಡದಿಯ ಬಳಿಯ ನಿತ್ಯಾನಂದ ಹಗರಣವನ್ನು ದೇಶವೇ ನೋಡಿದೆ'' ಎಂದರು.

''ಜಗ್ಗಿ ವಾಸುದೇವ್ ಸ್ವಯಂಘೋಷಿತ ದೇವಮಾನವರಾಗಿದ್ದು, ಇವರ ವಿರುದ್ಧ ಸುಪ್ರೀಂ ಕೋರ್ಟ್, ಹೈಕೋರ್ಟ್ ಗಳಲ್ಲಿ ಭೂ ಹಗರಣ, ಕಾವೇರಿ ಕಾಲಿಂಗ್ ಹೆಸರಿನಲ್ಲಿ ನಡೆದ ಹಗರಣಗಳು ವಿಚಾರಣೆ ನಡೆಯುತ್ತಿವೆ. ಇನ್ನು ಇವರು ಹಲವಾರು ಕೋಟಿ ತೆರಿಗೆ ವಂಚನೆ ಮಾಡಿರುವ ಆರೋಪವಿದೆ. ರಾಜ್ಯದಲ್ಲಿ ಕೃಷಿ ಇಲಾಖೆ, ಕೃಷಿ ತಜ್ಞರಿದ್ದು ಇವರೆಲ್ಲರನ್ನು ಬಿಟ್ಟು ಮಣ್ಣು ಸಂರಕ್ಷಣೆ ಹೆಸರಲ್ಲಿ ಸರಕಾರ ಸ್ವಾಮೀಜಿಗೆ ಶರಣಾಗುತ್ತದೆ ಎಂದರೆ ಇದಕ್ಕಿಂತ ದೊಡ್ಡ ನಾಚಿಕೆಗೇಡಿನ ವಿಚಾರ ಮತ್ತೊಂದಿಲ್ಲ'' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

''ಪುಣ್ಯಕೋಟಿ ಯೋಜನೆಗೆ ಸರಕಾರಿ ನೌಕರರಿಗೆ ಪತ್ರ ಬರೆದು ದೇಣಿಗೆ ನೀಡುವಂತೆ ಕೇಳುತ್ತಾರೆ. ಆ ಪತ್ರಕ್ಕೆ ಪೂರಕವಾಗಿ ಸರಕಾರಿ ನೌಕರರು ತಮ್ಮ ಒಂದು ದಿನದ ವೇತನ 100 ಕೋಟಿ ನೀಡುವುದಾಗಿ ತಿಳಿಸುತ್ತಾರೆ. ನೀವು ಪುಣ್ಯಕೋಟಿ ಯೋಜನೆ ಹೆಸರಲ್ಲಿ 100 ಕೋಟಿಯನ್ನು ಸರಕಾರಿ ನೌಕರರಿಂದ ಸಂಗ್ರಹಿಸುತ್ತೀರಿ, ಮತ್ತೊಂದೆಡೆ ಸ್ವಯಂ ಘೋಷಿತ ಸ್ವಾಮೀಜಿಗೆ 100 ಕೋಟಿ ಹಣ ನೀಡುತ್ತೀರಿ. ಇಂದು ಹೈಕೋರ್ಟ್ ಗೋಶಾಲೆ ವಿಚಾರವಾಗಿ ಸರಕಾರವನ್ನು ಪ್ರಶ್ನಿಸಿದೆ. ಸರಕಾರ ಗೋಶಾಲೆ ಹೆಸರಲ್ಲಿ ವಸೂಲಿಗೆ ಮುಂದಾಗಿದೆ'' ಎಂದು ಅವರು ದೂರಿದರು.

''ರಾಜ್ಯ ಸರಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡಿಲ್ಲ. ಕೋವಿಡ್ ಸಮಯದಲ್ಲಿ ಇವರಿಗೆ ನೀಡಬೇಕಾಗಿದ್ದ ತುಟ್ಟಿ ಭತ್ಯೆ 2-3 ಸಾವಿರ ಕೋಟಿ ನೀಡಿಲ್ಲ, ಶಾಲೆ ಕಾಲೇಜು ವಿಚಾರ ಬಗೆಹರಿಸಿಲ್ಲ. ಮಕ್ಕಳಿಗೆ ಸಮವಸ್ತ್ರ, ಶೂ ಸಾಕ್ಸ್ ನೀಡುತ್ತಿಲ್ಲ. ಅವರಿಗೆ ಅನುಕೂಲ ಮಾಡಲು ನಿಮ್ಮ ಬಳಿ ಹಣವಿಲ್ಲ. ಆದರೆ ಸ್ವಯಂಘೋಷಿತ ದೇವಮಾನವನಿಗೆ ಹಣ ನೀಡುತ್ತೀರಾ ಎಂದಾದರೆ ಈ ರಾಜ್ಯವನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದೀರಿ'' ಎಂದು ರಮೇಶ್ ಬಾಬು ಪ್ರಶ್ನಿಸಿದರು.

''ನಿಮ್ಮ 40 ಪರ್ಸೆಂಟ್ ಕಮಿಷನ್ ಮುಚ್ಚಿಟ್ಟುಕೊಳ್ಳಲು ಇಂತಹ ದೇವಮಾನವರು ಬೇಕಾ? ಇವರು ಭ್ರಷ್ಟಾಚಾರ ಹಣ ರಕ್ಷಿಸಲು ಜಾಗ ಹುಡುಕಿಕೊಳ್ಳುತ್ತಿದ್ದಾರೆ. ಬೊಮ್ಮಾಯಿ ಅವರೇ ನಿಮಗೆ ಸಾರ್ವಜನಿಕರ ಹಣವನ್ನು ಸಂರಕ್ಷಿಸುವ ಜವಾಬ್ದಾರಿ ಇದೆ. ಜನರ ಹಣವನ್ನು ಸಿಕ್ಕಸಿಕ್ಕವರಿಗೆ ನೀಡಲು ನಿಮ್ಮನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿಲ್ಲ'' ಎಂದು ಅವರು ಕಿಡಿಗಾರಿದರು.

''ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಹಗರಣವಾಗಲಿ ಅಥವಾ ಜಗ್ಗಿ ವಾಸುದೇವ ಅವರಿಗೆ ಹಣ ನೀಡುವ ಧಂದೆಯನ್ನು ತಡೆಯಬೇಕು. ವಿವಿ ಹಾಗೂ ಅತಿಥಿ ಉಪನ್ಯಾಸಕರಿಗೆ ವೇತನ ನೀಡಲು ಸರಕಾರದಲ್ಲಿ ಹಣವಿಲ್ಲ. ಆದರೆ ಜಗ್ಗಿವಾಸುದೇವ ಅವರಿಗೆ 100 ಕೋಟಿ ಹಣ ನೀಡುತ್ತಿರುವುದೇಕೆ?'' ಎಂದು ರಮೇಶ್ ಬಾಬು ಪ್ರಶ್ನಿಸಿದರು.

''ಕಾವೇರಿ ಕಾಲಿಂಗ್ ಅಭಿಯಾನ ವಿಚಾರವಾಗಿ ಜಗ್ಗಿ ವಾಸುದೇವ್ ವಿರುದ್ಧ ಹೈಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿದ್ದು, ಪ್ರಕರಣ ಇತ್ಯರ್ಥವಾಗುವ ಮುನ್ನ ಮುಖ್ಯಮಂತ್ರಿ 250 ಎಕರೆ ಜಮೀನು 100 ಕೋಟಿ ಹಣ ನೀಡಿದ್ದಾರೆ. ಈ ಹಿಂದೆಯೂ ಜಗ್ಗಿ ವಾಸುದೇವ್ ತಮ್ಮ ಫೌಂಡೇಶನ್ ಗೆ ದೇಣಿಗೆ ನೀಡಬೇಕು ಎಂದು ಪತ್ರ ಬರೆದಿದ್ದರೂ ಈ ಹಿಂದಿನ ಸರ್ಕಾರಗಳು ಅದನ್ನು ಪರಿಗಣಿಸಿರಲಿಲ್ಲ'' ಎಂದು ಅವರು ತಿಳಿಸಿದರು.

''ಹೀಗಾಗಿ ಇಶಾ ಫೌಂಡೇಶನ್ ಜೆತೆ ಸರಕಾರ ಮಾಡಿಕೊಂಡಿರುವ ಒಪ್ಪಂದ ರದ್ದು ಮಾಡಿ ಕೊಟ್ಟಿರುವ ಹಣ ಹಾಗೂ ಸರಕಾರಿ ಜಮೀನು ಹಿಂಪಡೆಯಬೇಕು. ಒಂದು ವೇಳೆ ನಿಮ್ಮ ಪೇಸಿಎಂ ಯೋಜನೆ ಮೂಲಕ ಈ ಹಣ ನೀಡಿದ್ದರೆ ಅದನ್ನು ಬೊಮ್ಮಾಯಿ ಒಪ್ಪಿಕೊಳ್ಳಬೇಕು. ರಾಜ್ಯದ ಖಜಾನೆ ಧರ್ಮಛತ್ರವಲ್ಲ. ಹೀಗಾಗಿ ಈ ಹಣ ಹಾಗೂ ಜಾಗ ಹಿಂಪಡೆಯಬೇಕು'' ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News