ಪತ್ರಕರ್ತರಿಗೆ ಲಂಚ ನೀಡಿದ ಆರೋಪ: ಸಿಎಂ ಬೊಮ್ಮಾಯಿ, ಮಾಧ್ಯಮ ಸಂಯೋಜಕರ ವಿರುದ್ಧ ಲೋಕಾಯುಕ್ತಕ್ಕೆ ದೂರು

Update: 2022-10-28 15:42 GMT

ಬೆಂಗಳೂರು, ಅ. 28: ದೀಪಾವಳಿ ಪ್ರಯುಕ್ತ ಸಿಹಿತಿಂಡಿ ನೀಡುವುದರ ಜೊತೆ ಆಯ್ದ ಪತ್ರಕರ್ತರಿಗೆ, ಪತ್ರಿಕಾಸಂಸ್ಥೆಗಳಿಗೆ ನಗದು ಉಡುಗೊರೆ ನೀಡಿರುವ ಆರೋಪ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವರ ವಿರುದ್ಧ ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.

ಶುಕ್ರವಾರ ಜನಾಧಿಕಾರ ಸಂಘರ್ಷ ಪರಿಷತ್ ಲಿಖಿತ ದೂರು ಸಲ್ಲಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ್ ಪಾಗೋಜಿ ವಿರುದ್ಧ ದೂರು ನೀಡಲಾಗಿದ್ದು, ಭ್ರಷ್ಟಾಚಾರ ನಿಗ್ರಹ ಕಾಯ್ದೆ 2018ರ ತಿದ್ದುಪಡಿ ಅಧಿನಿಯಮದ ಅನ್ವಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.

ದೂರಿನಲ್ಲೇನಿದೆ?:  ಪ್ರಮುಖ ದಿನಪತ್ರಿಕೆಯೊಂದರ ವರದಿಗಾರರು, ಮುಖ್ಯಸ್ಥರಿಗೆ ಸಂಪರ್ಕಿಸಿರುವ ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ್ ಪಾಗೋಜಿ ಅವರು ದೀಪಾವಳಿ ಹಬ್ಬದ ಸೋಗಿನಲ್ಲಿ ಸಿಹಿ ತಿಂಡಿ ಬಾಕ್ಸ್‍ನೊಂದಿಗೆ ನಗದನ್ನು ನೀಡಿದ್ದಾರೆ. ಆದರೆ ಇದು ಅವರ ಗಮನಕ್ಕೆ ಬಂದ ಕೂಡಲೇ ಹಿಂದಕ್ಕೆ ನೀಡಲಾಗಿದೆ. ಮುಖ್ಯಮಂತ್ರಿ ಕಚೇರಿಯೇ ನೇರವಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಲಂಚ ನೀಡಿರುವುದು ಅನೈತಿಕವಾಗಿದೆ. ಅಲ್ಲದೆ, ಮಾಧ್ಯಮ ಸಂಸ್ಥೆಗಳ ಮೇಲೆ ಪ್ರಭಾವ ಬೀರಿ, ಸರಕಾರದ ಪರವಾಗಿ ಇರುವಂತೆ ನೋಡಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸುವಂತೆ ಎಂದು ದೂರಿನಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಸಿಎಂ ಕಚೇರಿಯಿಂದ ಪತ್ರಕರ್ತರಿಗೆ ಹಬ್ಬದ ನೆಪದಲ್ಲಿ ಲಂಚ ನೀಡಿದ ಆರೋಪ: ತನಿಖೆಗೆ ಕಾಂಗ್ರೆಸ್ ಒತ್ತಾಯ

ಪತ್ರಕರ್ತರಿಂದ ಆಕ್ಷೇಪ : ‘ಸಿಹಿ ತಿನಿಸಿನ ಜೊತೆಗೆ ಹಣ ಕಳುಹಿಸಿದ್ದು ಸತ್ಯ. ಆದರೆ, ಎಷ್ಟು ಮೊತ್ತದ ಹಣವಿತ್ತು ಎಂದು ನಾನು ನೋಡಿಲ್ಲ. ಉಡುಗೊರೆ ಜೊತೆಗೆ ಹಣವಿದ್ದ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆಯ ಮುಖ್ಯಸ್ಥರಿಗೆ ಈ ಕುರಿತು ಮಾಹಿತಿ ನೀಡಿದ್ದೇನೆ. ಅಲ್ಲದೆ, ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಲಾಗಿದೆ' ಎಂದು ಹೆಸರೇಳಲಿಚ್ಛಿಸಿದ ಮಾಧ್ಯಮ ಪ್ರತಿನಿಧಿ ಸ್ಪಷ್ಟನೆ ನೀಡಿದ್ದಾರೆ.

► ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ, ಆಕ್ರೋಶ

ಮುಂಬರಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಸಿಎಂ ಕಚೇರಿಯಿಂದ ಉಡುಗೊರೆ ರೂಪದಲ್ಲಿ ಹಣ ನೀಡಲಾಗಿದೆ. ಆ ಮೂಲಕ ಪತ್ರಕರ್ತ ಪಕ್ಷಪಾತಿಗಳಾಗಿ ವರ್ತಿಸಲು ಲಂಚದ ಆಮಿಷ ಒಡ್ಡಲಾಗಿದೆ ಎಂದು ಆರೋಪ ಕೇಳಿಬಂದಿದೆ. ಈ ಮಧ್ಯೆ ಈ ಕುರಿತು ಸಮಗ್ರ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂಬ ಚರ್ಚೆಗಳು ಫೇಸ್‍ಬುಕ್ ಮತ್ತು ವಾಟ್ಸಪ್ ಗಳಲ್ಲಿ ನಡೆಯುತ್ತಿವೆ. 

---------------------------

''ಸುದ್ದಿಗಾಗಿ ಕಾಸು ನೀಡಿ, ಪತ್ರಕರ್ತರನ್ನು ಭ್ರಷ್ಟಾಚಾರದ ಕೂಪಕ್ಕೆ ತಳ್ಳುವುದು ಪ್ರಜಾಪ್ರಭುತ್ವದ 4ನೇ ಸ್ತಂಭದ ಕಗ್ಗೊಲೆಯೇ ಸರಿ. ಸರ್ಕಾರದ ಧೋರಣೆ ಬೇಸರ ತರಿಸಿದೆ! ಸುದ್ದಿ ಬಹಿರಂಗ ಪಡಿಸಿದ ಪತ್ರಕರ್ತರಿಗೆ ಮತ್ತು ಹಣ ಹಿಂತಿರುಗಿಸಿ ವೃತ್ತಿ ಪಾವಿತ್ರ್ಯತೆ ಮೆರೆದ ಪತ್ರಕರ್ತರಿಗೆ ಧನ್ಯವಾದಗಳು''

- ಎಂ.ಬಿ ಪಾಟೀಲ್,  ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರು

Similar News