ಬೆಂಗಳೂರು | ದೇವಸ್ಥಾನಗಳಲ್ಲಿ ಚಪ್ಪಲಿ ಕಾಯುವ ಕೆಲಸ ಪರಿಶಿಷ್ಟರಿಗೆ ಮೀಸಲು!

ವಿರೋಧದ ಬಳಿಕ ಟೆಂಡರ್‌ ರದ್ದು

Update: 2022-11-02 16:18 GMT

ಬೆಂಗಳೂರು, ನ.2:  ‘ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ’ ಹೊರಡಿಸಿರುವ ‘ಟೆಂಡರ್‌ ಮತ್ತು ಹರಾಜು’ ಪ್ರಕಟನೆಯೊಂದು ಚರ್ಚೆಗೆ ಗ್ರಾಸವಾಗಿದೆ.

ದೊಡ್ಡಗಣಪತಿ ಮತ್ತು ಸಮೂಹ ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಅಕ್ಟೋಬರ್  2ರಂದು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಪ್ರಕಟನೆಯಲ್ಲಿ ಪೂಜಾ ಕೈಂಕರ್ಯ ಅನುಕೂಲಕ್ಕಾಗಿ ಪೂಜಾ ಸಾಮಗ್ರಿ ಮಾರಾಟ ಮಾಡುವ ಸ್ಥಳದ ಹಕ್ಕಿನ ಟೆಂಟರ್‌ ಮತ್ತು ಹರಾಜು ಸಾಮಾನ್ಯ ವರ್ಗಕ್ಕೆ, ಈಡುಗಾಯಿ ಆಯ್ದುಕೊಳ್ಳುವ ಹಕ್ಕು ಸಾಮಾನ್ಯರಿಗೆ, ಎಳನೀರು ಮಾರಾಟ ಹಕ್ಕು ಸಾಮಾನ್ಯ ವರ್ಗಕ್ಕೆ ಮೀಸಲಾದರೆ ದೇವಸ್ಥಾನದ ಮುಂದೆ ಪಾದರಕ್ಷೆ ಕಾಯುವ ಹಕ್ಕನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಲಾಗಿದೆ.

ಈ ಬಗ್ಗೆ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ಪ್ರಕಟನೆಯ ಫೋಟೋ ಒಂದನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವ  ಹ.ರಾ.ಮಹೇಶ್‌ ಎಂಬುವರು ವಿರೋಧ ವ್ಯಕ್ತಪಡಿಸಿದ್ದಾರೆ. 

► ಹ.ರಾ.ಮಹೇಶ್‌ ಅವರ ಫೇಸ್ ಬುಕ್ ಫೋಸ್ಟ್: -   ''ಇದು, ಹಿಂದೂ ಧರ್ಮದ ಮೀಸಲಾತಿಯೇ?, ಈ ಕೆಟ್ಟ ರೋಗಗ್ರಸ್ತ ಮನಸ್ಥಿತಿಯ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧವಾಗೋಣ'' ಎಂದು ಹ.ರಾ.ಮಹೇಶ್‌ ಮನವಿ ಮಾಡಿದ್ದಾರೆ.

'ದೇವಾಲಯದ ಹೊರಗೆ ಸಾವಿರಾರು ರೂಪಾಯಿ ದುಡಿಯುವ ಪೂಜಾ ಸಾಮಗ್ರಿ ಮಾರಾಟ ಟೆಂಡರ್, ಈಡುಗಾಯಿ ಆಯುವ ಹಕ್ಕಿನ ಟೆಂಡರ್, ಎಳನೀರು ಮಾರಾಟ ಟೆಂಡರ್, ಸುಂಕ ವಸೂಲಾತಿ ಟೆಂಡರ್ ಇವೆಲ್ಲವೂ OBC/ಹಿಂದುಳಿದವರಿಗೆ ಮೀಸಲು..! ದೇವಾಲಯದ ಬಾಗಿಲ ಬಳಿ ನೂರಾರು ರೂಪಾಯಿ ದುಡಿಯುವ "ಚಪ್ಪಲಿ‌ ಕಾಯುವ" ಹಕ್ಕಿನ ಟೆಂಡರ್: SC/ST (ಪ.ಜಾ.ಪ.ಪಂ) ಗಳಿಗೆ ಮೀಸಲು‌‌..!!! ದೇವಾಲಯದ ಒಳಗೆ ಗರ್ಭಗುಡಿಯೊಳಗೆ ತಣ್ಣಗೆ ಲಕ್ಷ ಲಕ್ಷ ದುಡಿಯುವ ಅರ್ಚಕ ಹುದ್ದೆ, ಹುಂಡಿಯ ಹಕ್ಕು ಕೇವಲ ಕೇವಲ ಕೇವಲ ಬ್ರಾಹ್ಮಣರಿಗೆ ಮಾತ್ರ'' ಎಂದು ಅವರು ಬರೆದುಕೊಂಡಿದ್ದಾರೆ. 

''Dignity of labour ಬಗ್ಗೆ ಪಾಠ ಮಾಡುವ, ಜಾತಿ ಇಲ್ಲ ಎಂದು ವಾದಿಸುವ, ಮೀಸಲಾತಿಯನ್ನು ವಿರೋಧಿಸುವ ಜನರೇ ಕಣ್ಣು ಬಿಟ್ಟು ಇಲ್ಲಿ ನೋಡಿ'' ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಟೆಂಡರ್‌‌ ಪ್ರಕ್ರಿಯೆ ರದ್ದು: ಹಲವರ ವಿರೋಧದ ಬಳಿಕ ಇಂದು ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ಟೆಂಡರ್‌‌ ಪ್ರಕ್ರಿಯೆ ರದ್ದುಗೊಳಿಸಳಾಗಿದೆ. ಈ ಸಂಬಂಧ ಮುಂದಿನ ಪ್ರಕಟನೆಗಳನ್ನುನಂತರ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು ಎಂದು ದೊಡ್ಡಗಣಪತಿ ಮತ್ತು ಸಮೂಹ ದೇವಸ್ಥಾನಗಳ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

Full View

Similar News