ಓ ಮೆಣಸೇ...

Update: 2022-11-07 04:26 GMT

ಸಾಮಾಜಿಕ ಜಾಲತಾಣಗಳು ಉಗ್ರ ಸಂಘಟನೆಗಳ ಟೂಲ್‌ಕಿಟ್‌ನಲ್ಲಿ ಪ್ರಬಲ ಸಾಧನಗಳಾಗಿ ಬಳಕೆಯಾಗುತ್ತಿವೆ - ಎಸ್.ಜೈಶಂಕರ್, ಕೇಂದ್ರ ಸಚಿವ
ನಿಮ್ಮ ನೆಚ್ಚಿನ ಪರಿವಾರದವರ ಮತ್ತವರ ಕೂಸುಗಳ ಟೂಲ್ ಕಿಟ್ ಗಳನ್ನು ಹದ್ದುಬಸ್ತಿನಲ್ಲಿಟ್ಟರೆ ಈ ಸಮಸ್ಯೆ ಶೇ.99 ಬಗೆಹರಿದು ಬಿಡುತ್ತದೆ.

ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ಬಂದರೆ ಎದುರಿಸಲು ಕಾಂಗ್ರೆಸ್ ಪಕ್ಷ ಸಿದ್ಧ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಸೋಲುಣ್ಣುವುದಕ್ಕೆ ಸದಾ ಸಜ್ಜಾಗಿರುವ ಪಕ್ಷವೆಂದರೆ ಅದು ನಿಮ್ಮದೊಂದೇ.

ಭಾರತ್ ಜೋಡೊ ಯಾತ್ರೆ ಹೆಸರಿನಲ್ಲಿ ರಾಜ್ಯ ಕಾಂಗ್ರೆಸ್‌ಗೆ ರಾಹುಲ್ ಗಾಂಧಿ ಕೊಟ್ಟಿದ್ದ ಬೂಸ್ಟರ್ ಡೋಸ್ ಫೇಲ್ ಆಗಿದೆ -ಶ್ರೀರಾಮುಲು, ಸಚಿವ
ಒಂದು ಫೇಲಾದರೆ ಇನ್ನೊಂದನ್ನು ಕೊಡಬಹುದು ಬಿಡಿ. ನಿಮ್ಮ ಕ್ಯಾನ್ಸರ್ ಪೀಡಿತ ಪಕ್ಷವನ್ನು ಜೀವಂತವಿಡಲು ಏನು ಮಾಡೋಣ ಎಂಬ ಕುರಿತು ಚಿಂತಿಸಿ.

ಸರಕಾರ ಬಯಸಿದರೆ ರಾಜಕೀಯ ಪ್ರವೇಶಿಸಿ ಜನಸೇವೆಗೆ ಸಿದ್ಧ - ಕಂಗನಾ ರಣಾವತ್, ನಟಿ
ತಕ್ಷಣದ ಪ್ರಚಾರ ಮತ್ತು ಲಾಭಕ್ಕಾಗಿ ನೀವು ಬಹಳಷ್ಟಕ್ಕೆ ಸಿದ್ಧರೆಂಬುದನ್ನು ಈ ಹಿಂದೆಯೂ ಹಲವು ಬಾರಿ ಸಾಬೀತು ಪಡಿಸಿದ್ದೀರಿ.

ಅಭಿವೃದ್ಧಿಗೆ ಅಡ್ಡಿಯಾಗುವ ಅಂಶಗಳಲ್ಲಿ ಮೊದಲನೆಯದ್ದು ಮತ್ತು ಪ್ರಮುಖವಾದದ್ದು ‘ಮನಸ್ಥಿತಿ’- ನರೇಂದ್ರ ಮೋದಿ, ಪ್ರಧಾನಿ
ನಿಮ್ಮ ಮತ್ತು ನಿಮ್ಮ ಪರಿವಾರದ ಮನಸ್ಥಿತಿಯನ್ನು ಬಲ್ಲವರು ಬಹುಕಾಲದಿಂದ ಖುದ್ದಾಗಿ ಈ ವಾಸ್ತವವನ್ನು ವೀಕ್ಷಿಸುತ್ತಿದ್ದಾರೆ.

ಎಐಸಿಸಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಮಲ್ಲಿಕಾರ್ಜುನ ಖರ್ಗೆಯವರನ್ನು ರಾಜಕೀಯ ಬಲಿಪಶು ಮಾಡಲಾಗಿದೆ - ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶ ಸಿಎಂ
ಬಲಿಪಶುವಾಗಿಸುವುದಕ್ಕೆ ಕಾಂಗ್ರೆಸ್ ಪಕ್ಷ ಹೆಚ್ಚೆಂದರೆ ತನ್ನ ಪಕ್ಷದ ಹುದ್ದೆಗಳನ್ನು ಬಳಸಿದೆ. ನಿಮ್ಮಂತೆ ದೇಶದ ಪ್ರಮುಖ ಹುದ್ದೆಗಳನ್ನು ಬಳಸಿಲ್ಲ.

ಗುಜರಾತ್‌ನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ವಿಚಾರದಲ್ಲಿ ಬಿಜೆಪಿ ಮೀನಮೇಷ ಎಣಿಸುತ್ತಿದೆ -ಅರವಿಂದ್ ಕೇಜ್ರಿವಾಲ್, ದಿಲ್ಲಿ ಸಿಎಂ
ತಮಗೆ ಒಂದಿಷ್ಟಾದರೂ ಮಾನ ಮರ್ಯಾದೆ ಇದೆ ಎಂಬುದು ಅವರು ಈ ಮೂಲಕ ತೋರಿಸಿಕೊಟ್ಟಿದ್ದಾರೆ. ನಿಮ್ಮ ಅವಸ್ಥೆ ಏನು?

ಷರತ್ತುಗಳ ಆಧಾರದ ಮೇಲೆ ನಾವು ಯಾರನ್ನೂ ಬಿಜೆಪಿಗೆ ಸೇರಿಸುವುದಿಲ್ಲ - ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ
ಇಂತಿಷ್ಟು ಮೊತ್ತ ಕೊಟ್ಟರೆ, ಎಂಟ್ರಿ ಗ್ಯಾರಂಟಿ.

ಕೇಂದ್ರ ಸಚಿವ ಅಮಿತ್ ಶಾ ನಮ್ಮ ಶಾಸಕರನ್ನು ಖರೀದಿಸಲು ನೀಡಿದ್ದ 100 ಕೋ.ರೂ.ಆಫರ್ ಅನ್ನು ಶಾಸಕರು ತಿರಸ್ಕರಿಸಿದ್ದಾರೆ - ಕೆ.ಚಂದ್ರಶೇಖರರಾವ್, ತೆಲಂಗಾಣ ಸಿಎಂ
ಬಹುಶಃ ಇನ್ನೂ ಹೆಚ್ಚಿನ ಮೊತ್ತಕ್ಕಾಗಿ ಚೌಕಾಶಿ ನಡೆಸುತ್ತಿರಬೇಕು.

ದೇಶ ಅಭಿವೃದ್ಧಿಯಾದರೆ ಸಾಲದು, ಪರಂಪರೆ ಉಳಿದರೆ ಮಾತ್ರ ದೇಶ ಪರಿಪೂರ್ಣ ಅಭಿವೃದ್ಧಿ ಕಾಣಲು ಸಾಧ್ಯ - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ
ದೇಶಕ್ಕಿಂತ ಬ್ರಾಹ್ಮಣ್ಯ ಮುಖ್ಯ ಎಂಬ ನಿಮ್ಮ ಹಳೆಯ ಆಶಯ ಇನ್ನಷ್ಟು ಸ್ಪಷ್ಟ ಪದಗಳಲ್ಲಿ ಮೂಡಿಬರಲಿ.

ವಜ್ರಮುನಿ ಸಿನೆಮಾದಲ್ಲಿ ಮಾತ್ರ ಖಳನಾಯಕ ಆಗಿದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ ನಿಜ ಜೀವನದಲ್ಲೂ ಖಳನಾಯಕರಾಗಿದ್ದಾರೆ -ನಳಿನ್ ಕುಮಾರ್ ಕಟೀಲು, ಸಂಸದ
ವಿದೂಷಕರು ಏನೆಲ್ಲ ಹೇಳಿದರೂ ನಾಯಕರಾಗಲಿ ಖಳನಾಯಕರಾಗಲಿ ಅದಕ್ಕೆ ಚಿಕ್ಕಾಸಿನ ಬೆಲೆ ನೀಡುವುದಿಲ್ಲ.

ರಾಹುಲ್ ಗಾಂಧಿ ಕೋಣೆಯೊಳಗಿರುವ ಆನೆ ಅಲ್ಲ, ರಸ್ತೆ ಮೇಲೆ ನಿರ್ಭೀತಿಯಿಂದ ಓಡಾಡುವ ಹುಲಿ - ಜೈರಾಮ್ ರಮೇಶ್, ಎಐಸಿಸಿ ಪ್ರ .ಕಾರ್ಯದರ್ಶಿ
ವ್ಯಕ್ತಿಯ ವೈಭವೀಕರಣ ನಿಲ್ಲಿಸಿ, ತತ್ವಾದರ್ಶಗಳ ಬಗ್ಗೆ ಮತ್ತು ಜನರ ಮುಂದಿನ ಸವಾಲುಗಳ ಬಗ್ಗೆ ಮಾತನಾಡಿ.

ಕರ್ನಾಟಕದಲ್ಲಿ ಹೂಡಿಕೆ ಮಾಡುವವರು ಬುದ್ಧಿವಂತರು - ಪೀಯುಶ್ ಗೋಯಲ್, ಕೇಂದ್ರ ಸಚಿವ
ಏಕೆಂದರೆ ಇಲ್ಲಿನ ರಸ್ತೆಯ ಹೊಂಡಗಳಲ್ಲಿ ಅವರ ಕಾರು ಸಿಲುಕಿಕೊಂಡರೆ, ಆ ಹೊಂಡದಲ್ಲಿ ಎಷ್ಟು ಗಂಟೆ ಕಳೆದರೂ ಅದಕ್ಕಾಗಿ ಅವರು ಪಾರ್ಕಿಂಗ್ ಫೀಸ್ ಪಾವತಿಸಬೇಕಾಗಿಲ್ಲ.

ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವವರಿಗೆ ರಾಜ್ಯ ಸರಕಾರ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಿದೆ - ಮುರುಗೇಶ್ ನಿರಾಣಿ, ಸಚಿವ
ರಸ್ತೆ ಮಧ್ಯದ ಹೊಂಡಗಳ ಬೃಹತ್ ಗಾತ್ರ ನೋಡಿ ಈಗಾಗಲೇ ಆತಂಕಿತರಾಗಿರುವ ಜನರನ್ನು, ಹೀಗೆಲ್ಲಾ ಹೇಳಿ ಮತ್ತಷ್ಟು ಹೆದರಿಸಬೇಡಿ.

ಕನ್ನಡ ನಮ್ಮ ಉಸಿರು, ಸರ್ವಸ್ವ, ಕನ್ನಡಕ್ಕಾಗಿ ದುಡಿಯುತ್ತೇವೆ, ಬದುಕುತ್ತೇವೆ - ಬಸವರಾಜ ಬೊಮ್ಮಾಯಿ, ಸಿಎಂ
ಹಾಗಾದರೆ ಹಿಂದಿ ಮತ್ತು ಸಂಸ್ಕೃತ ತಂದು ಕನ್ನಡಿಗರನ್ನು ಉಸಿರು ಗಟ್ಟಿಸುತ್ತಿರುವ ಮತ್ತು ಕನ್ನಡ ಎಂಬ ಕನ್ನಡಿಗರ ಸರ್ವಸ್ವವನ್ನು ಅವರಿಂದ ಕಿತ್ತುಕೊಳ್ಳಲು ಸದಾ ಸಂಚು ಹೂಡುತ್ತಿರುವ ಪಕ್ಷದಲ್ಲೇ ಯಾಕಿದ್ದೀರಿ?

ಈಗ ಯಾವುದೇ ಮಕ್ಕಳನ್ನು ಕೇಳಿದರೂ ನಾನು ಯೂಟ್ಯೂಬರ್ ಆಗಬೇಕೆಂದು ಹೇಳುತ್ತಾರೆ. ಇದು ತಂತ್ರಜ್ಞಾನದ ಮಹಿಮೆ -
ರ್ಯಾಂಡಿ ಝುಕರ್ ಬರ್ಗ್, ಉದ್ಯಮಿ ನಾವು ಶ್ರೇಷ್ಠ ಮಾನವರಾಗಬೇಕು ಎಂದು ಮಕ್ಕಳೆಲ್ಲಾ ಆಶಿಸುವಂತಾಗಲು ಯಾವ ತಂತ್ರಜ್ಞಾನ ಬರಬೇಕು?

ಜಾಗತಿಕ ಬಿಕ್ಕಟ್ಟಿನ ನಡುವೆ ಭಾರತವು ಸುಸ್ಥಿರತೆಯ ಓಯಸಿಸ್‌ನಂತೆ ಭಾಸವಾಗುತ್ತಿದೆ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ
ಈ ಬಾರಿ ಯಾರಿಗೆ ಹೋಲಿಸಿದಿರಿ? ಸುಡಾನಿಗೋ, ಸೊಮಾಲಿಯಕ್ಕೋ?

‘ಆಪರೇಶನ್ ಕಮಲ’ದ ಮೂಲಕ ಬಿಜೆಪಿಗೆ ವಲಸೆ ಹೋಗಿರುವವರು ತಮ್ಮ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಬಂದರೆ ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲಾಗುವುದು - ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ
ನೀವು ನಡೆಸುತ್ತಿರುವುದು ಪಕ್ಷವನ್ನೋ ಆಶ್ರಮವನ್ನೋ? ಒಳಗಿರುವವರನ್ನು ಕಡೆಗಣಿಸಿ ಹೊರಗಿನವರನ್ನು ಓಲೈಸುವ ಈ ತನ್ನ ಹಳೆಯ ಚಾಳಿಗಾಗಿ ನಿಮ್ಮ ಪಕ್ಷವು ಭಾರೀ ಬೆಲೆ ತೆರಬೇಕಾದೀತು.

ಬಿಜೆಪಿಯವರು ಲಂಚ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್‌ನವರು ದಾಖಲೆ ಇಲ್ಲದೆ ಹೇಳುತ್ತಿದ್ದಾರೆ - ಕೆ.ಎಸ್.ಈಶ್ವರಪ್ಪ, ಶಾಸಕ
ದಾಖಲೆಗಳಿಗಾಗಿ ಶೇ.40 ಕೊಡಲು ಅವರು ತಯಾರಿಲ್ಲ. ಜಿಪುಣರು.

ಕರ್ನಾಟಕದ ಅಭಿವೃದ್ಧಿಗೆ ಬೇಕಾಗಿರುವುದು ಜಾತಿ, ಧರ್ಮ ಮೀರಿದ ಒಗ್ಗಟ್ಟು - ಅಂಗಾರ, ಸಚಿವ
ಅದ್ಕಕಿಂತ ಮೊದಲು, ಪಕ್ಷ, ಸಂಘಗಳನ್ನು ಮೀರಬೇಕು.

ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಕರ್ನಾಟಕ ಕಾಂಗ್ರೆಸ್‌ಗೆ ಮತ್ತಷ್ಟು ಬಲ ಬಂದಂತಾಗಿದೆ - ಸಿದ್ದರಾಮಯ್ಯ, ಮಾಜಿ ಸಿಎಂ
ಇಲ್ಲಿಂದ ಒಂದು ಕಂಟಕ ತೊಲಗಿತು ಎಂದು ನೀವು ಹೇಳುತ್ತಿಲ್ಲ ತಾನೇ?

135 ಜನರನ್ನು ಬಲಿಪಡೆದ ಗುಜರಾತ್ ಮೊರ್ಬಿ ತೂಗು ಸೇತುವೆ ದುರಂತವು ‘ದೇವರ ಇಚ್ಛೆಯಾಗಿತ್ತು’ - ದೀಪಕ್ ಪಾರೆಖ್, ಒರೆವಾ ಕಂಪೆನಿ ವ್ಯವಸ್ಥಾಪಕ
ನಿಮ್ಮನ್ನು ಗಲ್ಲಿಗೇರಿಸುವುದು ಕೂಡ ದೇವರ ಇಚ್ಛೆಯೇ ಆಗಿದೆ.

ಮುಂದಿನ ದಿನಗಳಲ್ಲಿ ನಾನು ಮೈಸೂರು ಭಾಗದಿಂದ ರಥಯಾತ್ರೆ ಮಾಡಲಿದ್ದೇನೆ - ಯಡಿಯೂರಪ್ಪ, ಮಾಜಿ ಸಿಎಂ
ಕೇಶವ ಕೃಪಾದ ವಿರುದ್ಧ ಎನ್ನುವುದು ವದಂತಿ.

ಶಿರಡಿ ಸಾಯಿಬಾಬಾ ಹಾಗೂ ರಾಹುಲ್ ಗಾಂಧಿ ಒಂದೇ ಬಗೆಯ ಚಿಂತನೆಯನ್ನು ಹೊಂದಿದ್ದಾರೆ - ರಾಬರ್ಟ್ ವಾದ್ರಾ, ಪ್ರಿಯಾಂಕಾ ಗಾಂಧಿ ಪತಿ
ಅಂದರೆ ಪ್ರಧಾನಿಯಾಗುವ ಕನಸು ಕಾಣುವ ಬದಲು ಎಲ್ಲಾದರೂ ಆಶ್ರಮ ಕಟ್ಟಿ ವಿಶ್ರಾಂತಿ ಪಡೆಯಿರಿ ಎಂಬ ಸಲಹೆಯೇ?
 

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!