ಕುತೂಹಲ ಕೆರಳಿಸಿದ ಕಾಂಗ್ರೆಸ್ ಅಲ್ಪಸಂಖ್ಯಾತ ಶಾಸಕರ ಸಭೆ
ಈ ಬಾರಿ ಹೆಚ್ಚಿನ ಅಲ್ಪಸಂಖ್ಯಾತ ಶಾಸಕರು ಆಯ್ಕೆಯಾಗುವ ವಿಶ್ವಾಸವಿದೆ: ಸಲೀಮ್ ಅಹ್ಮದ್
ಬೆಂಗಳೂರು, ಡಿ.13: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಸಾಲಾರ್ ಭವನದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತ ಶಾಸಕರು ಹಾಗೂ ಎಂಎಲ್ ಸಿಗಳ ಮಹತ್ವದ ಸಭೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದು, ಚುನಾವಣೆ ತಯಾರಿ ಹಾಗೂ ಸಂಘಟನೆ ವಿಚಾರವಾಗಿ ಮಹತ್ವದ ಚರ್ಚೆಗಳನ್ನ ನಡೆಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು.ಟಿ ಖಾದರ್, ಮಾಜಿ ಸಚಿವ ಝಮೀರ್ ಅಹ್ಮದ್, ಮಾಜಿ ರಾಜ್ಯಸಭಾ ಸದಸ್ಯ ರೆಹಮಾನ್ ಖಾನ್, ಶಾಸಕ ರಹೀಮ್ ಖಾನ್, ತನ್ವೀರ್ ಸೇಠ್, ಮಾಜಿ ಶಾಸಕ ಮೊಯ್ದಿನ್ ಬಾವಾ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.
ಸಭೆ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಅವರು, ಬಿಜೆಪಿ ಸರಕಾರದ ಶೇ.40ರಷ್ಟು ಕಮಿಷನ್, ಬೆಲೆ ಏರಿಕೆ, ಮತದಾರರ ಮಾಹಿತಿ ಕಳವು, ನಿರುದ್ಯೋಗ ಸೇರಿದಂತೆ ಹಲವು ವೈಫಲ್ಯಗಳ ಬಗೆಗೆ ಜನರಿಗೆ ಮಾಹಿತಿ ನೀಡಿ ಕಾಂಗ್ರೆಸ್‍ಗೆ ಶಕ್ತಿ ನೀಡುವಂತೆ ಮನವಿ ಮಾಡಲಾಗುವುದು ಎಂದರು.
ಮುಂಬರುವ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲು ತೀರ್ಮಾನಿಸಲಾಗಿದೆ. ಜನವರಿ ತಿಂಗಳಲ್ಲಿ ಐದು ವಲಯಗಳಲ್ಲಿ ಸಭೆ ನಡೆಯಲಿದ್ದು, ಬಿಜಾಪುರ ಮತ್ತು ಹುಬ್ಬಳ್ಳಿಯಲ್ಲಿ ಕೃಷ್ಣ, ಮಹದಾಯಿ ವಿಚಾರವಾಗಿ ಸಮಾವೇಶಗಳನ್ನು ನಡೆಸಲಾಗುತ್ತದೆ. ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮಾವೇಶ ಸೇರಿದಂತೆ ಅಲ್ಪಸಂಖ್ಯಾತರು ಹಾಗೂ ಹಿಂ.ವರ್ಗಗಳ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಹಿಂದೆ ಹಲವು ಬಾರಿ 12 ರಿಂದ 17 ಅಲ್ಪಸಂಖ್ಯಾತ ಶಾಸಕರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಈ ಬಾರಿಯೂ ಹೆಚ್ಚಿನ ಶಾಸಕರು ಆಯ್ಕೆಯಾಗುವ ವಿಶ್ವಾಸವಿದ್ದು, ಈ ನಿಟ್ಟಿನಲ್ಲಿ ಮಂಗಳವಾರ ನಡೆದ 55 ಮಂದಿ ಅಲ್ಪಸಂಖ್ಯಾತ ನಾಯಕರೊಂದಿಗಿನ ಸಭೆಯಲ್ಲಿ ಅಲ್ಪಸಂಖ್ಯಾತರ ಟಿಕೆಟ್ ಆಕಾಂಕ್ಷಿತ ಅರ್ಜಿಗಳನ್ನು ಪರಿಶೀಲಿಸಿ, ಪರಿಷ್ಕೃತ ಪಟ್ಟಿಯನ್ನು ಪಕ್ಷದ ಅಧ್ಯಕ್ಷರಿಗೆ ನೀಡುವ ಬಗ್ಗೆ ಹಾಗೂ ಚಿಲುಮೆ ಸಂಸ್ಥೆಯು ಅಲ್ಪಸಂಖ್ಯಾತರ ಮತಗಳನ್ನು ರದ್ದು ಪಡಿಸಿರುವುದರ ಹಿಂದೆ ಸರಕಾರದ ಷಡ್ಯಂತ್ರವನ್ನು ಚರ್ಚಿಸಲಾಯಿತು ಎಂದರು.
ಬಿಜೆಪಿಯದ್ದು ಇಬ್ಬಗೆಯ ನೀತಿ: ‘ಪ್ರಧಾನಿ ಮೋದಿಯಿಂದ ಗುಜರಾತ್ ಚುನಾವಣೆ ಗೆದ್ದಿರುವುದಾದರೆ, ಅವರಿಂದಲೇ ಹಿಮಾಚಲ ಪ್ರದೇಶವನ್ನು ಸೋತಿದ್ದಾರೆ ಅಲ್ಲವೆ? ಗೆದ್ದರೆ ಮೋದಿ ಕೊಡುಗೆ, ಸೋತರೆ ಸ್ಥಳೀಯ ನಾಯಕರು ಕಾರಣ ಎನ್ನುತ್ತಾರೆ. ಇದು ಬಿಜೆಪಿಯ ಇಬ್ಬಗೆ ನೀತಿ. ಮೋದಿ ಅವರ ಹೇಳಿಕೆ ಜನರಿಗೆ ಅರಿವಾಗಿದೆ. 2024ರಲ್ಲಿ ಉತ್ತರ ಸಿಗುತ್ತದೆ. 2023ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್, 2024ರಲ್ಲಿ ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಬರಲಿದೆ ಎಂದು ಸಲೀಂ ಅಹ್ಮದ್ ತಿಳಿಸಿದರು.
‘ರಾಜ್ಯದಲ್ಲಿ 2023ಕ್ಕೆ ದಲಿತ, ಮುಸ್ಲಿಂ, ಮಹಿಳಾ ಮುಖ್ಯಮಂತ್ರಿ ಎನ್ನುವ ಪುಕಾರು ಎದ್ದಿದೆ. ಆದರೆ ಜನವಿರೋಧಿ ಸರಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ. ಅನಂತರದಲ್ಲಿ ಉಳಿದೆಲ್ಲ ಬೇಡಿಕೆಗಳ ಚರ್ಚೆ ನಡೆಸಲಾಗುತ್ತದೆ. ಮತದಾರರರು ಊಹಾಪೋಹಗಳಿಗೆ ಮಣೆ ಹಾಕಬಾರದು’
-ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ