ಬೆಂಗಳೂರು: ಹೊಸ ವರ್ಷ ರಾತ್ರಿ ಮದ್ಯ ಸೇವಿಸಿ ರಸ್ತೆಯಲ್ಲಿ ಬಿದ್ದವರಿಗೆ ಪೊಲೀಸರಿಂದಲೇ ಆ್ಯಂಬುಲೆನ್ಸ್ ಸೇವೆ
ಬೆಂಗಳೂರು, ಡಿ.28: ಹೊಸ ವರ್ಷ ರಾತ್ರಿ ಮದ್ಯ ಸೇವಿಸಿ ರಸ್ತೆಯಲ್ಲೇ ಬಿದ್ದವರಿಗೆ ಬೆಂಗಳೂರಿನ ಆಗ್ನೇಯ ವಿಭಾಗದ ಪೊಲೀಸರು ಆ್ಯಂಬುಲೆನ್ಸ್ (Ambulance) ವ್ಯವಸ್ಥೆ ಮಾಡಲಿದ್ದಾರೆ. ಆದರೆ, ಈ ವ್ಯವಸ್ಥೆ ಡಿ.31ರ ರಾತ್ರಿ ಮಾತ್ರ ಇರಲಿದೆ.
ವಿಶ್ವದ ಕೆಲವು ಭಾಗಗಳಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ರಾಜ್ಯದಲ್ಲಿ ಡಿ.31ರ ರಾತ್ರಿ 1 ಗಂಟೆಯ ನಂತರ ಹೊಸ ವರ್ಷಾಚರಣೆಯನ್ನು ನಿಷೇಧಿಸಿದೆ. ಸೋಂಕು ಮತ್ತಷ್ಟು ಹರಡುವುದನ್ನು ತಡೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಮವಾರ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಬೆಂಗಳೂರು ಆಗ್ನೇಯ ವಿಭಾಗದ ಕೋರಮಂಗಲ, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಹೆಚ್‍ಎಸ್‍ಆರ್ ಲೇಔಟ್ ನಲ್ಲಿ ಸಂಪೂರ್ಣ ಭದ್ರತೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೊಸ ವರ್ಷದ ರಾತ್ರಿ ಮದ್ಯ ಸೇವಿಸಿ ಬೀಳುವವರಿಗೆ, ಬಿದ್ದು ಗಾಯ ಮಾಡಿಕೊಂಡವರಿಗೆ, ಆರೋಗ್ಯ ಸಮಸ್ಯೆ ಉಂಟಾದರೇ ಅಂಥವರಿಗಾಗಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ.
ಆಗ್ನೇಯ ವಿಭಾಗದಲ್ಲಿ 108 ಪಬ್, ರೆಸ್ಟೋರೆಂಟ್‍ಗಳಿವೆ, ಪ್ರತಿಯೊಂದು ಪಬ್, ರೆಸ್ಟೋರೆಂಟ್ ಮುಂದೆಯೂ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿ ಭದ್ರತೆ ಮಾಡಲಾಗುತ್ತಿದೆ. ಡಿಸಿಪಿ ಸಿಕೆ ಬಾಬಾ ಅವರ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.